ಬರದ ಬಿಸಿಗೆ ಕಮರಿದ ಸೀತಾಫಲ!
ಗುಡ್ಡಗಾಡಿನಲ್ಲಿ ಹಣ್ಣುಗಳ ಇಳುವರಿ ಕುಸಿತ; ಗಿಡದಲ್ಲೇ ಬಾಡುತ್ತಿರುವ ಹಣ್ಣು !
ಯಾದಗಿರಿ: ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆ ಹಾಗೂ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಹಣ್ಣುಗಳಿಗೂ ಬರದ ಬಿಸಿ ತಟ್ಟಿದೆ.
ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಸೀತಾಫಲ ಹಣ್ಣುಗಳು ಈ ಬಾರಿ ಗಿಡದಲ್ಲೇ ಕಮರಿ ಹೋಗುತ್ತಿದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳ ಕೊರತೆ ಎದುರಾಗಿದೆ.
ಜಿಲ್ಲೆಯ ಅಲ್ಲಿಪುರ, ಬಾಚವಾರ, ಯರಗೋಳ, ಆಶನಾಳ, ತಾತಳಗೇರಾ, ಮಗ್ದಂಪುರ ಸೇರಿದಂತೆ ಹಲವು ಗುಡ್ಡಗಾಡು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಹಣ್ಣುಗಳು ರುಚಿ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಆದರೆ ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಗುಡ್ಡ ಪ್ರದೇಶಗಳಲ್ಲಿ ತೇವಾಂಶದ ಕೊರತೆ ಉಂಟಾಗಿದ್ದು, ಸೀತಾಫಲ ಗಿಡಗಳಲ್ಲಿ ಕಾಯಿ ಬಿಟ್ಟಿದ್ದರೂ, ಮಳೆಯಿಲ್ಲದೆ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಬೆಳವಣಿಗೆಯ ಹಂತದಲ್ಲಿಯೇ ಕಾಯಿಗಳು ಕಮರಿ ಹೋಗುತ್ತಿವೆ.
ಇದರ ಪರಿಣಾಮವಾಗಿ ಪ್ರತಿ ವರ್ಷ ಹೇರಳವಾಗಿ ದೊರೆಯುತ್ತಿದ್ದ ಸೀತಾಫಲ ಈ ಬಾರಿ ಅಲ್ಪ ಪ್ರಮಾಣದಲ್ಲಿ ಮಾತ್ರ ಲಭ್ಯವಾಗುತ್ತಿದ್ದು, ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಹತ್ತಿ, ಭತ್ತ ಹಾಗೂ ತೊಗರಿ ಸೇರಿದಂತೆ ಕೃಷಿ ಬೆಳೆಗಳ ಮೇಲೂ ಬರದ ಪರಿಣಾಮ ಬೀರಿದ್ದು, ನೈಸರ್ಗಿಕವಾಗಿ ಬೆಳೆಯುವ ಸೀತಾಫಲಕ್ಕೂ ಮಳೆಯ ಕೊರತೆ ಹೊಡೆತ ನೀಡಿದೆ.