×
Ad

ಮೇಲ್ಮನೆಗಳ ಮೇಲೆ ಹಣದ ನೆರಳು

ತತ್ವ, ತ್ಯಾಗ ಮತ್ತು ಜನಸೇವೆಯ ರಾಜಕಾರಣ ಮೌನವಾಗುತ್ತಿರುವುದೇ?

Update: 2026-05-30 09:50 IST

ರಾಜಕೀಯ ಪಕ್ಷಗಳು ಇಂದು ಆತ್ಮಪರಿಶೀಲನೆ ಮಾಡಬೇಕಾದ ಸಮಯ ಬಂದಿದೆ. ಮೇಲ್ಮನೆಗಳ ಆಯ್ಕೆ ಕೇವಲ ಅಧಿಕಾರದ ಹಂಚಿಕೆ ಅಲ್ಲ; ಅದು ಸಮಾಜಕ್ಕೆ ನೀಡುವ ಸಂದೇಶ. ಪಕ್ಷಗಳು ಹಣ ಮತ್ತು ಪ್ರಭಾವದ ರಾಜಕಾರಣಕ್ಕೆ ಮಣಿಯುತ್ತವೆಯೇ? ಅಥವಾ ತತ್ವನಿಷ್ಠ ಹೋರಾಟಗಾರರ ಪರ ನಿಲ್ಲುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ. ಈ ನಿರ್ಧಾರಗಳು ಮುಂದಿನ ಪೀಳಿಗೆಯ ರಾಜಕೀಯ ಸಂಸ್ಕೃತಿಯನ್ನು ರೂಪಿಸಲಿವೆ.

ಪ್ರಜಾಪ್ರಭುತ್ವದ ಶಕ್ತಿ ಕೇವಲ ಚುನಾವಣೆಯಲ್ಲಿ ಗೆಲ್ಲುವ ಸಂಖ್ಯೆಗಳಲ್ಲ, ಸಮಾಜದ ನಂಬಿಕೆಯನ್ನು ಹೊತ್ತ ಮೌಲ್ಯಗಳಲ್ಲಿ ಅಡಗಿದೆ. ರಾಜಕೀಯವು ಜನಸೇವೆಯ ಮಾರ್ಗವಾಗಿದ್ದ ಕಾಲದಿಂದ ಅಧಿಕಾರ, ಹಣ ಮತ್ತು ಪ್ರಭಾವದ ಸಮೀಕರಣಗಳ ದಿಕ್ಕಿಗೆ ಸಾಗುತ್ತಿರುವ ಈ ಸಂದರ್ಭದಲ್ಲಿ ಮೇಲ್ಮನೆಗಳ ಆಯ್ಕೆ ಪ್ರಕ್ರಿಯೆ ಒಂದು ಸಾಮಾನ್ಯ ರಾಜಕೀಯ ಘಟನೆ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ನೈತಿಕತೆಯನ್ನೇ ಪ್ರಶ್ನಿಸುವ ಘಟ್ಟವಾಗಿದೆ. ತತ್ವಕ್ಕಾಗಿ ಹೋರಾಡಿದವರು ಮೌನದ ಅಂಚಿಗೆ ಸರಿಯುತ್ತಿದ್ದರೆ, ಹಣ ಮತ್ತು ಪ್ರಭಾವ ರಾಜಕೀಯದ ಕೇಂದ್ರವಾಗುತ್ತಿರುವ ಈ ವಾಸ್ತವದಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ ಸ್ಥಾನಗಳ ಆಯ್ಕೆ ಇಂದು ಸಮಾಜದ ಮುಂದೆ ಒಂದು ಮಹತ್ವದ ಪ್ರಶ್ನೆಯನ್ನು ನಿಲ್ಲಿಸಿದೆ. ರಾಜಕೀಯ ಇನ್ನೂ ಜನರ ಧ್ವನಿಯೇ ಅಥವಾ ಅದು ನಿಧಾನವಾಗಿ ಪ್ರಭಾವಿಗಳ ಪ್ರಭುತ್ವವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಮತ್ತು ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಆಯ್ಕೆ ಪ್ರಕ್ರಿಯೆ ಕರ್ನಾಟಕದ ರಾಜಕೀಯದಲ್ಲಿ ಮತ್ತೆ ಒಂದು ಮಹತ್ವದ ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ರಾಜಕೀಯ ಪ್ರಕ್ರಿಯೆಯಂತೆ ಕಂಡರೂ, ಒಳನೋಟದಲ್ಲಿ ಇದು ಪ್ರಜಾಪ್ರಭುತ್ವದ ಮೌಲ್ಯಗಳ ಪರೀಕ್ಷೆಯಾಗಿದೆ. ರಾಜಕೀಯ ಪಕ್ಷಗಳ ನೈತಿಕತೆ, ಸಾಮಾಜಿಕ ನ್ಯಾಯದ ಬದ್ಧತೆ, ಕಾರ್ಯಕರ್ತರ ಪರಿಶ್ರಮಕ್ಕೆ ನೀಡುವ ಗೌರವ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಪಕ್ಷಗಳು ಎಷ್ಟು ಪ್ರಾಮಾಣಿಕವಾಗಿವೆ ಎಂಬುದನ್ನು ಅಳೆಯುವ ಕ್ಷಣವೂ ಹೌದು.

ಈ ಬಾರಿ ನಡೆಯುತ್ತಿರುವ ಮೇಲ್ಮನೆ ಆಯ್ಕೆ ಸುತ್ತ ರಾಜ್ಯ ರಾಜಕೀಯದಲ್ಲಿ ಕೇಳಿಬರುತ್ತಿರುವ ಮಾತುಗಳು ಸಾಮಾನ್ಯವಲ್ಲ. ಆರ್ಥಿಕ ಬಲಾಢ್ಯರು, ಪ್ರಭಾವಿಗಳು ಮತ್ತು ಲಾಬಿ ರಾಜಕಾರಣದ ಸುತ್ತ ನಡೆಯುತ್ತಿರುವ ಚಟುವಟಿಕೆಗಳು ಜನಸಾಮಾನ್ಯರಲ್ಲಿಯೇ ಅಲ್ಲ, ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರಲ್ಲಿಯೂ ತೀವ್ರ ಅಸಮಾಧಾನ ಹುಟ್ಟುಹಾಕಿವೆ. ಇದು ಒಂದೇ ಪಕ್ಷದ ಸಮಸ್ಯೆಯಲ್ಲ; ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಒಳಗೂ ಇದೇ ವಾಸ್ತವತೆ ಕಾಣಿಸುತ್ತಿದೆ. ಪಕ್ಷಕ್ಕಾಗಿ ಬದುಕು ಕಳೆದವರು, ಹೋರಾಟಗಳ ಮೂಲಕ ಸಂಘಟನೆಯನ್ನು ಬಲಪಡಿಸಿದವರು, ಜನರ ಮಧ್ಯೆ ನಿಂತು ಪಕ್ಷವನ್ನು ಬೆಳೆಸಿದವರು ಇಂದು ಮೌನವಾಗಿ ಹಿಂಬದಿಗೆ ಸರಿಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಮತ್ತೊಂದೆಡೆ ಪ್ರಭಾವ, ಹಣ ಮತ್ತು ಅಧಿಕಾರದ ಸಮೀಪತೆ ಹೊಂದಿರುವವರು ರಾಜಕೀಯದ ಕೇಂದ್ರಬಿಂದುವಾಗುತ್ತಿದ್ದಾರೆ.

ಒಂದು ಕಾಲದಲ್ಲಿ ರಾಜಕೀಯವೆಂದರೆ ತ್ಯಾಗದ ಪಥವಾಗಿತ್ತು. ಜನರ ನೋವನ್ನು ತಮ್ಮದೇ ನೋವಿನಂತೆ ಕಂಡವರು ರಾಜಕೀಯಕ್ಕೆ ಬರುತ್ತಿದ್ದರು. ಹಳ್ಳಿಯ ಮಣ್ಣಿನ ದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ, ರೈತರ ಸಮಸ್ಯೆಗಳನ್ನು ಕೇಳಿ, ಕಾರ್ಮಿಕರ ಹೋರಾಟಗಳಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಧ್ವನಿ ಎತ್ತಿ, ಬಡವರ ಕಣ್ಣೀರನ್ನು ಒರೆಸಲು ಪ್ರಯತ್ನಿಸಿದವರು ಜನನಾಯಕರಾಗುತ್ತಿದ್ದರು. ರಾಜಕೀಯ ಎಂದರೆ ಜನರ ನಂಬಿಕೆಯ ಪ್ರತೀಕವಾಗಿತ್ತು. ಆದರೆ ಇಂದಿನ ರಾಜಕೀಯದ ಚಿತ್ರಣ ಕ್ರಮೇಣ ಬದಲಾಗುತ್ತಿದೆ. ಜನಸೇವೆಗಿಂತ ಲಾಬಿ, ತತ್ವಕ್ಕಿಂತ ತಂತ್ರ, ಹೋರಾಟಕ್ಕಿಂತ ಹಣ ಮತ್ತು ನಿಷ್ಠೆಗಿಂತ ಪ್ರಭಾವ ಮುಖ್ಯವಾಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆ ಅಲ್ಲ.

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೇಲ್ಮನೆಗಳ ಪರಿಕಲ್ಪನೆಯನ್ನು ರೂಪಿಸಿದಾಗ ಅವರ ದೃಷ್ಟಿ ಅತ್ಯಂತ ವಿಶಾಲವಾಗಿತ್ತು. ನೇರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ, ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಬೌದ್ಧಿಕ ಕೊಡುಗೆ ನೀಡಬಲ್ಲ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ರಾಜ್ಯಸಭೆ ಮತ್ತು ವಿಧಾನಪರಿಷತ್‌ಗಳಂತಹ ಮೇಲ್ಮನೆಗಳನ್ನು ರಚಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರು, ರಾಜಕೀಯ ಮುತ್ಸದ್ದಿಗಳು, ಚಿಂತಕರು, ಕಾನೂನು ತಜ್ಞರು, ಹೋರಾಟಗಾರರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬದುಕು ಮುಡಿಪಾಗಿಟ್ಟ ವ್ಯಕ್ತಿಗಳು ಸದನಗಳಲ್ಲಿ ಇರಬೇಕು ಎಂಬುದು ಸಂವಿಧಾನದ ಆಶಯವಾಗಿತ್ತು.

ಮೇಲ್ಮನೆಗಳು ಕೇವಲ ಶಾಸನಾತ್ಮಕ ಪ್ರಕ್ರಿಯೆಗಳ ಭಾಗವಾಗಿರಲಿಲ್ಲ; ಅವು ಚಿಂತನೆಯ ವೇದಿಕೆಗಳಾಗಬೇಕಾಗಿತ್ತು. ಸರಕಾರದ ನಿರ್ಧಾರಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು, ಜನಸಾಮಾನ್ಯರ ಸಮಸ್ಯೆಗಳಿಗೆ ಆಳವಾದ ಪರಿಹಾರಗಳನ್ನು ಸೂಚಿಸುವುದು ಮತ್ತು ಆಡಳಿತ ವ್ಯವಸ್ಥೆಗೆ ಬೌದ್ಧಿಕ ದಿಕ್ಕು ನೀಡುವುದು ಅವುಗಳ ಪ್ರಮುಖ ಉದ್ದೇಶವಾಗಿತ್ತು. ಆದರೆ ಇಂದಿನ ರಾಜಕೀಯ ವಾತಾವರಣದಲ್ಲಿ ಮೇಲ್ಮನೆಗಳ ಆ ಮಹತ್ವವೇ ನಿಧಾನವಾಗಿ ಕುಸಿಯುತ್ತಿರುವ ಅನುಮಾನ ಮೂಡುತ್ತಿದೆ.

ರಾಜಕೀಯದಲ್ಲಿ ಇಂದು ಹಣದ ಪ್ರಭಾವ ಅತ್ಯಂತ ಅಪಾಯಕಾರಿ ಹಂತ ತಲುಪಿದೆ. ಚುನಾವಣಾ ರಾಜಕಾರಣ ದುಬಾರಿಯಾಗುತ್ತಿರುವಂತೆ, ಹಣದ ಬಲವೇ ರಾಜಕೀಯ ಅರ್ಹತೆಯಂತೆ ಪರಿಗಣಿಸಲಾಗುತ್ತಿದೆ. ಪಕ್ಷಗಳಿಗೆ ಆರ್ಥಿಕ ನೆರವು ನೀಡಬಲ್ಲವರು, ಪ್ರಭಾವಶಾಲಿ ಗುಂಪುಗಳ ಬೆಂಬಲ ಹೊಂದಿರುವವರು ಅಥವಾ ಅಧಿಕಾರ ಕೇಂದ್ರಗಳಿಗೆ ಹತ್ತಿರವಾಗಿರುವವರು ಹೆಚ್ಚು ಅವಕಾಶ ಪಡೆಯುತ್ತಿರುವುದು ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ಹುಟ್ಟಿಸಿದೆ. ‘‘ಯಾರು ಜನರ ನಡುವೆ ಕೆಲಸ ಮಾಡಿದ್ದಾರೆ?’’ ಎಂಬ ಪ್ರಶ್ನೆಗಿಂತ ‘‘ಯಾರು ಹೆಚ್ಚು ಪ್ರಭಾವಿಗಳು?’’ ಎಂಬ ಪ್ರಶ್ನೆ ಮುಖ್ಯವಾಗುತ್ತಿರುವುದು ರಾಜಕೀಯದ ದುರಂತ.

ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಗಳ ಕಡೆಗಣನೆಯ ಪ್ರಶ್ನೆಯೂ ಗಂಭೀರವಾಗಿ ಕೇಳಿಬರುತ್ತಿದೆ. ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ಮಹತ್ವದ ಪಾತ್ರವಹಿಸಿರುವ ಹಿಂದುಳಿದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಾಪಕವಾಗಿದೆ. ಪಕ್ಷಗಳ ಬೆಳವಣಿಗೆಯಲ್ಲಿ ಕೊಡುಗೆ ನೀಡಿದ, ಸಂಘಟನೆಯನ್ನು ಬಲಪಡಿಸಿದ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಿದ ಸಮುದಾಯದ ನಾಯಕರನ್ನು ಕಡೆಗಣಿಸುವುದು ರಾಜಕೀಯವಾಗಿ ಮಾತ್ರವಲ್ಲ, ನೈತಿಕವಾಗಿಯೂ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಶೇಷವಾಗಿ ಕಾನೂನು ತಜ್ಞ, ವಾಗ್ಮಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರಂತಹ ಅನುಭವಸಂಪನ್ನ ಹಾಗೂ ಅಧ್ಯಯನಶೀಲ ನಾಯಕರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ವಿ.ಎಸ್. ಉಗ್ರಪ್ಪ ಅವರು ಕೇವಲ ಚುನಾವಣಾ ರಾಜಕಾರಣಿಯಲ್ಲ. ಅವರು ವಿಧಾನ ಪರಿಷತ್ ಮತ್ತು ಸಂಸತ್ತಿನ ಚರ್ಚೆಗಳಲ್ಲಿ ತಾರ್ಕಿಕತೆ, ಸಾಂವಿಧಾನಿಕ ಅರಿವು ಮತ್ತು ಜನಪರ ನಿಲುವಿನಿಂದ ಗುರುತಿಸಿಕೊಂಡವರು. ಆಡಳಿತದ ತಪ್ಪುಗಳನ್ನು ನಿರ್ಭೀತಿಯಿಂದ ಪ್ರಶ್ನಿಸುವ ಧೈರ್ಯ ಹೊಂದಿದವರು. ಇಂತಹ ನಾಯಕರನ್ನು ಮೇಲ್ಮನೆಗೆ ಕಳುಹಿಸುವುದು ಸದನದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸವಾಗುತ್ತದೆ. ಆದರೆ ಇಂದಿನ ರಾಜಕೀಯದಲ್ಲಿ ಅಧ್ಯಯನ, ಪ್ರಾಮಾಣಿಕತೆ ಮತ್ತು ಹೋರಾಟದ ಹಿನ್ನೆಲೆಗಿಂತ ಸಮೀಕರಣ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿರುವುದು ವಿಷಾದನೀಯ.

ರಾಜಕೀಯದಲ್ಲಿ ಇಂದು ಮತ್ತೊಂದು ಅಪಾಯಕಾರಿ ಬೆಳವಣಿಗೆ ಎಂದರೆ ಅವಕಾಶವಾದಿತನದ ಸಂಸ್ಕೃತಿ. ತತ್ವ ಬದಲಾಯಿಸುವುದು ಸಾಮಾನ್ಯವಾಗುತ್ತಿದೆ. ನಿಲುವು ಬದಲಾಯಿಸುವುದು ರಾಜಕೀಯ ಚಾಣಾಕ್ಷತನವೆಂದು ಕರೆಯಲಾಗುತ್ತಿದೆ. ಅಧಿಕಾರದ ಸಮೀಪದಲ್ಲಿರುವುದೇ ಯಶಸ್ಸಿನ ಮಾನದಂಡವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಿಷ್ಠಾವಂತ ಕಾರ್ಯಕರ್ತರು ಮತ್ತು ತತ್ವನಿಷ್ಠ ರಾಜಕಾರಣಿಗಳು ತಮ್ಮನ್ನು ತಾವು ಅನಾಥರಂತೆ ಭಾಸವಾಗಿಸಿಕೊಳ್ಳುತ್ತಿದ್ದಾರೆ. ಜನಸೇವೆ ರಾಜಕೀಯದ ಗುರಿ ಎಂದು ನಂಬಿದವರಿಗೆ ಇಂದಿನ ವ್ಯವಸ್ಥೆಯಲ್ಲಿ ಸ್ಥಾನಮಾನವೇ ಇಲ್ಲದಂತಾಗಿದೆ.

ಒಂದು ಕಾಲದಲ್ಲಿ ರಾಜಕೀಯ ಪಕ್ಷಗಳು ಕಾರ್ಯಕರ್ತರ ಪರಿಶ್ರಮದ ಮೇಲೆ ನಿಂತಿದ್ದವು. ಕಾರ್ಯಕರ್ತರೇ ಪಕ್ಷಗಳ ನಿಜವಾದ ಆಸ್ತಿ. ಹಳ್ಳಿಗಳಲ್ಲಿ ಧ್ವಜ ಹಿಡಿದು ನಡೆದವರು, ಸಂಕಷ್ಟದ ಸಮಯದಲ್ಲಿ ಪಕ್ಷದ ಪರ ನಿಂತವರು, ಜನರ ಮನೆಬಾಗಿಲಿಗೆ ಹೋಗಿ ಪಕ್ಷದ ವಿಚಾರಧಾರೆಗಳನ್ನು ತಲುಪಿಸಿದವರು ಪಕ್ಷಗಳ ಬೆನ್ನೆಲುಬಾಗಿದ್ದರು. ಆದರೆ ಇಂದು ಪಕ್ಷಗಳ ಒಳರಾಜಕಾರಣದಲ್ಲಿ ಕಾರ್ಯಕರ್ತರ ನಿಷ್ಠೆಗೆ ಬೆಲೆ ಕಡಿಮೆಯಾಗುತ್ತಿದೆ ಎಂಬ ಭಾವನೆ ಹೆಚ್ಚುತ್ತಿದೆ. ಇದರಿಂದ ಯುವ ಕಾರ್ಯಕರ್ತರಲ್ಲಿ ರಾಜಕೀಯದ ಬಗ್ಗೆ ನಿರಾಸೆ ಮೂಡುವ ಅಪಾಯವಿದೆ.

ಮೇಲ್ಮನೆಗಳಿಗೆ ಇಂದು ಬೇಕಾಗಿರುವವರು ಕೇವಲ ಪಕ್ಷದ ಅನುಕೂಲಕರರು ಅಲ್ಲ. ಸಮಾಜದ ನೋವನ್ನು ಅರ್ಥಮಾಡಿಕೊಳ್ಳುವವರು, ರೈತರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರುವವರು, ಕಾರ್ಮಿಕರ ಬದುಕಿನ ಕಷ್ಟವನ್ನು ಕಂಡವರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಿದವರು, ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವವರು ಮತ್ತು ಸರಕಾರದ ತಪ್ಪುಗಳನ್ನು ಪ್ರಶ್ನಿಸುವ ಧೈರ್ಯ ಹೊಂದಿರುವವರು ಅಗತ್ಯ. ಸದನಗಳಲ್ಲಿ ಕೇವಲ ಸಂಖ್ಯೆಗಳು ಇದ್ದರೆ ಸಾಕಾಗುವುದಿಲ್ಲ; ಅಲ್ಲಿ ಚಿಂತನೆ ಇರಬೇಕು. ಅಲ್ಲಿ ತತ್ವ ಇರಬೇಕು. ಅಲ್ಲಿ ಜನರ ನಿಟ್ಟುಸಿರು ಕೇಳಿಸಬೇಕು.

ಪ್ರಜಾಪ್ರಭುತ್ವದ ನಿಜವಾದ ಶಕ್ತಿ ವಿರೋಧದ ಧ್ವನಿಗಳಲ್ಲಿದೆ. ಪ್ರಶ್ನಿಸುವ ಮನಸ್ಸುಗಳಲ್ಲಿದೆ. ಸರಕಾರದ ನಿರ್ಧಾರಗಳನ್ನು ಪರಿಶೀಲಿಸುವ ಸಾಮರ್ಥ್ಯದಲ್ಲಿದೆ. ಆದರೆ ಇಂದು ರಾಜಕೀಯದಲ್ಲಿ ಹೊಗಳಿಕೆಯ ಸಂಸ್ಕೃತಿ ಹೆಚ್ಚುತ್ತಿದೆ. ಪಕ್ಷದ ನಾಯಕತ್ವದ ಮುಂದೆ ಮೌನವಾಗಿರುವುದೇ ನಿಷ್ಠೆ ಎಂಬ ತಪ್ಪು ಕಲ್ಪನೆ ರೂಪುಗೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಗುಣಮಟ್ಟ ಕುಸಿಯುವ ಹಂತ ತಲುಪುತ್ತಿದೆ ಎಂದು ಭಾಸವಾಗುತ್ತಿದೆ.

ರಾಜಕೀಯ ಪಕ್ಷಗಳು ಇಂದು ಆತ್ಮಪರಿಶೀಲನೆ ಮಾಡಬೇಕಾದ ಸಮಯ ಬಂದಿದೆ. ಮೇಲ್ಮನೆಗಳ ಆಯ್ಕೆ ಕೇವಲ ಅಧಿಕಾರದ ಹಂಚಿಕೆ ಅಲ್ಲ; ಅದು ಸಮಾಜಕ್ಕೆ ನೀಡುವ ಸಂದೇಶ. ಪಕ್ಷಗಳು ಹಣ ಮತ್ತು ಪ್ರಭಾವದ ರಾಜಕಾರಣಕ್ಕೆ ಮಣಿಯುತ್ತವೆಯೇ? ಅಥವಾ ತತ್ವನಿಷ್ಠ ಹೋರಾಟಗಾರರ ಪರ ನಿಲ್ಲುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ. ಈ ನಿರ್ಧಾರಗಳು ಮುಂದಿನ ಪೀಳಿಗೆಯ ರಾಜಕೀಯ ಸಂಸ್ಕೃತಿಯನ್ನು ರೂಪಿಸಲಿವೆ.

ಯುವಜನತೆ ಇಂದು ರಾಜಕೀಯವನ್ನು ಗಮನಿಸುತ್ತಿದೆ. ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ತತ್ವಗಳಿಗೆ ಸ್ಥಾನವಿದೆಯೇ ಎಂಬುದನ್ನು ಪ್ರಶ್ನಿಸುತ್ತಿದೆ. ಹಣದ ಬಲವಿಲ್ಲದ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕರಿಗೂ ರಾಜಕೀಯದಲ್ಲಿ ಅವಕಾಶ ಸಿಗುತ್ತದೆಯೇ ಎಂಬುದನ್ನು ಅವಲೋಕಿಸುತ್ತಿದೆ. ಪಕ್ಷಗಳು ಈ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ಕುಗ್ಗುವ ಅಪಾಯವಿದೆ.

ಮೇಲ್ಮನೆಗಳು ಕೇವಲ ಸೋತ ರಾಜಕಾರಣಿಗಳ ಪುನರ್ವಸತಿ ಕೇಂದ್ರಗಳಾಗಬಾರದು. ಅವು ಚಿಂತನೆಯ ಮಂದಿರಗಳಾಗಬೇಕು. ಸಮಾಜದ ಪರಿವರ್ತನೆಗಾಗಿ ಬದುಕು ಮುಡಿಪಾಗಿಟ್ಟವರ ಧ್ವನಿಗೆ ಅಲ್ಲಿ ಅವಕಾಶ ಸಿಗಬೇಕು. ಅಲ್ಲಿ ಭವಿಷ್ಯದ ಭಾರತದ ಕನಸು ಕಾಣುವ ಚಿಂತಕರು ಇರಬೇಕು. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಧೈರ್ಯಶಾಲಿ ಜನಪ್ರತಿನಿಧಿಗಳು ಇರಬೇಕು.

ಇಂದು ರಾಜಕೀಯ ಪಕ್ಷಗಳ ಮುಂದೆ ಇರುವ ಸವಾಲು ಕೇವಲ ಚುನಾವಣೆಯಲ್ಲಿ ಗೆಲ್ಲುವುದಲ್ಲ; ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು. ಹಣದ ಬಲಕ್ಕೆ ಮಣಿದು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ತಾತ್ಕಾಲಿಕ ಲಾಭ ನೀಡಬಹುದು. ಆದರೆ ಅದು ದೀರ್ಘಾವಧಿಯಲ್ಲಿ ಪಕ್ಷಗಳ ನೈತಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಕಾರ್ಯಕರ್ತರ ಮನಸ್ಸಿನಲ್ಲಿ ನೋವು ಮೂಡಿಸುತ್ತದೆ. ಜನರಲ್ಲಿ ರಾಜಕೀಯದ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತದೆ.

ರಾಜ್ಯಸಭೆ ಮತ್ತು ವಿಧಾನಪರಿಷತ್ ಸ್ಥಾನಗಳ ಈ ಆಯ್ಕೆ ಇಂದು ಎರಡು ರಾಜಕೀಯಗಳ ನಡುವಿನ ಸಂಘರ್ಷವಾಗಿದೆ. ಒಂದು ಕಡೆ ಹಣ, ಪ್ರಭಾವ ಮತ್ತು ಅವಕಾಶವಾದಿತನದ ರಾಜಕಾರಣ. ಮತ್ತೊಂದು ಕಡೆ ತತ್ವ, ಸೇವೆ, ಸಾಮಾಜಿಕ ನ್ಯಾಯ ಮತ್ತು ಪ್ರಜ್ಞೆಯ ರಾಜಕಾರಣ.

ಯಾವ ರಾಜಕೀಯ ಗೆಲ್ಲಬೇಕು ಎಂಬುದನ್ನು ಈಗ ಪಕ್ಷಗಳೇ ನಿರ್ಧರಿಸಬೇಕಾಗಿದೆ.

ಮೇಲ್ಮನೆಗಳಿಗೆ ಇಂದು ಅಗತ್ಯವಿರುವುದು ಅಧಿಕಾರದ ಮುಂದೆ ತಲೆಬಾಗುವ ಪ್ರತಿನಿಧಿಗಳು ಅಲ್ಲ; ಸತ್ಯಕ್ಕಾಗಿ ನಿಲ್ಲುವ ಧೈರ್ಯಶಾಲಿ ಧ್ವನಿಗಳು. ಜನರ ಸಮಸ್ಯೆಗಳನ್ನು ತಮ್ಮದೇ ನೋವಿನಂತೆ ಕಾಣುವ ನಾಯಕರು. ಸಂವಿಧಾನದ ಆಶಯಗಳನ್ನು ಕಾಪಾಡುವ ರಾಜಕೀಯ ಮುತ್ಸದ್ದಿಗಳು. ಸಮಾಜದ ಭವಿಷ್ಯದ ಬಗ್ಗೆ ಚಿಂತಿಸುವ ಚಿಂತಕರು.

ರಾಜ್ಯಸಭೆ ಮತ್ತು ವಿಧಾನಪರಿಷತ್ ಸ್ಥಾನಗಳ ಈ ಆಯ್ಕೆ ಇಂದು ಕೇವಲ ಕೆಲವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲ; ಇದು ಪ್ರಜಾಪ್ರಭುತ್ವದ ಆತ್ಮವನ್ನು ಪರೀಕ್ಷಿಸುವ ಘಟ್ಟವಾಗಿದೆ. ಮೇಲ್ಮನೆಗಳು ಅಧಿಕಾರದ ಅಲಂಕಾರವಾಗಬಾರದು, ಅವು ಸಮಾಜದ ಅಂತಃಕರಣವಾಗಬೇಕು. ಅಲ್ಲಿ ಕುಳಿತುಕೊಳ್ಳುವವರು ಮೌನವಾಗಿರುವವರಲ್ಲ, ಜನರ ಪರವಾಗಿ ಮಾತನಾಡುವವರಾಗಿರಬೇಕು. ಅಧಿಕಾರದ ಅನುಗ್ರಹಕ್ಕೆ ತಲೆಬಾಗುವವರಲ್ಲ, ಸತ್ಯದ ಪರ ನಿಲ್ಲುವ ಧೈರ್ಯಶಾಲಿಗಳಾಗಿರಬೇಕು. ಸಮಾಜದ ನೋವನ್ನು ಅರ್ಥಮಾಡಿಕೊಳ್ಳುವ ಸಂವೇದನೆ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಬದ್ಧತೆ, ಭವಿಷ್ಯದ ಭಾರತದ ಬಗ್ಗೆ ಚಿಂತಿಸುವ ದೂರದೃಷ್ಟಿ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೈತಿಕ ಶಕ್ತಿ ಹೊಂದಿದವರೇ ಮೇಲ್ಮನೆಗಳ ನಿಜವಾದ ಶಕ್ತಿಯಾಗಬೇಕು.

ರಾಜಕೀಯ ಪಕ್ಷಗಳು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಏಳು-ಎಂಟು ಸ್ಥಾನಗಳನ್ನು ಭರ್ತಿ ಮಾಡುವುದಲ್ಲ, ಅವು ಮುಂದಿನ ಪೀಳಿಗೆಯ ರಾಜಕೀಯ ಸಂಸ್ಕೃತಿಯನ್ನು ರೂಪಿಸಲಿವೆ. ಹಣ, ಪ್ರಭಾವ ಮತ್ತು ಲಾಬಿಯ ರಾಜಕಾರಣಕ್ಕೆ ಮಣಿಯುವುದೇ? ಅಥವಾ ತತ್ವ, ತ್ಯಾಗ ಮತ್ತು ಜನಸೇವೆಗೆ ಗೌರವ ನೀಡುವುದೇ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾದ ಐತಿಹಾಸಿಕ ಕ್ಷಣ ಇದು. ಕಾರ್ಯಕರ್ತರ ಬೆವರು, ಜನರ ನಂಬಿಕೆ ಮತ್ತು ಸಂವಿಧಾನದ ಆಶಯಗಳ ಮೇಲೆ ಕಟ್ಟಲ್ಪಟ್ಟ ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳಿಗೆ ಸ್ಥಾನ ಉಳಿಯಬೇಕಾದರೆ ಮೇಲ್ಮನೆಗಳಿಗೆ ಪ್ರಜ್ಞಾವಂತರು, ಹೋರಾಟಗಾರರು ಮತ್ತು ಜನಪರ ಚಿಂತಕರು ಬರಲೇಬೇಕು.

ಇಲ್ಲವಾದರೆ ಇತಿಹಾಸ ಒಂದು ದಿನ ನಿರ್ದಯವಾಗಿ ದಾಖಲಿಸಲಿದೆ. ಜನರ ಧ್ವನಿಯಾಗಬೇಕಿದ್ದ ಸದನಗಳು, ಹಣದ ಪ್ರತಿಧ್ವನಿಗಳಾಗಿ ಮಾರ್ಪಟ್ಟ ಕ್ಷಣವನ್ನು ಜನರು ನೋಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ನಾಗರಾಜು ಗಾಣದಹುಣಸೆ

contributor

Similar News