×
Ad

ಜಿಲ್ಲಾ ಕೇಂದ್ರವಾಗುವ ಅರ್ಹತೆಯಿದ್ದರೂ ಸಾರಿಗೆ ಕೊರತೆ ಅನುಭವಿಸುತ್ತಿರುವ ಇಂಡಿ

Update: 2026-01-18 07:00 IST

ವಿಜಯಪುರ: ಇಂಡಿ ನಗರವಾಗಿ ಮೇಲ್ದರ್ಜೆಗೇರಿದೆ, ಜಿಲ್ಲಾ ಕೇಂದ್ರವಾಗುವ ಎಲ್ಲ ಸೌಲಭ್ಯಗಳನ್ನು ಹೊಂದುವ ಮೂಲಕ ಜಿಲ್ಲಾ ಕೇಂದ್ರ ರಚನೆಯ ಕೂಗು ಇಂಡಿಯಲ್ಲಿ ಪ್ರಬಲಗೊಂಡಿದೆ. ಆದರೆ, ನಗರ ಸಾರಿಗೆ ಕೊರತೆ ವ್ಯಾಪಕವಾಗಿದ್ದು ಈ ಕೊರತೆ ನೀಗಿದರೆ ಇಂಡಿ ಜನತೆಗೆ ಅನುಕೂಲವಾಗಲಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಫಲವಾಗಿ ಇಂಡಿಯಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂಡಿ ನಗರದಲ್ಲಿಯೇ 50 ಸಾವಿರ ಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ ನಗರ ಸಾರಿಗೆ ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು ಕೇವಲ ಎರಡು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ನಗರ ವ್ಯಾಪ್ತಿಯೂ ಬೆಳೆಯುತ್ತಿರುವುದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದಶಕ್ಕೆ ಸಂಚರಿಸಲು ಇಂಡಿ ಜನತೆ ಹೈರಾಣಾಗುವಂತಾಗಿದೆ. ಇನ್ನೊಂದೆಡೆ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗುತ್ತಿರುವುದು ಅವರ ಜೇಬಿಗೆ ಹೊರೆ ಬೀಳುವಂತೆ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಅವರು ಕೂಡಾ ಜಿಲ್ಲೆಗೆ ಇನ್ನೂ ಹೆಚ್ಚಿಗೆ ಬಸ್ ಬೇಕು ಎಂದು ಪತ್ರ ಬರೆದು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂಬ ಚಿಂತನೆಯಿಂದ ನಗರ ಸಾರಿಗೆ ಪ್ರಾರಂಭಿಸಿ ಈಗ 9 ತಿಂಗಳು ಕಳೆಯುತ್ತಿದೆ. ನಗರ ಸಾರಿಗೆ ಸೇವೆಯು ಪ್ರಾರಂಭವಾದ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ನಗರ ಸಾರಿಗೆ ಬಸ್‌ಗಳ ಸಂಚಾರ ಶುರುವಾದ ಬಳಿಕ ಖಾಸಗಿ ವಾಹನಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿದೆ. ನಗರ ಸಾರಿಗೆ ಬಸ್‌ಗಳು ಆರಂಭವಾದ ಬಳಿಕ ಸಾರ್ವಜನಿಕರು ಖಾಸಗಿ ವಾಹನಗಳತ್ತ ಮುಖ ಮಾಡುವುದು ಕಡಿಮೆಯಾಗಿದ್ದು, ನಗರ ಸಾರಿಗೆ ಬಸ್ಸಿನ ದಾರಿ ಕಾಯುತ್ತಿದ್ದಾರೆ.

ಪ್ರತಿ ದಿನ ಮೂರು ಮಾರ್ಗಗಳಲ್ಲಿ ನಗರ ಸಾರಿಗೆ ಬಸ್ ಓಡಿಸಲಾಗುತ್ತಿದೆ. ನಗರ ಸಾರಿಗೆ ಜನಪ್ರಿಯತೆ ಹೆಚ್ಚಾದಂತೆ ಹೆಚ್ಚಿನ ಸಾರಿಗೆ ಬಸ್ ಗಳ ಬೇಡಿಕೆಯೂ ಹೆಚ್ಚಾಗಿದೆ.

ನಗರ ಬಸ್ ನಿಲ್ದಾಣದಿಂದ ಸರಕಾರಿ ವಿಜಯಪುರ ರಸ್ತೆಯ ಆಸ್ಪತ್ರೆ, ಕೆಇಬಿ, ಚರ್ಚ್, ಆದರ್ಶ ಶಾಲೆ, ವಾಟರ್ ಟ್ಯಾಂಕ್ (ಸೇವಾಲಾಲ್ ವೃತ್ತ), ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ, ವೀರ ಭಾರತಿ ಶಾಲೆ, ಧನಶೆಟ್ಟಿ ತಾಂಡಾ, ಸಾಲೋಟಗಿ ಹಾಗೂ ರೈಲು ನಿಲ್ದಾಣ ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿ 20 ನಿಮಿಷಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಬಸ್ ಓಡಿಸಬೇಕೆನ್ನುವುದು ಇಲ್ಲಿನ ನಗರ ನಿವಾಸಿಗಳ ಬೇಡಿಕೆಯಾಗಿದೆ. ಈಗಾಗಲೇ ಓಡುತ್ತಿರುವ ನಗರ ಸಾರಿಗೆಯನ್ನು ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾಮಾನ್ಯ ಸಾರ್ವಜನಿಕರು ಈ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

‘ಹೆಚ್ಚಿನ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಾಗಿ ನಗರ ಸಾರಿಗೆ ಬಸ್ ಸಂಚಾರ ಮಾರ್ಗಗಳ ಜೊತೆಗೆ ಬಸ್ಸುಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಬೇಕಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಕಿ.ಮೀ.ಗೆ ಸಾರಿಗೆ ಸಂಚಾರಕ್ಕೆ 50 ರೂಗಳ ವೆಚ್ಚವಾಗುತ್ತಿದೆ. ಸರಾಸರಿ ನೋಡಿದರೆ ನಗರ ಸಾರಿಗೆ ಓಡಾಟದಿಂದ ಕಿಮೀಗೆ 40 ರೂ.ಗಳು ದೊರೆಯುತ್ತಿದೆ. ಆದರೂ, ನಗರ ಸಾರಿಗೆಯಿಂದ ಸಂಸ್ಥೆಗೆ ಹಾನಿಯಿಲ್ಲ. ಮೂರು ನಗರ ಸಾರಿಗೆ ಬಸ್ ಓಡಾಟಕ್ಕೂ ಕಿಮೀ ಗಳಿಕೆಗೂ ಹೊಂದಾಣಿಕೆ ಇದೆ. ಶಾಸಕರು ಇನ್ನೂ ಮೂರು ಬಸ್ ಗಳ ಬೇಡಿಕೆ ಇಟ್ಟಿದ್ದಾರೆ. ಅವು ಸಧ್ಯದಲ್ಲಿ ಬರಲಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಪ್ರಿಲ್ ತಿಂಗಳಲ್ಲಿ ಇಂಡಿಯಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದ ನಗರ ಸಾರಿಗೆ ಸ್ಥಗತ ಆಗಿರುವುದಿಲ್ಲ. ಜನಸ್ಪಂದನೆ ಉತ್ತಮವಾಗಿರುವುದರಿಂದ, ಸಾರ್ವಜನಿಕರು ನಗರ ಸಾರಿಗೆಯ ನಿರಂತರತೆ ಕಾಪಾಡುವತ್ತ ಆಶಾವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ.

ಇಲ್ಲಿಗೆ ನಗರ ಸಾರಿಗೆ ವ್ಯವಸ್ಥೆಯಾಗಬೇಕೆಂದು ಹೋರಾಟ ಮಾಡಲಾಗಿತ್ತು. ಶಾಸಕರು ನಗರ ಸಾರಿಗೆ ಓಡಾಟಕ್ಕೆ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ 3-4 ಕೂತು ಪ್ರಯಾಣಿಸುವ ಆಟೋಗಳಲ್ಲಿ ಪ್ರಯಾಣ ಮಾಡಲು ಒಬ್ಬನಿಗೆ ಕನಿಷ್ಠ 50ರೂ. ಪಾವತಿಸಬೇಕು. ತುಸು ದೂರದ ಪ್ರಯಾಣಕ್ಕೆ 100 ರೂ. ತನಕೂ ತೆರಬೇಕಾಗುತ್ತದೆ. ಸರ್ವೀಸ್ ಓಡುವ ಅಟೋ-ಪಿಯಾಜೋಗಳಿಗೆ ತಲಾ 20 ರೂ. ನಂತೆ ನೀಡಬೇಕು. ಅದರೆ ನಗರ ಸಾರಿಗೆ ಆರಂಭವಾದ ಬಳಿಕ ಈ ವೆಚ್ಚವು 6 ರಿಂದ 10 ರೂ.ಗಳಿಗೆ ಇಳಿಕೆಯಾಗಿದೆ. ಹಾಗಾಗಿ, ನಗರದ 23 ವಾರ್ಡುಗಳಿಗೂ ನಗರ ಸಾರಿಗೆ ಸಂಚಾರ ವಿಸ್ತರಣೆ ಆದರೆ, ಸಾರ್ವಜನಿಕ ಸಾರಿಗೆ ಸೇವೆಯ ಲಾಭ ಇನ್ನಷ್ಟು ಸಾರ್ವಜನಿಕರನ್ನು ತಲುಪುತ್ತದೆ. ಇದರಿಂದ ಸಾರಿಗೆ ಸಂಸ್ಥೆಗೂ ಲಾಭವಾಗಲಿದೆ.

ನಗರದ ಸುತ್ತ ವರ್ತುಲ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ರೇವಪ್ಪನ ಮಡ್ಡಿ, ಇಂಗಳಗಿ ತಾಂಡಾದವರೆಗಿನ ಮಾರ್ಗಗಳಲ್ಲಿ ಬಸ್ ಸಂಚಾರ ಅತ್ಯಗತ್ಯವಾಗಿದೆ. ಇದರಿಂದ ಇಲ್ಲಿನ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಇಂಡಿ ನಿವಾಸಿ ಚವಡಪ್ಪಾ ಜನ್ನಾ.

ನಗರ ಸಾರಿಗೆ ಬಸ್ಸಿನಿಂದ ಶಾಲೆ, ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ನಗರ ಸಾರಿಗೆ ಬಸ್ ಇಲ್ಲದಿದ್ದಾಗ ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಕಾಗುತಿತ್ತು. ಕಾಲೇಜು ಅವಧಿ ಮುಗಿದ ಮೇಲೆ ಹೋಗಬೇಕಾಗಿತ್ತು. ಸಧ್ಯ ನಗರ ಸಾರಿಗೆಯಿಂದ ಅನುಕೂಲವಾಗಿದೆ.

-ಸಿದ್ದಾರ್ಥ, ವಿದ್ಯಾರ್ಥಿ

ನಗರ ವ್ಯಾಪ್ತಿಯಲ್ಲಿ ಎರಡು ನಗರ ಸಾರಿಗೆ ಬಸ್ ಗಳು ಓಡಾಡುತ್ತಿವೆ. ಇದರಿಂದ ಶಾಲೆ,ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಪ್ರಯಾಣಿಕರಿಂದ ನಗರ ಸಾರಿಗೆ ಬಸ್ ಗಳ ಬೇಡಿಕೆ ಇದೆ. ಹೊಸ ಬಸ್ ಗಳು ಬಂದ ಮೆಲೆ ನಗರ ಸಾರಿಗೆ ಹೆಚ್ಚಿನ ಬಸ್ ಓಡಿಸಲಾಗುತ್ತದೆ.

-ರೇವಣಸಿದ್ದಪ್ಪ ಖೈನೂರ ಘಟಕ ವ್ಯವಸ್ಥಾಪಕರು, ಇಂಡಿ

ಇಂಡಿ ನಗರಕ್ಕೆ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿನ ಎಲ್ಲಾ ಸೌಲಭ್ಯಗಳು ಇಂಡಿಯಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ, ಸೇರಿದಂತೆ ಹಲವು ಸೌಲಭ್ಯಗಳ ಜತೆಗೆ ನಗರ ಸಾರಿಗೆ ಸೇವೆ ನಗರ ವಾಸಿಗಳಿಗೆ ದೊರಕಿಸಿ ಕೊಡುವ ಉದ್ದೇಶದಿಂದ ನಗರ ಸಾರಿಗೆ ಬಸ್ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಬಸ್ ಗಳ ಸಂಖ್ಯೆ ಹೆಚ್ಚಿಗೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗುತ್ತದೆ.

-ಯಶವಂತರಾಯಗೌಡ ಪಾಟೀಲ ಶಾಸಕರು, ಇಂಡಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಯಭೀಮ ಸಿಂಗೆ

contributor

Similar News