ರಾಯಚೂರು: ಹಳೆಯ ನಗರಗಳಲ್ಲಿ ರಾಯಚೂರು ಒಂದಾಗಿದ್ದರೂ, ಇದುವರೆಗೆ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸದೆ ಹಲವೆಡೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈಗ ಪಾಲಿಕೆಯಿಂದ ಹಳೆಯ ಅಪಾಯಕಾರಿ ಪೈಪ್‌ಲೈನ್ ಬದಲಾಯಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.

ಹೈದ್ರಾಬಾದ್ ನಿಝಾಮರ ಆಡಳಿತಕ್ಕೆ ಒಳಪಟ್ಟ ನಗರದ ಹಲವೆಡೆ ಇಂದಿಗೂ ಕುಡಿಯುವ ನೀರಿನ ರೈಸಿಂಗ್ ಲೈನ್ ಬದಲಾಯಿಸಿರಲಿಲ್ಲ, ಸುಮಾರು 100 ವರ್ಷ ಸಮೀಪದ ಪೈಪ್‌ಲೈನ್ ಈಗಲೂ ಹಲವೆಡೆ ಕಾಣಬಹುದಾಗಿದ್ದು, ಸಿಮೆಂಟ್ ಪೈಪ್ ಇರುವ ಕಾರಣ ಸಿಮೆಂಟ್ ಉದುರಿ ಚರಂಡಿ, ರಾಜಕಾಲುವೆ ಬಳಿಯ ಪೈಪ್‌ಗಳಲ್ಲಿ ಚರಂಡಿ ನೀರು ಸೇರುತ್ತಿತ್ತು. ನಗರಸಭೆ ಆಡಳಿತವಿದ್ದ ಕೆಲ ವರ್ಷಗಳ ಹಿಂದೆ 4-5 ಜನರ ಸಾವು ಕೂಡ ಸಂಭವಿಸಿತ್ತು. ಪಾಲಿಕೆಯಾದ ಬಳಿಕ ಜನರ ದೂರಿನ ಮೇರೆಗೆ ಸಮೀಕ್ಷೆ ಮಾಡಿ ಅಪಾಯಕಾರಿ ಪೈಪ್‌ಲೈನ್ ಗುರುತಿಸಿ ಬದಲಾಯಿಸಲಾಗುತ್ತಿದೆ.

ನಿಝಾಮರ ಕಾಲದಲ್ಲಿ ಕೃಷ್ಣ ನದಿಯಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಕೃಷ್ಣಾ ಹಾಗೂ ತುಂಗಭದ್ರಾ ನದಿಯಿಂದ ರಾಯಚೂರು ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

ಹಳೆಯ ಪೈಪ್‌ಲೈನ್‌ಗಳಿಂದ ಕಲುಷಿತ ನೀರು ಸೇರುವ ಆತಂಕ: ನಗರದಲ್ಲಿ ಕುಡಿಯುವ ನೀರಿನಿಂದ ಸಾವು-ನೋವು ಸಂಭವಿಸಿದ ಹಿನ್ನೆಲೆ ಎಲ್ಲ ಅಭಿಯಂತರರ ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಚರಂಡಿಗಳ ಪಕ್ಕದಲ್ಲಿ ಹಾದುಹೋಗುವ ಪೈಪ್‌ಲೈನ್ ಗಳು ಹಾಗೂ ಹಳೆಯ ಪೈಪ್‌ಲೈನ್‌ಗಳಿಂದ ಕುಡಿಯುವ ನೀರಿಗೆ ಕಲುಷಿತ ನೀರು ಸೇರುತ್ತಿರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿಝಾಮರ ಕಾಲದಲ್ಲಿ ಅಳವಡಿಸಲಾಗಿದ್ದ ಹಳೆಯ ಸಿಮೆಂಟ್ ಪೈಪ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 13 ಕೋಟಿ ರೂ. ವೆಚ್ಚದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಿಂದಿನ ಅಧ್ಯಕ್ಷ, ಹಾಲಿ ಉಸ್ತುವಾರಿ ಸಚಿವ ಡಾ.ಅಜಯಸಿಂಗ್ ಹಾಗೂ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿತ್ತು. ಈಗಾಗಲೇ 4 ಕೋಟಿ ರೂ. ಬಿಡುಗಡೆಯಾಗಿ ಕೆಲವೆಡೆ ಮಾಡಿದ್ದು ಕಾಮಗಾರಿ ಆರಂಭಿಸಿದ್ದು, ಶೇ.70ರಷ್ಟು ಪೂರ್ಣಗೊಂಡಿದೆ. ರಾಂಪುರ ಹಾಗೂ ವಾರ್ಡ್ ಸಂಖ್ಯೆ 14ರಲ್ಲಿ ಅಪಾಯಕಾರಿ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿ, ಹೊಸ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಜುಬೀನ್ ಮೋಹಪಾತ್ರ ಅವರು ಮಾಹಿತಿ ನೀಡಿದ್ದಾರೆ.

ಚಂದ್ರಮೌಳೇಶ್ವರ ರಸ್ತೆ ಸೇರಿ ಹಲವೆಡೆ ರಾಜಕಾಲುವೆ, ಚರಂಡಿ ಪಕ್ಕದಲ್ಲಿ ಕುಡಿಯುವ ನೀರಿನ ರೈಸಿಂಗ್ ಪೈಪ್‌ಲೈನ್ ಹಾದು ಹೋಗಿದ್ದು, ಹಳೆಯದಾದ ಕಾರಣ ಪೈಪ್ ಒಡೆದು, ನೀರು ಚಿಮ್ಮುತ್ತಿದೆ. ಕಾಲುವೆಯ ನೀರು ಪೈಪ್‌ಗೆ ಸೇರುತ್ತಿದೆ. ಕಲುಷಿತ ನೀರು ಸೇವನೆ ಮಾಡಿ ಅನಾರೋಗ್ಯಕ್ಕೀಡಾಗಿ ಅನೇಕರು ಆಸ್ಪತ್ರೆಗೆ ದಾಖಲಾಗಿದ ಘಟನೆ ಜರುಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಒತ್ತಾಯಿಸಿದರು.

ಮಹಾನಗರ ಪಾಲಿಕೆಯಾದ ನಂತರ ನಗರದ ಸ್ವಚ್ಛತೆ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿದ್ದೇವೆ. ನಿಝಾಮರ ಕಾಲದ ಹಳೆಯ ಅಪಾಯಕಾರಿ ಪೈಪ್‌ಲೈನ್ ಬದಲಾಯಿಸಿದ್ದು, ಹೆಚ್ಚುವರಿ ಅನುದಾನಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ. ಈ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯನವರು ರಾಯಚೂರಿಗೆ ಬಂದಾಗ ಗಮನಕ್ಕೆ ತಂದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

-ಜುಬೀನ್ ಮೊಹಪಾತ್ರ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor