ಯಡ್ರಾಮಿ: ಬಿಸಿಲ ಝಳಕ್ಕೆ ಒಣಗಿ ಸೊರಗಿದ್ದ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳು ಇತ್ತೀಚೆಗೆ ಸುರಿದ ಮಳೆಯಿಂದ ಹೊಲಗಳಲ್ಲಿ ಹಸಿರು ಕಾಣಿಸಿಕೊಂಡಿದ್ದರೂ, ಮುಂಗಾರು ವೈಫಲ್ಯದಿಂದ ಉಂಟಾದ ಬೆಳೆ ನಷ್ಟ ರೈತರ ಸಂಕಷ್ಟವನ್ನು ಕಡಿಮೆ ಮಾಡಿಲ್ಲ. ರಾಜ್ಯ ಸರಕಾರ ಅವಳಿ ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಿ ತಿಂಗಳು ಕಳೆದರೂ, ಇದುವರೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರದ ನಯಾ ಪೈಸೆಯೂ ಜಮೆಯಾಗಿಲ್ಲ.

ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ತೊಗರಿ, ಹತ್ತಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಹಾನಿಗೊಳಗಾಗಿವೆ. ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿ ಹಣ ಹೂಡಿದ್ದ ರೈತರು ಇದೀಗ ಸಾಲದ ಒತ್ತಡಕ್ಕೆ ಸಿಲುಕಿದ್ದಾರೆ. ಹಲವೆಡೆ ಬೋರ್ವೆಲ್‌ಗಳು ಬತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ.

ಬೆಳೆ ನಷ್ಟದಿಂದ ರೈತರನ್ನು ಪಾರು ಮಾಡುವ ಉದ್ದೇಶದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಹಾರಕ್ಕೂ ರೈತರು ಕಾಯುವಂತಾಗಿದೆ. ಮಳೆ ಕೊರತೆಯಿಂದ ಬಿತ್ತನೆ ಪೂರ್ವದಲ್ಲೇ ಬೆಳೆ ವಿಫಲವಾದ ಪ್ರಕರಣಗಳಿಗೆ ನಿಯಮಾನುಸಾರ ಪರಿಹಾರ ದೊರೆಯಬೇಕಿದ್ದು, ಜಿಲ್ಲಾಡಳಿತದಿಂದ ಅಗತ್ಯ ಅಂದಾಜು ಹಾಗೂ ವರದಿಗಳನ್ನು ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ವಿಮಾ ಸಂಸ್ಥೆಯಿಂದ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ.

ಇನ್ನೊಂದೆಡೆ ರಾಜ್ಯ ಸರಕಾರ ಘೋಷಿಸಿರುವ ಮೊದಲ ಹಂತದ 2,500 ರೂ. ಬರ ಪರಿಹಾರವೂ ರೈತರ ಖಾತೆಗೆ ಸೇರಿಲ್ಲ. ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಈ ಹಣ ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಪರಿಹಾರದ ವಿಳಂಬ ನಿರಾಸೆ ಮೂಡಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡಗಳು ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದರೂ, ತೀವ್ರ ಮಳೆ ಕೊರತೆಯಿಂದ ಬಳಲುತ್ತಿರುವ ಯಡ್ರಾಮಿ-ಜೇವರ್ಗಿ ಅವಳಿ ತಾಲೂಕುಗಳಿಗೆ ಕೇಂದ್ರ ತಂಡ ಭೇಟಿ ನೀಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆ ಕೈಕೊಟ್ಟು ಹೊಲದಲ್ಲೇ ಬೀಜ ಹಾಳಾಗಿದೆ. ಸಾಲ-ಸೋಲ ಮಾಡಿ ಕೃಷಿ ಮಾಡುತ್ತಿದ್ದೇವೆ. ಬರ ಘೋಷಣೆ ಮಾಡಿ ತಿಂಗಳು ಕಳೆದರೂ, ನಮ್ಮ ಖಾತೆಗೆ ಒಂದು ರೂಪಾಯಿಯೂ ಬಂದಿಲ್ಲ. ವಿಮೆ ಹಣವೂ ಇಲ್ಲ, ಸರಕಾರದ ಪರಿಹಾರವೂ ಇಲ್ಲ, ಕೇಂದ್ರ ಬರ ಅಧ್ಯಯನ ತಂಡವೂ ನಮ್ಮ ತಾಲೂಕು ಕಡೆ ಬಂದಿಲ್ಲ. ಜನಪ್ರತಿನಿಧಿಗಳು ಅವಳಿ ತಾಲೂಕುಗಳ ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಪ್ರಯತ್ನ ನಡೆಸಬೇಕು.

<ಸಾಹೇಬಗೌಡ ಬಿ. ದೇಸಾಯಿ,

ಕರವೇ ಕಾರ್ಯಕರ್ತ

ಕೇಂದ್ರ ಬರ ಅಧ್ಯಯನ ತಂಡ ನಮ್ಮ ತಾಲೂಕಿಗೆ ಮಾತ್ರವಲ್ಲ, ಕಲಬುರಗಿ ಜಿಲ್ಲೆಗೂ ಬಂದಿಲ್ಲ. ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತಿದೆ.

<ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ, ಜೇವರ್ಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor