ಚಾರ್ಮಾಡಿ ಘಾಟ್: ಪ್ರವಾಸಿಗರನ್ನು ಸೆಳೆಯುವ ಕೃತಕ ಝರಿ ಜಲಪಾತಗಳು
ಚಿಕ್ಕಮಗಳೂರು: ಕಾಫಿನಾಡು ಸುಂದರ ಪ್ರಾಕೃತಿಕ ಪರಿಸರ ಹೊಂದಿರುವ ಬೀಡು. ಇಲ್ಲಿನ ಗಿರಿಶ್ರೇಣಿಗಳು, ಹಸಿರ ಕಾನನ ಸದ್ಯ ಮುಂಗಾರು ಮಳೆಯ ಸ್ಪರ್ಶದಿಂದ ಹಚ್ಚ ಹಸಿರಿನಿಂದ ಕಂಗೊಳಿಸಲಾರಂಭಿಸಿದ್ದು, ದೂರದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಭಾರೀ ಮಳೆ ಕಾರಣದಿಂದಾಗಿ ಚಾರ್ಮಾಡಿ ಘಾಟ್ ಉದ್ದಕ್ಕೂ ಕೃತಕ ಝರಿ ಜಲಪಾತಗಳು ಸದ್ಯ ಜೀವಕಳೆಯೊಂದಿಗೆ ಮೈದುಂಬಿ ಹರಿಯಲಾರಂಭಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಹೌದು,ಚಾರ್ಮಾಡಿ ಘಾಟ್ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿದ್ದು, ಘಾಟ್ ಉದ್ದಕ್ಕೂ ಇರುವ ಮುಗಿಲೆತ್ತರದ ಗಿರಿಶ್ರೇಣಿಗಳು, ಪಾತಾಳ ಲೋಕವನ್ನು ನೆನಪಿಸುವ ಕಣಿವೆ ಪ್ರದೇಶವನ್ನು ನೋಡುವುದು ಕಣ್ಣಿಗೆ ಹಬ್ಬವಾಗಿದೆ. ಬೇಸಿಗೆಯ ಭಾರೀ ತಾಪಮಾನದಿಂದ ಸೊರಗಿದ್ದ ಗಿರಿಶ್ರೇಣಿಗಳು ಸದ್ಯ ಮುಂಗಾರು ಮಳೆಯ ಅಬ್ಬರದಿಂದಾಗಿ ಚಾರ್ಮಾಡಿ ಘಾಟಿ ಹಸಿರ ಹೊದಿಕೆಯಿಂದ ಕಂಗೊಳಿಸುತ್ತಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯ ಹೆದ್ದಾರಿಯಲ್ಲಿ ನಿಂತು ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಚ್ಚ ಹಸಿರಿನ ರಮಣೀಯ ಗಿರಿಶ್ರೇಣಿಗಳು ಕಣ್ಣಿಗೆ ಮುದ ನೀಡುತ್ತಿವೆ.
ಚಾರ್ಮಾಡಿ ಘಾಟಿಯ ಪ್ರಾಕೃತಿಕ ಸೊಬಗನ್ನು ಮತ್ತಷ್ಟು ಹೆಚ್ಚಿಸಿರುವುದು ಕೃತಕ ಝರಿ ಜಲಪಾತಗಳು, ಬೇಸಿಗೆಯಲ್ಲಿ ಕಣ್ಮರೆಯಾಗುವ ಈ ಕೃತಕ ಝರಿ ಜಲಪಾತಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಜೀವಕಳೆಯೊಂದಿಗೆ ಘಾಟಿಯುದ್ದಕ್ಕೂ ಇರುವ ಹೆದ್ದಾರಿಯ ಅಕ್ಕಪಕ್ಕದ ಗಿರಿಶ್ರೇಣಿಗಳ ಸಂದಿಗೊಂದಿಗಳಲ್ಲಿ ಅಬ್ಬರದಿಂದ ಧುಮ್ಮಿಕ್ಕುತ್ತವೆ. ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗಿದ್ದು, ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲೂ ಭಾರೀ ಮಳೆಯಾಗಿದೆ. ಈ ಮಳೆಯಿಂದಾಗಿ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹತ್ತಾರು ಝರಿ ಜಲಪಾತಗಳು ಸೃಷ್ಟಿಯಾಗಿದ್ದು, ಚಾರ್ಮಾಡಿ ಘಾಟ್‌ನ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಚಾರ್ಮಾಡಿ ಘಾಟ್ ಭಾರೀ ಪ್ರಪಾತ ಹೊಂದಿರುವ ನುಣುಪಾದ ಗಿರಿಶ್ರೇಣಿಗಳ ತವರುಮನೆಯಾಗಿದೆ. ಸದ್ಯ ಮುಂಗಾರು ಮಳೆ ಕಾರಣದಿಂದಾಗಿ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಹೊಸ ಕಳೆ ಬಂದಿರುವುದರಿಂದ ಇಲ್ಲಿನ ರಮಣೀಯ ಪರಿಸರ, ಹಸಿರ ಗಿರಿಶ್ರೇಣಿಗಳನ್ನು ನೋಡಲು ದೂರದ ನಗರ ಪಟ್ಟಣಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.