ಕಲಬುರಗಿಯ ಮಲೆನಾಡು ಚಿಂಚೋಳಿ ಅರಣ್ಯಧಾಮ!
ಕಲಬುರಗಿ: ಬಿಸಿಲ ನಾಡು ಕಲ್ಯಾಣ ಕರ್ನಾಟಕದಲ್ಲಿ ಹಚ್ಚಹಸಿರಿನ ಹೊದಿಕೆ ಹೊದ್ದು, ಕಾಡು-ಬೆಟ್ಟ-ಜಲಾಶಯಗಳ ಸೊಬಗನ್ನು ಹೊತ್ತಿರುವ ಇಲ್ಲಿನ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ದೂರದ ಜಮ್ಮು-ಕಾಶ್ಮೀರ, ಮಲೆನಾಡು, ಕರಾವಳಿ ಪ್ರದೇಶಗಳಿಗೆ ತೆರಳಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರಿಗೆ ಕಲಬುರಗಿಯಲ್ಲೇ ಕಾಡಿನ ರೋಮಾಂಚನ ಅನುಭವಿಸುವ ಅವಕಾಶ ಸಿಗುತ್ತಿದೆ. ಜೀಪ್ ಸಫಾರಿ, ಬೋಟಿಂಗ್, ಚಾರಣ, ಟೆಂಟ್ ಹೌಸ್ ವಾಸ ಸೇರಿದಂತೆ ಹಲವು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಒತ್ತು ನೀಡಿದ್ದು, ಚಿಂಚೋಳಿ ವನ್ಯಧಾಮ ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿದೆ.
ಕಲಬುರಗಿಯಿಂದ 100ಕಿ.ಮೀ ದೂರವಿರುವ ಈ ವನ್ಯಜೀವಿ ಅಭಯಾರಣ್ಯವು 134.88 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಎತ್ತಿಪೊತ್ತೆ ಜಲಪಾತ, ಮಾಣಿಕಪುರ ಜಲಪಾತ, ಚಂದ್ರಂಪಳ್ಳಿ ಜಲಾಶಯ ಸೇರಿದಂತೆ ಹಲವು ನೈಸರ್ಗಿಕ ತಾಣಗಳು ಇಲ್ಲಿವೆ. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಪ್ರವಾಸಿಗರು ಈ ಅರಣ್ಯಧಾಮವನ್ನು ಮಿನಿ ಮಲೆನಾಡು ಎಂದು ಬಣ್ಣಿಸುತ್ತಿರುವುದು ಗಮನಾರ್ಹ ಸಂಗತಿ.
ಕಾಡಿನೊಳಗೆ ಜೀಪ್ ಸಫಾರಿ:
ಅರಣ್ಯದ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಜೀಪ್ ಸಫಾರಿ ಸೌಲಭ್ಯ ಕಲ್ಪಿಸಲಾಗಿದೆ. ಎರಡು ಕ್ಯಾಂಪರ್ ವಾಹನಗಳನ್ನು ನೀಡಲಾಗಿದ್ದು, ಸಫಾರಿ ವೇಳೆ ಅದೃಷ್ಟವಿದ್ದರೆ ಕಾಡುಪ್ರಾಣಿಗಳನ್ನು ಅವುಗಳ ಸಹಜ ಆವಾಸ ಸ್ಥಳದಲ್ಲೇ ನೋಡಬಹುದಾಗಿದೆ. ಬ್ಲ್ಯಾಕ್‌ಬಕ್, ಚೌಸಿಂಗಾ, ನೀಲಗಾಯ್, ಚುಕ್ಕೆ ಜಿಂಕೆ, ತೋಳ, ಹೈನಾ, ಕಾಡುಕುರಿ, ಕಾಡುಕೋಣ, ಗುಳ್ಳೆನರಿ, ಚಿರತೆ, ಕಾಡುಬೆಕ್ಕು, ಮಕಾಕ್ ಕೋತಿ ಹಾಗೂ ಮೊಲ ಸೇರಿ ಹಲವು ಪ್ರಾಣಿಗಳು ಇಲ್ಲಿವೆ.
ಬೋಟಿಂಗ್‌ನಲ್ಲೂ ಮೋಡಿ-ಮೋಜು:
ಚಂದ್ರಂಪಳ್ಳಿ ಜಲಾಶಯದಲ್ಲಿ ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಬೋಟ್ ರೈಡಿಂಗ್‌ಗೆ ಒಬ್ಬರಿಗೆ 175 ರೂ. ದರ ನಿಗದಿಪಡಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಬೋಟ್ ಆಪರೇಟರ್‌ಗಳಿಗೆ ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಸಂಸ್ಥೆಯಿಂದ ತರಬೇತಿ ನೀಡಲಾಗಿದೆ.
ಚಾರಣಪ್ರಿಯರಿಗೆ ಎರಡು ದಾರಿ:
ಕಾಲ್ನಡಿಗೆಯಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಚಾರಣಪ್ರಿಯರಿಗೂ ಅವಕಾಶವಿದೆ. ಚಾರಣಕ್ಕಾಗಿ ಎರಡು ಮಾರ್ಗಗಳಿವೆ. ಚಂದ್ರಂಪಳ್ಳಿ ನಿಸರ್ಗಧಾಮದಿಂದ ಗೊಟ್ಟಂಗೊಟ್ಟ ಕ್ಯಾಂಪ್‌ವರೆಗೆ 8 ಕಿ.ಮೀ. ಉದ್ದದ ಒಂದು ಮಾರ್ಗವಿದ್ದು, 12ರಿಂದ 18 ವರ್ಷದವರಿಗೆ 100ರೂ. ಹಾಗೂ 18 ವರ್ಷ ಮೇಲ್ಪಟ್ಟವರಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇನ್ನೊಂದು ಚಂದ್ರಂಪಳ್ಳಿ ನಿಸರ್ಗ ಶಿಬಿರದಿಂದ ಚಂದ್ರಂಪಳ್ಳಿ ಅಣೆಕಟ್ಟಿನವರೆಗೆ 4 ಕಿ.ಮೀ. ಉದ್ದದ ಮಾರ್ಗ. ಇಲ್ಲಿ 12ರಿಂದ 18 ವರ್ಷದವರಿಗೆ 50 ರೂ. ಹಾಗೂ 18ವರ್ಷ ಮೇಲ್ಪಟ್ಟವರಿಗೆ100 ರೂ. ಶುಲ್ಕವಿದೆ.
ಟೆಂಟ್ ಹೌಸ್‌ನಲ್ಲಿ ವಾಸ್ತವ್ಯ:
ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ನಿಸರ್ಗದ ನಡುವೆ ವಾಸ್ತವ್ಯದ ಅನುಭವ ನೀಡಲು ಗೊಟ್ಟಂಗೊಟ್ಟದಲ್ಲಿ ಎರಡು ಹೆಚ್ಚುವರಿ ಟೆಂಟ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. ಜಲಾಶಯದ ಸಮೀಪ ಕಾಟೇಜ್‌ಗಳ ಜೊತೆಗೆ ಟೆಂಟ್ ಹೌಸ್‌ಗಳ ವ್ಯವಸ್ಥೆಯೂ ಪ್ರವಾಸಿಗರಿಗೆ ಲಭ್ಯವಿದೆ. ಪ್ರವಾಸಿಗರಿಗೆ ಬೆಳಗಿನ ಜಾವ ಪಕ್ಷಿಗಳ ಕಲರವ ಆಲಿಸುವ ಅನುಭವ ಆಗುತ್ತದೆ.
ಬುಕ್ಕಿಂಗ್ ಮಾಡೋದು ಹೇಗೆ?:
ಚಾರಣಪ್ರಿಯರು ಟ್ರೆಕ್ಕಿಂಗ್ ಮಾಡುವುದಕ್ಕಾಗಿ aranyavihaara.Karnataka.gov.inಗೆ ಭೇಟಿ ನೀಡಿ ಬುಕಿಂಗ್ ಮಾಡಬಹುದು. ಇಲ್ಲದಿದ್ದರೆ ಆಫ್ ಲೈನ್ ಮೂಲಕ 9686044408 ಸಂಖ್ಯೆಗೆ ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳಬಹುದಾಗಿದೆ.
ನಿಸರ್ಗದ ಆಕರ್ಷಣೀಯ ತಾಣಗಳು:
ಚಂದ್ರಂಪಳ್ಳಿ ಜಲಾಶಯದೊಂದಿಗೆ ಗೊಟ್ಟಂಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟ, ಮಲ್ಲಣ್ಣದೇವರ ಗುಡ್ಡ, ಹಾಥಿಪಗಡಿ, ಚಿಕ್ಕಲಿಂಗದಳ್ಳಿ, ಲಾಲ್ ತಲಾಬ್, ಕೊತ್ವಾಲ್ ನಾಲೆ, ರಾಚೇನಹಳ್ಳ, ಬುರುಗದೊಡ್ಡಿ ನಾಲೆ, ಯಾಕತಪುರ ನಾಲೆ ಹಾಗೂ ಮೂರಕಲ್ ನಾಲೆ ಸೇರಿದಂತೆ ಹಲವು ತಾಣಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.
ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಚಿಂಚೋಳಿ ವನ್ಯಧಾಮ ಪ್ರಕೃತಿಪ್ರಿಯರಿಗೆ ಮಾತ್ರವಲ್ಲದೆ ಕುಟುಂಬ ಸಮೇತ ಪ್ರವಾಸ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಹಾಗೂ ಸಾಹಸಪ್ರಿಯರಿಗೂ ಹೊಸ ತಾಣವಾಗಿ ಹೊರಹೊಮ್ಮುತ್ತಿದೆ. ಇತ್ತೀಚೆಗಂತೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ ಎನ್ನುತ್ತಾರೆ ಅರಣ್ಯಾ ಧಿಕಾರಿಗಳು.