ರಾಯಚೂರು, ಅ.5: ಜಿಲ್ಲೆಯಲ್ಲೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಫಾರಂ-7 ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರಾಯಚೂರು ವಿಧಾನಸಭಾ ಕ್ಷೇತ್ರದ ಮೂರು ಬೂತ್‌ಗಳಲ್ಲಿ ಒಟ್ಟು 340 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳಲ್ಲಿ ಉಲ್ಲೇಖಿಸಿರುವ ಮತದಾರರು ಸ್ಥಳದಲ್ಲೇ ವಾಸವಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಫಾರಂ 7 ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಕಟ್ಟಡ ಕಾರ್ಮಿಕರ, ದಿನಗೂಲಿ ಕೆಲಸ ಕಾರ್ಮಿಕರ ಹೆಸರಿನಲ್ಲಿ ಅರ್ಜಿ ಹಾಕಿ ಮುಸ್ಲಿಮ್ ಮತದಾರರ ಹೆಸರನ್ನು ಡಿಲೀಟ್ ಮಾಡಲು ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ.

ರಾಯಚೂರು ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 13ರಲ್ಲಿ 50, ಭಾಗ ಸಂಖ್ಯೆ 14ರಲ್ಲಿ 100 ಹಾಗೂ ಭಾಗ ಸಂಖ್ಯೆ 16ರಲ್ಲಿ 190 ಅರ್ಜಿ ಸೇರಿ ಒಟ್ಟು 340 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ.

ಚುನಾವಣಾ ಆಯೋಗದ ಕಚೇರಿಗೆ ಬಂದ ಅರ್ಜಿಗಳನ್ನು ಸೂಪರ್‌ವೈಸರ್‌ಗಳ ಮೂಲಕ ಬಿಎಲ್‌ಒಗಳಿಗೆ ಕಳುಹಿಸಿದಾಗ ಹಲವು ಅಂಶಗಳು ಬೆಳಕಿಗೆ ಬಂದಿವೆ. ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದ ಬಿಎಲ್‌ಒಗಳೇ ಅರ್ಜಿಯಲ್ಲಿ ಉಲ್ಲೇಖಿಸಿರುವ ಮತದಾರರು ಸ್ಥಳದಲ್ಲೇ ವಾಸವಿರುವುದನ್ನು ಗುರುತಿಸಿದ್ದಾರೆ. ಕೆಲವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವ ವಿಷಯವೇ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ.

ಫಾರಂ-7 ಸಲ್ಲಿಸಿರುವವರ ಕುರಿತು ವಿಚಾರಿಸಿದಾಗ ಕೆಲವರು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕಟ್ಟಡ ಮತ್ತು ದಿನಗೂಲಿ ಕಾರ್ಮಿಕರಿಗೆ ಫಾರಂ-7 ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಮತದಾರರೊಬ್ಬರು, ‘ನಾನು ಅರ್ಜಿ ಸಲ್ಲಿಸಿಲ್ಲ. ನನ್ನ ಹೆಸರಿನಲ್ಲಿ ಯಾರೋ ಅರ್ಜಿ ಹಾಕಿರುವುದು ಹೇಗೆ ಎಂಬುದು ಗೊತ್ತಿಲ್ಲ’ ಎಂದು ತಿಳಿಸಿದ್ದಾರೆ.

ಭಾಗ ಸಂಖ್ಯೆ 13ರಲ್ಲಿ ಅನ್ವರ್ ಎಂಬ ಮತದಾರರ ಹೆಸರು ಅಳಿಸುವಂತೆ ಅಮಿತ್ ಕುಮಾರ ಎಂಬುವವರು ಫಾರಂ-7 ಸಲ್ಲಿಸಿದ್ದು, ‘ಗೈರು ಹಾಜರಿ’ ಎಂದು ಕಾರಣ ನೀಡಲಾಗಿದೆ. ಆದರೆ ಅನ್ವರ್ ಸ್ಥಳದಲ್ಲೇ ಹಾಜರಿದ್ದು, ಬಿಎಲ್‌ಒ ಅವರನ್ನು ಭೇಟಿ ಮಾಡಿ ವಿಚಾರಿಸಿದ್ದಾರೆ. ಅರ್ಜಿ ಸಲ್ಲಿಸಿದ ಅಮಿತ್ ಕುಮಾರ ಯಾರು ಎಂಬುದು ಗೊತ್ತಾಗಿಲ್ಲ ಎಂದು ಬಿಎಲ್‌ಒ ತಿಳಿಸಿದ್ದಾರೆ.

ಫಾರಂ-7 ಸಲ್ಲಿಸಿದ ತಕ್ಷಣ ಮತದಾರರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆಕ್ಷೇಪಣೆ ಬಂದ ಬಳಿಕ ಮತದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾಗ ಸಂಖ್ಯೆ 13ರ ಬಿಎಲ್‌ಒ ವೀರೇಶ ತಿಳಿಸಿದ್ದಾರೆ.

ನನ್ನ ಬೂತ್ ನಲ್ಲಿ 50 ಫಾರಂ-7 ನಮೂನೆ ಹಾಕಿದ್ದಾರೆ. ಅವರೆಲ್ಲರೂ ಅರ್ಹ ಮತದಾರರಾಗಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಬಳಿಕ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದು ಆಕ್ಷೇಪಣೆಗೆ ಸಲ್ಲಿಸಿದ ಕೆಲವರು ಕಟ್ಟಡ, ದಿನಗೂಲಿ ಕಾರ್ಮಿಕರಿದ್ದು ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕೆಲವರು ತಮ್ಮ ಹೆಸರಿನಿಂದ ಈ ಆಕ್ಷೇಪಣೆ ಹಾಕಿದ ಬಗ್ಗೆ ತಿಳಿದುಬಂದಾಗ ದೂರು ದಾಖಲಾಗುವ ಬಗ್ಗೆ ಭಯಭೀತರಾಗಿದ್ದಾರೆ. ಅನ್ಯರ ಹೆಸರಿನಲ್ಲಿ ಫಾರಂ-7 ಸಲ್ಲಿಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಸೂಪರ್‌ವೈಸರ್ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂರು ಬೂತ್‌ಗಳಲ್ಲಿ 340 ಅರ್ಜಿ :

ಫಾರಂ ನಂಬರ್ 7 ಬಗ್ಗೆ ವಿಚಾರಣೆ ಮಾಡಲು ಸೂಪರ್ ವೈಸರ್ ಮಾರೆಪ್ಪ ಅವರಿಗೆ ಮಾಹಿತಿ ಕೇಳಿದಾಗ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಭಾಗ ಸಂಖ್ಯೆ 16ರಲ್ಲಿ 190, ಭಾಗ ಸಂಖ್ಯೆ 14ರಲ್ಲಿ 100 ಹಾಗೂ ಭಾಗ ಸಂಖ್ಯೆ 13ರಲ್ಲಿ 50 ಸೇರಿ ಒಟ್ಟು 340 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸೂಪರ್‌ವೈಸರ್ ಮಾರೆಪ್ಪ ತಿಳಿಸಿದ್ದಾರೆ. ಆದರೆ ಅರ್ಜಿಗಳಲ್ಲಿ ಉಲ್ಲೇಖಿಸಿರುವ ಬಹುತೇಕ ಮತದಾರರು ತಮ್ಮ ಸ್ಥಳದಲ್ಲೇ ವಾಸವಿರುವುದು ಪರಿಶೀಲನೆಯಲ್ಲಿ ತಿಳಿದುಬಂದಿದೆ.

ಫಾರಂ-7 ಅರ್ಜಿಗಳಲ್ಲಿನ ಮೊಬೈಲ್ ಸಂಖ್ಯೆಗಳು ಒಂದೇ ರೀತಿಯ ಬರವಣಿಗೆಯಲ್ಲಿ, ಒಂದೇ ಪೆನ್‌ನಿಂದ ತುಂಬಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಅರ್ಹ ಮತದಾರರ ವಿರುದ್ಧ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವವರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಫಾರಂ -7 ಕುರಿತು ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ ಅವರನ್ನು ಸಂಪರ್ಕಿಸಿದಾಗ ‘ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಕರ್ತವ್ಯದಲ್ಲಿ ನಿರತನಾಗಿದ್ದು, ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ಅಕ್ರಮ ಫಾರಂ-7 ರದ್ದುಪಡಿಸಲು ಒತ್ತಾಯ :

ರಾಯಚೂರು ನಗರ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಅನಗತ್ಯವಾಗಿ ಹಾಗೂ ಸುಳ್ಳು ಮಾಹಿತಿ ನೀಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಇದು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಧಕ್ಕೆ ತರುವುದಲ್ಲದೆ, ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನವಾಗಿದೆ. ಕೂಡಲೇ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಭಾಗ ಸಂಖ್ಯೆ 13ರಲ್ಲಿ ಸಲ್ಲಿಕೆಯಾಗಿರುವ ಸುಮಾರು 50 ಅರ್ಜಿಗಳ ಪೈಕಿ ಅಮಿತ್ ಕುಮಾರ ಎಂಬ ಅಪರಿಚಿತ ವ್ಯಕ್ತಿ ಅನ್ವರ್ ವಿರುದ್ಧ ಗೈರು ಹಾಜರಿ ಎಂದು ಆಕ್ಷೇಪಣೆ ಸಲ್ಲಿಸಿರುವುದನ್ನು ಎಸ್‌ಡಿಪಿಐ ಮುಖಂಡರು ಉಲ್ಲೇಖಿಸಿದ್ದಾರೆ. ಅನ್ವರ್ ಅವರನ್ನು ಬಿಎಲ್‌ಒ ಬಳಿಗೆ ಕರೆದೊಯ್ದು ವಿಚಾರಿಸಿದಾಗ ಅವರು ನೈಜ ಮತದಾರರು ಎಂಬುದು ದೃಢಪಟ್ಟಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಅಕ್ರಮವಾಗಿ ಫಾರಂ-7 ಸಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮತೀನ್ ಅನ್ಸಾರಿ, ಡಬ್ಲ್ಯೂಸಿ ಸದಸ್ಯ ಮುಶ್ತಾಕ್ ಅಹ್ಮದ್, ಮುಹಮ್ಮದ್ ಅತೀಕ್, ಮೊಹಮ್ಮದ್ ಶಫಿ, ಖಾಜಾ ಮೋಯಿನುದ್ದೀನ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor