ಬೀಬಿ ಫಾತಿಮಾ ಮಹಿಳಾ ಸಂಘಕ್ಕೆ ರಾಷ್ಟ್ರೀಯ ಪ್ರಶಸ್ತಿ
150ಕ್ಕೂ ಹೆಚ್ಚು ಸಿರಿಧಾನ್ಯ ತಳಿಗಳ ಸಂರಕ್ಷಣೆ 30 ಗ್ರಾಮಗಳಲ್ಲಿ ಕೃಷಿ ಜೀವವೈವಿಧ್ಯದ ಅಭಿಯಾನ
ಹುಬ್ಬಳ್ಳಿ : ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲ. ತಲೆಮಾರುಗಳಿಂದ ಬಂದಿರುವ ಬೀಜ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯೂ ಹೌದು. ಈ ಮಹತ್ವದ ಕಾರ್ಯದಲ್ಲಿ ತೊಡಗಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಮಹಿಳೆಯರ ಸಾಧನೆಗೆ ಇದೀಗ ರಾಷ್ಟ್ರಮಟ್ಟದ ಮನ್ನಣೆ ದೊರೆತಿದೆ.
ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ 10 ಲಕ್ಷ ರೂ. ಮೊತ್ತದ ಪ್ರತಿಷ್ಠಿತ ‘ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿ’ (Plant Genome Saviour Community Award) ಲಭಿಸಿದೆ. ಭಾರತ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಸಸ್ಯ ತಳಿ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (PPVFRA) ಈ ಪ್ರಶಸ್ತಿಗೆ ಸಂಘವನ್ನು ಆಯ್ಕೆ ಮಾಡಿದೆ. 10 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ನ.12ರಂದು ಹೊಸದಿಲ್ಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.
ದೇಸಿ ಬೀಜಗಳ ಸಂರಕ್ಷಣೆ, ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಪುನರುಜ್ಜೀವನ ಹಾಗೂ ಕೃಷಿ ಜೀವವೈವಿಧ್ಯ ಉಳಿಸುವ ನಿಟ್ಟಿನಲ್ಲಿ ಸಂಘ ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
15 ಮಹಿಳೆಯರ ಒಗ್ಗಟ್ಟಿನ ಶ್ರಮ: 2018ರಲ್ಲಿ ಕೂಲಿ ಕೆಲಸ ಹಾಗೂ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ 15 ಮಹಿಳೆಯರು ಒಗ್ಗೂಡಿ ಈ ಸಂಘವನ್ನು ಸ್ಥಾಪಿಸಿದರು. ಸಹಜ ಸಮೃದ್ಧ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭವಾದ ಸಂಘ, ಇಂದು ಸುಮಾರು 30 ಗ್ರಾಮಗಳಲ್ಲಿ ದೇಸಿ ಸಿರಿಧಾನ್ಯಗಳ ಸಂರಕ್ಷಣೆ ಮತ್ತು ಮಿಶ್ರ ಬೆಳೆ ಪದ್ಧತಿಯ ಉತ್ತೇಜನಕ್ಕೆ ಶ್ರಮಿಸುತ್ತಿದೆ. ಸ್ಥಳೀಯ ಮಣ್ಣು ಹಾಗೂ ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ 150ಕ್ಕೂ ಹೆಚ್ಚು ಸಿರಿಧಾನ್ಯ ತಳಿಗಳನ್ನು ಉಳಿಸಿರುವುದು ಸಂಘದ ಪ್ರಮುಖ ಸಾಧನೆಯಾಗಿದೆ.
ಬೀಜ ಬ್ಯಾಂಕ್ ಮೂಲಕ ರೈತರಿಗೆ ನೆರವು: ಅಪರೂಪದ ದೇಸಿ ತಳಿಗಳು ನಶಿಸದಂತೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿ, ಬೀಜ ಸಂಗ್ರಹ ಮತ್ತು ಬೀಜೋತ್ಪಾದನೆಗೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ರೈತರಿಗೆ ಉಚಿತವಾಗಿ ಬೀಜ ವಿತರಿಸುವುದರ ಜತೆಗೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೀಜ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಸಾವಯವ ಕೃಷಿಕರಿಗೆ ಕ್ವಿಂಟಾಲ್ಗಟ್ಟಲೆ ದೇಸಿ ಬೀಜಗಳನ್ನು ತಲುಪಿಸಲಾಗುತ್ತಿದೆ.
ಸಂರಕ್ಷಣೆಯ ಜತೆಗೆ ಮಹಿಳೆಯರಿಗೆ ಆದಾಯ: ಬೀಜ ಸಂರಕ್ಷಣೆಯ ಕಾರ್ಯವನ್ನು ಆರ್ಥಿಕ ಸ್ವಾವಲಂಬನೆಯತ್ತ ಕೊಂಡೊಯ್ಯುವಲ್ಲಿಯೂ ಸಂಘ ಯಶಸ್ವಿಯಾಗಿದೆ. ಸೆಲ್ಕೋ ಫೌಂಡೇಷನ್, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (ಐಐಎಂಆರ್) ಹಾಗೂ ಕೃಷಿ ಇಲಾಖೆಯ ನೆರವಿನಿಂದ ಸೌರಶಕ್ತಿ ಆಧಾರಿತ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಮಹಿಳೆಯರೇ ನಿರ್ವಹಿಸುತ್ತಿರುವ ಈ ಘಟಕದಲ್ಲಿ ಸಿರಿಧಾನ್ಯ ಹಿಟ್ಟು, ರೊಟ್ಟಿ, ಶಾವಿಗೆ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಂಘದ ಸದಸ್ಯೆಯರಿಗೆ ಉದ್ಯೋಗ ಮತ್ತು ಆದಾಯದ ಅವಕಾಶವೂ ಸೃಷ್ಟಿಯಾಗಿದೆ.
ಒಟ್ಟಾರೆ ತೀರ್ಥದ ಮಹಿಳೆಯರು ದೇಸಿ ಬೀಜಗಳ ಸಂರಕ್ಷಣೆಯ ಮೂಲಕ ಕೃಷಿ ಪರಂಪರೆಯನ್ನು ಉಳಿಸುವುದರ ಜತೆಗೆ ಗ್ರಾಮೀಣ ಮಹಿಳೆಯರ ಸಂಘಟಿತ ಶಕ್ತಿಯಿಂದ ಸ್ವಾವಲಂಬನೆಯ ಮಾದರಿಯನ್ನೂ ನಿರ್ಮಿಸಿದ್ದಾರೆ. ಇವರ ಈ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತಷ್ಟು ಪ್ರೇರಣೆ ನೀಡಿದೆ.