ವಿಜಯನಗರ ಕ್ಯಾಂಪ್ ಶಾಲೆ ತಾತ್ಕಾಲಿಕ ಸ್ಥಳಾಂತರ
ರಾಯಚೂರು : ಇಲ್ಲಿನ ವಿಜಯನಗರ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಸಮೀಪದ ಹುಣಸೆಹಾಳ ಹುಡಾ ಗ್ರಾಮದ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.
21 ಮಕ್ಕಳಿರುವ ವಿಜಯನಗರ ಕ್ಯಾಂಪ್ ಶಾಲೆಯಲ್ಲಿ1ರಿಂದ 5ನೇ ತರಗತಿ ಇದ್ದು ಇಬ್ಬರು ಖಾಯಂ ಶಿಕ್ಷಕರಿದ್ದಾರೆ. ಎರಡು ಕೊಠಡಿಗಳಿದ್ದರೂ ಶಿಥಿಲಾವಸ್ಥೆಯಲ್ಲಿರುವುದರಿಂದ ಜೀವ ಭಯದಿಂದ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಇನ್ನು ಕೆಲವು ವಿದ್ಯಾರ್ಥಿಗಳು ಶಾಲೆಯ ವರಾಂಡದಲ್ಲಿ ಕುಳಿತು ಪಾಠ ಕೇಳುತ್ತಿದ್ದರು.
ಈ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಜೂನ್ 23ರಂದು ‘ಶಿಥಿಲಾವಸ್ಥೆಯಲ್ಲಿರುವ ವಿಜಯನಗರ ಕ್ಯಾಂಪ್ ಶಾಲೆ, ಜೀವ ಭಯದಲ್ಲಿ ಬಯಲಲ್ಲೇ ಬೋಧನೆ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ ವೈಷ್ಣವಿ ಸ್ಪಂದಿಸಿ ಶಾಲೆಯ ವಾಸ್ತಾವಾಂಶವನ್ನು ಪರಿಶೀಲಿಸಿ ನಿಯಮಾನುಸಾರ ತಕ್ಷಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಮುಖ್ಯ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಡಿಡಿಪಿಐಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಸಿಆರ್‌ಪಿ ಅವರೊಂದಿಗೆ ಭೇಟಿ ನೀಡಿ ಪಾಲಕರೊಂದಿಗೆ ತುರ್ತು ಸಭೆ ನಡೆಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಹಿನ್ನೆಲ್ಲೆ ವಿಜಯನಗರ ಕ್ಯಾಂಪ್ ಶಾಲೆಯನ್ನು ತಾತ್ಕಾಲಿಕವಾಗಿ 1ಕಿ.ಮೀ ದೂರದ ಹುಣಸೆಹಾಳಹುಡಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿದ್ದಾರೆ.
ಅಲ್ಲದೇ ಕೆಎಸ್‌ಆರ್‌ಟಿಸಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ವಿಜಯನಗರ ಕ್ಯಾಂಪ್ ಶಾಲೆಯ ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಪ್ರತಿದಿನ ಮಕ್ಕಳು ಬಸ್ ನಲ್ಲಿಯೇ ಶಾಲೆಗೆ ಹೋಗುತ್ತಿದ್ದಾರೆ.
ವಿಜಯನಗರ ಕ್ಯಾಂಪ್ ಶಾಲೆಯ ತರಗತಿಯ ಸುಗಮವಾಗಿ ಪುನರಾರಾಂಭ ಮಾಡುವವರೆಗೆ ಹುಣಸೆಹಾಳ ಹುಡಾ ಶಾಲೆಗೆ ಸ್ಥಳಾಂತರ ಮಾಡಿದ ಬಳಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ಜಿಪಂ ಸಿಇಒಗೆ ಪತ್ರ ಬರೆದು ಸಿಎಸ್‌ಆರ್ ಅನುದಾನದಲ್ಲಿ ನೆರವು ಕೋರಿದ ಹಿನ್ನೆಲೆ ಟಿಐಡಿಇ ಸಂಸ್ಥೆಯ ಸಿಎಸ್‌ಆರ್ ನಿಧಿಯಲ್ಲಿ ಕಂಟೇನರ್ ಕೊಠಡಿಗಳನ್ನು ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಶೀಘ್ರವೇ ಕೆಲಸಗಳು ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯನಗರ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಸ್ಕಿಹಾಳ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವದರಿಂದ ಕಂಟೇನರ್ ಕೊಠಡಿಗಳ ನಿರ್ಮಾಣಕ್ಕೆ ಜಿ.ಪಂ ಸಿಇಒ ಅವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹುಣಸೆಹಾಳ ಹುಡಾ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ.
-ಮಲ್ಲಿಕಾರ್ಜುನ
ಡಿಡಿಪಿಐ(ಆಡಳಿತ) ಶಾಲಾ ಶಿಕ್ಷಣ ಇಲಾಖೆ