ಸಮಯ ಪಾಲನೆ ಮಾಡದ ಕಾರ್ಮಿಕ ಇಲಾಖೆ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ
ಬಸವಕಲ್ಯಾಣ: ತಾಲೂಕಿನ ಕಾರ್ಮಿಕ ಇಲಾಖೆಯ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಕಾರದ ಆದೇಶದಂತೆ ಸಮಯ ಪಾಲನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಹಾಜರಾಗಬೇಕು ಹಾಗೂ ಸಮಯಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಆದರೆ, ಬಸವಕಲ್ಯಾಣದ ಕಾರ್ಮಿಕ ಇಲಾಖೆಯ ಕಚೇರಿಯ ಬಾಗಿಲು ಬೆಳಿಗ್ಗೆ 10.15 ಆದರೂ ತೆರೆಯದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳಿಗ್ಗೆ 10 ಗಂಟೆಗೆ ಕಚೇರಿ ತೆರೆದು ಸಾರ್ವಜನಿಕ
ರಿಗೆ ಸೇವೆ ನೀಡಬೇಕಾದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶಕ್ಕೂ ಕಿಮ್ಮತ್ತು ನೀಡದೆ ಅಧಿಕಾರಿಗಳು ತಮ್ಮ ಇಷ್ಟದಂತೆ ಕಚೇರಿಗೆ ಬರುತ್ತಿದ್ದಾರೆ. ಇದರಿಂದ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಜನರು ತೊಂದರೆ
ಅನುಭವಿಸುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರದ ಆದೇಶ ಪಾಲಿಸದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುವುದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ, ಸಮಯ ಪಾಲನೆ ಮಾಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಚೇರಿ ಸಮಯಕ್ಕೆ ತೆರೆಯುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳ ಆದೇಶ ಪಾಲಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಬಸವಕಲ್ಯಾಣದಲ್ಲಿ ಹಲವು ಇಲಾಖೆಯ ಅಧಿಕಾರಿಗಳು ಸಮಯ ಪಾಲನೆ ಮಾಡುತ್ತಿಲ್ಲ. ಮೇಲಾಧಿಕಾರಿಗಳು ಇತ್ತ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
-ಮಾಂತೇಶ್ ಗೌರಕರ್
ಕರವೇ ಸ್ವಾಭಿಮಾನಿ ಬಣ ತಾಲೂಕಾಧ್ಯಕ್ಷ ಕರವೇ ಸ್ವಾಭಿಮಾನಿ ಬಣ ತಾಲೂಕಾಧ್ಯಕ್ಷ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು, ಕುಲಂಕುಶವಾಗಿ ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
-ಎಸ್.ಆರ್. ಹಳ್ಳಿಮನಿ
ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ,ಬೀದರ್