×
Ad

ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬ

ಕೆಇಬಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

Update: 2026-05-30 12:51 IST

ನಿಡಗುಂದಿ: ಪಟ್ಟಣದ ಪ್ರಮುಖ ಕಾಲೇಜು ರಸ್ತೆಯಲ್ಲಿರುವ ಮುಲ್ಲಾ ಕಾಂಪ್ಲೆಕ್ಸ್ ಪಕ್ಕದ ವಿದ್ಯುತ್ ಕಂಬವೊಂದು ಅಪಾಯಕಾರಿಯಾಗಿ ವಾಲಿದ್ದು, ಯಾವುದೇ ಕ್ಷಣದಲ್ಲಿ ನೆಲಕ್ಕುರುಳುವ ಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಕೆಇಬಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಸಂಚರಿಸುವ ಈ ರಸ್ತೆಯಲ್ಲಿ ಇರುವ ವಿದ್ಯುತ್ ಕಂಬ ಅಪಾಯದ ಮಟ್ಟಿಗೆ ವಾಲಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಮಳೆ ಹಾಗೂ ಗಾಳಿಯ ಸಂದರ್ಭಗಳಲ್ಲಿ ಕಂಬ ಮತ್ತಷ್ಟು ವಾಲುವ ಸಾಧ್ಯತೆ ಇದ್ದು,ಅನಾಹುತ ಸಂಭವಿಸುವ ಭೀತಿ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಜೀವಾಪಾಯ ಉಂಟುಮಾಡುವಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಭವನೀಯ ಅವಘಡವನ್ನು ತಪ್ಪಿಸಲು ಅಪಾಯಕಾರಿಯಾಗಿ ವಾಲಿರುವ ವಿದ್ಯುತ್ ಕಂಬವನ್ನು ಕೂಡಲೇ ಬದಲಾಯಿಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಕೆಇಬಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಬಾಗಿರುವ ವಿದ್ಯುತ್ ಕಂಬದ ಸ್ಥಳ ಪರಿಶೀಲನೆ ಮಾಡಿದ್ದೇವೆ. ಕಂಬವನ್ನು ಬದಲಾವಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಕ್ಷಣ ಕಂಬ ಬದಲಾವಣೆ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.

-ಪ್ರತಾಪ್ ಕೊಡುಗೆ, ಪಪಂ, ಮುಖ್ಯಾಧಿಕಾರಿ

ಮಳೆ ನೀರು ಹೋಗಿದ್ದರಿಂದ ವಿದ್ಯುತ್ ಕಂಬ ಸ್ವಲ್ಪ ಬಾಗಿದೆ. ಆದರೆ ಬೀಳುವ ಆತಂಕ ಇಲ್ಲ. ನಾವು ಸ್ಥಳ ಪರಿಶೀಲನೆ ಮಾಡಿದ್ದು, ಆದಷ್ಟು ಬೇಗ ಸರಿ ಮಾಡಿಕೊಡುತ್ತೇವೆ.

-ವೀರೇಶ್ ವಾಂಗಿ, ವಿದ್ಯುತ್ ಸೆಕ್ಷನ್ ಅಧಿಕಾರಿ ವಿದ್ಯುತ್ ಸೆಕ್ಷನ್ ಅಧಿಕಾರಿ

ದಿನನಿತ್ಯ ನೂರಾರು ಜನ ಓಡಾಡುವ ಜನಬೀಡ ಪ್ರದೇಶವಾಗಿರುವುದರಿಂದ ತಕ್ಷಣ ಅಧಿಕಾರಿಗಳು ಪರಿಶೀಲನೆ ಮಾಡಿ, ಈ ಸಮಸ್ಯೆಗೆ ಪರಿಹಾರ ನೀಡಬೇಕು. ಸಂಭಾವ್ಯ ಅಪಾಯ ತಡೆಯಬೇಕು.

-ಉಮೇಶ್, ಬುಕ್ ಸ್ಟಾಲ್ ವ್ಯಾಪಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಬೂಬ ವಾಲಿಕಾರ

contributor

Similar News