ಶಿಥಿಲಾವಸ್ಥೆಯಲ್ಲಿರುವ ವಿಜಯನಗರ ಕ್ಯಾಂಪ್ ಶಾಲೆ : ಜೀವಭಯದಲ್ಲಿ ಬಯಲಲ್ಲೇ ಬೋಧನೆ
ರಾಯಚೂರು: ರಾಜ್ಯ ಸರಕಾರ ಒಂದು ಕಡೆ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದೆ. ಆದರೆ ಜಿಲ್ಲೆಯ ಅನೇಕ ಶಾಲೆಗಳಲ್ಲಿ ಇಂದಿಗೂ ಸರಿಯಾದ ಕೊಠಡಿಯಿಲ್ಲದೇ ಮಕ್ಕಳು ಬಯಲಲ್ಲೇ ಪಾಠ ಕೇಳುವ ಪರಿಸ್ಥಿತಿ ಇದ್ದು ಶಿಕ್ಷಣ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುವುದಕ್ಕೆ ಕನ್ನಡಿ ಹಿಡಿಯುತ್ತವೆ.
ಅನೇಕ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಹಲವೆಡೆ ಏಕೋಪಾಧ್ಯಾಯ ಶಿಕ್ಷಕ ಶಾಲೆಗಳಿವೆ. ಇದು ಒಂದೆಡೆಯಾದರೆ, ಹಲವೆಡೆ ಶಿಕ್ಷಕರಿದ್ದಾರೆ, ಆದರೆ ಪಾಠ ಮಾಡಲು ತರಗತಿ ಕೋಣೆಗಳಿಲ್ಲದೆ ಅಸ್ತವ್ಯಸ್ಥವಾಗಿದೆ. ಜಿಲ್ಲಾ ಕೇಂದ್ರದ ಅನತಿ ದೂರದಲ್ಲಿರುವ ರಾಯಚೂರು ತಾಲೂಕಿನ ವಿಜಯನಗರ ಕ್ಯಾಂಪ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಮಕ್ಕಳು ಶಾಲಾ ಆವರಣದಲ್ಲಿರುವ ಮರದ ಕೆಳಗೆ ಕುಳಿತು ಪಾಠ ಕೇಳುವ ದೃಶ್ಯಗಳು ಸಾಮಾನ್ಯವಾಗಿದೆ.
ವಿಜಯನಗರ ಕ್ಯಾಂಪ್ ಶಾಲೆಯಲ್ಲಿ 1ರಿಂದ 5ನೇ ತರಗತಿ ಇದ್ದು, ಒಟ್ಟು 21 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರು ಖಾಯಂ ಶಿಕ್ಷಕರಿದ್ದಾರೆ. ಒಟ್ಟು 2 ಕೊಠಡಿಗಳಿವೆ. ಆದರೆ, ಎಲ್ಲವೂ ಶಿಥಿಲಾವಸ್ಥೆಗೆ ತಲುಪಿದ್ದು ಕೆಲ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತುಕೊಂಡು ಪಾಠ ಕಲಿಯುತ್ತಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಶಾಲೆಯ ವರಾಂಡದಲ್ಲಿ ಕುಳಿತು ಪಾಠ ಕೇಳುವಂತಹ ಸ್ಥಿತಿ ಇದೆ.
ಶಾಲೆಗೆ 1950ರಲ್ಲಿ ಕೇವಲ ಒಂದು ಕೊಠಡಿ ನಿರ್ಮಾಣ ಮಾಡಲಾಗಿತ್ತು. 2004ರಲ್ಲಿ ಎರಡು ತರಗತಿ ಕೋಣೆಗಳು ನಿರ್ಮಿಸಲಾಗಿದೆ. ಅದೀಗ ಸಂಪೂರ್ಣವಾಗಿ ಹಾಳಾಗಿದ್ದು, ಮೇಲ್ಛಾವಣಿಯ ಕಬ್ಬಣದ ರಾಡುಗಳು ಕಾಣುತ್ತಿವೆ. ಸಿಮೆಂಟ್ ಪದರ ಉದುರಿ ಬೀಳುತ್ತಿದ್ದು, ಯಾವಾಗ ತಲೆ ಮೇಲೆ ಬೀಳುತ್ತದೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಇದ್ದಾರೆ.
ಮಳೆಗೆ ಸೋರುವ, ಅಲ್ಲಲ್ಲಿ ಬಿರುಕು ಬಿಟ್ಟ ಮೇಲ್ಟಾವಣಿ ಕೊಠಡಿಯೇ ಅಡುಗೆ ಕೋಣೆಯಾಗಿ ಪರಿವರ್ತನೆ ಮಾಡಿಕೊಂಡಿರುವ ಅಡುಗೆ ಸಹಾಯಕಿಯರು ಕೂಡಾ ಯಾವಾಗ ತಮ್ಮ ತಲೆಯ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಬಿಸಿಯೂಟ ತಯಾರಿಸುತ್ತಾರೆ.
ಮಳೆಗಾಲದಲ್ಲಿ ಶಾಲೆ ಬಂದ್: ಶಾಲೆಯ ಕೊಠಡಿಗಳು ಬೀಳುವ ಹಂತಕ್ಕೆ ತಲುಪಿದ ಕಾರಣ ಮಕ್ಕಳಿಗೆ ಕೊಠಡಿಯೊಳಗಡೆ ಪಾಠ ಮಾಡಲು ಶಿಕ್ಷಕರೇ ಆತಂಕ ಪಡುತ್ತಿದ್ದಾರೆ. ಹೀಗಾಗಿ, ಒಬ್ಬ ಶಿಕ್ಷಕರು ಒಂದು ಕೊಠಡಿ ಹೊರಗಡೆ ಪಾಠ ಮಾಡಿದರೆ, ಇನ್ನೊಬ್ಬ ಶಿಕ್ಷಕರು ಬಯಲಿನಲ್ಲಿ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ. ಇನ್ನು ಹೆಚ್ಚು ಮಳೆ ಬಂದರೆ ಶಾಲೆಗೆ ರಜೆ ನೀಡಲಾಗುತ್ತದೆ ಎಂದು ಶಾಲೆಯ ಪರಿಸ್ಥಿತಿಯ ಪಾಲಕರು ತೆರೆದಿಡುತ್ತಾರೆ.
ಶಾಲಾ ಕೊಠಡಿ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಆರ್‌ಡಿಪಿಆರ್ ಹಾಗೂ ಸಂಭಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದರೂ ಇದುವರೆಗೆ ಪ್ರಯೋಜನವಾಗಿಲ್ಲ.
ಜಿಲ್ಲೆಯಲ್ಲಿ 4,560 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1,064 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. 294 ಪ್ರಾಥಮಿಕ ಹಾಗೂ 24 ಪ್ರೌಢಶಾಲೆಗಳಲ್ಲಿ ಶೂನ್ಯ ಶಿಕ್ಷಕರು (ಅತಿಥಿ ಶಿಕ್ಷಕರೇ ಅಧಾರ), 243 ಪ್ರಾಥಮಿಕ ಹಾಗೂ 12 ಪ್ರೌಢಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರು ಇದ್ದು, ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ತೊಡಕಾಗಿದೆ. ಇದರ ನಡುವೆ ಶಿಕ್ಷಕರು ಇರುವ ಶಾಲೆಗಳಲ್ಲಿ ಕೊಠಡಿಗಳು, ಶೌಚಾಲಯ, ಕಾಂಪೌಂಡ್, ಸುರಕ್ಷಿತ ಅಡುಗೆ ಕೋಣೆ ಹಾಗೂ ಕನಿಷ್ಠ ಮೂಲಭೂತ ಸೌಕರ್ಯವಿಲ್ಲದ ಕಾರಣ ಮಕ್ಕಳು ಸರಕಾರಿ ಶಾಲೆಯತ್ತ ಮುಖ ಮಾಡುತ್ತಿಲ್ಲ, ಮಕ್ಕಳ ಭೋದನೆಗೆ ಕನಿಷ್ಠ ತರಗತಿ ಕೋಣೆಯಿಲ್ಲದಿದ್ದರೆ ಯಾವ ಪಾಲಕರು ಅಂತಹ ಶಾಲೆಗೆ ಸೇರಿಸುತ್ತಾರೆ. ಇದನ್ನು ಸರಕಾರ ಬಂಡವಾಳ ಮಾಡಿಕೊಂಡು ಮಕ್ಕಳ ಸಂಖ್ಯೆಯ ಕೊರತೆಯ ನೆಪದಲ್ಲಿ ಶಾಲೆಗಳನ್ನು ಮುಚ್ಚಲು ಮುಂದಾದೆ. ಅದಕ್ಕಾಗಿ ಕೆಪಿಎಸ್ ಶಾಲೆಯ ಹೆಸರು ನೀಡಿ ವಿಲೀನ ಮಾಡುತ್ತಿದ್ದಾರೆ ಎಂದು ಮಹಿಳಾ ಹೋರಾಟಗಾರ್ತಿ ವಿದ್ಯಾ ಪಾಟೀಲ ಆರೋಪಿತ್ತಾರೆ.
ವಿಜಯನಗರ ಕ್ಯಾಂಪ್ ಶಾಲೆಯ ಶಿಥಿಲಾವಸ್ಥೆಯ ಕೊಠಡಿಗಳ ಬಗ್ಗೆ ಮೇಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ಗಮನಕ್ಕೆ ತರಲಾಗುವುದು.
-ಈರಣ್ಣ ಕೋಸಗಿ
ಬಿಇಒ ರಾಯಚೂರು ತಾಲೂಕು ಬಿಇಒ ರಾಯಚೂರು ತಾಲೂಕು