×
Ad

ಭಾರತೀಯರನ್ನು ವಿದೇಶಗಳಲ್ಲಿ ಏಕೆ ಕೆಟ್ಟದಾಗಿ ಕಾಣಲಾಗುತ್ತಿದೆ?

Update: 2026-06-10 12:50 IST

ಥಾಯ್ಲೆಂಡ್‌ನಿಂದ ಸ್ವಿಟ್ಸರ್‌ಲ್ಯಾಂಡ್‌ವರೆಗೆ, ನೇಪಾಳದಿಂದ ಯುಎಸ್‌ವರೆಗೆ, ಭಾರತೀಯರು ದೇಶಕ್ಕೆ ಅಪಖ್ಯಾತಿ ತರುತ್ತಿರುವ ಕಥೆಗಳು ಹೆಚ್ಚುಕಡಿಮೆ ದಿನವೂ ಸುದ್ದಿಯಾಗುತ್ತಿವೆ.

ಸಾರ್ವಜನಿಕ ಕಿರಿಕಿರಿಯಿಂದ ಹಿಡಿದು, ಸ್ಥಳೀಯ ನಿಯಮಗಳನ್ನು ಅಗೌರವಿಸುವವರೆಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಹಾನಿ ಮಾಡುವವರೆಗೆ ಇಂತಹ ಘಟನೆಗಳು ವಿದೇಶಗಳಲ್ಲಿ ಭಾರತದ ಇಮೇಜ್ ಬಗ್ಗೆ ಅಹಿತಕರ ಚರ್ಚೆ ಹುಟ್ಟುಹಾಕಿವೆ.

ಅದೇ ಸಮಯದಲ್ಲಿ, ಹೆಚ್ಚುತ್ತಿರುವ ಜನಾಂಗೀಯ ಮತ್ತು ವಲಸೆ ವಿರೋಧಿ ಜಗತ್ತಿನಲ್ಲಿ ಭಾರತೀಯರನ್ನು ಅನ್ಯಾಯವಾಗಿ ಪ್ರತ್ಯೇಕಿಸಲಾಗುತ್ತಿದೆ ಎಂದು ಹಲವರು ವಾದಿಸುತ್ತಾರೆ.

ಹಾಗಾದರೆ ಸತ್ಯವೇನು? ವಿದೇಶಗಳಲ್ಲಿ ಭಾರತೀಯರ ವಿರುದ್ಧ ಏಕೆ ಹಗೆತನ ಹೆಚ್ಚುತ್ತಿದೆ?

ನಮ್ಮ ದೇಶದ ಬಗ್ಗೆ ವಿದೇಶಗಳಲ್ಲಿ ಕೆಟ್ಟ ಇಮೇಜ್ ಬೆಳೆಯುತ್ತಿದೆ ಎಂಬ ಮಾತು ತೀರಾ ಹೊಸದಲ್ಲ.

ನಮ್ಮ ಜನರು ಇಲ್ಲಿನಂತೆ ವಿದೇಶಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟದಾಗಿ ವರ್ತಿಸುವುದು, ರಸ್ತೆಯಲ್ಲಿ ತಿನ್ನುವುದು ಮತ್ತು ಕುಡಿಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಸ್ನಾನ ಮಾಡುವುದು, ಪ್ರತಿಯೊಂದು ನಿಯಮವನ್ನೂ ಮುರಿಯುವುದು -ಈ ಎಲ್ಲಾ ಕಾರಣಗಳಿಗಾಗಿ ಭಾರತೀಯರನ್ನು ಅನುಮಾನದಿಂದ ನೋಡಲಾಗುತ್ತಿದೆ.

ಅರಿಜೋನಾದ ಪವಿತ್ರ ಕ್ಯಾಥೆಡ್ರಲ್ ಬಂಡೆಯನ್ನು ಹಾನಿಗೊಳಿಸಿರುವ ಬಗ್ಗೆ ಭಾರತೀಯ ಪ್ರವಾಸಿಗರ ಮೇಲೆ ಆರೋಪಿಸಲಾಗಿದೆ. ಭಾರತೀಯರನ್ನು ಅವರ ನಡವಳಿಕೆಯಿಂದಾಗಿ ಥಾಯ್ಲೆಂಡ್‌ನ ಯೋನಾ ಬೀಚ್ ಕ್ಲಬ್‌ನಿಂದ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸ್ವಿಟ್ಸರ್‌ಲ್ಯಾಂಡ್‌ನ ಹೋಟೆಲ್‌ನಲ್ಲಿ, ‘‘ಪ್ರಿಯ ಭಾರತೀಯರೇ, ಆಹಾರ ಕದಿಯಬೇಡಿ’’ ಎಂದು ಹೇಳುವ ನೋಟಿಸ್ ಅನ್ನು ಹಾಕಲಾಗಿದೆಯಂತೆ.

ಭಾರತೀಯರು ವಿದೇಶದ ಅಂಗಡಿಗಳಲ್ಲಿ ಕಳ್ಳತನ ಮಾಡುವ ವೀಡಿಯೊಗಳು ಪ್ರಪಂಚದಾದ್ಯಂತ ಹರಡುತ್ತಿವೆ. ನೇಪಾಳದಲ್ಲಿಯೂ ಭಾರತೀಯ ಪ್ರವಾಸಿಗರನ್ನು ಈಗ ತಡೆಯಲಾಗುತ್ತಿದೆ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ನಾವು 78ನೇ ಸ್ಥಾನದಲ್ಲಿದ್ದೇವೆ.

ನಾಗರಿಕ ಪ್ರಜ್ಞೆಯ ಕೊರತೆಯಿಂದಾಗಿ ಭಾರತೀಯರನ್ನು ಈ ರೀತಿ ಗುರಿಯಾಗಿಸಲಾಗುತ್ತಿದೆಯೇ? ಇದು ಜನಾಂಗೀಯತೆಯೇ ಅಥವಾ ನಾವು ನಿಜವಾಗಿಯೂ ನಿಯಮಗಳನ್ನು ಮುರಿಯುತ್ತಿದ್ದೇವೆಯೇ?

ಲಂಡನ್‌ಗೆ ಹೋದರೂ ನಮ್ಮ ಜನ ಪಾನ್ ಜಗಿದು ರಸ್ತೆಯಲ್ಲೇ ಉಗುಳುವುದನ್ನು ಬಿಡುವುದಿಲ್ಲ ಎನ್ನಲಾಗುತ್ತದೆ.

ನಾಗರಿಕ ಪ್ರಜ್ಞೆ ಮತ್ತು ಸ್ವೀಕಾರಾರ್ಹ ನಡವಳಿಕೆ ಪ್ರತೀ ದೇಶದಲ್ಲಿಯೂ ಬದಲಾಗುತ್ತದೆ. ನಮ್ಮ ಯಾವುದಾದರೂ ನಡೆ ನುಡಿಯಿಂದ ನಮ್ಮಲ್ಲಿ ಯಾರಿಗೂ ಸಮಸ್ಯೆಯಿಲ್ಲ ಅಂದರೆ ಅದು ಎಲ್ಲ ಕಡೆಯೂ ಹಾಗೆ ಇರಬೇಕು ಅಂತಿಲ್ಲ. ಇಲ್ಲಿ ನಿರ್ಲಕ್ಷಿಸಿ ಮುಂದೆ ಹೋಗಿರಬಹುದು. ಆದರೆ ವಿದೇಶಗಳಲ್ಲಿ ನಡೆಯುವುದಿಲ್ಲ.

ವಿದೇಶಕ್ಕೆ ಹೋದಾಗ ಅಲ್ಲಿನ ಸ್ಥಳೀಯರು, ಇತರ ಜನರು ಮತ್ತು ಪ್ರವಾಸಿಗರು ಏನು ಮಾಡುತ್ತಿದ್ದಾರೆಂದು ನೋಡಿದರೂ ಬಹಳಷ್ಟನ್ನು ಕಲಿತುಕೊಳ್ಳಲು ಸಾಧ್ಯವಿದೆ.

ಹೊರದೇಶಗಳಲ್ಲಿರುವಾಗಲಾದರೂ, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಕಲ್ಪನೆ ಇರಬೇಕು. ಭೇಟಿ ನೀಡುವ ಸ್ಥಳವನ್ನು ಗೌರವಿಸುವುದು ಮುಖ್ಯ. ಅಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಖಂಡಿತವಾಗಿಯೂ ಅಸಭ್ಯತೆ. ಈ ಕಾರಣದಿಂದಾಗಿ, ಅನೇಕ ದೇಶಗಳಲ್ಲಿ ಜನರು ಭಾರತೀಯರ ವಿರುದ್ಧ ಕೋಪಗೊಳ್ಳುತ್ತಿದ್ದಾರೆ. ಈ ಜನರ ಅಗ್ಗದ ನಡವಳಿಕೆ ಮತ್ತು ಮೂರ್ಖತನವನ್ನು ಇನ್ನಷ್ಟು ಹೈಲೈಟ್ ಮಾಡಲಾಗುತ್ತಿದೆ.

ಇಲ್ಲಿ ಮಾಡುವಂತೆ ವಿದೇಶಗಳಲ್ಲಿಯೂ ರಸ್ತೆಬದಿಯಲ್ಲಿ ಕಸ ಎಸೆಯುತ್ತಿದ್ದಾರೆ ಎಂಬ ವೀಡಿಯೊಗಳು ಬರುತ್ತಿವೆ. ಭಾರತೀಯ ಚಾಲಕರು ಅನೇಕ ಹೈಸ್ಪೀಡ್ ಅಪಘಾತಗಳ ಘಟನೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಿದೆ. ಬೀದಿಯಲ್ಲಿ ನೃತ್ಯ ಮಾಡುವುದು, ಇತರರಿಗೆ ತೊಂದರೆ ಕೊಡುವುದು ಇದೆಲ್ಲವೂ ನಮ್ಮ ನಾಗರಿಕತೆಯ ಭಾಗವೆಂಬಂತೆ ಅಲ್ಲಿ ತೋರಿಸುತ್ತ, ಹೆಸರು ಕೆಡಿಸಲಾಗುತ್ತಿದೆ.

ಆದರೆ ಕೆಲವೆಡೆ ನಮ್ಮವರ ತಪ್ಪಿಲ್ಲದೆಯೂ ಆಪಾದನೆ ಮಾತ್ರ ನಮ್ಮವರ ಮೇಲೆ ಬಂದಿರಬಹುದು.

ಜನಾಂಗೀಯ ದ್ವೇಷದ ಕಾರಣಕ್ಕಾಗಿ ಹಾಗಾಗುವ ಸಾಧ್ಯತೆಯೂ ಇದೆ. ಜನಾಂಗೀಯ ದ್ವೇಷ ಒಂದು ಅಸಹ್ಯಕರ ಸತ್ಯ ಮತ್ತು ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ಇರುವುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಇಂದು ಎಲ್ಲೆಡೆ ವಲಸೆ ವಿರೋಧಿ ರ್ಯಾಲಿಗಳು ನಡೆಯುತ್ತಿವೆ. ಲಂಡನ್, ಆಸ್ಟ್ರೇಲಿಯ, ಇಲ್ಲಿಯವರೆಗೆ ಸಾಕಷ್ಟು ಶಾಂತಿಯುತ ಸ್ಥಳವೆನ್ನಲಾಗುತ್ತಿದ್ದ ಐರ್‌ಲ್ಯಾಂಡ್‌ನಲ್ಲಿಯೂ ವಲಸಿಗರ ವಿರುದ್ಧ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ವಾಸ್ತವವಾಗಿ, ಭಾರತೀಯರ ಮೇಲೆ ಜನಾಂಗೀಯ ದಾಳಿಗಳು ಸಹ ಪ್ರಾರಂಭವಾಗಿವೆ. ಹೀಗೆ ಜನಾಂಗೀಯ ಆವೇಶ ಹೆಚ್ಚುತ್ತಿರುವ ವಾತಾವರಣದಲ್ಲಿ, ಈ ವಿಭಜಿತ ಜಗತ್ತಿನಲ್ಲಿ ನಮ್ಮನ್ನು ದ್ವೇಷಿಸಲು ಜನರಿಗೆ ಇನ್ನಷ್ಟು ಕಾರಣಗಳನ್ನು ನಾವೇ ಕೈಯಾರೆ ನೀಡದಂತೆ ಎಚ್ಚರವಹಿಸುವುದು ಅವಶ್ಯ.

ಮೊದಲು ನಾವು ಸ್ಥಳೀಯ ನಿಯಮಗಳನ್ನು ಪಾಲಿಸಬೇಕು. ಇಲ್ಲಿ ಅಂತಹ ತಪ್ಪುಗಳಿಗೆಲ್ಲ ಶಿಕ್ಷೆಯಾಗುವುದಿಲ್ಲ ಎಂಬ ಕಾರಣಕ್ಕೆ, ವಿದೇಶದಲ್ಲೂ ನಡೆಯುತ್ತದೆ ಎಂಬ ಭಾವನೆ ಬಿಡಬೇಕು.

ದೊಡ್ಡ ಸಮಸ್ಯೆಯೆಂದರೆ ಭಾರತೀಯರನ್ನು ಈಗ ಮಹಿಳೆಯರ ಪಾಲಿಗೆ ಅಸುರಕ್ಷಿತ ಎಂದು ನೋಡಲಾಗುತ್ತಿದೆ. ಅದಕ್ಕಿಂತ ಕೆಟ್ಟದೆಂದರೆ ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಶೋಷಣೆಯ ಪ್ರಕರಣಗಳಲ್ಲಿಯೂ ನಮ್ಮ ಜನರ ಹೆಸರು ಸೇರಿಕೊಳ್ಳುತ್ತಿದೆ.

ಜನಾಂಗೀಯತೆ ಇದೆ ಎಂದು ಒಪ್ಪಿಕೊಂಡರೂ, ನಾವು ಮಾಡುವ ಯಡವಟ್ಟುಗಳು ಕೂಡ ನಮ್ಮ ಬಗ್ಗೆ ತಪ್ಪು ತಿಳುವಳಿಕೆಗೆ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ, ನಮ್ಮಿಂದಾದ ತಪ್ಪಿಗೆ ಪಶ್ಚಾತ್ತಾಪ ಪಡಲೇಬೇಕು.

ಭಾರತೀಯರು ಒಳ್ಳೆಯ ಕೆಲಸ ಮಾಡುವುದಿಲ್ಲ ಎಂದಲ್ಲ. ಅಂತಹ ಉದಾಹರಣೆಗಳು ಸಾಕಷ್ಟಿವೆ.

ಕೆಲವು ದಶಕಗಳ ಹಿಂದೆ ಅಮೆರಿಕನ್ನರು ಮತ್ತು ಬ್ರಿಟಿಷ್ ಪ್ರವಾಸಿಗರನ್ನು ಪ್ರಪಂಚದಾದ್ಯಂತ ದ್ವೇಷಿಸಲಾಗುತ್ತಿತ್ತು. ಆನಂತರ ಅವರು ತಮ್ಮ ನಡತೆ ಬದಲಾಯಿಸಿಕೊಂಡರು ಮತ್ತು ತಮ್ಮ ದುರಹಂಕಾರ ಕಡಿಮೆ ಮಾಡಿಕೊಂಡರು. ಸ್ಥಳೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆಂದು ಅವರಿಗೆ ಮನವರಿಕೆಯಾಯಿತು.

ಬ್ರಿಟನ್ ತನ್ನ ಕುಖ್ಯಾತ ಫುಟ್ಬಾಲ್ ಗೂಂಡಾಗಳನ್ನು ಸುಧಾರಿಸಲು ಅಭಿಯಾನ ಪ್ರಾರಂಭಿಸಿತು.

ನಾವು ಸಹ ಅದನ್ನೇ ಮಾಡಬೇಕಾಗಿದೆ. ಬಾಲಿವುಡ್ ಸಿನೆಮಾ ನೋಡಿ, ನಾವು ಎಲ್ಲಿ ಹೋಗಿ ಏನೇ ಮಾಡಿದರು ನಡೆಯುತ್ತದೆ ಎಂದು ಮೂರ್ಖತನ ಪ್ರದರ್ಶಿಸಬಾರದು.

ನಮ್ಮ ದೇಶದಲ್ಲಿ ಸಾರ್ವಜನಿಕ ಸ್ಥಳ ಮತ್ತು ಖಾಸಗಿ ಸ್ಥಳದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿ ರಸ್ತೆ, ಸಾರ್ವಜನಿಕ ಕಟ್ಟಡ ಎಂದು ನೋಡದೆ ಪಾನ್ ಉಗುಳಲಾಗುತ್ತದೆ.

ಹಾಗೆಯೇ ಇಲ್ಲಿ ಥಿಯೇಟರಿನೊಳಗೆ ಕಿರುಚಾಡಿ, ಕುಣಿದಂತೆ ಹೊರದೇಶದಲ್ಲೂ ಮಾಡಲಾಗುತ್ತದೆ. ವಿಮಾನದಲ್ಲಿ ಕುಣಿಯಲಾಗುತ್ತದೆ.

ಪ್ರತಿಯೊಬ್ಬ ಭಾರತೀಯ ಪ್ರವಾಸಿ ಅಥವಾ ಕೆಲಸಗಾರ ವಿದೇಶದಲ್ಲಿ ಭಾರತದ ಅನಧಿಕೃತ ರಾಯಭಾರಿ ಎಂಬುದನ್ನು ನೆನಪಿಡಬೇಕು. ಅಲ್ಲಿಗೆ ತಕ್ಕ ರೀತಿಯಲ್ಲಿ ವರ್ತಿಸದೇ ಹೊದರೆ, ಇಲ್ಲಿ ಮನೆಯೊಳಗೆ ಕಲಿತಿರುವ ಚಾಳಿಯನ್ನೇ ಅಲ್ಲೂ ತೋರಿಸಲು ಹೋದರೆ, ದೇಶದ ಇಮೇಜ್ ಅನ್ನು ಹಾಳು ಮಾಡಿದಂತಾಗುತ್ತದೆ.

ಇತರರ ರೀತಿ, ನೀತಿ, ಸಂಸ್ಕೃತಿಯನ್ನು ಗೌರವಿಸಿ, ನಮ್ಮನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾದರೆ, ಖಂಡಿತ ಇತರರು ಕೂಡ ನಮ್ಮನ್ನು ಗೌರವಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎ.ಎನ್. ಯಾದವ್

contributor

Similar News