×
Ad

ಈ ಹಠಾತ್ ಬಂಡಾಯಗಾರರು ಇನ್ನೆಷ್ಟು ದಿನ ಸುರಕ್ಷಿತರು?

ಸಂಖ್ಯಾಬಲದ ರಾಜಕಾರಣ ಮತ್ತು ಸಾಂವಿಧಾನಿಕ ಒಗಟು

Update: 2026-06-21 09:50 IST

ಸುಭಾಷ್ ದೇಸಾಯಿ ತೀರ್ಪಿನಲ್ಲಿ ವ್ಯಕ್ತವಾಗಿರುವ ಸಾಂವಿಧಾನಿಕ ಆಶಯ ಮತ್ತು ರಾಜಕೀಯ ಪಕ್ಷದ ಪ್ರಾಧಾನ್ಯತೆಯನ್ನು ನೋಡಿದರೆ, ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ನ ಹಳೆಯ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಯಾವುದೇ ನೈತಿಕತೆಯಿಲ್ಲದ, ಕೇವಲ ಸಂಖ್ಯಾಬಲದ ಆಧಾರದ ಮೇಲೆ ಪ್ರಜಾಪ್ರಭುತ್ವವನ್ನು ಹರಾಜಿಗಿಡುವ ಇಂತಹ ವ್ಯವಸ್ಥಿತ ಸಮೂಹ ಪಕ್ಷಾಂತರಗಳಿಗೆ ಸುಪ್ರೀಂ ಕೋರ್ಟ್ ಕಾನೂನಾತ್ಮಕವಾಗಿ ಪೂರ್ಣವಿರಾಮ ಇಡಲಿದೆ ಎಂಬುದು ಕಾನೂನು ತಜ್ಞರ ಪ್ರಬಲ ನಿರೀಕ್ಷೆಯಾಗಿದೆ.

ಇಂದು ರಾಜಕೀಯ ಪಕ್ಷವೊಂದರಲ್ಲಿ ನಿಷ್ಠಾವಂತನಾಗಿ ಕಾಣಿಸಿಕೊಳ್ಳುವ ನಾಯಕ, ನಾಳೆ ಬೆಳಗಾಗುವುದರೊಳಗೆ ಮತ್ತೊಂದು ಪಕ್ಷದ ಶಾಲು ಹೊದ್ದುಕೊಂಡಿರುತ್ತಾನೆ! ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ; ಆತ ತನ್ನ ಜೊತೆಗೆ ತನ್ನದೇ ಆದ ಒಂದು ದೊಡ್ಡ ಸ್ನೇಹಿತರ ಬಳಗವನ್ನೇ (ಶಾಸಕರು ಅಥವಾ ಸಂಸದರನ್ನು) ಕರೆದುಕೊಂಡು ಹೋಗುತ್ತಾನೆ.

ರಾಜಕೀಯದಲ್ಲಿ ಈ ‘ಕಪ್ಪೆ ಜಿಗಿತ’ ಹೊಸದೇನಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ಹಿಂದೆಂದೂ ಕಾಣದ ಭೀಕರ ರೂಪ ಪಡೆದುಕೊಂಡಿದೆ. ಒಂದಲ್ಲ, ಎರಡಲ್ಲ... ದೇಶದ ಸಾಲು ಸಾಲು ಪ್ರಾದೇಶಿಕ ಪಕ್ಷಗಳು ಇಂದು ಈ ವ್ಯವಸ್ಥಿತ ‘ಸಮೂಹ ಪಕ್ಷಾಂತರ’ದ ದಾಳಿಗೆ ತುತ್ತಾಗುತ್ತಿವೆ.

ಮುಂಬರುವ ದಿನಗಳಲ್ಲಿ ದೇಶದ ಇಡೀ ರಾಜಕೀಯ ನಕಾಶೆಯನ್ನೇ ಬದಲಿಸಬಲ್ಲ ‘ಕ್ಷೇತ್ರ ಮರುವಿಂಗಡಣೆ’ಯನ್ನು ಕಣ್ಣೆದುರು ಇಟ್ಟುಕೊಂಡು, ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3) ಬಹುಮತವನ್ನು ಕ್ರೋಡೀಕರಿಸಲು ಆಡಳಿತಾರೂಢ ಬಿಜೆಪಿ ಎಲ್ಲಾ ರಾಜಕೀಯ ನೈತಿಕತೆ ಮತ್ತು ಸೌಜನ್ಯಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷಗಳ ಮೇಲೆ ಮುಗಿಬಿದ್ದಿದೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ 10ನೇ ಶೆಡ್ಯೂಲ್ ಅಥವಾ ‘ಪಕ್ಷಾಂತರ ನಿಷೇಧ ಕಾಯ್ದೆ’ಯಡಿಯಲ್ಲಿ ವಿಲೀನ ಎಂದರೇನು? ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬಂಡಾಯ ಸಂಸದರ ಮುಂದಿನ ಗತಿ ಏನು? ಈ ಹಿಂದೆ ಇಂತಹ ಸನ್ನಿವೇಶಗಳು ಎದುರಾದಾಗ ಸುಪ್ರೀಂ ಕೋರ್ಟ್ ಏನು ಹೇಳಿದೆ? ಇನ್ನೂ ಬಾಕಿ ಉಳಿದಿರುವ ಗೊಂದಲಗಳು ಯಾವ್ಯಾವುವು? ಬನ್ನಿ ಸರಳ ಭಾಷೆಯಲ್ಲಿ ಚರ್ಚಿಸೋಣ.

ವಿಲೀನದ ಕಾನೂನು ಸಮರ: ಯಾರ ವಾದ ಏನೇನು?

ಈ ಇಡೀ ರಾಜಕೀಯ ನಾಟಕದ ಹಿಂದಿರುವ ದೊಡ್ಡ ಜಿಜ್ಞಾಸೆಯೆಂದರೆ ಅದು ಕಾನೂನಿನ ವ್ಯಾಖ್ಯಾನ. ಪಕ್ಷಾಂತರ ಮಾಡಿರುವ ಬಂಡಾಯಗಾರರ ಬಣ ಮತ್ತು ಅವರ ಕಾನೂನು ಸಲಹೆಗಾರರು ತಮ್ಮ ನಡೆ ನೂರಕ್ಕೆ ನೂರು ಕಾನೂನುಬದ್ಧ ಎಂದು ವಾದಿಸುತ್ತಿದ್ದರೆ, ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ತರದ ಹಿರಿಯ ನ್ಯಾಯವಾದಿಗಳು, ಸಾಂವಿಧಾನಿಕ ತಜ್ಞರು ಮತ್ತು ಮೂಲ ಪಕ್ಷಗಳ ನಾಯಕರು ಇದು ಕಾನೂನಿನ ದೃಷ್ಟಿಯಲ್ಲೂ ಅಸಾಧ್ಯ ಮತ್ತು ಅಸಿಂಧು ಎಂದು ತಿರುಗೇಟು ನೀಡುತ್ತಿದ್ದಾರೆ. ಬಂಡಾಯಗಾರರ ಇಡೀ ವಾದ ನಿಂತಿರುವುದು ಕೇವಲ ಸಂಖ್ಯಾಬಲದ ಮೇಲೆ ಮಾತ್ರ. ಸಂವಿಧಾನದ ಹತ್ತನೇ ಅನುಸೂಚಿಯ ಪ್ಯಾರಾಗ್ರಾಫ್ 4ರ ಅಡಿಯಲ್ಲಿ, ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ಮತ್ತೊಂದು ಪಕ್ಷದ ಜೊತೆ ಕೈಜೋಡಿಸಿದರೆ ಅವರಿಗೆ ಅನರ್ಹತೆಯಿಂದ ರಕ್ಷಣೆ ಸಿಗುತ್ತದೆ ಎಂಬುದು ಇವರ ಬಲವಾದ ನಂಬಿಕೆಯಾಗಿದೆ. ರಾಜಕೀಯ ನೈತಿಕತೆಯ ದೃಷ್ಟಿಯಿಂದ ಇದು ತಪ್ಪು ಎನಿಸಿದರೂ, ಸಂವಿಧಾನ ನೀಡಿರುವ ಸಾಂಖ್ಯಿಕ ವಿನಾಯಿತಿಯನ್ನು ನಾವು ಬಳಸಿಕೊಂಡಿದ್ದೇವೆ ಎಂಬುದು ಇವರ ವಾದದ ಸಾರಾಂಶವಾಗಿದೆ.

ಆದರೆ ಮೂಲ ಪಕ್ಷಗಳ ವಾದ ಸಂಪೂರ್ಣ ವಿಭಿನ್ನವಾಗಿದೆ. ಕೇವಲ ಗೆದ್ದು ಬಂದ ಜನಪ್ರತಿನಿಧಿಗಳು ಒಟ್ಟಾಗಿ ಹೋದರೆ ಸಾಲದು, ಮೂಲ ರಾಜಕೀಯ ಪಕ್ಷವು ಮೊದಲು ಮತ್ತೊಂದು ಪಕ್ಷದೊಂದಿಗೆ ಸಾಂಸ್ಥಿಕವಾಗಿ ವಿಲೀನವಾಗಬೇಕು ಎಂಬುದು ಅವರ ಪ್ರಬಲ ಪ್ರತಿವಾದವಾಗಿದೆ. ರಾಜಕೀಯ ಪಕ್ಷದ ಹೈಕಮಾಂಡ್ ಅಥವಾ ಕೇಂದ್ರ ಸಮಿತಿಯ ಅಧಿಕೃತ ಒಪ್ಪಿಗೆಯಿಲ್ಲದೆ, ಕೇವಲ ಗೆದ್ದು ಬಂದ ಎಂಪಿ ಅಥವಾ ಎಂಎಲ್ಎಗಳು ತಾವೇ ಸ್ವತಂತ್ರವಾಗಿ ಇಡೀ ಪಕ್ಷದ ಅಸ್ತಿತ್ವವನ್ನು ನಿರ್ಧರಿಸಲು ಕಾನೂನಿನಲ್ಲಿ ಎಲ್ಲೂ ಜಾಗವಿಲ್ಲ ಎಂಬುದು ಈ ಸಾಂಸ್ಥಿಕ ಹಕ್ಕಿನ ಹೋರಾಟದ ಮುಖ್ಯ ಆಯುಧವಾಗಿದೆ.

ಹೀಗಿರುವಾಗ ವಿಲೀನದ ಕುರಿತು ಕಾನೂನು ಏನು ಹೇಳುತ್ತದೆ? ಏನಿದು ಹೈಕೋರ್ಟ್ ವರ್ಸಸ್ ಸುಪ್ರೀಂ ಕೋರ್ಟ್?

ಈ ಇಡೀ ಗೊಂದಲಕ್ಕೆ ತುಪ್ಪ ಸುರಿದಿರುವುದು ದೇಶದ ಎರಡು ಭಿನ್ನ ನ್ಯಾಯಾಲಯಗಳು ನೀಡಿರುವ ವಿಭಿನ್ನ ವ್ಯಾಖ್ಯಾನಗಳು. ಬಂಡಾಯಗಾರರು ತಮಗೆ ಬೇಕಾದ ತೀರ್ಪನ್ನು ರಕ್ಷಣಾ ಕವಚವಾಗಿ ಹಿಡಿದುಕೊಂಡಿದ್ದರೆ, ಮೂಲ ಪಕ್ಷಗಳು ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ಸಾಂವಿಧಾನಿಕ ಬ್ರಹ್ಮಾಸ್ತ್ರವಾಗಿ ಬಳಸುತ್ತಿವೆ. 2022ರಲ್ಲಿ ಗೋವಾದ ದಿಗಂಬರ್ ಕಾಮತ್ ನೇತೃತ್ವದ ಕಾಂಗ್ರೆಸ್ ಶಾಸಕರು ದೊಡ್ಡ ಮಟ್ಟದಲ್ಲಿ ಬಿಜೆಪಿ ಸೇರಿದ್ದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಒಂದು ವಿಶಿಷ್ಟ ತೀರ್ಪು ನೀಡಿತ್ತು. ಹತ್ತನೇ ಅನುಸೂಚಿಯ ಪ್ಯಾರಾಗ್ರಾಫ್ 4(2) ಅನ್ನು ಸ್ವತಂತ್ರವಾಗಿ ವ್ಯಾಖ್ಯಾನಿಸಿದ ಹೈಕೋರ್ಟ್, ಯಾವಾಗ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಮತ್ತೊಂದು ಪಕ್ಷ ಸೇರುತ್ತಾರೋ, ಆಗ ಕಾನೂನಿನ ದೃಷ್ಟಿಯಲ್ಲಿ ವಿಲೀನ ನಡೆದಿದೆ ಎಂದೇ ಅರ್ಥ ಮತ್ತು ಇದಕ್ಕೆ ಮೂಲ ರಾಜಕೀಯ ಪಕ್ಷದ ಸಾಂಸ್ಥಿಕ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸಾರಿತ್ತು. ಪ್ರಸ್ತುತ ಟಿಎಂಸಿ, ಶಿವಸೇನೆ (ಯುಬಿಟಿ) ಹಾಗೂ ಇತರ ಪಕ್ಷಗಳ ಬಂಡಾಯಗಾರರು ಇದೇ ಗೋವಾ ತೀರ್ಪನ್ನು ನಂಬಿ, ಕಾಗದದ ಮೇಲಷ್ಟೇ ಇರುವ ಸಣ್ಣಪುಟ್ಟ ರಾಜಕೀಯ ಪಕ್ಷಗಳೊಂದಿಗೆ ಕೃತಕ ವಿಲೀನ ಘೋಷಿಸಿಕೊಂಡು ಬೀಗುತ್ತಿದ್ದಾರೆ.

ಆದರೆ 2023ರ ಮಹಾರಾಷ್ಟ್ರದ ಶಿವಸೇನೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊರಬಂದ ಸುಭಾಷ್ ದೇಸಾಯಿ ವರ್ಸಸ್ ಪ್ರಿನ್ಸಿಪಲ್ ಸೆಕ್ರೆಟರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಈ ಇಡೀ ವಾದದ ಬೇರನ್ನೇ ಸೀಳಿದೆ. ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕೋರ್ಟ್ ಹೇಳಿರುವ ಪ್ರಕಾರ, ಶಾಸಕಾಂಗ ಪಕ್ಷವು ಕೇವಲ ರಾಜಕೀಯ ಪಕ್ಷದ ಒಂದು ಅಂಗವಷ್ಟೇ ಹೊರತು ಅದಕ್ಕಿಂತ ಭಿನ್ನವಲ್ಲ. ಸದನದ ಒಳಗಿರುವ ಸದಸ್ಯರು ಎಷ್ಟೇ ದೊಡ್ಡ ಬಹುಮತ ಹೊಂದಿದ್ದರೂ, ಅವರು ಮೂಲ ರಾಜಕೀಯ ಪಕ್ಷದ ನಾಯಕತ್ವವನ್ನು ಮೀರಿ ಸ್ವತಂತ್ರವಾಗಿ ವಿಲೀನದಂತಹ ಯಾವುದೇ ದೊಡ್ಡ ಸಾಂಸ್ಥಿಕ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ನ ಈ ತೀರ್ಪಿನ ಪ್ರಕಾರ, ವಿಲೀನ ಎಂಬುದು ದ್ವಿಮುಖ ಪರೀಕ್ಷೆಗೆ ಒಳಪಡಬೇಕು. ಅಂದರೆ ಮೊದಲು ಮಮತಾ ಬ್ಯಾನರ್ಜಿ ಅಥವಾ ಉದ್ಧವ್ ಠಾಕ್ರೆ ನೇತೃತ್ವದ ಮೂಲ ಸಾಂಸ್ಥಿಕ ಪಕ್ಷವು ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ವಿಲೀನವಾಗಬೇಕು, ಆನಂತರವಷ್ಟೇ ಶಾಸಕಾಂಗದ ಮೂರನೇ ಎರಡರಷ್ಟು ಸದಸ್ಯರು ಅದಕ್ಕೆ ಸಹಿ ಹಾಕಬೇಕು.

ಮೂಲ ಪಕ್ಷ ಜೀವಂತವಾಗಿರುವಾಗ, ಸಂಸದರು ಅಥವಾ ಶಾಸಕರು ತಾವಾಗಿಯೇ ಕೈಗೊಳ್ಳುವ ಇಂತಹ ವಿಲೀನದ ನಿರ್ಧಾರಗಳು ಕೇವಲ ಪಕ್ಷಾಂತರ ಮಾತ್ರ ಆಗಿರುತ್ತವೆ.

ಸ್ಪೀಕರ್ ಆಟಾಟೋಪ ಮತ್ತು ಬಂಡಾಯಗಾರರ ಒಳಗಿರುವ ನಡುಕ

ಸುಪ್ರೀಂ ಕೋರ್ಟ್ ತೀರ್ಪು ಬಂಡಾಯಗಾರರ ವಿರುದ್ಧವಾಗಿದ್ದರೂ, ಅವರು ಇಷ್ಟೊಂದು ಧೈರ್ಯದಿಂದ ಇರಲು ಕಾರಣ ಸಾಂವಿಧಾನಿಕ ವ್ಯವಸ್ಥೆಯಲ್ಲಿರುವ ಅತಿ ದೊಡ್ಡ ಲೋಪದೋಷವಾದ ಸ್ಪೀಕರ್ ಅವರ ಕಾಲಮಿತಿ. ಪಕ್ಷಾಂತರದ ದೂರು ಬಂದಾಗ ಸ್ಪೀಕರ್ ಇಷ್ಟೇ ದಿನಗಳಲ್ಲಿ ತೀರ್ಪು ನೀಡಬೇಕು ಎಂಬ ಯಾವುದೇ ಗಡುವನ್ನು ಸಂವಿಧಾನ ನಿಗದಿಪಡಿಸಿಲ್ಲ. ಈ ತಾಂತ್ರಿಕ ರಂಧ್ರವನ್ನೇ ಆಡಳಿತಾರೂಢ ವ್ಯವಸ್ಥೆಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಬಂಡಾಯಗಾರರ ಮೇಲಿನ ಅನರ್ಹತೆಯ ಅರ್ಜಿಯನ್ನು ಸ್ಪೀಕರ್ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಧೂಳು ಹಿಡಿಯುವಂತೆ ಮಾಡಬಹುದು ಮತ್ತು ಅಲ್ಲಿಯವರೆಗೆ ಅವರು ಯಾವುದೇ ಆತಂಕವಿಲ್ಲದೆ ಸದನದಲ್ಲಿ ಕುಳಿತುಕೊಂಡು ಕ್ಷೇತ್ರ ಮರುವಿಂಗಡಣೆಯಂತಹ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳಿಗೆ ಆಡಳಿತ ಪಕ್ಷದ ಪರವಾಗಿ ಮತ ಚಲಾಯಿಸಲು ದಾರಿ ಮಾಡಿಕೊಡುತ್ತದೆ.

ಆದರೆ ಈ ಬಂಡಾಯಗಾರರ ಒಳಗಣ್ಣಿನಲ್ಲಿ ಒಂದು ದೊಡ್ಡ ನಡುಕ ಮತ್ತು ಭೀತಿ ಇದ್ದೇ ಇದೆ. ಏಕೆಂದರೆ ಸ್ಪೀಕರ್ ಅವರ ಅಧಿಕೃತ ಆದೇಶ ಬರುವವರೆಗೆ ಇವರೆಲ್ಲರೂ ಕಾನೂನಿನ ಪ್ರಕಾರ ಮೂಲ ಪಕ್ಷದ ಸದಸ್ಯರಾಗಿಯೇ ಉಳಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸ್ಪೀಕರ್ ನಿರ್ಧಾರ ವಿಳಂಬ ಮಾಡುವ ಅವಧಿಯಲ್ಲೇ ಸದನದೊಳಗೆ ಕ್ಷೇತ್ರ ಮರುವಿಂಗಡಣೆಯಂತಹ ಯಾವುದೇ ಪ್ರಮುಖ ವಿಧೇಯಕ ಬಂದಾಗ, ಮೂಲ ಪಕ್ಷದ ಹೈಕಮಾಂಡ್ ಖಡಕ್ ಆದೇಶ ಅಥವಾ ‘ವಿಪ್’ ಜಾರಿ ಮಾಡಿದರೆ ಇವರು ಸಿಕ್ಕಿಬೀಳುತ್ತಾರೆ. ಸ್ಪೀಕರ್ ತೀರ್ಪು ನೀಡುವ ಮುನ್ನ ಇವರು ಆ ವಿಪ್ ಉಲ್ಲಂಘಿಸಿ ಆಡಳಿತ ಪಕ್ಷದ ಪರ ಮತ ಚಲಾಯಿಸಿದರೆ, ಅದು ತಕ್ಷಣದ ಅನರ್ಹತೆಗೆ ನೇರ ದಾರಿಯಾಗುತ್ತದೆ. ಹಾಗಾಗಿ ಇವರ ರಾಜಕೀಯ ಭವಿಷ್ಯ ಸದ್ಯಕ್ಕೆ ಕಾನೂನಿನ ಅತ್ಯಂತ ಅಸ್ಥಿರ ಪಂಜರದಲ್ಲಿದೆ.

ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿರುವ ಬಿಕ್ಕಟ್ಟು: ಏನನ್ನು ನಿರೀಕ್ಷಿಸಬಹುದು?

ಒಮ್ಮೆ ಸುಪ್ರೀಂ ಕೋರ್ಟ್ ‘ರಾಜಕೀಯ ಪಕ್ಷ’ವೇ ಸುಪ್ರೀಂ ಎಂದು ತೀರ್ಪು ನೀಡಿರುವಾಗ, ಪ್ರಸ್ತುತ ಟಿಎಂಸಿ ಅಥವಾ ಇತರ ಪಕ್ಷಗಳ ಬಿಕ್ಕಟ್ಟು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ನ್ಯಾಯಾಂಗದ ಇತಿಹಾಸದ ಆಧಾರದ ಮೇಲೆ ಕೆಲವು ಪ್ರಮುಖ ನಡೆಗಳನ್ನು ನಿರೀಕ್ಷಿಸಬಹುದು. ಸುಪ್ರೀಂ ಕೋರ್ಟ್ ಮತ್ತೊಮ್ಮೆ ಬಂಡಾಯಗಾರರಿಗೆ ದೊಡ್ಡ ಶಾಕ್ ನೀಡುವ ಸಾಧ್ಯತೆಯೇ ದಟ್ಟವಾಗಿದೆ. ಏಕೆಂದರೆ ಬಾಂಬೆ ಹೈಕೋರ್ಟ್ ನೀಡಿದ್ದ ಗೋವಾ ತೀರ್ಪಿನ ಅಂತಿಮ ಮೇಲ್ಮನವಿಯಾದ ಗಿರೀಶ್ ಚೋಡಣಕರ್ ವರ್ಸಸ್ ಸ್ಪೀಕರ್ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್ನ ಮುಂದೆಯೇ ಅಂತಿಮ ವಿಚಾರಣೆಯಲ್ಲಿದೆ. ಆದರೆ ಈ ತೀರ್ಪು ಬರಲು ಎಷ್ಟು ಸಮಯ ಬೇಕಾಗಬಹುದು ಎಂಬುದು ಬೇರೆಯೇ ವಿಚಾರ.

ಸುಭಾಷ್ ದೇಸಾಯಿ ತೀರ್ಪಿನಲ್ಲಿ ವ್ಯಕ್ತವಾಗಿರುವ ಸಾಂವಿಧಾನಿಕ ಆಶಯ ಮತ್ತು ರಾಜಕೀಯ ಪಕ್ಷದ ಪ್ರಾಧಾನ್ಯತೆಯನ್ನು ನೋಡಿದರೆ, ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ನ ಹಳೆಯ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಯಾವುದೇ ನೈತಿಕತೆಯಿಲ್ಲದ, ಕೇವಲ ಸಂಖ್ಯಾಬಲದ ಆಧಾರದ ಮೇಲೆ ಪ್ರಜಾಪ್ರಭುತ್ವವನ್ನು ಹರಾಜಿಗಿಡುವ ಇಂತಹ ವ್ಯವಸ್ಥಿತ ಸಮೂಹ ಪಕ್ಷಾಂತರಗಳಿಗೆ ಸುಪ್ರೀಂ ಕೋರ್ಟ್ ಕಾನೂನಾತ್ಮಕವಾಗಿ ಪೂರ್ಣವಿರಾಮ ಇಡಲಿದೆ ಎಂಬುದು ಕಾನೂನು ತಜ್ಞರ ಪ್ರಬಲ ನಿರೀಕ್ಷೆಯಾಗಿದೆ. ಅಲ್ಲಿಯವರೆಗೆ, ಕ್ಷೇತ್ರ ಮರುವಿಂಗಡಣೆಯ ಬೃಹತ್ ಗೇಮ್ಪ್ಲಾನ್ಗಾಗಿ ನಡೆಯುತ್ತಿರುವ ಈ ಸಂಖ್ಯಾಬಲದ ಆಟಾಟೋಪವು ಸಾಂವಿಧಾನಿಕ ಗೊಂದಲದ ಬೂದಿ ಮುಚ್ಚಿದ ಕೆಂಡದಂತೆ ಮುಂದುವರಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿಹಾಲ್ ಮುಹಮ್ಮದ್

contributor

Similar News