ನೀಟ್ ಪರೀಕ್ಷಾ ವೈಫಲ್ಯಕ್ಕೆ ಹೊಣೆ ಯಾರು?
ಪ್ರಶ್ನೆ ಪತ್ರಿಕೆ ಸೋರಿಕೆ ನಮ್ಮ ದೇಶದಲ್ಲಿ ಒಂದು ದುರಂತವಾಗಿ ಮಾರ್ಪಟ್ಟಿದೆ. ರೈಲ್ವೆ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪದಿಂದ ಹಿಡಿದು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗಳಲ್ಲಿನ ಸೋರಿಕೆಯವರೆಗೆ ಇದು ನಡೆಯುತ್ತದೆ. ಈಗ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ನೀಟ್ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೇ 3ರಂದು ನಡೆದ NEET UG 2026ನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆಯನ್ನು ಮರುನಿಗದಿಪಡಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ. ಮೇ 3ರಂದು ಪರೀಕ್ಷೆ ಬರೆದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದನ್ನು ಮತ್ತೆ ಬರೆಯಬೇಕಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು 2024ರಲ್ಲಿಯೂ ಕೇಳಿಬಂದವು. ಪ್ರತಿಭಟನೆಗಳು ನಡೆದವು. ಈ ಬಾರಿ, ಪ್ರಶ್ನೆ ಪತ್ರಿಕೆ ಸೋರಿಕೆಯ ಪುರಾವೆಗಳು ಎಷ್ಟು ಪ್ರಬಲವಾಗಿದೆಯೆಂದರೆ, ಸಿಬಿಐ ತನಿಖೆ ನಡೆಸಲು ಆದೇಶಿಸಲಾಗಿದೆ.
ಇಂಥ ಪರೀಕ್ಷೆಗಳನ್ನು ನಡೆಸುವುದನ್ನೇ ಏಕೈಕ ಕೆಲಸವನ್ನಾಗಿ ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ ಹೇಗೆ ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದಕ್ಕೆ ಇದು ಸಾಕ್ಷಿ.
ರಾಜಸ್ಥಾನ ಪೊಲೀಸರ ತನಿಖೆಯಿಂದ ಈ ಸೋರಿಕೆ ಬಯಲಿಗೆ ಬಂದಿದೆ ಎಂದು ಎನ್‌ಟಿಎ ಹೇಳಿದೆ.
ಈಗ ಮರು ಪರೀಕ್ಷೆಯ ದಿನಾಂಕವನ್ನು ಘೋಷಿಸಬೇಕಾಗಿದೆ.
ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ಪ್ರವೇಶ ಪತ್ರಗಳನ್ನು ನೀಡಲಾಗುವುದು ಮತ್ತು ಪರೀಕ್ಷೆಯನ್ನು ಮರು ನಿಗದಿಪಡಿಸಲಾಗುವುದು ಎಂದು ಮಾತ್ರ ಎನ್‌ಟಿಎ ಹೇಳಿದೆ. ಹೊಸದಾಗಿ ಪರೀಕ್ಷೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಎನ್‌ಟಿಎಯಿಂದ ಅಧಿಕೃತ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಯಬೇಕಾಗಿದೆ.
ಅಲ್ಲದೆ, ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿಯೂ ಎನ್‌ಟಿಎ ಹೇಳಿದೆ.
ಆದರೆ, ಇಲ್ಲಿ ದೊಡ್ಡ ಸಮಸ್ಯೆ ಅನುಭವಿಸುವವರು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು. ಯಾವುದೇ ಮರು ಪರೀಕ್ಷೆ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಇದನ್ನು ಸ್ವತಃ ಎನ್‌ಟಿಎ ಕೂಡ ಒಪ್ಪಿಕೊಂಡಿದೆ. ಇದು ಒಂದು ದೊಡ್ಡ ಸಮಸ್ಯೆ ಮತ್ತು ವಿಶ್ವಾಸಾರ್ಹತೆಗೂ ಹಾನಿ ಎಂದು ತಿಳಿದಿದೆ.
ಇಡೀ ಸಂಸ್ಥೆಗೆ ಶಾಶ್ವತ ಹಾನಿಯಾಗುತ್ತದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು, ಪಾರದರ್ಶಕತೆಗಾಗಿ ಮರುಪರೀಕ್ಷೆಗೆ ನಿರ್ಧರಿಸಲಾಗಿದೆ ಎಂದು ಅದು ಹೆಳಿದೆ.
ವಿದ್ಯಾರ್ಥಿಗಳು ಮರು ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಎನ್‌ಟಿಎ ಹೇಳಿದೆ. ಈ ವರ್ಷದ ಮೇ 3ರಂದು ನಡೆದ ಪರೀಕ್ಷೆಗೆ ನೋಂದಾಯಿಸಿಕೊಂಡವರು ಈ ಪರೀಕ್ಷೆಗೆ ಮತ್ತೆ ಹಾಜರಾಗಲು ಸಾಧ್ಯವಾಗುತ್ತದೆ.
ಆದರೆ ದೊಡ್ಡ ಪ್ರಶ್ನೆಯೆಂದರೆ, ಏಕೆ ಸರಕಾರ ಇಂಥ ಅಕ್ರಮಗಳಿಗೆ ಆಸ್ಪದವಿರದಂತೆ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು.
ಇದು ದೇಶದಲ್ಲಿಯೇ ಒಂದು ಪ್ರಮುಖ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಯ ಮೂಲಕ ಮುಖ್ಯವಾಗಿ ಎಂಬಿಬಿಎಸ್‌ಗೆ ಪ್ರವೇಶ ಪಡೆದು ವೈದ್ಯರಾಗಿ ಪದವಿ ಪಡೆಯುತ್ತಾರೆ.
ದೇಶದ ಒಟ್ಟು ವೈದ್ಯರ ಸಂಖ್ಯೆಯನ್ನು ನೋಡಿದರೆ, ದೊಡ್ಡ ಕೊರತೆಯಿದೆ. ಈ ವರ್ಷ 22,70,000 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ ಮತ್ತು ಕೇವಲ 63,000 ಸರಕಾರಿ ಸೀಟುಗಳಿವೆ. ಸ್ಪರ್ಧೆ ಎಷ್ಟು ತೀವ್ರವಾಗಿದೆ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ನೀಟ್ ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತಾರೆ. ಈಗಂತೂ ಪ್ರೌಢ ಶಾಲೆಯಲ್ಲಿರುವಾಗಲೇ ನೀಟ್‌ಗೆ ತಯಾರಿ ಶುರು ಮಾಡುವುದು ಕಂಡು ಬರುತ್ತಿದೆ.
11 ಮತ್ತು 12ನೇ ತರಗತಿಗಳಿಗೆ ಅಧ್ಯಯನ ಮಾಡುವವರು ಜೊತೆಜೊತೆಗೆ ನೀಟ್‌ಗೆ ತಯಾರಿ ನಡೆಸುತ್ತಾರೆ. ಹಾಗಾಗಿ ಆ ಎರಡು ವರ್ಷ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಬಹಳ ಒತ್ತಡ ಇರುತ್ತದೆ. ಹೀಗಿರುವಾಗ, ಅವರಿಗೆ ತೊಂದರೆಯಾಗದ ಹಾಗೆ, ಪರೀಕ್ಷೆಯನ್ನು ಸರಿಯಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವುದು ಯಾರ ಜವಾಬ್ದಾರಿ? ಪರೀಕ್ಷೆಯನ್ನು ನಡೆಸುವುದು ಮಾತ್ರ ಕೆಲಸವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಏಕೆ ವಿಫಲವಾಗಿದೆ?
ಈ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಮೊದಲು ದೃಢಪಡಿಸಿದ್ದು ರಾಜಸ್ಥಾನ ಪೊಲೀಸರು.
ಅಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಕೋಚಿಂಗ್ ಸೆಂಟರ್ ಮಾಲಕರಿಗೆ ಗೆಸ್ ಪೇಪರ್ ರವಾನಿಸಲಾಗಿದೆ ಎಂಬ ಸುದ್ದಿಯಿದೆ. ಅವರು ಅಲ್ಲಿ ವಾಸಿಸುವ ಕೆಲವು ಹುಡುಗಿಯರಿಗೆ ಗೆಸ್ ಪೇಪರ್ ವಿತರಿಸಿದ್ದಾರೆ ಮತ್ತು ಹೆಚ್ಚಿನ ಪ್ರಶ್ನೆಗಳನ್ನು ಅದರಿಂದಲೇ ಕೇಳಲಾಗಿದೆ. ವಾಸ್ತವವಾಗಿ, ನೀಟ್‌ನಲ್ಲಿ ಭೌತಶಾಸ್ತ್ರ ಪರೀಕ್ಷೆ ಗೆಸ್ ಪೇಪರ್‌ನಲ್ಲಿ ಇದ್ದಂತೆಯೇ ಇತ್ತು ಎಂದು ಹೇಳಲಾಗುತ್ತಿದೆ.
ಕಾಮರ್ಸ್, ಬಯಾಲಜಿ ಪೇಪರ್‌ಗಳೂ ನಿಖರವಾಗಿ ಅದೇ ರೀತಿ ಇದ್ದವು ಎನ್ನಲಾಗಿದೆ.
ಆದ್ದರಿಂದ, ಈ ಇಡೀ ಪ್ರಕರಣದಲ್ಲಿ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಗುಂಪು SOG 13 ಜನರನ್ನು ಬಂಧಿಸಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಪ್ರಮುಖ ಕೋಚಿಂಗ್ ಸಂಸ್ಥೆಯ ವೃತ್ತಿ ಸಲಹೆಗಾರರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗುತ್ತಿದೆ.
ಪರೀಕ್ಷೆಗೆ ಎರಡು ದಿನಗಳ ಮೊದಲು ಆಯ್ದ ಕೆಲ ವಿದ್ಯಾರ್ಥಿಗಳಿಗೆ ಗೆಸ್ ಪೇಪರ್ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಗೆಸ್ ಪೇಪರ್ ಥರವೇ ಇದ್ದುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಮತ್ತು ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ.
ರಾಜಸ್ಥಾನ ವಿಶೇಷ ಕಾರ್ಯಾಚರಣೆ ಗುಂಪು ಗೆಸ್ ಪೇಪರ್ ನಲ್ಲಿ 410 ಪ್ರಶ್ನೆಗಳಿವೆ ಎಂದು ಹೇಳುತ್ತಿದೆ ಮತ್ತು 600 ಅಂಕಗಳ 150 ಪ್ರಶ್ನೆಗಳನ್ನು ಅದೇ ಪತ್ರಿಕೆಯಲ್ಲಿದ್ದಂತೆಯೇ ಕೇಳಲಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಅರ್ಹತಾ ಅಗತ್ಯಕ್ಕೆ ಕೇಳಲಾಗಿದ್ದ ಪ್ರಶ್ನೆಗಳು ಗೆಸ್ ಪೇಪರ್‌ನಲ್ಲಿದ್ದವುಗಳೇ ಆಗಿದ್ದವು.
ಗೆಸ್ ಪೇಪರ್ ಪ್ರಶ್ನೆಗಳನ್ನು ಪಡೆದಿದ್ದ ಯಾರಾದರೂ ಸುಲಭವಾಗಿ ನೀಟ್‌ಗೆ ಅರ್ಹತೆ ಪಡೆಯಬಹುದು.
ಪ್ರಶ್ನೆ ಪತ್ರಿಕೆಗಳನ್ನು ವಿವಿಧ ಶಿಕ್ಷಕರು ಸಿದ್ಧಪಡಿಸುತ್ತಾರೆ. ನಂತರ ಅವುಗಳನ್ನು ಡಿಜಿಟಲ್ ಲಾಕರ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಡಿಜಿಟಲ್ ಲಾಕ್ ಮಾಡಲಾಗುತ್ತದೆ.
ಪ್ರಶ್ನೆ ಪತ್ರಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಇರುವ ದೃಢವಾದ ವ್ಯವಸ್ಥೆಯ ಹೊರತಾಗಿಯೂ, 2024ರಲ್ಲಿ ಸೋರಿಕೆ ಆರೋಪಗಳು ಬಂದವು. ಆಗ ವಿಚಾರಣೆ ನಡೆಸಲಾಯಿತು. ಸುಪ್ರೀಂ ಕೋರ್ಟ್ ಪತ್ರಿಕೆ ಸೋರಿಕೆಯಾಗಿದೆ ಎಂದು ಘೋಷಿಸಿತು. ಆದರೆ ಸಂಪೂರ್ಣ ಪ್ರಶ್ನೆ ಪತ್ರಿಕೆಯನ್ನು ರದ್ದುಗೊಳಿಸಿರಲಿಲ್ಲ.
ಅದರ ನಂತರವೂ ಯಾವುದೇ ಪಾಠಗಳನ್ನು ಕಲಿಯಲಾಗಿಲ್ಲ.
ಎರಡು ವರ್ಷಗಳ ನಂತರ, ಈಗ ಇಡೀ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ನಂತರ, ಉತ್ತಮ ಮಟ್ಟದ ಭದ್ರತಾ ವ್ಯವಸ್ಥೆ ಇರುವಾಗಲೂ ಈ ಸೋರಿಕೆ ಹೇಗಾಗುತ್ತದೆ?
ಪರೀಕ್ಷೆಗೆ ಒಂದು ಗಂಟೆ ಅಥವಾ ಅದಕ್ಕಿಂತ ಮೊದಲು ಅವುಗಳನ್ನು ಮುದ್ರಿಸಲಾಗುತ್ತದೆ. ಆ ಸಮಯದಲ್ಲಿನ ಸಮಸ್ಯೆಯೆಂದರೆ, ಹೊರಗುತ್ತಿಗೆ ಪಡೆದ ಸಂಸ್ಥೆಗಳನ್ನು ದೂಷಿಸಲಾಗುತ್ತದೆ.
ಎನ್‌ಟಿಎ ಎಲ್ಲೆಡೆ ನೀಟ್ ಕೇಂದ್ರಗಳನ್ನು ಹೊಂದಿಲ್ಲ. ಆದ್ದರಿಂದ, ಪರೀಕ್ಷೆ ನಡೆಸಲು ಬೇರೆ ಬೇರೆ ಸಂಸ್ಥೆಗಳೊಂದಿಗೆ ಒಪ್ಪಂದವಾಗಿರುತ್ತದೆ.
ಈ ಪರೀಕ್ಷೆಗಳ ಮೂಲಕ ಎನ್‌ಟಿಎ ಬಹಳಷ್ಟು ಹಣವನ್ನು ಸಂಗ್ರಹಿಸುತ್ತದೆ. ಶುಲ್ಕದಿಂದ 3,500 ಕೋಟಿ ರೂ. ಸಂಗ್ರಹ ವಾಗುತ್ತದೆ. ಸೋರಿಕೆ ತಡೆಯಲು ಹಲವು ಬಗೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತದೆ. ಆದರೆ ಮತ್ತೊಮ್ಮೆ ಪತ್ರಿಕೆ ಸೋರಿಕೆಯಾಗಿದೆ. ಇದಕ್ಕೆ ಯಾರು ಹೊಣೆ?
ಕಳೆದ ಬಾರಿ ಹಲವು ಆರೋಪಗಳು ಬಂದವು, ಪ್ರತಿಭಟನೆಗಳು ನಡೆದವು. ಆದರೆ ಯಾರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಯಾರನ್ನು ಹೊಣೆ ಮಾಡಲಾಯಿತು?
ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ 1,563 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಬೇಕಾಯಿತು.
ಸುಪ್ರೀಂ ಕೋರ್ಟ್‌ನ ಒತ್ತಡದ ಮೇರೆಗೆ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮರು ಪರೀಕ್ಷೆಗೆ ಒಳಪಡಿಸಲು ಮತ್ತು ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಇತರ ವಿದ್ಯಾರ್ಥಿಗಳನ್ನು ಮರು ಪರೀಕ್ಷೆಗೆ ಒಳಪಡಿಸಲು ಸರಕಾರ ವ್ಯವಸ್ಥೆ ಮಾಡಿತು.
ಇದೇನೇ ಇದ್ದರೂ, ಒಮ್ಮೆ ಪರೀಕ್ಷೆ ಬರೆದವರಿಗೆ ಮರು ಪರೀಕ್ಷೆ ಬೇಡವಾಗಿರುತ್ತದೆ. ಏಕೆಂದರೆ ಅದಕ್ಕೆ ತುಂಬಾ ತಯಾರಿ ಬೇಕಾಗುತ್ತದೆ.
ಈ ಪರೀಕ್ಷೆಯನ್ನು ಪದೇ ಪದೇ ತೆಗೆದುಕೊಳ್ಳುವುದು ಸುಲಭವಲ್ಲ. ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಹಗಲಿರುಳು ಕೆಲಸ ಮಾಡುತ್ತಾರೆ ಮತ್ತು ಅವರ ಪೋಷಕರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ.
ಖಾಸಗಿ ಕಾಲೇಜಿನಲ್ಲಿ ನೇರವಾಗಿ ಪ್ರವೇಶ ಪಡೆಯಲು, ವರ್ಷಕ್ಕೆ ರೂ. 1ಕೋಟಿಯಿಂದ 1.5 ಕೋಟಿ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ, ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಸುಲಭವಲ್ಲ.
ಆದರೆ ಸರಕಾರ ನಡೆಸುವ ಪ್ರವೇಶ ಪರೀಕ್ಷೆಯ ಕಥೆ ಹೀಗಾಗುತ್ತದೆ.
ಭದ್ರತಾ ವ್ಯವಸ್ಥೆ ಬಗ್ಗೆ ಸರಕಾರ ತುಂಬಾ ಹೇಳಿಕೊಳ್ಳುತ್ತದೆ. ಆದರೂ ಈಗ ಸೋರಿಕೆಯಾಗಿದೆ. ಪರೀಕ್ಷೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸಿದ್ದಾದರೆ, ಅದು ಹೇಗೆ ಸೋರಿಕೆಯಾಯಿತು?
ಒಂದೇ ಸ್ಥಳದಲ್ಲಿ ಅಲ್ಲ, ಹಲವು ಸ್ಥಳಗಳಲ್ಲಿ ಈ ಸೋರಿಕೆ ಆಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ. ಎನ್‌ಟಿಎ ಅಧ್ಯಕ್ಷರಿಂದಲೂ ಯಾವುದೇ ಹೇಳಿಕೆ ಬಂದಿಲ್ಲ.
ಪರೀಕ್ಷೆ ಬರೆದ ಎಷ್ಟೋ ಬಡ ವಿದ್ಯಾರ್ಥಿಗಳು ಈಗ ಚಿಂತೆಗೀಡಾಗುವಂತಾಗಿದೆ. ಇದರಲ್ಲಿ ಮಾನಸಿಕ ಒತ್ತಡ ತುಂಬಾ ಇರುತ್ತದೆ. ಕಳೆದ ಬಾರಿ ಅದು ಎಷ್ಟು ಸ್ಪರ್ಧಾತ್ಮಕವಾಗಿತ್ತು ಎಂದರೆ, ತಮಿಳುನಾಡಿನಲ್ಲಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ವರದಿಗಳಿದ್ದವು.
ರಾಜಸ್ಥಾನ ಪೊಲೀಸರು ಗೆಸ್ ಪೇಪರ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಹೇಳಲಾಗಿದೆ.
ಮೇ 3ರಂದು ಪರೀಕ್ಷೆ ನಡೆಯುವುದಕ್ಕೂ ಮುಂಚೆ ಕೆಲ ದಿನಗಳಿಂದಲೇ ಈ ಗೆಸ್ ಪೇಪರ್ ಸೋರಿಕೆಯಾಗಿತ್ತೆಂಬುದು ಪರೀಕ್ಷೆ ನಡೆಸುವವರಿಗೆ ತಿಳಿಯಲೇ ಇಲ್ಲ. ಹಾಗಾದರೆ, ಇಡೀ ಎನ್‌ಟಿಎ ವ್ಯವಸ್ಥೆ ಏನು ಮಾಡುತ್ತಿದೆ?
ಅವರು ಏನೂ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಅದು ವಿಫಲವಾಗಿದೆ. 22,70,000 ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ದ್ರೋಹ ಮಾಡಿದಂತಾಗಿದೆ.
ವಿದ್ಯಾರ್ಥಿಗಳು ಈ ಪರೀಕ್ಷೆಗಳ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಳುಗೆಡವಲಾಗಿದೆ.
ಈಗ ಮರು ಪರೀಕ್ಷೆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲು ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ನೋಡಲಾಗುತ್ತಿದೆ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ಹೊಣೆಗಾರಿಕೆಯನ್ನು ಯಾರಾದರೂ ಹೊರಬೇಕಲ್ಲವೆ? ತಪ್ಪಿತಸ್ಥರನ್ನು ಹೊಣೆ ಮಾಡದೇ ಹೋದರೆ, ತಲೆದಂಡವಾಗದೇ ಹೋದರೆ, ಇಂಥ ಅಕ್ರಮಗಳು ಖಂಡಿತ ನಿಲ್ಲುವುದಿಲ್ಲ. ಇದು ತುಂಬಾ ಗಂಭೀರ ಅಪರಾಧ. ಏಕೆಂದರೆ ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಡನೆ ಸರಕಾರ ಆಟವಾಡುತ್ತಿದೆ.
ಇದು ಕೊನೆಯಾಗಲೇಬೇಕು.