ಕರ್ನಾಟಕ ಕಾಂಗ್ರೆಸ್: ಬಿ.ಕೆ. ಹರಿಪ್ರಸಾದ್ ಮುಂದಿರುವ ಸವಾಲುಗಳು
ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿಯ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರ ನೇಮಕವು ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ; ಬದಲಾಗಿ ಪಕ್ಷದ ಸೈದ್ಧಾಂತಿಕ ಪುನರುಜ್ಜೀವನಕ್ಕೆ ಒಂದು ಮಹತ್ವದ ಅವಕಾಶವಾಗಿದೆ. ದೀರ್ಘಕಾಲದಿಂದ ಕಾಂಗ್ರೆಸ್‌ನ ಮೂಲ ಸಿದ್ಧಾಂತ, ಸಂವಿಧಾನದ ಮೌಲ್ಯ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳಿಗೆ ಬದ್ಧರಾಗಿರುವ ನಾಯಕರೆಂದು ಗುರುತಿಸಿಕೊಂಡಿರುವ ಅವರು, ಇಂದು ಕಾಂಗ್ರೆಸ್ ಎದುರಿಸುತ್ತಿರುವ ಅತಿದೊಡ್ಡ ಸವಾಲನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂಬ ನಿರೀಕ್ಷೆ ಇದೆ.
ಇಂದು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕೇವಲ ಚುನಾವಣಾ ಸೋಲು-ಗೆಲುವಿನ ಪ್ರಶ್ನೆಯಾಗಿ ಉಳಿದಿಲ್ಲ. ಅದು ಎರಡು ವಿಭಿನ್ನ ಚಿಂತನೆಗಳ ನಡುವಿನ ಸಂಘರ್ಷವಾಗಿ ರೂಪುಗೊಂಡಿದೆ. ಒಂದು ಕಡೆ ಭಾರತದ ಘನ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳಿವೆ. ಮತ್ತೊಂದು ಕಡೆ ಧರ್ಮ, ಜಾತಿ ಮತ್ತು ಸಾಂಸ್ಕೃತಿಕ ಏಕರೂಪತೆಯ ಆಧಾರದ ಮೇಲೆ ರಾಷ್ಟ್ರವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುವ ಬಲಪಂಥೀಯ ವಿಚಾರಧಾರೆ ಇದೆ.
2014ರ ನಂತರ ದೇಶದ ರಾಜಕೀಯ ವಾತಾವರಣದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಸಾರ್ವಜನಿಕ ಚರ್ಚೆಗಳು ಅಭಿವೃದ್ಧಿ, ಶಿಕ್ಷಣ, ಉದ್ಯೋಗ, ರೈತರ ಸಮಸ್ಯೆಗಳು ಮತ್ತು ಆರ್ಥಿಕ ನೀತಿಗಳಿಂದ ದೂರ ಸರಿದು, ಧರ್ಮ, ಗುರುತು ಮತ್ತು ಭಾವನಾತ್ಮಕ ರಾಷ್ಟ್ರವಾದದ ಸುತ್ತ ಕೇಂದ್ರೀಕೃತವಾಗಿವೆ. ಸಾಮಾಜಿಕ ಜಾಲತಾಣಗಳು ಮತ್ತು ಪ್ರಚಾರ ಯಂತ್ರಗಳ ಮೂಲಕ ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸುವ ಪ್ರಯತ್ನಗಳು ಹೆಚ್ಚಾಗಿವೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ದೇಶದ್ರೋಹಿಗಳೆಂದು, ಪ್ರಶ್ನೆ ಕೇಳುವವರನ್ನು ರಾಷ್ಟ್ರವಿರೋಧಿಗಳೆಂದು ಬಿಂಬಿಸುವ ಪ್ರವೃತ್ತಿ ಸಾಮಾನ್ಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಂದಿರುವ ಸವಾಲು ಕೇವಲ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವುದಷ್ಟೇ ಅಲ್ಲ. ಅದಕ್ಕಿಂತ ದೊಡ್ಡ ಸವಾಲು ಸಮಾಜದಲ್ಲಿ ವ್ಯಾಪಕವಾಗುತ್ತಿರುವ ವಿಭಜನಾ ರಾಜಕಾರಣವನ್ನು ಎದುರಿಸುವುದಾಗಿದೆ. ಆದರೆ ಈ ಹೋರಾಟವನ್ನು ಕೇವಲ ಘೋಷಣೆಗಳಿಂದ ಅಥವಾ ಚುನಾವಣಾ ತಂತ್ರಗಳಿಂದ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಕಾರ್ಯಕರ್ತರು ಮತ್ತು ನಾಯಕರು ಮೊದಲು ಸೈದ್ಧಾಂತಿಕವಾಗಿ ಗಟ್ಟಿಯಾಗಬೇಕಿದೆ. ಹಿಂದೂ ಮತ್ತು ಹಿಂದುತ್ವದ ನಡುವಿನ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಿದೆ. ಬಿಜೆಪಿ ಮತ್ತು ಸಂಘಪರಿವಾರ ಬಿತ್ತುತ್ತಿರುವ ಮೂಲಭೂತವಾದ ಹೇಗೆ ಈ ನೆಲದ ಬಹುತ್ವವನ್ನು ದಮನಗೊಳಿಸಲಿದೆ ಎನ್ನುವುದರ ಕುರಿತು ಜಾಗೃತಿಗೊಳ್ಳಬೇಕಿದೆ.
ದುರದೃಷ್ಟವಶಾತ್, ಕಾಂಗ್ರೆಸ್ ಸಂಘಟನೆಯ ಹಲವು ಹಂತಗಳಲ್ಲಿ ವೈಚಾರಿಕ ತರಬೇತಿಯ ಕೊರತೆ ಎದ್ದು ಕಾಣಿಸುತ್ತದೆ. ಅನೇಕ ಕಾರ್ಯಕರ್ತರಿಗೆ ಪಕ್ಷದ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನ ಪಾತ್ರ, ಸಂವಿಧಾನದ ಮೂಲ ತತ್ವಗಳು ಅಥವಾ ಸಾಮಾಜಿಕ ನ್ಯಾಯದ ಬಗ್ಗೆ ಸಮಗ್ರ ಅರಿವು ಕಡಿಮೆ ಇದೆ. ಇದರ ಪರಿಣಾಮವಾಗಿ ಬಿಜೆಪಿ ಐಟಿ ಸೆಲ್‌ಗಳು ಮತ್ತು ಬಲಪಂಥೀಯ ಟ್ರೋಲ್ ಆರ್ಮಿಗಳು ಬಿಡುವ ಸುಳ್ಳು ಪ್ರೊಪೋಗಾಂಡಗಳ ವಿರುದ್ಧ ಪರಿಣಾಮಕಾರಿಯಾಗಿ ಕೌಂಟರ್ ಮಾಡಲು ಅಥವಾ ಆ ಸುಳ್ಳುಗಳನ್ನು ಒಡೆದುಹಾಕುವ ನೆರೇಟಿವ್ ಕಟ್ಟಲು ಸಾಧ್ಯವಾಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಭಾರತದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ನಿಜವಾದ ಮಾರ್ಗದರ್ಶಿಯಾಗಬೇಕು.ಮತ್ತು ಹಿಂದುತ್ವದ ಸೋಗಿನಲ್ಲಿರುವ ಸಂವಿಧಾನ ವಿರೋಧಿ ಬ್ರಾಹ್ಮಣವಾದವನ್ನು ಒಡೆದುಹಾಕಲು ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎನ್ನುವ ಸತ್ಯವನ್ನು ಅರಿಯಬೇಕಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಸಂವಿಧಾನ ರಚಿಸಿದ ವ್ಯಕ್ತಿಯಷ್ಟೇ ಅಲ್ಲ. ಅವರು ಭಾರತದ ಸಾಮಾಜಿಕ ಅಸಮಾನತೆಗಳ ವಿರುದ್ಧ ಆಳವಾದ ಹೋರಾಟ ನಡೆಸಿದ ಕ್ರಾಂತಿಕಾರಿ ಚಿಂತಕರಾಗಿದ್ದರು. ಅವರು ನೀಡಿದ ಸಾಂವಿಧಾನಿಕ ನೈತಿಕತೆ ಎಂಬ ಪರಿಕಲ್ಪನೆ ಇಂದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳಿಂದ ಉಳಿಯುವುದಿಲ್ಲ; ಸಮಾನತೆ, ವಿವಿಧತೆ ಮತ್ತು ಮಾನವ ಘನತೆಯನ್ನು ಗೌರವಿಸುವ ಸಾಮಾಜಿಕ ಸಂಸ್ಕೃತಿಯಿಂದ ಮಾತ್ರ ಅದು ಉಳಿದು ಬೆಳೆಯುತ್ತದೆ ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ಸಂದೇಶವಾಗಿತ್ತು.
ಅವರು ಎಚ್ಚರಿಸಿದ್ದ ವ್ಯಕ್ತಿಪೂಜೆ, ಬಹುಸಂಖ್ಯಾತವಾದ ಮತ್ತು ಸಾಮಾಜಿಕ ಅಸಮಾನತೆಗಳ ಅಪಾಯಗಳು ಇಂದು ಮತ್ತೆ ಪ್ರಬಲವಾಗಿ ಕಾಣಿಸಿಕೊಳ್ಳುತ್ತಿವೆ. ಜಾತಿ ಆಧಾರಿತ ಶ್ರೇಣೀಕರಣವನ್ನು ಸಮರ್ಥಿಸುವ ಯಾವುದೇ ಚಿಂತನೆ ಅಥವಾ ವ್ಯವಸ್ಥೆ ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ. ಭಾರತವನ್ನು ಸಮಾನತೆಯ ಆಧಾರದ ಮೇಲೆ ಕಟ್ಟಬೇಕೇ ಅಥವಾ ಜನ್ಮ ಆಧಾರಿತ ಶ್ರೇಣೀಕರಣದ ಆಧಾರದ ಮೇಲೆ ಕಟ್ಟಬೇಕೇ ಎಂಬ ಮೂಲಭೂತ ಪ್ರಶ್ನೆಯೇ ಇಂದು ನಮ್ಮ ಮುಂದಿದೆ.
ಆದ್ದರಿಂದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮೊದಲು ತನ್ನ ಸಂಘಟನೆಯೊಳಗೆ ಸೈದ್ಧಾಂತಿಕ ಪುನರ್‌ನಿರ್ಮಾಣ ಆರಂಭಿಸಬೇಕು. ಪ್ರತೀ ಜಿಲ್ಲೆ, ತಾಲೂಕು ಮತ್ತು ಬೂತ್ ಮಟ್ಟದಲ್ಲಿ ಸಂವಿಧಾನ ಅಧ್ಯಯನ ಶಿಬಿರಗಳು ನಡೆಯಬೇಕು. ಅಂಬೇಡ್ಕರ್, ಫುಲೆ, ಗಾಂಧಿ, ನೆಹರೂ, ಬಸವಣ್ಣ, ಪೆರಿಯಾರ್, ನಾರಾಯಣಗುರು, ಕುವೆಂಪು ಮತ್ತು ಸಮಾನತಾವಾದವನ್ನು ಪಸರಿಸಿದ ಅನೇಕ ಸಾಮಾಜಿಕ ಸುಧಾರಕರ ವಿಚಾರಧಾರೆಗಳ ಬಗ್ಗೆ ಕಾರ್ಯಕರ್ತರಿಗೆ ತರಬೇತಿ ನೀಡಬೇಕು. ಸುಳ್ಳು ಪ್ರಚಾರವನ್ನು ಹೇಗೆ ಎದುರಿಸಬೇಕು, ಸಾಂವಿಧಾನಿಕ ತತ್ವಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ವೈಚಾರಿಕ ಕಾರ್ಯಾಗಾರಗಳು ನಡೆಯಬೇಕು.
ಕಾಂಗ್ರೆಸ್ ಕಾರ್ಯಕರ್ತರು ಕೇವಲ ಪಕ್ಷದ ಬೆಂಬಲಿಗರಾಗಿ ಮಾತ್ರ ಉಳಿಯದೆ, ಸಂವಿಧಾನದ ರಾಯಭಾರಿಗಳಾಗಬೇಕು. ಅವರು ಹಳ್ಳಿಗಳಲ್ಲಿ, ನಗರಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಹೆಚ್ಚು ಹೆಚ್ಚು ಹರಡಬೇಕು.
ಇಂದು ಕಾಂಗ್ರೆಸ್‌ಗೆ ಅಗತ್ಯವಿರುವುದು ಚುನಾವಣೆಯ ಜವಾಬ್ದಾರಿ ಹೊರುವ ಲೀಡರ್‌ಗಳಷ್ಟೇ ಅಲ್ಲ; ಸಮಾಜದೊಂದಿಗೆ ತಾತ್ವಿಕ ಸಂವಾದ ನಡೆಸಬಲ್ಲ ಪ್ರಬುದ್ಧ ಕಾರ್ಯಕರ್ತರು ಬೇಕು. ಕೇವಲ ನಾಯಕತ್ವ ಬದಲಾವಣೆಯಿಂದ ಪಕ್ಷ ಬಲವಾಗುವುದಿಲ್ಲ. ಸೈದ್ಧಾಂತಿಕ ಸ್ಪಷ್ಟತೆ, ವೈಚಾರಿಕ ಬದ್ಧತೆ ಮತ್ತು ಮೂಲಭೂತ ಆಶಯಗಳ ಮೇಲಿನ ಅಚಲ ನಂಬಿಕೆಯಿಂದ ಮಾತ್ರ ಪಕ್ಷ ಪುನಶ್ಚೇತನಗೊಳ್ಳಬಹುದು.
ಬಿ.ಕೆ. ಹರಿಪ್ರಸಾದ್ ಅವರ ಮುಂದಿರುವ ನಿಜವಾದ ಸವಾಲು ಇದೇ. ಅವರು ಕಾಂಗ್ರೆಸ್ ಅನ್ನು ಕೇವಲ ಒಂದು ಚುನಾವಣಾ ಯಂತ್ರವಾಗಿ ನೋಡದೆ, ಸಾಂವಿಧಾನಿಕ ಆಶಯಗಳನ್ನು ಕಾಪಾಡುವ ಪ್ರಜಾಪ್ರಭುತ್ವಾತ್ಮಕ ಚಳವಳಿಯಾಗಿ ಮರುರೂಪಿಸಬಲ್ಲರು ಎನ್ನುವ ವಿಶ್ವಾಸವಿದೆ.
ಏಕೆಂದರೆ ಇಂದು ಭಾರತದ ಸಂದರ್ಭದಲ್ಲಿ ನಡೆಯುತ್ತಿರುವ ಸೈದ್ಧಾಂತಿಕ ಹೋರಾಟ ಅದು ಕೇವಲ ಅಧಿಕಾರಕ್ಕಾಗಿ ಅಷ್ಟೇ ಅಲ್ಲ; ಅದು ಭಾರತದ ಮೂಲತತ್ವವನ್ನು, ಸಂವಿಧಾನದ ಆಶಯಗಳನ್ನು ಮತ್ತು ಮನುಷ್ಯರ ನಡುವೆ ಇರಬೇಕಾದ ಸಮಾನತೆಯ ಆದರ್ಶವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ. ಆ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಮೊದಲು ತನ್ನ ಕಾರ್ಯಕರ್ತರ ಮನಸ್ಸು ಮತ್ತು ಚಿಂತನೆಗಳನ್ನು ಗೆಲ್ಲಬೇಕು. ಆಗ ಮಾತ್ರ ಸಂವಿಧಾನ ಆಶಿಸಿದ ಭಾರತವು ವಿಭಜನೆಯ ರಾಜಕಾರಣದ ವಿರುದ್ಧ ಜಯ ಸಾಧಿಸಬಲ್ಲದು.