ಪದಕ ಬೇಕು, ಸೌಲಭ್ಯ ನೀಡೆವು! : ಮಂಗಳೂರಿನ ಈಜು ಪ್ರತಿಭೆಗಳ ಭವಿಷ್ಯಕ್ಕೆ ಕೊಳ್ಳಿ
ನಮ್ಮ ಕ್ರೀಡಾಳುಗಳು ಸ್ವಂತ ಪರಿಶ್ರಮದಿಂದ ಪ್ರಶಸ್ತಿ ಗೆದ್ದರೆ, ರಾಜಕಾರಣಿಗಳು ತಾವೇ ಅದಕ್ಕೆ ಕಾರಣ ಎಂಬಂತೆ ಅಭಿನಂದನೆಗಳನ್ನು ಸಲ್ಲಿಸಿ ಉಚಿತ ಪ್ರಚಾರ ಪಡೆಯುತ್ತಾರೆ; ಸಾಧನೆ ಆದ ಬಳಿಕ ಜನಪ್ರಿಯತೆಯನ್ನು ನೆನಪಿನಲ್ಲಿಟ್ಟುಕೊಂಡು ಬಹುಮಾನಗಳನ್ನು ಘೋಷಿಸುತ್ತಾರೆ! ಆದರೆ, ಸ್ವಂತ ಪರಿಶ್ರಮ, ಕುಟುಂಬದವರ ತ್ಯಾಗ ಮತ್ತು ಬೆಂಬಲದಿಂದ ಮೇಲಕ್ಕೇರುವ ಪ್ರತಿಭೆಗಳಿಗೆ ಸರಕಾರದ ಬೆಂಬಲ ಎಷ್ಟಿದೆ? ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದು ಹೆಸರು ಮಾಡಿದ, ಇನ್ನೂ ಮಕ್ಕಳಾಗಿರುವ ಹದಿಹರೆಯದ ಸ್ಥಳೀಯ ಪ್ರತಿಭೆಗಳಿಗೆ ಸರಕಾರ ಅಥವಾ ಸ್ಥಳೀಯಾಡಳಿತದ ಪ್ರೋತ್ಸಾಹ ಎಷ್ಟಿದೆ ಎಂದು ತಿಳಿದುಕೊಳ್ಳಲು ದಕ್ಷಿಣ ಕನ್ನಡದ ಈಜು ಪ್ರತಿಭೆಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಆಡಳಿತದ, ಜನಪ್ರತಿನಿಧಿಗಳ ಅಸಡ್ಡೆಯನ್ನೇ ಉದಾಹರಣೆಯಾಗಿ ನೋಡೋಣ.
ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದಲ್ಲೇ ಮಹಾನಗರ ಪಾಲಿಕೆಯ ಈಜುಕೊಳವಿದೆ. ಹಿಂದೆ ಹಲವಾರು ಅವ್ಯವಸ್ಥೆಗಳ ಆಗರವಾಗಿದ್ದ ಈ ಈಜುಕೊಳವು ಈಗ ಸಾಕಷ್ಟು ಸುಧಾರಿಸಿದರೂ ರಾಷ್ಟ್ರೀಯ ಅಥವಾ ಅಂತರ್ ರಾಷ್ಟ್ರೀಯ ಮಟ್ಟದಲ್ಲೇನೂ ಇಲ್ಲ. ಮೂರು ಈಜು ಕ್ಲಬ್‌ಗಳ ನೂರರಷ್ಟು ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಾರೆ. ಜೊತೆಗೆ ನೂರಾರು ಸಾರ್ವಜನಿಕರೂ ಬರುತ್ತಾರೆ. ಇಂತಹ ಕಿಕ್ಕಿರಿದ ವಾತಾವರಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಮಕ್ಕಳು ತರಬೇತಿ ಪಡೆಯಬೇಕು!
ಹೀಗಿರುತ್ತಾ, ಮಂಗಳೂರಿನ ಬೋಳಾರ ಪರಿಸರದ ಐತಿಹಾಸಿಕ ಕೆರೆಯನ್ನು ಮುಚ್ಚಿ ಮಣ್ಣು ತುಂಬಿದ ಜಾಗದಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ‘ಅಂತರ್‌ರಾಷ್ಟ್ರೀಯ ಗುಣಮಟ್ಟದ’ ಈಜುಕೊಳವನ್ನು ಯುವಜನ ಸಬಲೀಕರಣ ಇಲಾಖೆಯ ಅಡಿಯಲ್ಲಿ 24 ಕೋಟಿ ರೂ. ವೆಚ್ಚದಲ್ಲಿ 2023ರಲ್ಲಿ ಸ್ಥಾಪಿಸಲಾಯಿತು. ಒಪ್ಪಂದದ ಪ್ರಕಾರ ಮೂಲ ನಿರ್ಮಾಣಕಾರರು 2026ರ ತನಕ ಇದನ್ನು ನಿರ್ವಹಣೆ ಮಾಡಬೇಕಾಗಿತ್ತು. ಸ್ಮಾರ್ಟ್ ಸಿಟಿ ನಿಯಮಾನುಸಾರ ಇದು ಸಾರ್ವಜನಿಕರಿಗಾಗಿ ನಿರ್ಮಾಣವಾದ ಸೌಲಭ್ಯ. ಆದರೂ ಈ ಅವಧಿ ಮುಗಿಯಲು ಒಂದು ವರ್ಷ ಇರುವಾಗಲೇ ನಿಯಮಬಾಹಿರವಾಗಿ ಟೆಂಡರ್ ಕರೆದು, ಬೆಂಗಳೂರಿನ ಬಸವನಗುಡಿ ಸ್ವಿಮ್ಮಿಂಗ್ ಕ್ಲಬ್ ಜೊತೆ ಸಂಬಂಧ ಹೊಂದಿದೆ ಎನ್ನಲಾದ ’ವಿ-ವನ್ ಅಕ್ವಾಟಿಕ್ ಸೆಂಟರ್’ ಎಂಬ ಸಂಸ್ಥೆಗೆ ನಿರ್ವಹಣೆಯ ಗುತ್ತಿಗೆ ನೀಡಲಾಯಿತು. ಅಂದರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾದ ಸೌಲಭ್ಯವೊಂದನ್ನು ತನ್ನ ಮರ್ಜಿಗೆ ಅನುಗುಣವಾಗಿ ನಡೆಸುವ ಅಧಿಕಾರವನ್ನು ಖಾಸಗಿ ಸಂಸ್ಥೆಗೆ ತಟ್ಟೆಯಲ್ಲಿಟ್ಟು ಕೊಡಲಾಯಿತು!
ಏನಿದ್ದರೂ, ಮಹಾನಗರ ಪಾಲಿಕೆಯ ಈಜುಕೊಳಕ್ಕಿಂತ ಉತ್ತಮ ಸೌಲಭ್ಯ ಹೊಂದಿರುವ ಎಮ್ಮೆಕೆರೆ ಈಜುಕೊಳಕ್ಕೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ ಮಕ್ಕಳು ಸಹಜವಾಗಿಯೇ ಸ್ಥಳಾಂತರಗೊಂಡರು. ಆದರೆ, ಇಲ್ಲಿ ಪದಕ ವಿಜೇತರಿಗೆ ಯಾವುದೇ ರಿಯಾಯಿತಿ ನೀಡಲಾಗುತ್ತಿಲ್ಲ. ಪ್ರತಿಯೊಬ್ಬರಿಂದ ಮಾಸಿಕ 4,000 ರೂ.ಗಳನ್ನು ಪಡೆಯಲಾಗುತ್ತಿದೆ. ಅಷ್ಟೇ ಅಲ್ಲದೆ, ಹೊಸ ಆಡಳಿತವು ರೂಪಿಸಿರುವ ನಿಯಮಾವಳಿಗಳೂ ಈ ಎಳೆಯ ಪ್ರತಿಭೆಗಳಿಗೆ ಮಾರಕವಾಗಿವೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ತರಬೇತಿ ನೀಡಿ ರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಅವರ ವೈಯಕ್ತಿಕ ಕೋಚ್ ಗಳಿಗೆ ಮಕ್ಕಳ ಜೊತೆ ಈಜುಕೊಳಕ್ಕೆ ಪ್ರವೇಶವಿಲ್ಲ! ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ವೈಯಕ್ತಿಕ ಗಮನ ನೀಡುವ ಕೋಚ್ ಗಳು ಎಷ್ಟು ಅಗತ್ಯ ಎಂಬುದು ಕ್ರೀಡಾಪ್ರೇಮಿಗಳಿಗೆ ಗೊತ್ತು. ಆದರೆ ಈ ಖಾಸಗಿ ಸಂಸ್ಥೆಗಾಗಲಿ, ಅಧಿಕಾರಿಗಳಿಗಾಗಲಿ ಇದು ಮಹತ್ವದ್ದು ಎನಿಸಿಲ್ಲ. ಇಲ್ಲದಿದ್ದರೆ, ಪದಕ ವಿಜೇತ ಹಾಗೂ ಉತ್ತಮ ಭವಿಷ್ಯವಿರುವ ಎಳೆಯ ಪ್ರತಿಭೆಗಳಿಗಾದರೂ ವಿನಾಯಿತಿ ನೀಡಬಾರದೇ?
ಇನ್ನೊಂದು ಅನಾನುಕೂಲಕರ ವಿಷಯವೆಂದರೆ ಸಮಯದ ನಿಗದಿ. ಮಹಾನಗರ ಪಾಲಿಕೆ ಈಜುಕೊಳದಲ್ಲಿ ಬೆಳಗ್ಗೆ 5:00 - 6:00 ಮತ್ತು ರಾತ್ರಿ 7:45 - 9:30 ಎಂದು ಸಮಯ ನಿಗದಿಪಡಿಸಲಾಗಿದೆ. ಮಂಗಳೂರಿನ ವಿಭಿನ್ನ ಭಾಗಗಳಿಂದ ಬರುವ ಮಕ್ಕಳು ಬೆಳಗ್ಗೆ 5 ಗಂಟೆಗೆ ತಲುಪಬೇಕೆಂದರೆ ಕನಿಷ್ಠ 4:00ಕ್ಕಾದರೂ ಏಳಬೇಕು. ಇತ್ತ ರಾತ್ರಿ ತರಬೇತಿ ಮುಗಿಸಿ ಮನೆ ತಲುಪುವಾಗ 11 ಗಂಟೆಯಾಗುತ್ತದೆ. ಸ್ನಾನ, ಊಟ ಮುಗಿಸಿ ಮಲಗಲು ಸಿಗುವ ಸಮಯವಾದರೂ ಎಷ್ಟು? ಜೊತೆಗೆ ಹಗಲಿನಲ್ಲಿ ಮಕ್ಕಳು ಶಾಲೆ-ಕಾಲೇಜುಗಳಿಗೆ, ಹೆತ್ತವರು ಉದ್ಯೋಗಗಳಿಗೆ ಹೋಗಬೇಕಾದ ಅನಿವಾರ್ಯವಿದೆ.
ಈ ನಿಯಮಗಳನ್ನು ಸಡಿಲಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಕ ಗೆದ್ದ ಎಳೆಯ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಅವರ ಕೋಚ್‌ಗಳಿಗೆ ಅವಕಾಶ ಕಲ್ಪಿಸಿ, ಸಮಯವನ್ನು ಸರಿಪಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಎಮ್ಮೆಕೆರೆ ಈಜುಕೊಳದ ಆಡಳಿತ ಸ್ಪಂದಿಸಿಲ್ಲ. ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಯತೀಶ್ ಬೈಕಂಪಾಡಿ ನೇತೃತ್ವದಲ್ಲಿ ಈ ಕುರಿತು ಮನವಿ ಮಾಡದ ಜನಪ್ರತಿನಿಧಿಗಳಿಲ್ಲ, ಅಧಿಕಾರಿಗಳಿಲ್ಲ. ಆದರೂ ಯಾರೊಬ್ಬರೂ ಸೂಕ್ತ ಸ್ಪಂದನ ನೀಡಿಲ್ಲ ಎನ್ನುತ್ತಾರೆ ಅಸೋಸಿಯೇಶನ್ ಕಾರ್ಯದರ್ಶಿ ಮಹೇಶ್ ಕುಮಾರ್.
ಇದಕ್ಕಿಂತಲೂ ವಿಶೇಷ ಎಂದರೆ, ಸರಕಾರದ ಆದೇಶವನ್ನೇ ಅಧಿಕಾರಿಗಳು ಪಾಲಿಸದಿರುವುದು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇತ್ತೀಚೆಗೆ ನಿಯಮ 75ರ ಅಡಿಯಲ್ಲಿ ನಿರ್ದಿಷ್ಟವಾಗಿ ಎಮ್ಮೆಕೆರೆ ಈಜುಕೊಳದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತ ಈಜುಗಾರರಿಗೆ ಸಂಜೆ 6ರಿಂದ ರಾತ್ರಿ 9ರ ತನಕ ಉಚಿತವಾಗಿ ಅವಕಾಶ ನೀಡಬೇಕೆಂಬ ಅಸೋಸಿಯೇಶನ್ ಬೇಡಿಕೆಯ ಕುರಿತು ಗಮನ ಸೆಳೆಯುವ ಸೂಚನೆ ನೀಡಿದ್ದರು (ಪ್ರಶ್ನೆ: 111). ಅದಕ್ಕೆ ಸ್ವತಃ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಲಿಖಿತ ಉತ್ತರ ನೀಡಿ, ಸ್ಪರ್ಧಾ ಈಜುಕೊಳದಲ್ಲಿ ಕ್ರೀಡಾಪಟುಗಳಿಗೆ ಮಾಸಿಕ 2,000 ರೂ. ನಿಗದಿ ಮಾಡಿ, ಬೆಳಗ್ಗೆ 5ರಿಂದ 9:45 (ನಾಲ್ಕು ಗಂಟೆ 45 ನಿಮಿಷ) ಮತ್ತು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಸಾಧಕರಿಗೆ ಮಾಸಿಕ 1,000 ರೂ. ನಿಗದಿ ಮಾಡಿ, ಅಪರಾಹ್ನ 3ರಿಂದ ರಾತ್ರಿ 9:45 (ಐದು ಗಂಟೆ 45 ನಿಮಿಷ) ಸಮಯ ನಿಗದಿ ಮಾಡಿ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದರು. ವಾಸ್ತವ ಎಂದರೆ, ಇದನ್ನು ಪಾಲನೆ ಮಾಡಲಾಗುತ್ತಿಲ್ಲ.
ಹೀಗಾಗಿ, ಎಮ್ಮೆಕೆರೆ ಈಜುಕೊಳದಲ್ಲಿ ವಿಧಿಸಲಾಗಿರುವ ಕೋಚ್‌ಗಳಿಗೆ ಪ್ರವೇಶ ನಿರಾಕರಣೆಯಂತ ಅಸಂಬದ್ಧ ನಿರ್ಬಂಧಗಳ ವಿರುದ್ಧ ಹಾಗೂ ಉದಯೋನ್ಮುಖ ಕ್ರೀಡಾಪಟುಗಳ ಭವಿಷ್ಯದ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಶನ್ ಇದೀಗ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (.. ಘೆಟ 8251/2026) ಸಲ್ಲಿಸಿದೆ.
ನಮ್ಮ ಸ್ಥಳೀಯ ಎಳೆಯ ಪ್ರತಿಭೆಗಳ ಸಾಮರ್ಥ್ಯ ಎಂತಹದ್ದು ಎಂಬುದಕ್ಕೆ- ಸೂಕ್ತ ಸೌಲಭ್ಯಗಳಿಲ್ಲದಿದ್ದರೂ- ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ತಂದ ಫಲಿತಾಂಶಗಳೇ ಸಾಕ್ಷಿ. ಪುಣೆಯಲ್ಲಿ 2026ರ ಸೆ.29ರಿಂದ ಅಕ್ಟೋಬರ್ 2ರವರೆಗೆ ನಡೆದ 6ನೇ ರಾಷ್ಟ್ರಮಟ್ಟದ ಫಿನ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳಾ ಈಜು ಕ್ಲಬ್‌ನ ಈಜುಗಾರರು ಅದ್ಭುತ ಸಾಧನೆ ಮಾಡಿದ್ದಾರೆ. ಸಂತ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಾಫಿ ಅಬ್ದುಲ್ ಹಕೀಂ, ಬಾಲಕರ ಜೂನಿಯರ್-ಬಿ ವಿಭಾಗದ 50 ಮೀಟರ್ ಬೈಫಿನ್ಸ್ ಸ್ಪರ್ಧೆಯಲ್ಲಿ 21.85 ಸೆಕೆಂಡುಗಳಲ್ಲಿ ಗುರಿ ತಲುಪಿ ’ಹೊಸ ಕೂಟ ದಾಖಲೆ’ಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅವರು ಎರಡು ರಿಲೇ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ 400 ಮೀಟರ್ ಬೈಫಿನ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಅಂತೆಯೇ, ಸೀನಿಯರ್-ಎ ವಿಭಾಗದಲ್ಲಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಧನ್ವಿತ್ 50 ಮೀ. ಹಾಗೂ 100 ಮೀ. ಬೈಫಿನ್ಸ್‌ನಲ್ಲಿ ಎರಡು ಚಿನ್ನ ಮತ್ತು 200 ಮೀ.ನಲ್ಲಿ ಬೆಳ್ಳಿ ಪದಕ ಪಡೆದರೆ, ಜೂನಿಯರ್-ಬಿ ವಿಭಾಗದಲ್ಲಿ ಸಂತ ಅಲೋಶಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂರ್ವಿಕಾ ಎಂ. ರಿಲೇಯಲ್ಲಿ ಚಿನ್ನ, 400 ಮೀ. ಬೈಫಿನ್ಸ್‌ನಲ್ಲಿ ಬೆಳ್ಳಿ ಹಾಗೂ 200 ಮೀ. ಸರ್ಫೇಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಹೀಗಿರುವಾಗ, ನಮಗೆ ಪದಕ ಬೇಕು, ಸೌಲಭ್ಯ ನೀಡೆವು ಎಂದು ನಮ್ಮ ಜಿಲ್ಲೆಯ ಈಜು ಪ್ರತಿಭೆಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದೇವೆಯೇ ನಾವು ಎಂಬ ಪ್ರಶ್ನೆಯನ್ನು ಕ್ರೀಡಾಸಕ್ತಿ ಇರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಜಿಲ್ಲೆಯ ಶಾಸಕರು ಕೇಳಿಕೊಳ್ಳಬೇಕು.
ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ ಸರಕಾರಿ ಸೌಲಭ್ಯಗಳನ್ನು ಖಾಸಗಿಯವರ ಪಾಲು ಮಾಡಿ, ಜಿಲ್ಲೆಯ ಪ್ರತಿಭಾವಂತ ಎಳೆಯ ಪ್ರತಿಭೆಗಳಿಗೆ ಕಿಂಚಿತ್ತೂ ಪ್ರೋತ್ಸಾಹ ನೀಡದೆ ಅಡಚಣೆ ಒಡ್ಡುತ್ತಿರುವುದಕ್ಕೆ ಏನೆನ್ನಬೇಕು? ಇಂತಹದೊಂದು ಸಣ್ಣ ಸಮಸ್ಯೆ ಕೋರ್ಟಿನ ಮೆಟ್ಟಿಲೇರಲು ಕಾರಣರಾದ ಅಧಿಕಾರಿಗಳ ಹಿತಾಸಕ್ತಿಯಾದರೂ ಏನು? ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕಗಳು ಬರುತ್ತಿಲ್ಲವೆಂದು ಅಲವತ್ತುಕೊಳ್ಳುವ ನಾವು ನಾಚಿಕೆಪಡಬೇಕಾದ ವಿಷಯ ಇದು! ಇದು ಕೇವಲ ಒಂದು ನಗರ ಅಥವಾ ಜಿಲ್ಲೆಯ ಸಮಸ್ಯೆಯಲ್ಲ; ಇಡೀ ದೇಶದಲ್ಲಿ ಕ್ರೀಡಾ ಪ್ರತಿಭೆಗಳು ಚಿಗುರೊಡೆಯುವುದಕ್ಕೆ ಅಡ್ಡಿಯಾಗುತ್ತಿರುವ ಖಾಸಗೀಕರಣ ಹಾಗೂ ಆಡಳಿತಶಾಹಿ ವ್ಯವಸ್ಥೆಯ ಜ್ವಲಂತ ಉದಾಹರಣೆ.