ಬರಕ್ಕೂ ಸೆಡ್ಡು ಹೊಡೆದ ಕೊಪ್ಪಳ ರೈತರ ‘ಮರಳು ಹೊದಿಕೆ’ ಮಾದರಿ ಕೃಷಿ

Update: 2026-08-03 14:55 IST

 ಕೊಪ್ಪಳ: ರಾಜ್ಯಾದ್ಯಂತ ಬರಗಾಲ ಆವರಿಸಿ ಬೆಳೆಗಳು ಒಣಗಿ ಕೃಷಿಕರು ಕಂಗಾಲಾಗಿದ್ದಾರೆ. ಆದರೆ ಕೊಪ್ಪಳ ಜಿಲ್ಲೆಯ ಎರೆಮಣ್ಣಿನ (ಕಪ್ಪು) ಭಾಗದ ರೈತರು ತಮ್ಮ ಅಚಲ ಛಲ ಮತ್ತು ಜಾಣ್ಮೆಯಿಂದ ಬರಗಾಲ ಎದುರಿಸಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಭೂಮಿಗೆ ‘ಮರಳು ಹೊದಿಕೆ’ ಮಾಡುವ ವಿಶಿಷ್ಟ ತಂತ್ರಜ್ಞಾನದ ಮೂಲಕ ಬರದಲ್ಲೂ ಉತ್ತಮವಾಗಿ ಬೆಳೆ ಬೆಳೆದು ಮಾದರಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ಹಾಗೂ ಕೊಪ್ಪಳ ತಾಲೂಕಿನ ರೈತರು ಎರೆಭೂಮಿಯಲ್ಲಿ ಉಸುಕು (ಮರಳು) ಹಾಕುತ್ತಾರೆ.

ಅದನ್ನು ಹೊದಿಕೆಯಂತೆ ಮಾಡುತ್ತಾರೆ. ಮುಂಗಾರು ಹಂಗಾಮಿನಲ್ಲಿ ಅಥವಾ ಬೇಸಿಗೆ ಕೊನೆಯಲ್ಲಿ ಬರುವ ಅಕಾಲಿಕ ಮಳೆ ಮತ್ತು ಮುಂಗಾರಿನ ಆರಂಭದಲ್ಲಾಗುವ ಅಲ್ಪ ಮಳೆ ನೀರು ಮಣ್ಣಿನಲ್ಲಿ ಇಂಗುವಂತೆ ಮಾಡುತ್ತಾರೆ. ಆ ನೀರಿನ ಸಹಾಯದಿಂದ ಹೆಸರುಕಾಳು, ಗೆಜ್ಜೆ ಶೇಂಗಾ ಮತ್ತು ಸೂರ್ಯಕಾಂತಿ ಬಿತ್ತನೆ ಮಾಡಿ ಬರಗಾಲದಲ್ಲೂ ಒಣ ಬೇಸಾಯದ ಮೂಲಕ ಬೆಳೆ ತೆಗೆಯುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಪ್ರಾರಂಭ ಹಂತದಲ್ಲಿ ಬಿದ್ದ ಮಳೆಯ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಲು ಮರಳು ಹೊದಿಕೆ ಮಾಡಲಾಗುತ್ತದೆ. ಆಗ ಭೂಮಿಯು ನೀರನ್ನು ಹಿಡಿದಿಟ್ಟುಕೊಂಡಿರುತ್ತದೆ. ತದನಂತರ ಬಿತ್ತನೆ ಮಾಡಿ ಉತ್ತಮ ಫಸಲು ತೆಗೆಯುತ್ತಾರೆ.

ಜಿಲ್ಲೆಯಲ್ಲಿ ಬರಗಾಲದಿಂದ ಎಲ್ಲಾ ಫಸಲು ಬಾಡಿ ನಾಶವಾಗಿವೆ. ಆದರೆ ಕೊಪ್ಪಳದ ಕವಲೂರು, ಯರೆಹಂಚಿನಾಳ, ಬಿನ್ನಾಳ, ಸಿದ್ನೆಕೊಪ್ಪ, ಮಾಳೆ ಕೊಪ್ಪ, ಮಂಡಲಗೇರಿ, ಇಟಗಿ, ತೊಂಡಿಹಾಳ, ಬಂಡಿಹಾಳ, ಸೋಂಪುರು, ತಳಕಲ್ಲ, ಮತ್ತು ಬನ್ನಿಕೊಪ್ಪ ಗ್ರಾಮದ ರೈತರು ಮರಳು ಹೊದಿಕೆ ಕೃಷಿಯಲ್ಲಿ ತೊಡಗಿದ್ದರಿಂದ ಶೇಂಗಾ ಬೆಳೆ ಮಳೆಯ ಕೊರತೆಯ ಮಧ್ಯೆ ಬೆಳೆ ಹಚ್ಚ ಹಸಿರಾಗಿದ್ದು ಹೂವು ಕೂಡ ಬಿಟ್ಟಿದೆ. ಹೀಗೆ ಬೆಳೆ ಬರಲು ಕೂಡ ಸಾಕಷ್ಟು ಮಳೆಯ ಅಗತ್ಯ ಕೂಡ ಇಲ್ಲ. ಬಿತ್ತುವಾಗ ಒಂದು ಮಳೆ ಮತ್ತು ಕಾಯಿ ಕಟ್ಟುವಾಗ ಒಂದು ಮಳೆ ಆದರೆ ಸಾಕು ಬೆಳೆ ಬರುತ್ತದೆ ಎನ್ನುತ್ತಾರೆ ರೈತರು.

ಮಣ್ಣಿನ ಸವಕಳಿಯ ಭಯವಿಲ್ಲ

ಮಣ್ಣಿನ ಮೇಲೆ ಒಂದು ಇಂಚಿನಷ್ಟು ಉಸುಗನ್ನು (ಮರಳು) ಹಾಕಿದರೆ ಆ ಮರಳು ನೀರನ್ನು ಹರಿಯದಂತೆ ತಡೆದು ನಿಲ್ಲಿಸುತ್ತದೆ, ಹಾಗೆ ನಿಂತ ನೀರನ್ನು ಭೂಮಿಯು ಹಿರಿಕೊಳ್ಳುತ್ತದೆ. ಭೂಮಿ ಒಳಗೆ ನೀರಿನ ತೇವಾಂಶ ಬಹಳ ದಿನಗಳವರೆಗೆ ಇರುವುದರಿಂದ ಫಸಲು ಚೆನ್ನಾಗಿ ಬೆಳೆಯುವುದಷ್ಟೇ ಅಲ್ಲದೇ ಭೂಮಿಯ ಸವಕಳಿ ಆಗುವುದಿಲ್ಲ, ಸವಳು ಜವಳಿನ ಭಯ ಕೂಡವಿರುವುದಿಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಮರಳು ಹೊದಿಕೆಯ ಮಾದರಿಯ ಕೃಷಿ ಹಲವು ವರ್ಷಗಳಿಂದ ರೈತರು ಮಾಡುತ್ತಿದ್ದಾರೆ. ಎರೆ(ಕಪ್ಪು) ಭೂಮಿಗೆ ಮರಳು ಭೂಮಿಯ ಮೇಲೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಏನು ಕಡಿಮೆ ಆಗುವುದಿಲ್ಲ. ಬಿದ್ದ ಮಳೆ ನೀರನ್ನು ಉಸುಗು ಸಂಪೂರ್ಣವಾಗಿ ಭೂಮಿಯಲ್ಲಿ ಇಂಗುವಂತೆ ಮಾಡುತ್ತದೆ. ಭೂಮಿಯಲ್ಲಿ ತೇವಾಂಶ ಇರುತ್ತದೆ. ಆದರೆ ಇದು ದುಬಾರಿ ಬೆಲೆಯ ಕೆಲಸವಾಗಿದೆ. ಎರೆ ಭಾಗದ ರೈತರು ತಮ್ಮ ಶಕ್ತಿಗೆ ಅನುಗುಣವಾಗಿ ಮರಳು ಹೊದಿಕೆ ಮಾಡಿ ಮಾದರಿಯ ಕೃಷಿ ಮಾಡುತ್ತಿರುವುದು ರಾಜ್ಯಕ್ಕೆ ಮಾದರಿ.

<ಕೃಷ್ಣ ಉಕ್ಕುಂದ, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಕೊಪ್ಪಳ.

ಬರಗಾಲದಲ್ಲಿ ಬೆಳೆ ಬೆಳೆಯುವ ಶಕ್ತಿ ನಮಗೆ ಇದೆ, ಮರಳು ಕೃಷಿಯಿಂದ ಮುಂಗಾರಿನಲ್ಲಿ ಶೇಂಗಾ, ಹೆಸರು ಕಾಳು ಮತ್ತು ಸೂರ್ಯಕಾಂತಿ ಬೆಳೆದರೆ ಹಿಂಗಾರಿನಲ್ಲಿ ಮೆಣಸಿನ ಕಾಯಿ, ಇರುಳ್ಳಿ, ಮತ್ತು ಬಿಳಿ ಜೋಳವನ್ನುಉಸುಗು ಹೇರಿದ ಹೊಲದಲ್ಲಿ ಬೆಳೆಯುತ್ತೇವೆ.

<ಶಶಿಧರ, ಉಸುಕು ಕೃಷಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News