ಭಾರತೀರಾಜ ಸ್ಕೂಲ್ ಆಫ್ ಸಿನೆಮಾ
ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಭಾರತೀರಾಜ ಕೇವಲ ನಿರ್ದೇಶಕ, ನಟರಾಗಿರಲಿಲ್ಲ. ತಮಿಳು ಸಿನೆಮಾರಂಗ ಸ್ವರೂಪ ಮತ್ತು ದಿಕ್ಕನ್ನು ಬದಲಿಸಿದ ‘ಸ್ಕೂಲ್ ಆಫ್ ಥಾಟ್’ ಆಗಿದ್ದರು. 1970ರ ದಶಕದಲ್ಲಿ ತಮಿಳು ಸಿನೆಮಾವನ್ನು ಸ್ಟುಡಿಯೋ-ಕೇಂದ್ರಿತ ಚಲನಚಿತ್ರ ನಿರ್ಮಾಣದಿಂದ ಗ್ರಾಮೀಣ ಪ್ರಾದೇಶಿಕತೆಯ ಕ್ಯಾನ್ವಾಸ್‌ಗೆ ಬದಲಾಯಿಸಿ ಸಿನೆಮಾ ವ್ಯಾಕರಣವನ್ನು ಮರು ರೂಪಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ಕೇವಲ ಕ್ಯಾಮರಾವನ್ನು ತಿರುಗಿಸಲಿಲ್ಲ, ಕೇವಲ ಜಾಗವನ್ನು ಸ್ಥಳಾಂತರಿಸಲಿಲ್ಲ. ಬದಲಿಗೆ ಪರಿವರ್ತನೆಯ ಸಾಹಸಯಾತ್ರೆ(ಒಡೆಸ್ಸಿ) ಮೂಲಕ ಹಳ್ಳಿಗಳ ಮಣ್ಣು, ಗಾಳಿ, ಗುಡಿಸಲುಗಳು ಮತ್ತು ಅಲ್ಲಿನ ಮನುಷ್ಯರ ಕತೆಗಳನ್ನು ಕಟ್ಟಿದರು. ಅವರ ನಿರ್ದೇಶನದಲ್ಲಿ ಇಡೀ ಹಳ್ಳಿಯೇ ರಾಗದ್ವೇಷಗಳಿಂದ ತುಂಬಿದ ನಾಗರಿಕತೆಯು ಚಲಿಸುತ್ತಿರುವಂತೆ ಭಾಸವಾಗುತ್ತಿತ್ತು. ಮುಖ್ಯವಾಗಿ ಅವರು ಸಾಮಾನ್ಯ ಮನುಷ್ಯರಿಗೆ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಿಗೆ ಅವರದೇ ಆದ ಮಹತ್ವವನ್ನು ಗುರುತಿಸಿದರು. ಇವರ ಅನೇಕ ಸಿನೆಮಾಗಳಲ್ಲಿ ಪುರುಷರ ಬದುಕು ಮಹಿಳೆಯರ ವ್ಯಕ್ತಿತ್ವದ ನೆರಳಿನಲ್ಲಿ ರೂಪುಗೊಂಡಿದೆ. ಸಿನೆಮಾ ಕನಸುಗಳ ಕಾರ್ಖಾನೆ ಎಂದು ಭಾವಿಸಿರುವಾಗ ಭಾರತೀರಾಜ ಈ ಕನಸಿನ ರೋಚಕತೆಯನ್ನು ಮುರಿದರು. ಸಾಮಾನ್ಯ ಜನರು ತಾವು ನೋಡುತ್ತಿರುವ ಸಿನೆಮಾದ ಪಾತ್ರಗಳ ಜೊತೆಗೆ ಗುರುತಿಸಿಕೊಂಡು ತಮ್ಮದೇ ಬದುಕಿನ ಕತೆಯೆಂಬಂತೆ ಸಂಭ್ರಮಿಸುವ, ವಿಷಾದಿಸುವ ಅನುಭವ ತಂದುಕೊಟ್ಟರು. ಪ್ರೀತಿಯ ಸಿಹಿ, ವಿದಾಯದ ಕಹಿ, ಬದುಕಿನ ಮುಗ್ಧತೆ ಎಲ್ಲವನ್ನೂ ಮೆಲೋಡ್ರಾಮಾದ ಮೂಲಕ ಅಭಿವ್ಯಕ್ತಿಸುತ್ತಲೇ ಅದಕ್ಕೊಂದು ಕಲಾತ್ಮಕ ಭಿತ್ತಿ ತಂದುಕೊಡುವ ಪರಿಣತಿ ಹೊಂದಿದ್ದರು. ಈ ಶೈಲಿ ಅವರ ಕಥನ ನಿರೂಪಣೆಯ ಭಾಷೆಯಾಗಿತ್ತು.
ವಾಸ್ತವಿಕತೆ ಮತ್ತು ಕಥನಕಲೆಗೆ ಅವರು ಹೊಸ ಮಾನದಂಡಗಳನ್ನು ರೂಪಿಸಿದ ಭಾರತೀರಾಜ ಒಬ್ಬ ನಿಪುಣ ನೇಕಾರನಂತೆ ಕುಟುಂಬ ಮತ್ತು ಸಮಾಜದ ಸಂತೋಷ ಮತ್ತು ದುಃಖ, ಆಶೆ ಮತ್ತು ನಿರಾಶೆ, ಪ್ರೀತಿ ಮತ್ತು ಹಂಬಲಗಳ ಕಥೆಗಳನ್ನು ಹೆಣೆದರು. ಅರುವತ್ತು, ಎಪ್ಪತ್ತರ ದಶಕದಲ್ಲಿ ಬಂಗಾಳಿ ಮತ್ತು ಮಲಯಾಳಂ, ಕನ್ನಡ ಚಿತ್ರರಂಗದಂತೆ ತಮಿಳುನಾಡಿನಲ್ಲಿ ಕಲಾತ್ಮಕ ಸಿನೆಮಾ ಚಳವಳಿ ಬಲವಾಗಿ ಬೆಳೆಯಲಿಲ್ಲ. ಆಗ ಭಾರತೀರಾಜ ಈ ನಿರ್ವಾತದಲ್ಲಿ ಹೆಜ್ಜೆ ಇಟ್ಟರು. ಮುಖ್ಯವಾಹಿನಿ ಸಿನೆಮಾದ ಭಾವುಕತೆ, ಅತಿರಂಜನೆ, ನಾಟಕೀಯತೆಯ ಜೊತೆಗೆ ಕಲಾತ್ಮಕ ಸಿನೆಮಾದ ನೈಜತೆ, ವಾಸ್ತವಿಕತೆ ನೆರೇಶನ್‌ನ್ನು ಬೆಸೆದು ತಮ್ಮದೇ ಆದ ‘ಭಾರತೀರಾಜ ಸ್ಕೂಲ್ ಆಫ್ ಸಿನೆಮಾ’ ಕಟ್ಟಿದರು. ಬೆಳೆಸಿದರು. ಇದರ ಮುಂಚೂಣಿಗರಾದರು. ಈ ಘರಾಣದಲ್ಲಿ ಚಿತ್ರಗಳನ್ನು ಸ್ಟುಡಿಯೋಗಳಿಂದ ಹೊರಗೆ, ನೈಜ ಸ್ಥಳಗಳಿಗೆ ಕರೆದೊಯ್ದು ಹೊಸ ತಲೆಮಾರಿನ ಕಲಾವಿದರು, ಛಾಯಾಗ್ರಾಹಕರನ್ನು ರೂಪಿಸಲಾಯಿತು. ಸಹಜ ಅಭಿನಯವನ್ನು ಉತ್ತೇಜಿಸಿತು. ದೈನಂದಿನ ಜೀವನದ ಕಥೆಗಳನ್ನು ಎಲ್ಲಾ ನಾಟಕೀಯತೆ ಮತ್ತು ವಾಸ್ತವಿಕತೆಯ ಕೊಲಾಜ್ ಮೂಲಕ ಹೇಳಲು ಪ್ರಯತ್ನಿಸಲಾಯಿತು. ನಂತರ ಎಂಭತ್ತು, ತೊಂಭತ್ತರ ದಶಕಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗ ಈ ಮಾದರಿಯನ್ನೇ ಅನುಕರಣೆ ಮಾಡಿದ್ದು ಇತಿಹಾಸ.
ಎಂಭತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮ್ಮ ತಲೆಮಾರಿಗೆ ಭಾರತೀರಾಜ, ಮಹೇಂದ್ರನ್, ಬಾಲು ಮಹೇಂದ್ರನ್ ತ್ರಿವಳಿ ನಿರ್ದೇಶಕರು ಸಿನೆಮಾ ಕುರಿತಾದ ಹೊಸ ಭಾಷೆಯನ್ನು ಪರಿಚಯಿಸಿದರು.
ಈ ಚಳವಳಿಯ ಭಾಗವಾಗಿ ಭಾರತೀರಾಜ ‘ಸೆಲೆಬ್ರಿಟಿ’ತನವನ್ನೂ ಮುರಿದು ರಾಧಿಕಾ, ರೇವತಿ, ರಾಧಾ, ರೇಖಾ, ಕಾರ್ತಿಕ್, ಪಾಂಡಿಯನ್, ಚಂದ್ರಶೇಖರ್, ನೆಪೋಲಿಯನ್, ಜನಕರಾಜ್ ಅವರಂತಹ ಹಲವಾರು ಹೊಸ ಕಲಾವಿದರನ್ನು, ಮಣಿವೆಣ್ಣನ್, ಭಾಗ್ಯರಾಜ್‌ರಂತಹ ನಿರ್ದೇಶಕರನ್ನು ನಿವಾಸ್‌ರಂತಹ ಛಾಯಾಗ್ರಾಹಕರನ್ನು ಪರಿಚಯಿಸಿದರು.
ಭಾರತೀರಾಜ ಸ್ಕೂಲ್ ಸಿನೆಮಾಗಳು
‘ಪದಿನಾರು ವಯದಿನಲೆ’ ಸಿನೆಮಾ ಮೂಲಕ ಪಲಟ್ಟೈ, ಮಯಿಲು, ಚಪ್ಪಾನಿಯಂತಹ ಅಪ್ಪಟ ಹಳ್ಳಿ ಸೊಗಡಿನ ಅಸಾಂಪ್ರದಾಯಿಕ ಪಾತ್ರಗಳನ್ನು ಸೃಷ್ಟಿಸಿದ ಭಾರತೀರಾಜ ತಮಿಳು ಅಸ್ಮಿತೆಯ ಕಥನಕ್ಕೆ ಹೊಸ ದಾರಿ ನಿರ್ಮಿಸಿದರು.
‘ಕಿಳಕ್ಕೆ ಪೋಗಂ ರೈಲು’ ಸಿನೆಮಾದ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳೆ ಮೇಲಿನ ಕೌಟುಂಬಿಕ ದೌರ್ಜನ್ಯವನ್ನು, ಸಾಮಾಜಿಕ ಕ್ರೌರ್ಯವನ್ನು ಸಿನೆಮಾಟಿಕ್ ಮೆಲೋಡ್ರಾಮಾ ಮೂಲಕ ವಿವರಿಸಿದರು. ಇಲ್ಲಿ ಜಾತಿ ತಾರತಮ್ಯವನ್ನೂ ಸಹ ಸೂಕ್ಷ್ಮವಾಗಿ ತೋರಿಸುತ್ತಾರೆ.
ನಂತರ ಬಂದ ‘ನಿಳಲ್‌ಗಳ್’ನಲ್ಲಿ ಮದ್ರಾಸನ್ನು(ಈಗಿನ ಚೆನ್ನೈ) ಕೇಂದ್ರವಾಗಿಟ್ಟುಕೊಂಡು ನಿರುದ್ಯೋಗದ ಕತೆಯನ್ನು ಹೇಳಲು ಪ್ರಯತ್ನಿಸಿದರು. ಈ ಚಿತ್ರಕತೆಗೆ ದಾಸ್ತೋವೆಸ್ಕಿಯ ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ತಿರುಳನ್ನು ಜೋಡಿಸಿದ್ದು ಕುತೂಹಲಕರವಾಗಿದೆ. ರಾಜಶೇಖರ್, ರೋಹಿಣಿ, ಚಂದ್ರಶೇಖರ್, ರವಿಯಂತಹ ಸಂಪೂರ್ಣ ಹೊಸಬರನ್ನು ಒಳಗೊಂಡ ಈ ಸಿನೆಮಾ ವ್ಯಾಪಾರದಲ್ಲಿ ಸೋತಿತು. ಆದರೆ 1981ರ ಐಎಫ್‌ಎಫ್‌ಐನಲ್ಲಿ ಪ್ರದರ್ಶನಗೊಂಡು ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಈ ಸಿನೆಮಾ ಬಿಡುಗಡೆಯಾದ ವರ್ಷವೇ ಕೆ.ಬಾಲಚಂದರ್ ನಿರ್ದೇಶನದ ಕಮಲ್ ಅಭಿನಯದ ನಿರುದ್ಯೋಗದ ಕಥನವುಳ್ಳ ‘ವರುಮಯಿನ್ ನಿರಂ ಸಿಗಪ್ಪು’ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು.
‘ಮಣ್ ವಾಸನೈ’, ‘ನೀರಂ ಮಾರಾತ ಪೂಗಲ್’ ತರಹದ ಸಿನೆಮಾಗಳು ಭಾರತೀರಾಜ ಲೆಗಸಿಯ ವೈವಿಧ್ಯಕ್ಕೆ ಉದಾಹರಣೆಯಾಗಿದೆ.
‘ಸಿಗಪ್ಪು ರೋಜಾಗಳ್’ ಸೌಮ್ಯ ಮುಖವಾಡದ ನಾಯಕನೊಳಗಿನ ಕೊಲೆಗಡುಕ ಮನಸ್ಥಿತಿಯನ್ನು ನಿರೂಪಿಸುವ ಕ್ರೈಮ್ ಥ್ರಿಲ್ಲರ್ ಸಿನೆಮಾ.
‘ವೇದಂಪುದಿದು’ ಸಿನೆಮಾದಲ್ಲಿ ಬ್ರಾಹ್ಮಣ ಯಾಜಮಾನ್ಯವನ್ನು ವಿಡಂಬನಾತ್ಮಕವಾಗಿ ಗೇಲಿ ಮಾಡುತ್ತಾ ತೀಕ್ಷ್ಣ ಸಂಭಾಷಣೆಗಳನ್ನು ಪೂರಕವಾಗಿ ಬೆಳೆಸಿಕೊಂಡು ಜಾತಿ ರೋಗದ ಕುರಿತು ವಿಮರ್ಶೆ ಮಾಡಿದರು.
‘ಅಲೈಗಳ್ ಒಯಿವತಿಲ್ಲೈ’ನಲ್ಲಿ ಬ್ರಾಹ್ಮಣ - ಕ್ರಿಶ್ಚಿಯನ್ ಅಂತರ್‌ಧರ್ಮೀಯ ಪ್ರೇಮಕತೆಯನ್ನು ಹೇಳುತ್ತಾರೆ. ಆದರೆ ಈ ನಿರೂಪಣೆಯಲ್ಲಿ ಬ್ರಾಹ್ಮಣ ಕುಟುಂಬವನ್ನು ಸಂತ್ರಸ್ತರಂತೆ, ಕ್ರಿಶ್ಚಿಯನ್ ಕುಟುಂಬವನ್ನು ಶೋಷಕರಂತೆ ತೋರಿಸಿದ್ದು ವಿಪರ್ಯಾಸವಾಗಿತ್ತು. ಆಗ ವಿದ್ಯಾರ್ಥಿಗಳಾಗಿದ್ದ ನಾವು ಕೆಲವರು ಇದನ್ನು ಪ್ರಶ್ನಿಸಿದ್ದು ನೆನಪಿದೆ.
‘ಮೊದಲ್ ಮರ್ಯಾದೈ’ ಸಿನೆಮಾ ಮೂಲಕ ಶಿವಾಜಿ ಗಣೇಶನ್(ನಿಯಂತ್ರಿತ ನಾಟಕೀಯತೆ) ಮತ್ತು ರಾಧಾ(ಗ್ಲಾಮರ್ ಇಲ್ಲದ ಬೆಸ್ತ ಜಾತಿಯ ಪಾತ್ರ) ಅವರ ಇಮೇಜನ್ನು 180 ಡಿಗ್ರಿ ಬದಲಾಯಿಸಿ ಅದ್ಭುತ ನಟನೆಯನ್ನು ಹೊರತೆಗೆದ ಭಾರತೀರಾಜ ತಮ್ಮ ಸಿನೆಮಾ ಬದುಕಿನ ಹೊಸ ಎತ್ತರಕ್ಕೆ ತಲುಪಿದರು. ಸತ್ಯರಾಜ್‌ಗೆ ಹೀರೋ ಆಗಿ ಭಡ್ತಿ ಕೊಟ್ಟ ‘ಕಡಲೋರ ಕವಿತೆಗಳ್’ ಮತ್ತೊಂದು ಸ್ಮರಣೀಯ ಸಿನೆಮಾ. ಹಾಗೆಯೇ ಕರುತ್ತಮ್ಮ ಸಹ.
ಇಳೆಯರಾಜ ಅವರ ಸಂಗೀತವು ಭಾರತೀರಾಜ ಸಿನೆಮಾಗಳ ಆತ್ಮದಂತಿತ್ತು.
ಭಾರತೀರಾಜ ಅವರಿಗೂ ಕೆಲವು ಮಿತಿಗಳಿದ್ದವು. ಕೆಲವೊಮ್ಮೆ ಅವರು ಸಿದ್ಧಮಾದರಿಗಳನ್ನು (clichés) ಅವಲಂಬಿಸುತ್ತಿದ್ದರು ಮತ್ತು ಮಹಾತ್ವಾಕಾಂಕ್ಷೆಯ ಕೆಲವು ಚಿತ್ರಗಳ ಕಥನವನ್ನು ಸರಳೀಕೃತಗೊಳಿಸುತ್ತಿದ್ದರು ಅಥವಾ ಅತಿಯಾಗಿ ರೊಮ್ಯಾಂಟಿಕ್‌ಗೊಳಿಸುತ್ತಿದ್ದರು ಮಹಿಳಾ ಪ್ರಧಾನ ಸಿನೆಮಾಗಳ ಪರಂಪರೆ ರೂಪಿಸಿದರೂ ಸಹ ಕೆಲವು ಸಂದರ್ಭಗಳಲ್ಲಿ ಈ ಪಾತ್ರಗಳು ಸಂತ್ರಸ್ಥರಾಗಿ, ಅಸಹಾಯಕರಾಗಿ ಮತ್ತು ಧೈನ್ಯವೇ ಮೂರ್ತಿವೆತ್ತವರಂತೆ ಕಂಗೊಳಿಸುತ್ತಿದ್ದರು. ಕೆಲವೊಮ್ಮೆ ಹಿಂಸೆ ಮತ್ತು ಪ್ರೇಮವನ್ನು ವೈಭವೀಕರಿಸುತ್ತಿದ್ದರು.
‘ಮತ್ತೊಂದು ಜನ್ಮವಿದ್ದರೆ ಸಿನೆಮಾ ವ್ಯಕ್ತಿತ್ವವಾಗಿಯೇ ಹುಟ್ಟಲು ಬಯಸುತ್ತೇನೆ’ ಎಂದು ಹೇಳಿದ ಭಾರತೀರಾಜ ಮುಖ್ಯವಾಹಿನಿ ಸಿನೆಮಾರಂಗದಲ್ಲಿ ವಾಸ್ತವವಾದಿ ಕಥನ ಕಟ್ಟುವಲ್ಲಿ ಪರಿಣಿತರಾಗಿದ್ದ master storyteller. ಸ್ಕೂಲ್ ಆಫ್ ಥಾಟ್‌ನ ವಿಳಾಸ.