Photo: NDTV

ನಾಗ್ಪುರ: 16 ವರ್ಷದ ತನ್ನ ಶಾಲಾ ಸಹಪಾಠಿಯ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಿದ್ದ ಆಕೆಗೆ ಯೂಟ್ಯೂಬ್ ವೀಕ್ಷಿಸಿ ಗಿಡಮೂಲಿಕೆ ಕಷಾಯವನ್ನು ಕುಡಿಸಿ ಗರ್ಭಪಾತ ಮಾಡಿಸಲು ಯತ್ನಿಸಿದ್ದ ಆರೋಪಿಯನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿಯು ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ.

ನಾಗ್ಪುರದ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಬಾಲಕ ಹಾಗೂ ಸಂತ್ರಸ್ತ ಬಾಲಕಿ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ತನ್ನ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದಾಗ, ಆರೋಪಿ ಬಾಲಕನು ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಆಕೆಯನ್ನು ಮದುವೆಯಾಗುವ ಸೋಗಿನಲ್ಲಿ ಆತ ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯು ಗರ್ಭಿಣಿಯಾದ ಬಳಿಕ ತಕ್ಷಣವೇ ವೈದ್ಯಕೀಯ ನೆರವು ಪಡೆಯುವ ಬದಲು, ಆಕೆಗೆ ಗರ್ಭಪಾತ ಮಾಡಿಸಲು ಯೂಟ್ಯೂಬ್ ಮೊರೆ ಹೋಗಿದ್ದಾನೆ ಎನ್ನಲಾಗಿದೆ. ಯೂಟ್ಯೂಬ್ ವೇದಿಕೆಯಲ್ಲಿ ಟುಟೋರಿಯಲ್ ಗಳನ್ನು ವೀಕ್ಷಿಸಿದ ಬಳಿಕ ಆತ ಗಿಡಮೂಲಿಕೆಯ ವೈದ್ಯಕೀಯ ಕಷಾಯವನ್ನು ಸಿದ್ಧಪಡಿಸಿದ್ದಾನೆ ಎಂದು ಹೇಳಲಾಗಿದೆ.

ಹಲವು ವಾರಗಳ ಬಳಿಕ ಸೋಮವಾರ ಸಂತ್ರಸ್ತ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಆತ ತಕ್ಷಣವೇ ಗಿಡಮೂಲಿಕೆಯ ಕಷಾಯ ಹಾಗೂ ಗರ್ಭಪಾತದ ಮಾತ್ರೆಗಳನ್ನು ಆಕೆಗೆ ಉಣಿಸಿದ್ದಾನೆ ಎಂದು ಆರೋಪಿಸಲಾಗಿದೆ.ಆದರೆ, ಆರೋಪಿಯ ಪ್ರಯತ್ನಗಳು ವಿಫಲಗೊಂಡಿದೆ. ಇದಲ್ಲದೆ ಆಕೆ ತನ್ನ ಮನೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ.

ಬಾಲಕಿಯನ್ನು ಸರಕಾರಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿರುವ ಕುಟುಂಬದ ಸದಸ್ಯರು, ನವಜಾತ ಶಿಶುವನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.

ಮಗುವಿಗೆ ಜನ್ಮ ನೀಡಿದ ಬಳಿಕ, ಸಂತ್ರಸ್ತ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದರಿಂದ, ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಧಾವಿಸಿದ ಪೊಲೀಸರು, ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಆತನನ್ನು ಬಂಧಿಸಲಾಗಿದೆ.

ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor