ಕುಂಟುತ್ತ ತೆವಳುತ್ತ ಸಾಗಿದೆ ಗದಗ-ವಾಡಿ ರೈಲ್ವೆ ಯೋಜನೆ ಕಾಮಗಾರಿ
ಲಿಂಗಸಗೂರು : ಗದಗ-ವಾಡಿ ರೈಲ್ವೆ ಯೋಜನೆಯೂ ಬ್ರಿಷರ ಕಾಲದಲ್ಲಿಯೇ ರೂಪುಗೊಂಡಿತ್ತು. 1910ರಲ್ಲಿ ನಿಜಾಮರ ಸರಕಾರ ಪ್ರಸ್ತಾವ ಸಲ್ಲಿಸಿತ್ತು. 1910ರಲ್ಲಿ ಸಿ.ಟಿ.ವಾಕ್ಲರ್ ಸಮೀಕ್ಷೆ ಕಾರ್ಯ ಕೈಗೊಂಡಿದ್ದರು. 257 ಕಿ.ಮೀ. ರೈಲ್ವೆ ಯೋಜನೆಗೆ 1.87 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಪತ್ರಿಕೆ ತಯಾರಿಸಿ 1911ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಕಲಬುರಗಿ ಭಾಗದಲ್ಲಿನ ಕಾರ್ಖಾನೆಗಳಿಂದ ಸಿಮೆಂಟ್ ಹಾಗೂ ರೈತರು ಬೆಳೆದ ಭತ್ತ, ತೊಗರಿಯನ್ನು ವಾಡಿ ಮೂಲಕ ಗದಗ, ಹುಬ್ಬಳ್ಳಿ ನಗರಗಳಿಗೆ ಸಾಗಿಸಲು ಗದಗ-ವಾಡಿ ರೈಲ್ವೆ ಯೋಜನೆ ಸಿದ್ದಪಡಿಸಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲ್ ಬಹೂದ್ದೂರ್ ಶಾಸ್ತ್ರಿ ಅಡಿಗಲ್ಲು ಹಾಕಿದ್ದರು. ಅಂದಿನಿಂದ ಇಂದಿನವರೆಗೂ ಈ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿದೆ. 115 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ ಎನ್ನುತ್ತಾರೆ ಜನರು.
1997ರಲ್ಲಿ ಕಾಮಗಾರಿಗೆ ಮರುಜೀವ:
1910ರಲ್ಲಿ ರೂಪಗೊಂಡ ಈ ರೈಲ್ವೆ ಯೋಜನೆ ಸ್ವಾತಂತ್ರ್ಯ ನಂತರದಲ್ಲಿ ಲಾಲ್ ಬಹೂದ್ದೂರ್ ಶಾಸ್ತ್ರಿಯವರು ರೈಲ್ವೆ ಸಚಿವರಾಗಿದ್ದಾಗ ಅಡಿಗಲ್ಲು ಹಾಕಿದ್ದರು. ತದನಂತರ ಪ್ರಗತಿ ಕಾಣಲಿಲ್ಲ. 1997ರಲ್ಲಿ ಕೇಂದ್ರ ಸರಕಾರದ ರಾಜ್ಯ ಪ್ರತಿನಿಧಿಯಾಗಿದ್ದ ಬಸವರಾಜ ರಾಯರೆಡ್ಡಿಯವರು ಅಂದಿನ ರೈಲ್ವೆ ಸಚಿವರಾಗಿದ್ದ ರಾಮವಿಲಾಸ ಪಾಸ್ವಾನ್ರವರ ಗಮನಕ್ಕೆ ತಂದು ಗದಗ-ವಾಡಿ ರೈಲ್ವೆ ಯೋಜನೆಗೆ ಮರುಜೀವ ನೀಡಿದರು. ಮಲ್ಲಿಕಾರ್ಜುನ ಖರ್ಗೆಯವರು ಅದನ್ನು ಕಾರ್ಯರೂಪಕ್ಕೆ ತಂದರು.
ಗದಗ-ವಾಡಿ ರೈಲು ಮಾರ್ಗವು ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿದ್ದು, ಗದಗದಿಂದ ವಾಡಿವರೆಗೆ ಸುಮಾರು 257 ಕಿ.ಮೀ. ಉದ್ದದ ಹೊಸ ರೈಲ್ವೆ ಮಾರ್ಗ ನಿರ್ಮಾಣವಾಗುತ್ತಿದೆ. ಇದು ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಒಟ್ಟು 31 ರೈಲ್ವೆ ನಿಲ್ದಾಣಗಳು ಬರುತ್ತವೆ. ಈ ಯೋಜನೆಯಿಂದ ಕುಷ್ಟಗಿ, ಯಲಬುರಗಿ ಭಾಗಗಳಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ ಮತ್ತು 2026ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಇದು ಲಿಂಗಸುಗೂರು, ಶಹಾಪುರ ಮುಂತಾದ ಪಟ್ಟಣಗಳನ್ನು ಸಂಪರ್ಕಿಸುತ್ತದೆ.
ಲಿಂಗಸುಗೂರು ಭಾಗದಲ್ಲಿ ಆರಂಭವಾಗದ ಕಾಮಗಾರಿ:
ಗದಗ-ವಾಡಿ ರೈಲ್ವೆ ಮಾರ್ಗದ ಕಾಮಗಾರಿ ಆರಂಭಗೊಂಡಿದ್ದು, ಕುಷ್ಟಗಿ ಯಲಬುರ್ಗಾ ಭಾಗದಲ್ಲಿ 60 ಕಿ.ಮೀ. ಮಾರ್ಗವು ಸೇವೆಗೆ ಸಿದ್ಧವಾದರೆ, ವಾಡಿ ಶಹಾಪುರ 45 ಕಿ.ಮೀ. ಮಾರ್ಗ ಸೇವೆಗೆ ಸಿದ್ಧವಾಗಿದೆ. ಆದರೆ, ಮಧ್ಯ ಭಾಗದಲ್ಲಿರುವ ಲಿಂಗಸುಗೂರು ಕಾಮಗಾರಿ ಆರಂಭವಾಗದೆ ತೆವಳುತ್ತ ಸಾಗಿದೆ. ರಾಜ್ಯದವರೇ ರೈಲ್ವೆ ಸಚಿವರಾಗಿದ್ದರೂ ಕಾಮಗಾರಿ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯ ರೈಲ್ವೆ ಪ್ರಯಾಣಿಕರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಕಾಮಗಾರಿ ವೆಚ್ಚ
1911ರಲ್ಲಿ ಕಾಮಗಾರಿ ಅಂದಾಜು ಮೊತ್ತ 1.87 ಕೋಟಿ ರೂ. ಮಾತ್ರ ಇತ್ತು. 1998ರಲ್ಲಿ ಈ ಕಾಮಗಾರಿ ಮೊತ್ತ 457.72 ಕೋಟಿ, ನಂತರದಲ್ಲಿ 900 ಕೋಟಿ, ಈಗ ಪ್ರಸ್ತುತವಾಗಿ 1992 ಕೋಟಿ ರೂ.ಗಳಷ್ಟಾಗಿದೆ. 1911ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಕೇವಲ 1.87 ಕೋಟಿ ರೂಪಾಯಿಯಲ್ಲಿ ಮುಗಿಯುತ್ತಿತ್ತು. ಇಂದು ಅದರ ವೆಚ್ಚ 100 ಪಟ್ಟು ಹೆಚ್ಚಾಗಿದೆ.
ರಾಜ್ಯದವರೇ ರೈಲ್ವೆ ಮಂತ್ರಿಗಳಾದರೂ ಕಾಮಗಾರಿ ವಿಳಂಬ
ರಾಜ್ಯದ ಜನಪ್ರತಿನಿಧಿಗಳಾದ ಜಾಫರ್ ಶರೀಫ್, ಮಲ್ಲಿಕಾರ್ಜುನ ಖರ್ಗೆ, ಸುರೇಶ ಅಂಗಡಿ, ಸದಾನಂದಗೌಡ, ಈ ಪ್ರಸ್ತುತವಾಗಿ ವಿ.ಸೋಮಣ್ಣನವರು ಕೇಂದ್ರ ರೈಲ್ವೆ ಸಚಿವರಾಗಿದ್ದರೂ ಗದಗ-ವಾಡಿ ರೈಲ್ವೆ ಯೋಜನೆ ಕಾಮಗಾರಿ ವಿಳಂಬವಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಪ್ರಸ್ತುತ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬುವುದು ಲಿಂಗಸುಗೂರು ಜನತೆಯ ಒತ್ತಾಯವಾಗಿದೆ.
1910ರಲ್ಲಿ ಸರ್ವೇ ಮಾಡಿದ್ದರೂ ಪೂರ್ಣಗೊಳ್ಳಲು 115 ವರ್ಷಗಳು ಬೇಕಾಯಿತೆ. ವರ್ಷಕ್ಕೆ ಕೇವಲ 2 ಕಿ.ಮೀ. ಕಾಮಗಾರಿ ಮಾಡಿದ್ದರೆ ಈ ವೇಳೆಗಾಗಲೇ ಲಿಂಗಸುಗೂರು ಜನತೆ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದರು. ಜನಪ್ರತಿನಿಧಿಗಳಿಗೆ ಕಲ್ಯಾಣ ಕರ್ನಾಟಕ ಎಂದರೆ ಮಲತಾಯಿ ಧೋರಣೆಯಿದೆ. ಗದಗ-ವಾಡಿ ರೈಲ್ವೆ ಪೂರ್ಣಗೊಂಡರೆ ಲಿಂಗಸುಗೂರು ಜಿಲ್ಲಾ ಕೇಂದ್ರವಾಗುತ್ತದೆ. ಈ ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಿ 2026ರೊಳಗಾಗಿ ಲಿಂಗಸುಗೂರು ಜನತೆ ರೈಲ್ವೆ ಪ್ರಯಾಣ ದೊರಕುವಂತೆ ಮಾಡಬೇಕು.
ಮಹಾಂತೇಶ ಸುಕುಂದ, ವರ್ತಕರು ಲಿಂಗಸುಗೂರು