ಯಾದಗಿರಿ: ಸಂಪೂರ್ಣ ಹದಗೆಟ್ಟ ಬೀರನೂರ ಸಂಪರ್ಕ ರಸ್ತೆ
ಸಂಚಾರ ದುಸ್ತರ: ವರ್ಷಗಳ ಬೇಡಿಕೆಗೆ ಇನ್ನೂ ದೊರೆತಿಲ್ಲ ಶಾಶ್ವತ ಪರಿಹಾರ!
ಯಾದಗಿರಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಶಹಾಪುರ ತಾಲೂಕಿನ ಬೀರನೂರ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರ ನಿತ್ಯ ಜೀವನ ದುಸ್ತರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೇವದುರ್ಗ ಮುಖ್ಯರಸ್ತೆಯಿಂದ ಬೀರನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆ ಗುಂಡಿಗಳಿಂದ ಆವೃತಗೊಂಡಿದ್ದು, ಮಳೆ ನೀರು ತುಂಬಿಕೊಂಡ ಪರಿಣಾಮ ವಾಹನ ಸವಾರರು ಜೀವದ ಹಂಗಿನಲ್ಲಿ ಸಂಚರಿಸುವಂತಾಗಿದೆ. ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ಅವುಗಳ ಆಳವೇ ಗೋಚರಿಸದ ಸ್ಥಿತಿ ನಿರ್ಮಾಣವಾಗಿದೆ.
ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುವ ಘಟನೆಗಳು ಆಗಾಗ ಸಂಭವಿಸುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಗಾಗಿ ವಾಹನಗಳು ಗ್ರಾಮಕ್ಕೆ ತಲುಪಲು ಕೂಡ ಅಸಾಧ್ಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ರಸ್ತೆ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಮಣ್ಣು ಹಾಕುವ ಕೆಲಸ ಮಾಡಿ ಕೈತೊಳೆಯಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಗ್ರಾಮದ ಅಭಿವೃದ್ಧಿಗೆ ಸಂಪರ್ಕ ರಸ್ತೆಯೇ ಜೀವನಾಡಿಯಾಗಿದ್ದು, ರಸ್ತೆ ಅವ್ಯವಸ್ಥೆಯಿಂದ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ತಕ್ಷಣ ಗಮನಹರಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ದುರಸ್ತಿ ಮಾಡುವ ಭರವಸೆಗಳು ಮಾತ್ರ ಸಿಗುತ್ತಿವೆ. ಆದರೆ ಕೆಲಸ ಮಾತ್ರ ನಡೆಯುತ್ತಿಲ್ಲ. ಅಪಘಾತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈಗಾಗಲೇ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರು ಸ್ವಲ್ಪ ವಿಳಂಬ ಮಾಡುತ್ತಿದ್ದಾರೆ. ಅವರೊಂದಿಗೆ ಮಾತನಾಡಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಸೂಚಿಸುತ್ತೇನೆ.
-ಚನ್ನಾರಡ್ಡಿ ಪಾಟೀಲ್ ತುನ್ನೂರ, ಶಾಸಕ
ಸಾಕಷ್ಟು ವರ್ಷಗಳಿಂದ ಈ ರಸ್ತೆ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರೈತರು ತಮ್ಮ ಬಂಡಿಗಳೊಂದಿಗೆ ಓಡಾಡಲು ಸಹ ಭಯಪಡುತ್ತಿದ್ದಾರೆ. ಹಲವಾರು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
-ಮೌನೇಶ ಬೀರನೂರ
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್
ಯುವ ಸೈನ್ಯ ಜಿಲ್ಲಾಧ್ಯಕ್ಷ