×
Ad

ಶೇ.100 ಫಲಿತಾಂಶದ ಭೂತ: ಮಕ್ಕಳ ಭವಿಷ್ಯ ಬಲಿಗೊಟ್ಟು ‘ಪ್ರತಿಷ್ಠೆ’ ಮೆರೆಯುವ ಖಾಸಗಿ ಶಾಲೆಗಳು

Update: 2026-05-15 10:00 IST

ರಾಜ್ಯದ ಎಸೆಸೆಲ್ಸಿ ಫಲಿತಾಂಶ ಪ್ರಕಟವಾದಾಗಲೆಲ್ಲ ಒಂದು ರೀತಿಯ ಸ್ಪರ್ಧೆ ಆರಂಭವಾಗುತ್ತದೆ. ಯಾವ ಶಾಲೆ ಶೇ.100 ಫಲಿತಾಂಶ ದಾಖಲಿಸಿತು? ಎಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರು? ಎಂಬ ಜಾಹೀರಾತುಗಳ ಹೊಳೆ ಹರಿಯುತ್ತದೆ. ಶಾಲೆಗಳ ಮುಂದೆ ಫ್ಲೆಕ್ಸ್, ಬ್ಯಾನರ್, ಅಭಿನಂದನಾ ಸಮಾರಂಭಗಳು ಸಾಮಾನ್ಯ ದೃಶ್ಯವಾಗಿವೆ. ಆದರೆ ಈ ಮಿನುಗುವ ಅಂಕಿಗಳ ಹಿಂದೆ ಅಡಗಿರುವ ಕಹಿ ಸತ್ಯಗಳು ಈಗ ನಿಧಾನವಾಗಿ ಹೊರಬರುತ್ತಿವೆ.

ಈ ಬಾರಿ ಪ್ರಕಟವಾದ ಎಸೆಸೆಲ್ಸಿ ಫಲಿತಾಂಶದಲ್ಲಿ ರಾಜ್ಯದ ಅನೇಕ ಖಾಸಗಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿರುವುದಾಗಿ ಘೋಷಿಸಿವೆ. ಆದರೆ ಈ ‘ಪರಿಪೂರ್ಣ ಫಲಿತಾಂಶ’ದ ಹಿಂದೆ ಕೆಲ ಶಾಲೆಗಳು ಅನುಸರಿಸುತ್ತಿರುವ ಅನೈತಿಕ ಕ್ರಮಗಳು ಗಂಭೀರ ಚರ್ಚೆಗೆ ಕಾರಣವಾಗಿವೆ.

ಉ.ಕ. ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳ ಘಟನೆ ಇದಕ್ಕೆ ಉದಾಹರಣೆ. ಒಂದರಿಂದ ಹತ್ತನೇ ತರಗತಿವರೆಗೆ ಅದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯ ಅಂಕಪಟ್ಟಿಯಲ್ಲಿ ಆಂತರಿಕ ಅಂಕಗಳೇ ಇರಲಿಲ್ಲ. ಬಳಿಕ ವಿಚಾರಿಸಿದಾಗ ಮಾತ್ರ ಆಕೆಯನ್ನು ನಿಯಮಿತ ವಿದ್ಯಾರ್ಥಿನಿಯಾಗಿ ಅಲ್ಲ, ‘ಖಾಸಗಿ ಅಭ್ಯರ್ಥಿ’ಯಾಗಿ ಪರೀಕ್ಷೆಗೆ ಕೂರಿಸಲಾಗಿದೆ ಎಂಬುದು ಪಾಲಕರಿಗೆ ಗೊತ್ತಾಯಿತು.

ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶಾಲಾ ವಿದ್ಯಾರ್ಥಿಗಳಂತೆ 20 ಅಂಕಗಳ ಆಂತರಿಕ ಮೌಲ್ಯಮಾಪನ ಸಿಗುವುದಿಲ್ಲ. ಪರಿಣಾಮವಾಗಿ ಉತ್ತೀರ್ಣರಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಅಂದರೆ ಶಾಲೆಯ ಶೇ.100 ಫಲಿತಾಂಶದ ದಾಖಲೆಯನ್ನು ಉಳಿಸಿಕೊಳ್ಳಲು ದುರ್ಬಲ ವಿದ್ಯಾರ್ಥಿಗಳನ್ನು ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಕಳುಹಿಸುವ ದಾರಿಯನ್ನು ಕೆಲ ಶಾಲೆಗಳು ಕಂಡುಕೊಂಡಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದು ಕೇವಲ ಒಂದು ಶಾಲೆಯ ಸಮಸ್ಯೆಯಲ್ಲ. ರಾಜ್ಯದ ಹಲವೆಡೆ ಇದೇ ಮಾದರಿಯ ದೂರುಗಳು ಕೇಳಿಬರುತ್ತಿವೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಸಾಧ್ಯತೆ ಇರುವ ವಿದ್ಯಾರ್ಥಿಗಳಿಗೆ ಟಿಸಿ ನೀಡಿ ಹೊರಹಾಕುವುದು, ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯುವಂತೆ ಒತ್ತಡ ಹೇರುವುದು, ಅಥವಾ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡುವ ಪ್ರವೃತ್ತಿಯೂ ಇದೆ ಎನ್ನಲಾಗುತ್ತಿದೆ.

ಶಾಲೆಗಳ ನಡುವೆ ‘ಶೇ.100 ಫಲಿತಾಂಶ’ ಎನ್ನುವುದು ಈಗ ಶಿಕ್ಷಣದ ಗುಣಮಟ್ಟದ ಸೂಚಕಕ್ಕಿಂತ ಹೆಚ್ಚು ‘ಮಾರ್ಕೆಟಿಂಗ್ ತಂತ್ರ’ವಾಗಿ ಪರಿಣಮಿಸಿದೆ. ಫಲಿತಾಂಶದ ಬ್ಯಾನರ್ಗಳು ಮುಂದಿನ ಸಾಲಿನ ಪ್ರವೇಶಕ್ಕೆ ಜಾಹೀರಾತಾಗುತ್ತಿವೆ. ಹೆಚ್ಚು ಫಲಿತಾಂಶ, ಹೆಚ್ಚು ಪ್ರವೇಶ, ಹೆಚ್ಚು ಫೀಸು ಇದೇ ಕೆಲವು ಶಿಕ್ಷಣ ಸಂಸ್ಥೆಗಳ ಅಪ್ರಕಟಿತ ವ್ಯವಹಾರ ಮಾದರಿಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಹತ್ತು ವರ್ಷಗಳ ಕಾಲ ಸಾವಿರಾರು ರೂಪಾಯಿ ಫೀಸು ಪಡೆದು ಓದಿಸಿದ ವಿದ್ಯಾರ್ಥಿಯನ್ನು ಕನಿಷ್ಠ ಉತ್ತೀರ್ಣನಾಗುವ ಮಟ್ಟಕ್ಕೂ ತರಲಾಗದಿದ್ದರೆ ಅದು ಯಾರ ವೈಫಲ್ಯ? ವಿದ್ಯಾರ್ಥಿಯದೇ? ಶಿಕ್ಷಕರದೇ? ಶಾಲಾ ಆಡಳಿತದ್ದೇ? ಅಥವಾ ಸಂಪೂರ್ಣ ಶಿಕ್ಷಣ ವ್ಯವಸ್ಥೆಯದೇ?

ವಿದ್ಯಾರ್ಥಿಯೊಬ್ಬನು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅವನಿಗೆ ಹೆಚ್ಚುವರಿ ತರಬೇತಿ, ವೈಯಕ್ತಿಕ ಮಾರ್ಗದರ್ಶನ ಮತ್ತು ಮಾನಸಿಕ ಬೆಂಬಲ ನೀಡುವುದು ಶಾಲೆಯ ಜವಾಬ್ದಾರಿಯಾಗಿದೆ. ಆದರೆ ಕೆಲ ಶಾಲೆಗಳು ಅದನ್ನು ಬಿಟ್ಟು, ಫಲಿತಾಂಶದ ಅಂಕಿ ಉಳಿಸಿಕೊಳ್ಳಲು ಅನೈತಿಕ ಮಾರ್ಗ ಅನುಸರಿಸುತ್ತಿರುವುದು ಶಿಕ್ಷಣ ಕ್ಷೇತ್ರದ ನೈತಿಕ ಕುಸಿತವನ್ನೇ ತೋರಿಸುತ್ತದೆ.

ಇದರಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿರುವುದು ಮಧ್ಯಮ ವರ್ಗದ ಮತ್ತು ಸಾಮಾನ್ಯ ಕುಟುಂಬಗಳ ಮಕ್ಕಳು. ಶಾಲೆಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುವ ಪಾಲಕರಿಗೆ ಕೊನೆಯ ಕ್ಷಣದಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಅಭ್ಯರ್ಥಿಗಳಾಗಿ ಮಾಡಲಾಗಿದೆ ಎಂಬುದು ಗೊತ್ತಾದಾಗ ಆಗುವ ಆಘಾತ ಅಷ್ಟಿಷ್ಟಲ್ಲ. ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮೇಲೂ ಇದು ಗಂಭೀರ ಪರಿಣಾಮ ಬೀರುತ್ತದೆ.

ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಸರಕಾರ ಮೂಲತಃ ಶಿಕ್ಷಣದಿಂದ ವಂಚಿತರಾದವರಿಗೆ ಎರಡನೇ ಅವಕಾಶವಾಗಿ ಜಾರಿಗೆ ತಂದಿದೆ. ಉದ್ಯೋಗದಲ್ಲಿರುವವರು, ಆರ್ಥಿಕ ಅಥವಾ ಕುಟುಂಬದ ಕಾರಣಗಳಿಂದ ಮಧ್ಯದಲ್ಲಿ ಶಾಲೆ ಬಿಟ್ಟವರು ಇದರ ಪ್ರಯೋಜನ ಪಡೆಯಬೇಕಾಗಿತ್ತು. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವ್ಯವಸ್ಥೆಯನ್ನೇ ತಮ್ಮ ‘ಶೇ.100 ಫಲಿತಾಂಶ’ದ ಪ್ರತಿಷ್ಠೆ ಉಳಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಇಂತಹ ಕ್ರಮಗಳಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಆಂತರಿಕ ಅಂಕಗಳು ಕೈತಪ್ಪುವುದಷ್ಟೇ ಅಲ್ಲ, ಪಾಲಕರಿಗೂ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ.

ಹೀಗಾಗಿ ಸರಕಾರ ಖಾಸಗಿ ಅಭ್ಯರ್ಥಿ ವ್ಯವಸ್ಥೆಗೆ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ.

ಖಾಸಗಿ ಅಭ್ಯರ್ಥಿಗಳ ನೋಂದಣಿಗೆ ಕನಿಷ್ಠ ವಯೋಮಿತಿ ನಿಗದಿ ಮಾಡಬೇಕು.

ನಿಯಮಿತವಾಗಿ ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಗಳನ್ನು ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಲು ಅವಕಾಶ ನೀಡಬಾರದು.

ಖಾಸಗಿ ಅಭ್ಯರ್ಥಿಗಳ ಅರ್ಜಿಗಳನ್ನು ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ಪರಿಶೀಲಿಸಬೇಕು.

ಒಂದೇ ಶಾಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೆ ತನಿಖೆ ನಡೆಸಬೇಕು.

ಶಿಕ್ಷಣವೆಂದರೆ ಕೇವಲ ಫಲಿತಾಂಶದ ಅಂಕಿಗಳ ಆಟವಲ್ಲ; ಅದು ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆ. ಆದರೆ ಇಂದು ಕೆಲ ಖಾಸಗಿ ಶಾಲೆಗಳು ಶಿಕ್ಷಣವನ್ನು ಸಂಪೂರ್ಣವಾಗಿ ‘ಫಲಿತಾಂಶ ಕೇಂದ್ರಿತ ವ್ಯವಹಾರ’ವನ್ನಾಗಿ ಮಾಡುತ್ತಿರುವುದು ದುರಂತ.

ಶೇ.100 ಫಲಿತಾಂಶಕ್ಕಿಂತ ಶೇ.100 ಪ್ರಾಮಾಣಿಕತೆ ಮುಖ್ಯ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಅರಿಯಬೇಕಾದ ಸಮಯ ಬಂದಿದೆ. ಇಲ್ಲವಾದರೆ ಮಿನುಗುವ ಬ್ಯಾನರ್ಗಳ ಹಿಂದೆ ಸಾವಿರಾರು ಮಕ್ಕಳ ಕನಸುಗಳು ಮಣ್ಣಾಗುವ ದಿನಗಳು ದೂರವಿರುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ​ಎಂ.ಆರ್. ಮಾನ್ವಿ

contributor

Similar News