×
Ad

ಹಾವೇರಿ: ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ; ಜೀವಂತ ಮಹಿಳೆಗೆ ಮರಣ ಪ್ರಮಾಣ ಪತ್ರ!

ಸರಕಾರಿ ಸೌಲಭ್ಯಗಳಿಂದ ವಂಚಿತ ಬಡ ಕುಟುಂಬ

Update: 2026-06-17 11:24 IST

ಹಾವೇರಿ : ಅಧಿಕಾರಿಗಳು ನಿರ್ಲಕ್ಷ್ಯದಿಂದ ಬದುಕಿರುವ ಮಹಿಳೆಯನ್ನೇ ಮೃತರೆಂದು ದಾಖಲಿಸಿ ಮರಣ ಪ್ರಮಾಣ ಪತ್ರ ನೀಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ತಪ್ಪಿನಿಂದ ಬಡ ಕುಟುಂಬದ ಮಹಿಳೆ ಸರಕಾರದ ಎಲ್ಲ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ.

ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ (55) ಜೀವಂತವಾಗಿದ್ದರೂ ಪಂಚಾಯತ್‌ಅಧಿಕಾರಿಗಳು ಅವರ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ವಾಸ್ತವವಾಗಿ ಶಿವಗಂಗವ್ವ ಅವರ ತಾಯಿ ಶಂಕ್ರವ್ವ ಚಿಕ್ಕಪ್ಪ ಮಿಳ್ಳಿಯವರ (98)ಅವರ ಮರಣ ನೋಂದಣಿಗಾಗಿ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದಾಗ ಅಧಿಕಾರಿಗಳ ಎಡವಟ್ಟಿನಿಂದ ತಾಯಿಯ ಬದಲು ಮಗಳ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಯ ವಿವರ 

ಈ ಸಂಬಂಧ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ ಶಿವಗಂಗವ್ವ ತಳಳ್ಳಿ ಅವರ ಪುತ್ರ ಬಸವರಾಜ್ ತಳಳ್ಳಿ, 2025ರ ಮಾ.15ರಂದು ನನ್ನ ಅಜ್ಜಿ ಶಂಕ್ರವ್ವ ಅವರು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಬಳಿಕ ಮರಣ ಪ್ರಮಾಣ ಪತ್ರಕ್ಕಾಗಿ ಅತ್ತಿಗೇರಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಲು ಹೋದ ಸಮಯದಲ್ಲಿ ಶಂಕ್ರವ್ವ ಅವರ ವಾರಸುದಾರರ ಆಧಾರ್ ಕಾರ್ಡ್ ಪ್ರತಿಯನ್ನು ಪಂಚಾಯತ್ ಅಧಿಕಾರಿಗಳು ಕೇಳಿದ್ದು, ಇದಕ್ಕೆ ನನ್ನ ತಾಯಿ ಶಿವಗಂಗವ್ವಳ ಆಧಾರ್ ಕೊಟ್ಟು ಬಂದಿದ್ದೆವು. ಅಂದು ಕಂಪ್ಯೂಟರ್ ಆಪರೇಟರ್ ‘ನನಗೆ ಎಲ್ಲ ದಾಖಲಾತಿ ಕೊಟ್ಟು ಹೋಗಿ. ನಾವು ಆನ್‌ಲೈನ್‌ಗೆ ಹಾಕುತ್ತೇವೆ’ ಎಂದು ಕಳುಹಿಸಿದರು. ಆದರೆ, ಮರಣ ಪ್ರಮಾಣ ಪತ್ರ ಬಂದ ನಂತರ ನಾನು ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಅಜ್ಜಿಯ ಮರಣ ಪತ್ರದ ಬದಲಿಗೆ, ನನ್ನ ತಾಯಿಯ ಮರಣ ಪತ್ರ ಬಂದಿತ್ತು. ಮತ್ತೆ ನಾನು ಈ ಪ್ರಮಾಣ ಪತ್ರವನ್ನು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಾಗ ಇದನ್ನು ನೋಡಿ ಪಂಚಾಯತ್‌ನವರೇ ಹರಿದು ಹಾಕಿ ಮತ್ತೆ ನಮ್ಮ ಅಜ್ಜಿಯ ಮರಣ ಪ್ರಮಾಣ ಪತ್ರವನ್ನು ನೀಡಿದರು ಎಂದು ಬಸವರಾಜು ತಿಳಿಸಿದ್ದಾರೆ.

ಆದರೆ, ಇದರ ಪರಿಣಾಮ ಗೊತ್ತಾಗಿದ್ದು ನನ್ನ ತಾಯಿ ಶಿವಗಂಗವ್ವ ಎಂದಿನಂತೆ ತಿಂಗಳ ಪಿಂಚಣಿಗಾಗಿ ಬ್ಯಾಂಕ್‌ಗೆ ಹೋದಾಗ. ಹೂಲಗೂರಿನ ಬ್ಯಾಂಕ್ ಆಫ್ ಬರೋಡಾದ ಬ್ಯಾಂಕ್ ಅಧಿಕಾರಿಗಳು ‘ನಿಮ್ಮ ಖಾತೆ ಹೆಸರಿನವರು ಮರಣ ಹೊಂದಿದ್ದಾರೆ. ನಿಮ್ಮ ಖಾತೆ ಸ್ಥಗಿತಗೊಂಡಿದೆ. ನೀವು ಗ್ರಾಮ ಪಂಚಾಯತ್‌ಗೆ ತಿಳಿಸಿ ಇದನ್ನು ಸರಿ ಮಾಡಿಸಿಕೊಂಡು ಬನ್ನಿ ಎಂದು ಕಳುಹಿಸಿದ್ದಾರೆ.

ಬಳಿಕ ಪಂಚಾಯತ್ ಅಧಿಕಾರಿಗಳ ಬಳಿ ನಮ್ಮ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ನಮ್ಮ ಕೆಲಸ ಮಾಡಿದ್ದೇವೆ. ನಿಮ್ಮ ಅಜ್ಜಿಯ ಮರಣ ಪತ್ರ ಕೊಟ್ಟಿದೇವೆ. ನಿಮ್ಮ ಆಧಾರ್ ಕಾರ್ಡ್ ಮತ್ತೊಮ್ಮೆ ಅಪ್‌ಡೇಟ್ ಮಾಡಿಸಿಕೊಳ್ಳಿ’ ಎಂದು ನುಣುಚಿಕೊಂಡಿದ್ದಾರೆ.

ಇದಾದ ಬಳಿಕ ಗೃಹಲಕ್ಷ್ಮಿಯೋಜನೆಯ ಹಣ ಬರುವುದೂ ಸ್ಥಗಿತಗೊಂಡಿದ್ದು, ಇದರ ಜೊತೆಗೆ ಅನ್ನ ಭಾಗ್ಯದ ತಿಂಗಳ ರೇಷನ್ ಕೂಡಾ ಬಂದ್ ಆಗಿದೆ. ಇದಾದ ಬಳಿಕ ಪಂಚಾಯತ್‌ಗೆ

ನನ್ನ ತಾಯಿ ಹೋಗಿ ‘ನೀವು ನನ್ನ ಮರಣ ಪತ್ರ ಕೊಟ್ಟಿದಕ್ಕೆ ನನ್ನ ಎಲ್ಲ ಸೌಲಭ್ಯಗಳು ಬಂದಾಗಿವೆ. ಅದನ್ನು ಸರಿಪಡಿಸಿ’ ಎಂದು ಅಳಲು ತೋಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಸವರಾಜು ಆರೋಪಿಸಿದ್ದಾರೆ.

ಒಬ್ಬ ಜೀವಂತ ಮಹಿಳೆಯನ್ನು ದಾಖಲೆ ಗಳಲ್ಲಿ ಮೃತರೆಂದು ಘೋಷಿಸಿರುವ ಈ ಘಟನೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ತಾಯಿಗೆ ಬಹಳ ಅನ್ಯಾಯ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಯಾರೂ ವಿದ್ಯಾವಂತರಿಲ್ಲ. ಪಂಚಾಯತ್ ಕಾರ್ಯದರ್ಶಿ ಇದನ್ನು ನೋಡದೆ ಹೇಗೆ ಸಹಿ ಮಾಡಿಕೊಟ್ಟಿದ್ದಾರೆ? ಬಡವರಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡರೂ ನಮಗೆ ಯಾರೂ ಸಹಾಯ ಮಾಡಲು ಬರುತ್ತಿಲ್ಲ. ನಮ್ಮ ಜೀವನ ಬೀದಿಗೆ ಬಂದಿದೆ. ನಮ್ಮ ತಾಯಿ ಇದ್ದೂ ಸತ್ತಂತೆ ಆಗಿದ್ದಾಳೆ. ನಮಗೆ ಅನ್ಯಾಯ ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ನಮ್ಮ ಹಾಗೆ ಇನ್ನು ಯಾರಿಗೂ ಅನ್ಯಾಯ ಆಗಬಾರದು.

-ರೇಣುಕಾ ಹುಬ್ಬಳ್ಳಿ, ಶಿವಗಂಗವ್ವ ಪುತ್ರಿ

ನಾನು ಬಡ ಮಹಿಳೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಪಂಚಾಯತ್ ಅಧಿಕಾರಿಗಳು ನನ್ನ ಆಧಾರ್ ಕಾರ್ಡ್ ಅನ್ನು ಸ್ಥಗಿತಗೊಳಿಸಿದ್ದಾರೆ. ನನ್ನ ಗಂಡನಿಗೆ ಬರುತ್ತಿದ್ದ ಪಿಂಚಣಿ ಹಣವನ್ನೂ ನಿಲ್ಲಿಸಿದ್ದಾರೆ. ಸಮಸ್ಯೆ ಹೇಳಲು ಪಂಚಾಯತ್ ಕಚೇರಿಗೆ ಹೋದರೆ ಅಧಿಕಾರಿಗಳು ಗದರಿಸಿ ಕಳುಹಿಸುತ್ತಾರೆ. ನಾನು ಎರಡು ಬಾರಿ ಬೆಂಗಳೂರಿಗೆ ಹೋಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದೇನೆ. ಆದರೆ, ಊರಿಗೆ ಬಂದು ನೋಡಿದರೆ, ‘ಆಧಾರ್ ಸರಿಯಾಗಿಲ್ಲ, ಮತ್ತೆ ಬೆಂಗಳೂರಿಗೆ ಹೋಗಬೇಕು’ ಎಂದು ಹೇಳುತ್ತಾರೆ. ಒಮ್ಮೆ ಬೆಂಗಳೂರಿಗೆ ಹೋದರೆ ನಾಲ್ಕು ದಿನ ಅಲ್ಲೇ ಇರಬೇಕಾಗುತ್ತದೆ. ಒಂದು ಸುತ್ತಿಗೆ ಸುಮಾರು 15 ಸಾವಿರ ರೂ. ಖರ್ಚಾಗುತ್ತದೆ. ರೂಮ್ ಬಾಡಿಗೆ, ಊಟ, ಪ್ರಯಾಣ ಸೇರಿದಂತೆ ಎಲ್ಲ ಖರ್ಚನ್ನೂ ನಾನು ಭರಿಸುತ್ತಿದ್ದೇನೆ. ನನ್ನ ಗಂಡನ ಪಿಂಚಣಿಯನ್ನೇ ನಂಬಿ ನಾಲ್ಕು ಕಡೆ ಸಾಲ ಮಾಡಿಕೊಂಡಿದ್ದೇನೆ. ಈಗ ಸಾಲ ಕೊಟ್ಟವರು ಮನೆಗೆ ಬಂದು ಬೈಯುತ್ತಿದ್ದಾರೆ. ಮನೆಗೆ ಬೀಗ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಪರಿಸ್ಥಿತಿಯಿಂದ ತುಂಬಾ ನೋವಾಗಿದೆ. ಸಾಲಗಾರರ ಮುಂದೆ ಅವಮಾನ ಅನುಭವಿಸುವುದಕ್ಕಿಂತ ವಿಷ ಕುಡಿದು ಸಾಯಬೇಕು ಎನ್ನುವಷ್ಟು ಮನಸ್ಸು ಕುಗ್ಗಿದೆ.

-ಶಿವಗಂಗವ್ವ, ಮರಣ ಪ್ರಮಾಣ ಪತ್ರ ಪಡೆದ ಸಂತ್ರಸ್ತೆ

20 ವರ್ಷಗಳಿಂದ ಇಲ್ಲಿಯ ಅಧಿಕಾರಿಗಳಿಗೆ ಹೇಳುವವರು ಮತ್ತು ಕೇಳುವವರು ಯಾರೂ ಇಲ್ಲದಿರುವುದೇ ಇಂತಹ ಘಟನೆಗೆ ಕಾರಣ. ಈ ಘಟನೆ ಉದ್ದೇಶಪೂರ್ವಕವಾಗಿ ಆಗಿದೆಯಾ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿದೆಯಾ ಎನ್ನುವುದನ್ನು ಪತ್ತೆ ಹಚ್ಚುತ್ತೇವೆ. ಇದರಲ್ಲಿ ಯಾವ್ಯಾವ ಅಧಿಕಾರಿಗಳು ತಪ್ಪು ಮಾಡಿದ್ದಾರೆಯೋ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಾನು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದು, ಎರಡು ದಿನಗಳ ಬಳಿಕ ಅತ್ತಿಗೇರಿಯ ಶಿವಗಂಗವ್ವ ಮನೆಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುತ್ತೇನೆ. ಅಲ್ಲದೆ, ಶೀಘ್ರವೇ ಅವರಿಗೆ ನ್ಯಾಯ ಒದಗಿಸಲಾಗುವುದು.

-ಯಾಸಿರ್ ಅಹ್ಮದ್ ಖಾನ್ ಪಠಾಣ್, ಶಿಗ್ಗಾಂವಿ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹಜರತ್‌ ನದಾಫ್‌

contributor

Similar News