ಸಾಂಪ್ರದಾಯಿಕ ಹೈನುಗಾರಿಕೆಗೆ ‘ವೈಜ್ಞಾನಿಕ’ ಸ್ಪರ್ಶ: ದುಪ್ಪಟ್ಟಾದ ರೈತರ ಆದಾಯ
ವಿಜಯಪುರ: ಕೃಷಿ ಲಾಭದಾಯಕವಲ್ಲ ಎಂದು ಕೈಚೆಲ್ಲಿ ಕೂರುವವರ ಮಧ್ಯೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ರೈತರು ಹೈನುಗಾರಿಕೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದ್ದಾರೆ. ಬಿಎಲ್‌ಡಿಇ ಸಂಸ್ಥೆ, ಕೃಷಿ ಕಲ್ಪ ಹಾಗೂ ಅಕ್ಷಯಕಲ್ಪ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಅನುಷ್ಠಾನಗೊಂಡಿರುವ ಕ್ಷೀರ ಯೋಜನೆಯು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿದೆ.
ಬಬಲೇಶ್ವರ ತಾಲೂಕಿನ ನಾಗರಾಳ, ಕುಮಠೆ, ಬಾಬಾನಗರ, ನೀಡೋಣಿ, ಟಕ್ಕಳಕಿ, ಹೂಬನೂರ ಹಾಗೂ ಅರ್ಜುಣಗಿ ಗ್ರಾಮಗಳ ರೈತರು ಇಂದು ವೈಜ್ಞಾನಿಕ ಹೈನುಗಾರಿಕೆಯ ಮೂಲಕ ಬದುಕು ಹಸನಾಗಿಸಿಕೊಂಡಿದ್ದಾರೆ.
ಬಸನಗೌಡ ಪಾಟೀಲರ ‘ಕ್ಷೀರ ಯೋಜನೆ’ ದೂರದೃಷ್ಟಿ ರೈತರು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬಂದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ಬಿಎಲ್‌ಡಿಇ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಬಿ.ಪಾಟೀಲ ಅವರು ಪ್ರತಿ ವರ್ಷ 50 ಲಕ್ಷ ರೂಪಾಯಿಯಂತೆ, 5 ವರ್ಷಗಳ ಅವಧಿಗೆ ಒಟ್ಟು ಬರೋಬ್ಬರಿ 2.5 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ರೂಪಿಸಿದ್ದರು. ಇದರ ಅಡಿಯಲ್ಲಿ ರೈತರಿಗೆ ಸಂಪೂರ್ಣ ಉಚಿತವಾಗಿ ಆಧುನಿಕ ಡೈರಿ ಫಾರ್ಮಿಂಗ್ ತರಬೇತಿ ನೀಡಲಾಗುತ್ತಿದ್ದು, ಇದು ಈಗ ಯಶಸ್ಸಿನ ಉತ್ತುಂಗದಲ್ಲಿದೆ.
ಖರ್ಚು ಕಡಿಮೆ, ಲಾಭ ಜಾಸ್ತಿ: ಏನಿದು ವೈಜ್ಞಾನಿಕ ವಿಧಾನ?: ಇಲ್ಲಿನ ರೈತರು ಆಕಳುಗಳನ್ನು ಗೂಟಕ್ಕೆ ಕಟ್ಟಿ ಹಾಕದೇ, ಮುಕ್ತವಾಗಿ ಅಡ್ಡಾಡಲು ಬಿಟ್ಟು ಡೈರಿ ಫಾರ್ಮಿಂಗ್ ಮಾಡುತ್ತಿದ್ದಾರೆ. ಹಸಿ ಮೇವು, ಒಣ ಮೇವು, ಉಪ್ಪು, ಮೆಕ್ಕೆಜೋಳ ನುಚ್ಚು ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ನೀಡಲಾಗುತ್ತದೆ.
ಇಲ್ಲಿನ ಎಚ್‌ಎಫ್ ಮತ್ತು ಜರ್ಸಿ ತಳಿಯ ಆಕಳುಗಳು ಬೆಳಿಗ್ಗೆ 10 ಲೀಟರ್ ಹಾಗೂ ಸಂಜೆ 8 ಲೀಟರ್‌ನಷ್ಟು ಹಾಲು ನೀಡುತ್ತಿವೆ. ಹಾಲಿನಲ್ಲಿ 3.7ರಿಂದ 3.8 ರಷ್ಟು ಅತ್ಯುತ್ತಮ ಫ್ಯಾಟ್ (ಕೊಬ್ಬಿನಾಂಶ) ದೊರೆಯುತ್ತಿರುವುದರಿಂದ ರೈತರಿಗೆ ಬಂಪರ್ ಬೆಲೆ ಸಿಗುತ್ತಿದೆ. ಇದರಿಂದ ಶ್ರಮ ಮತ್ತು ಖರ್ಚು ಅರ್ಧದಷ್ಟು ಕಡಿಮೆಯಾಗಿದ್ದು, ಆದಾಯ ದುಪ್ಪಟ್ಟಾಗಿದೆ.
ಹೈನುಗಾರಿಕೆಯಲ್ಲಿ ಮೈಲಿಗಲ್ಲು: ತಿಂಗಳಿಗೆ 1.80 ಲಕ್ಷ ರೂ. ಗಳಿಕೆ: ಕುಮಠೆ ಗ್ರಾಮದ ಪ್ರಶಾಂತ ಸಂಗಪ್ಪ ಗಾಣಿಗೇರ ಎಂಬ ಪ್ರಗತಿಪರ ರೈತ ಸದ್ಯ 16 ಆಕಳುಗಳನ್ನು ಸಾಕುತ್ತಿದ್ದಾರೆ. ನಿತ್ಯ ಬರೋಬ್ಬರಿ 110 ಲೀಟರ್ ಹಾಲನ್ನು ಡೈರಿಗೆ ಹಾಕುವ ಮೂಲಕ ತಿಂಗಳಿಗೆ 1.20 ಲಕ್ಷದಿಂದ 1.80 ಲಕ್ಷ ರೂಪಾಯಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಬಿಎಲ್‌ಡಿಇ ಸಂಸ್ಥೆಯ ತರಬೇತಿಯಿಂದ ಪ್ರೇರಿತರಾಗಿರುವ ಇವರು, ಮುಂದಿನ ದಿನಗಳಲ್ಲಿ ತಮ್ಮ ಡೈರಿಯಲ್ಲಿ ಆಕಳುಗಳ ಸಂಖ್ಯೆಯನ್ನು 35 ಕ್ಕಿಂತ ಹೆಚ್ಚು ಮಾಡಲು ನಿರ್ಧರಿಸಿದ್ದಾರೆ.
ಕೇವಲ 2 ಎಕರೆಯಲ್ಲಿ ಸಮಗ್ರ ಕೃಷಿ ಮಾಡದ್ದ ಮಾದರಿ ದಂಪತಿ..!: ನಾಗರಾಳ ಗ್ರಾಮದ ರಾಜಕುಮಾರ ಹಾಗೂ ಮಹಾದೇವಿ ಕೊಣ್ಣೂರ ಅವರದ್ದು ಕೇವಲ 2 ಎಕರೆ ಜಮೀನಿರುವ ಬಡ ಕುಟುಂಬ. ಮೊದಲು ಕೇವಲ ಒಂದು ಆಕಳಿನಿಂದ ಹೈನುಗಾರಿಕೆ ಆರಂಭಿಸಿದ್ದ ಈ ದಂಪತಿ, ಕ್ಷೀರ ಯೋಜನೆಯ ತರಬೇತಿ ಪಡೆದ ನಂತರ ಇಂದು 13 ಆಕಳುಗಳ ಒಡೆಯರಾಗಿದ್ದಾರೆ.
ಇದರ ಜೊತೆಗೆ ಕೋಳಿ ಹಾಗೂ ಮೀನು ಸಾಕಾಣಿಕೆಯನ್ನೂ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ. ಇದೇ ಗ್ರಾಮದ ಮತ್ತೊಬ್ಬ ರೈತ ಸಾಹೇಬಗೌಡ ಪಾಟೀಲ ಅವರು ಕೇವಲ 6 ಆಕಳುಗಳಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಲಾಭ ಗಳಿಸಿ ಯಶಸ್ವಿ ಎನಿಸಿಕೊಂಡಿದ್ದಾರೆ.
ಅದೇ ಗ್ರಾಮದ ಸಾಹೇಬಗೌಡ ಪಾಟೀಲ ಬಿಎಸ್ಸಿ ಬಿಎಡ್ ಪದವಿಧರ ಆದರೆ ಬದುಕು ಕಟ್ಟಿಕೊಂಡಿದ್ದು ಹೈನುಗಾರಿಕೆಯಲ್ಲಿ ಎನ್ನುವುದು ಅತ್ಯಂತ ರೋಚಕ ಸಂಗತಿ. ಉದ್ಯೋಗ ಅರಸಿ ಊರು ಬಿಟ್ಟು ಹೋಗದೆ 6 ಆಕಳುಗಳನ್ನು ತೆಗೆದುಕೊಂಡು ಹೈನುಗಾರಿಕೆ ಪ್ರಾರಂಭಿಸಿದ್ದಾರೆ. ಈಗ ದಿನಕ್ಕೆ 60 ಲೀಟರ್ ಡೈರಿಗೆ ಹಾಕುತ್ತಿದ್ದಾರೆ. ತಿಂಗಳಿಗೆ 60 ಸಾವಿರ ರೂಪಾಯಿ ಆದಾಯ ಬರುತ್ತಿದ್ದು, ಅರ್ಧ ಖರ್ಚು-ವೆಚ್ಚವಾದರೂ 30 ಸಾವಿರ ರೂಪಾಯಿ ಪಕ್ಕಾ ಆದಾಯ ಎಂದು ರೈತ ಸಾಹೇಬಗೌಡ ಹೇಳಿದರು.
ಡೈರಿ ಫಾರ್ಮಿಂಗ್ ಅಳವಡಿಸಿಕೊಳ್ಳುವುದರಿಂದ ರೈತರ ಆದಾಯ ದ್ವಿಗುಣಗೊಳ್ಳುವುದು ಖಚಿತ. ಬಿಎಲ್‌ಡಿಇ ಸಂಸ್ಥೆ, ಕೃಷಿಕಲ್ಪ ಹಾಗೂ ಅಕ್ಷಯ ಕಲ್ಪ ಸಂಸ್ಥೆಗಳು ಉಚಿತವಾಗಿ ಅತ್ಯುತ್ತಮ ತರಬೇತಿ ನೀಡುತ್ತಿವೆ. ಆಕಳುಗಳ ಮೇವಿನ ವೆಚ್ಚ ಮತ್ತು ನಿರ್ವಹಣೆ ತುಂಬಾ ಸರಳವಾಗಿದೆ. ದಿನಕ್ಕೆ ಕೇವಲ 2 ರಿಂದ 3 ಗಂಟೆ ಕೆಲಸ ಮಾಡಿದರೆ ಸಾಕು, ಹೈನುಗಾರಿಕೆಯನ್ನು ಅತ್ಯುತ್ತಮ ಉದ್ಯಮವಾಗಿ ನಡೆಸಬಹುದು.
-ಸಿ.ಎಂ.ಪಾಟೀಲ, ಸಿಇಓ, ಕೃಷಿ ಕಲ್ಪ
ಎಚ್‌ಎಫ್ ತಳಿಯ(ಜರ್ಸಿ) ಆಕಳುಗಳನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೇವಲ ದಿನಕ್ಕೆ ಒಂದೆ ಬಾರಿ ಮೇವು ನೀಡಿ, ಅವುಗಳನ್ನು ಕಟ್ಟಿ ಹಾಕದೆ ಸ್ವತಂತ್ರವಾಗಿ ಬಿಟ್ಟು ಡೈರಿ ಪಾರ್ಮಿಂಗ್ ಮಾಡುವ ವಿಧಾನವನ್ನು ರೈತರಿಗೆ ಪರಿಚಯಿಸಿ, ನಮ್ಮ ಸಂಸ್ಥೆಯಿಂದಲೇ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಕ್ಷೀರ ಯೋಜನೆಯನ್ನು ರೂಪಿಸಲಾಗಿದೆ. ಈ ಭಾಗದ ರೈತರ ಆದಾಯ ಹೆಚ್ಚಿಸುವ ನಮ್ಮ ತಂದೆ ಎಂ.ಬಿ.ಪಾಟೀಲರ ಗುರಿಯ ಭಾಗವೇ ಈ ಹೈನೋದ್ಯಮ ಕ್ರಾಂತಿ.
-ಬಸನಗೌಡ ಪಾಟೀಲ
ಬಿಎಲ್‌ಡಿಇ ಡೀಮ್ಡ್ ವಿವಿ ಕುಲಾಧಿಪತಿಗಳು