ಅರ್ಥಪೂರ್ಣವಾಗಿ ಬದುಕಿದ ಡಿ.ಎಸ್. ನಾಗಭೂಷಣ್

Update: 2022-05-21 12:07 GMT

ಪ್ರೊ. ರಾಜೇಂದ್ರ ಚೆನ್ನಿ

ಗೆಳೆಯ ನಾಗಭೂಷಣ್ ಅವರ ನಿಧನದಿಂದಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ನಿರ್ವಾತ ಉಂಟಾಗಿದೆ. ಸಾಹಿತಿಗಳು, ಚಿಂತಕರು, ಘನಗಂಭೀರವಾದ ತಮ್ಮ ಸಾರ್ವಜನಿಕ ವ್ಯಕ್ತಿತ್ವ ಅಥವಾ ಇಮೇಜ್‌ಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲದಿದ್ದಾಗ ನಾಗಭೂಷಣರು ಜಗಳಗಂಟಿ, ಮುಂಗೋಪಿ, ಹಠಮಾರಿ ಇವೇ ಮುಂತಾದ ಸಾರ್ವಜನಿಕ ಬಿಂಬಗಳನ್ನು ನಿರ್ಭಿಡೆಯಾಗಿ ಅಭಿವ್ಯಕ್ತಿಸಿದರು. ಓದುಗರ ಪತ್ರಗಳು, ಸಂಪಾದಕರಿಗೆ ಟೀಕೆ ಟಿಪ್ಪಣಿಗಳು, ರಾಮಚಂದ್ರ ಗುಹಾ ಅವರಿಗೆ ಇಮೇಲ್ ಸಂದೇಶಗಳ ಸುರಿಮಳೆ ಹೀಗೆ.. ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದರು. ಕಾರಣವೆಂದರೆ, ಅವರ ಪ್ರಕಾರ ವೈಚಾರಿಕ ಪ್ರಾಮಾಣಿಕತೆಯ ಲಕ್ಷಣವೆಂದರೆ ಪ್ರತಿಕ್ರಿಯೆ ಮತ್ತು ಪ್ರತಿರೋಧ(dissent ಎನ್ನುವ ಅರ್ಥದಲ್ಲಿ). ಖ್ಯಾತ ವಿದ್ವಾಂಸ ಎಡ್ವರ್ಡ್ ಸೈದ್ ತನ್ನ ಪ್ರಸಿದ್ಧ ಭಾಷಣ ಸರಣಿಯಲ್ಲಿ ಬುದ್ಧಿಜೀವಿಗಳ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಾ ಅವರು ‘no sayer’ ಆಗಿರಬೇಕು ‘yes sayer’ ಆಗಿರಬಾರದು ಎಂದು ಹೇಳಿದ್ದರು. ನಾಗಭೂಷಣರು ಕೊನೆಯವರೆಗೆ ‘no sayer’ ಆಗಿದ್ದರು. ಎಲ್ಲದಕ್ಕೂ- ವ್ಯವಸ್ಥೆಗೆ, ದುಷ್ಟ ಸ್ವಾರ್ಥಪರ ರಾಜಕೀಯಕ್ಕೆ, ಜಡವಾದ ಸಿದ್ಧಾಂತಗಳಿಗೆ ಮತ್ತು ವೈಯಕ್ತಿಕ ನಡವಳಿಕೆಯನ್ನು ಪ್ರಶ್ನಿಸದೆ ಇರುವ ಅಪ್ರಾಮಾಣಿಕತೆಗೆ. ಹೀಗಾಗಿ ಕೆಲವೊಮ್ಮೆ ವೈಯಕ್ತಿಕ ಹಾಗೂ ಪೂರ್ವಗ್ರಹಪೀಡಿತ ಎನಿಸಿದರೂ ಅವರ ಟೀಕೆಗಳಿಗೆ ಒಂದು ನೈತಿಕವಾದ ಮೊನಚು ಇರುತ್ತಿತ್ತು. ಇದನ್ನು ಲಂಕೇಶರಲ್ಲಿ ನಾವು ಕಂಡಿದ್ದೆವು. ಇನ್ನೊಂದು ಆರೋಗ್ಯಕರ ಮಾದರಿಯನ್ನು ನಾಗಭೂಷಣರಿಗೆ ಪ್ರಿಯರಾದ ತೇಜಸ್ವಿಯವರಲ್ಲಿ ಕಂಡಿದ್ದೆವು. ಆದರೆ ನನಗೆ ನೆನಪಾಗುವುದು ಹಸಿರು ಸೇನಾನಿ ಪ್ರೊ. ನಂಜುಂಡಸ್ವಾಮಿಯವರು. ನಾಗಭೂಷಣರು ಅವರಂತಹ ಆ್ಯಕ್ಟಿವಿಸ್ಟ್ ಅಲ್ಲ. ಆದರೆ ತಮ್ಮ ತಿಳಿವಳಿಕೆಗೆ ತಾವು ಬದ್ಧರಾಗಿರುವ ನಿಷ್ಠುರತೆ ಇಬ್ಬರಿಗೂ ಇತ್ತು. ಆದರೆ ವ್ಯಕ್ತಿತ್ವ ವಿಶ್ಲೇಷಣೆ ನನ್ನ ಆಸಕ್ತಿಯ ವಿಷಯವಲ್ಲ. ಈ ವ್ಯಕ್ತಿತ್ವ ಲಕ್ಷಣಗಳಿಂದಾಗಿ ಸಾರ್ವಜನಿಕವಾದ ಸಂವಾದಗಳಿಗೆ ನಾಗಭೂಷಣರು ಒಂದು ತೀವ್ರತೆ ಹಾಗೂ ಜರೂರನ್ನು ತರುತ್ತಿದ್ದರು. ಸಂವಾದಗಳು ನಾಗರಿಕ ಹರಟೆಗಳಾಗುವ ಬದಲು ಸಾಚಾ ಅಭಿಪ್ರಾಯ ವಿನಿಮಯವಾಗುವಂತೆ ಅವರು ಮಾಡುತ್ತಿದ್ದರು.

ತಮ್ಮ ಬದುಕು ಹಾಗೂ ಬರಹದ ಬಹುಮುಖ್ಯ ಹಂತದಲ್ಲಿ ನಾಗಭೂಷಣರು ಅಪ್ಪಟ ಲೋಹಿಯಾವಾದಿಯಾಗಿದ್ದರು. ಎಷ್ಟರಮಟ್ಟಿಗೆ ಎಂದರೆ ಲೋಹಿಯಾ ವಿಚಾರಧಾರೆಯನ್ನು ಒಪ್ಪದವರ ಬಗ್ಗೆ ಅನಾದಾರರಾಗಿದ್ದರು. ಇದು ವ್ಯಕ್ತಿಪೂಜೆಯಾಗಿರಲಿಲ್ಲ. ಲೋಹಿಯಾ ಭಾರತದ ರಾಜಕೀಯದ ಜೊತೆಗೆ ಇಲ್ಲಿನ ತಾತ್ವಿಕ ಪರಂಪರೆಯ ತತ್ವ ಹಾಗೂ ನ್ಯೂನತೆಗಳ ಬಗ್ಗೆ ತೀವ್ರವಾದ ಬಹು ಒಳನೋಟಗಳುಳ್ಳ ಚಿಂತನೆಯನ್ನು ಹುಟ್ಟು ಹಾಕಿದ್ದು ಅವರಿಗೆ ಮುಖ್ಯವಾಗಿತ್ತು. ಅವರಿಗೆ ಲೋಹಿಯಾ ಸಮಾಜವಾದದ ದೃಷ್ಟಾರರಾಗಿದ್ದರು. ಅಲ್ಲದೆ ಜಾತಿ ವ್ಯವಸ್ಥೆ ವಿಶ್ಲೇಷಕರಾಗಿ ಲೋಹಿಯಾ ನಾಗಭೂಷಣರಿಗೆ ಮುಖ್ಯವಾಗಿದ್ದರು. ಹಾಗೆ ನೋಡಿದರೆ ಒಂದು ಮುಖ್ಯ ಹಂತದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯು ಲೋಹಿಯಾ ಪ್ರಭಾವದಲ್ಲಿಯೇ ಬೆಳೆಯಿತು. ತೇಜಸ್ವಿ, ಅನಂತಮೂರ್ತಿ, ಲಂಕೇಶ್ ಎಲ್ಲರೂ ಲೋಹಿಯಾ ಚಿಂತನೆಯಿಂದ ತಮ್ಮ ಆಲೋಚನೆಯನ್ನು ರೂಪಿಸಿಕೊಂಡರು. ನಾಗಭೂಷಣರು ಸಮಾಜವಾದದ ಪಠ್ಯಗಳನ್ನು, ಸಮಾಜವಾದಿಗಳ ಸಾಧನೆಯನ್ನು, ಕ್ರಿಯಾಶೀಲತೆಯನ್ನು ದಾಖಲೆ ಮಾಡುವುದರಲ್ಲಿ ತುಂಬಾ ಶ್ರಮ ವಹಿಸಿದರು. ಇದು ಅಮೂಲ್ಯವಾದ ವೈಚಾರಿಕ ಕೊಡುಗೆ. ತುಂಬಾ ತೆಳುವಾದ ಗ್ರಹಿಕೆಗಳನ್ನು ಲೋಹಿಯಾ ಬಗ್ಗೆ ಹೊಂದಿದ್ದ ಕನ್ನಡದ ಅನೇಕರು ಲೋಹಿಯಾ ಅವರನ್ನು ಈ ಆಕರಗಳ ಮೂಲಕ ಗಂಭೀರವಾಗಿ ಅಧ್ಯಯನ ಮಾಡುವುದು ಸಾಧ್ಯವಾಯಿತು. ಮಾರ್ಕ್ಸ್‌ವಾದಿಯಾದ ನನಗೆ ಲೋಹಿಯಾ ಬಗ್ಗೆ ಗೌರವ ಹಾಗೂ ಸೈದ್ಧಾಂತಿಕ ಆಕ್ಷೇಪಣೆಗಳೂ ಇವೆ. ಅವುಗಳನ್ನು ವಿಸ್ತೃತವಾಗಿ ಚರ್ಚಿಸಲು ಅವಕಾಶ ದೊರೆಯಲಿಲ್ಲ.

‘ಹೊಸ ಮನುಷ್ಯ’ ಪತ್ರಿಕೆ ನಾಗಭೂಷಣರ ಸಂಪಾದಕತ್ವದಲ್ಲಿ ಗಂಭೀರ ಆಲೋಚನೆಗೆ ವೇದಿಕೆಯಾಯಿತು. ಕಾರಣವೆಂದರೆ ಅವರ ಶಕ್ತಿ ಹಾಗೂ ಸೈದ್ಧಾಂತಿಕ ಕಾಳಜಿಗಳು. ಕೇವಲ ಲೇಖನ ಬರೆಯಿರಿ ಎನ್ನುವುದರ ಜೊತೆಗೆ ಏಕೆ, ಹೇಗೆ ಎನ್ನುವ ಟಿಪ್ಪಣಿಗಳೂ ಬರುತ್ತಿದ್ದವು. ಒಂದು ಸಾರಿ ನಾನು ಸಂಪಾದಕರ ಟಿಪ್ಪಣಿಗಳನ್ನು ಗಮನಿಸುವುದಿಲ್ಲ ಎಂದು ಅವರಿಗೆ ಬರೆದಿದ್ದೆ. ಅವರು ತಮ್ಮ ನಿಲುವನ್ನು ಹೇಳಿಕೊಂಡರೇ ಹೊರತು ನನ್ನ ಮಾತನ್ನು ತಿರಸ್ಕರಿಸಲಿಲ್ಲ. ತಮ್ಮ ಗಂಭೀರ ಕಾಳಜಿಗಳನ್ನು ಒಂದು ಓದುಗ ವಲಯದ ಕಾಳಜಿಗಳನ್ನಾಗಿ ಮಾಡುವುದರಲ್ಲಿ ಅವರು ಯಶಸ್ವಿಯಾದರು. ಉದಾಹರಣೆಗೆ ನನ್ನಿಂದ ಅರುಣ್ ಶೌರಿಯವರ ಭಾರತದ ನ್ಯಾಯಾಂಗ ಹಾಗೂ ನ್ಯಾಯಾಲಯಗಳ ಬಗ್ಗೆ ಗಾಬರಿ ಹುಟ್ಟಿಸುವ ಕೃತಿಯ ಬಗ್ಗೆ ಬರೆಸಿದರು. ಹಾಗೆಯೇ ವಂದನಾ ಶಿವ ಅವರ ಬಗ್ಗೆ, ನವೋಮಿ ಕ್ಲೀನ್ ಅವರ ಬಗ್ಗೆ, ತಾವೇ ಆಯ್ಕೆ ಮಾಡಿದ ಅನೇಕ ಮುಖ್ಯ ಬರಹಗಳ ಅನುವಾದಗಳನ್ನು ಅನೇಕರಿಂದ ಮಾಡಿಸಿ ಪ್ರಕಟಿಸಿದರು. ಹೀಗಾಗಿಯೇ ‘ಹೊಸ ಮನುಷ್ಯ’ ಪತ್ರಿಕೆಯ ಯುಜಿಸಿಯ (care list)ನಲ್ಲಿ ಸ್ಥಾನ ಪಡೆಯಿತು.

ಈ ಪತ್ರಿಕೆಗೆ ಬರೆದ ಅವರ ಸಂಪಾದಕೀಯಗಳು ತುಂಬಾ ಗಂಭೀರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದವು. ನಾವು ಕೆಲವು ಸ್ನೇಹಿತರು ಅವರ ಬೆನ್ನ ಹಿಂದೆ ‘‘ಓ, ಸಂಪಾದಕರು ಕೇವಲ ತಮ್ಮ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತಾರೆ’’ ಎಂದು ಗೇಲಿ ಮಾಡುತ್ತಿದ್ದೆವು. ಇದು ಸುಳ್ಳು ಎಂದು ನಮಗೆ ಗೊತ್ತಿದ್ದರಿಂದ! ಶಿವಮೊಗ್ಗೆಯ ಗೆಳೆಯರು ಸೇರಿದಾಗ ಹೇಗೂ ನಾಗಭೂಷಣರು ತಮ್ಮ ಹರಟೆಯಲ್ಲಿ ಬಂದುಬಿಡುತ್ತಿದ್ದರು. ಅವರನ್ನು ಸರ್ವಾಧಿಕಾರಿ, ಖೊಮೇನಿ ಎಂದು ಒಮ್ಮಿಮ್ಮೆ ತಮಾಷೆ ಮಾಡುತ್ತಿದ್ದ ನಮಗೆ ಅವರ ಅಪ್ಪಟ ಪ್ರಾಮಾಣಿಕತೆಯ ಬಗ್ಗೆ ಎಂದೂ ಯಾವುದೇ ಸಂಶಯಗಳಿರಲಿಲ್ಲ. ಅವರು ಯಾರನ್ನು ಹೇಗೆ ಬೈದರು ಎನ್ನುವುದು ಚರ್ಚೆಯ ವಿಷಯವಾಗಿತ್ತು. ಆದರೆ ಮೂಲತಃ ನಾಗಭೂಷಣರು ತೀವ್ರ ಭಾವನೆಗಳ, ಸಂಬಂಧಗಳ ಬಗ್ಗೆ ಕಾಳಜಿಯಿರುವ ವ್ಯಕ್ತಿಯಾಗಿದ್ದರು. ಅವರ ಜೊತೆಗಿದ್ದ ಗೆಳೆಯ ಗೆಳತಿಯರಿಗೆ ಅವರ ಈ ಮುಖದ ಆತ್ಮೀಯ ಪರಿಚಯವಿತ್ತು.

ಜಾಗತೀಕರಣದ ವಿರೋಧದಲ್ಲಿ ಅವರಿಗೆ ಗಾಂಧಿ ಒಬ್ಬ ಶ್ರೇಷ್ಠ ಚಿಂತಕರೂ, ಪ್ರಯೋಗಶೀಲ ಮಾದರಿಯೂ ಆಗಿ ಕಂಡಿದ್ದರು. ಅವರ ಚಿಂತನೆಗೆ ದೊಡ್ಡ ತಿರುವು ಬಂದದ್ದು ‘ಗಾಂಧಿ ಕಥನ’ದ ಬರಹದಿಂದ. ಗಾಂಧಿ ಚಿಂತನೆಯ ಮುಂದುವರಿಕೆಯಾಗಿ ಸುಸ್ಥಿರ ಜೀವನ ಶೈಲಿ, ಆರ್ಥಿಕತೆ, ಪರಿಸರ ರಕ್ಷಣೆ ಇವುಗಳು ನಾಗಭೂಷಣರ ಪ್ರಧಾನ ಕಾಳಜಿಗಳಾದವು. ಈ ತಿರುವು ‘ಹೊಸ ಮನುಷ್ಯ’ ಪತ್ರಿಕೆಯ ವೈಚಾರಿಕತೆಯನ್ನು ಅರ್ಥಪೂರ್ಣವಾಗಿ ಬದಲಾಯಿಸಿತು. ಲೋಹಿಯಾ ಪ್ರತಿಷ್ಠಾನದ ಮೂಲಕ ಅವರು ನಡೆಸಿದ ಅನೇಕ ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೇನೆ. ಅವು ಕಲಿಕೆ ಹಾಗೂ ಜ್ಞಾನದ ವೇದಿಕೆಗಳಾಗಿದ್ದವು. ಇವುಗಳ ಮೂಲಕ ಗಟ್ಟಿಯಾದ ಒಂದು ಸಾಮುದಾಯಿಕ ಪ್ರಜ್ಞೆಯನ್ನು ಕಟ್ಟಲು ಅವರು ಪ್ರಯತ್ನಿಸಿದರು.

24 ಆವೃತ್ತಿಗಳನ್ನು ಪಡೆದ ‘ಗಾಂಧಿ ಕಥನ’ ಅವರಿಗೆ ನೆಮ್ಮದಿಯನ್ನು ತಂದು ಕೊಟ್ಟಿತು.‘ಹೊಸ ಮನುಷ್ಯ’ದ ಕೊನೆಯ ಸಂಚಿಕೆ ತಂದದ್ದು ಹೀಗೆ ಒಂದು ಪೂರ್ಣವಿರಾಮವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇರಲಿ ಮಾಡಿದ ಸಾಧನೆ ಇಷ್ಟು ಅರ್ಥಪೂರ್ಣವಾಗಿತ್ತಲ್ಲ ಅದಕ್ಕಾಗಿ ಕೃತಜ್ಞತೆ.

Writer - ಪ್ರೊ. ರಾಜೇಂದ್ರ ಚೆನ್ನಿ

contributor

Editor - ಪ್ರೊ. ರಾಜೇಂದ್ರ ಚೆನ್ನಿ

contributor

Similar News