ನಿಜವಾದ ಸಂಪುಟ ಸಂಕಟ ಯಾರಿಗೆ?

Update: 2026-07-20 10:24 IST

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೆ ಎರಡು ತಿಂಗಳಾಗುತ್ತಿದೆ. ಈಗ ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ಯಾಗಬಹುದು. ಆದರೆ ತಡ ಮಾಡುತ್ತಿರುವುದರಿಂದ ಸಮಸ್ಯೆಗಳು, ಗೊಂದಲಗಳು ಹೆಚ್ಚಾಗುತ್ತಲೇ ಇವೆ. ಹೀಗೇಕಾಗುತ್ತಿದೆ ಎಂದರೆ ಗೊಂದಲ ಪರಿಹರಿಸಬೇಕಾದವರೇ ಗೊಂದಲಕ್ಕೊಳಗಾಗಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದವರೇ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಮೇಲುನೋಟಕ್ಕೆ ಮಂತ್ರಿ ಆಗಬೇಕು ಎಂದುಕೊಂಡವರು ಅಥವಾ ಮುಖ್ಯಮಂತ್ರಿ ಸಂಕಟಕ್ಕೆ ಸಿಲುಕಿದ್ದಾರೆ ಎನಿಸುತ್ತದೆಯಾದರೂ ನಿಜವಾದ ಪೀಕಲಾಟ ಅನುಭವಿಸುತ್ತಿರುವುದು ಹೈಕಮಾಂಡ್ ನಾಯಕರು.

2028ರ ಚುನಾವಣೆ ದೃಷ್ಟಿಯಿಂದ ಯಾರನ್ನೆಲ್ಲಾ ಮಂತ್ರಿ ಮಾಡಬೇಕು? ಜಾತಿ ಸಮೀಕರಣ ಹೇಗಿರಬೇಕು? ಪ್ರದೇಶವಾರು ಪ್ರಾತಿನಿಧ್ಯ ಹೇಗಿರಬೇಕು? ಎಂಬ ಬಗ್ಗೆ ಹೈಕಮಾಂಡ್ ನಾಯಕರು ಅವರದೇ ಆದ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಅದು ಸುನಿಲ್ ಕನಗೋಳು ತಂಡದ ಮೂಲಕ ಎನ್ನಲಾಗುತ್ತಿದೆ. ಇದಲ್ಲದೆ ರಾಜ್ಯ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದಿದ್ದಾರೆ. ಯಾರನ್ನು ಮಂತ್ರಿ ಮಾಡಬೇಕು ಎಂಬ ಪಟ್ಟಿಯನ್ನು ಪಡೆದಿದ್ದಾರೆ. ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ತಮ್ಮ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ದಾರೆ. ಯಾರ ಹೆಸರನ್ನೂ ಸೂಚಿಸಿಲ್ಲ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.

ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಮಾಜಿ ಪ್ರಧಾನಿ

ಎಚ್.ಡಿ. ದೇವೇಗೌಡ ರೀತಿ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ಜಿಲ್ಲಾ

ರಾಜಕೀಯವನ್ನು ಬಿಟ್ಟುಕೊಡು ವವರಲ್ಲ. ಯಾವುದೇ ವಿಷಯವಿರಲಿ, ಕಲಬುರಗಿ ಜಿಲ್ಲೆಗೆ ಜಾಸ್ತಿ ಸಿಗಬೇಕು ಎನ್ನುವುದು ಅವರ ಪ್ರಥಮ ಆದ್ಯತೆ. ಸಂಪುಟದಲ್ಲಿ ಈಗಾಗಲೇ ಕಲಬುರಗಿ ಜಿಲ್ಲೆಯಿಂದ ಇಬ್ಬರು ಸಚಿವರಿದ್ದರೂ ಮತ್ತೊಬ್ಬರು ಬೇಕು ಎನ್ನುವುದು ಸದ್ಯದ ಅವರ ಬೇಡಿ.ಕೆ.ಯಂತೆ.

ಗುಲ್ಬರ್ಗಾ ಉತ್ತರ ಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಅವರನ್ನು ಮಂತ್ರಿ ಮಾಡಿದರೆ ನಫಿಸಾ ಫಝಲ್ ನಂತರ, ಬಹಳ ವರ್ಷಗಳ ಬಳಿಕ ಮುಸ್ಲಿಮರಲ್ಲಿ ಮಹಿಳೆಯರಿಗೆ ಅವಕಾಶ ಕೊಟ್ಟಂತಾಗುತ್ತದೆ. ಹೈದರಾಬಾದ್ ಕರ್ನಾಟಕಕ್ಕೂ ಮಣೆ ಹಾಕಿದಂತಾಗುತ್ತದೆ ಎನ್ನುವ ವಾದದ ಮೇಲೆ ಕನೀಝ್ ಫಾತಿಮಾ ಹೆಸರನ್ನು ಮುನ್ನೆಲೆಗೆ ತರಲಾಗಿದೆ.

ಇಲ್ಲಿ ಈ ರೀತಿ ಕೊಟ್ಟರೆ ಬೆಳಗಾವಿಯಲ್ಲೂ ಮೂರು ಸ್ಥಾನಗಳನ್ನು ಕೊಡಬೇಕಾಗುತ್ತದೆ. ಲಕ್ಷ್ಮಣ ಸವದಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರೂ ಲಿಂಗಾಯತ ಸಮುದಾಯದವರೇ ಆಗಿರುವುದು ಇನ್ನೊಂದು ಸಮಸ್ಯೆ. ಒಂದೇ ಜಿಲ್ಲೆಯಲ್ಲಿ ಒಂದೇ ಸಮುದಾಯದ (ಉಪ ಪಂಗಡಗಳು ಬೇರೆ) ಇಬ್ಬರಿಗೆ ಅವಕಾಶ ಮಾಡಿ.ಕೆ.ೂಟ್ಟರೆ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಎಂ. ಕೃಷ್ಣಪ್ಪ ಅವರನ್ನು ಪರಿಗಣಿಸಬೇಕಾಗುತ್ತದೆ. ಅವರ ಒತ್ತಡವೂ ಜಾಸ್ತಿ ಇದೆ. ಇಂಥ ಹತ್ತಾರು ಬಿಕ್ಕಟ್ಟುಗಳಿವೆ.

ಬದಲಾದ ರಾಹುಲ್ ನಿಲುವು!

ರಾಹುಲ್ ಗಾಂಧಿ ಬದಲಾಗಿದ್ದಾರೆ. ಮೊದಲಾಗಿದ್ದರೆ ಎಐಸಿಸಿ ಅಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ಅವರು ಬಹುವಾಗಿ ನಂಬುವ ಕೆ.ಸಿ. ವೇಣುಗೋಪಾಲ್ ರೀತಿಯ ನಾಯಕರು ಹೇಳಿದ್ದಕ್ಕೆ ಗೋಣು ಆಡಿಸುತ್ತಿದ್ದರು. ಈಗ ಎಲ್ಲಾ ಹೆಸರುಗಳನ್ನು ಖುದ್ದು ಅವರೇ ಅಂತಿಮಗೊಳಿಸಲು ನಿರ್ಧರಿಸಿದ್ದಾರೆ. ಆದರೆ ಅವರಿಗೆ ಲಭಿಸಿರುವ ಈeeಜbಚಿಛಿಞಗೂ ರಾಜ್ಯ ನಾಯಕರು ಶಿಫಾರಸು ಮಾಡಿರುವ ಹೆಸರುಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಒಂದು ಕಡೆ ರಾಜ್ಯನಾಯಕರ ಪಟ್ಟಿಯನ್ನು ಒಪ್ಪಲಾಗುತ್ತಿಲ್ಲ, ಇನ್ನೊಂದೆಡೆ ಪಟ್ಟಿಯ

ಮೇಲೆ ಗೀಟು ಎಳೆಯಲಾಗುತ್ತಿಲ್ಲ. ಪರಿಣಾಮವಾಗಿ ಸಂಪುಟ ವಿಸ್ತರಣೆ ತಡವಾಗುತ್ತಿದೆ ಎನ್ನುತ್ತಾರೆ ದಿಲ್ಲಿಯ ಕಾಂಗ್ರೆಸ್ ನಾಯಕರೊಬ್ಬರು. ಇದರಿಂದ ರಾಜ್ಯದ ನಾಯಕರಿಗೆ ಮೊದಲಿನಷ್ಟು ಸ್ವಾತಂತ್ರ್ಯ ಇಲ್ಲ, ಪ್ರತೀ ಹಂತದಲ್ಲೂ ಹೈಕಮಾಂಡ್ ನಾಯಕರ ಅನುಮತಿ ಪಡೆಯುವುದು ಕಡ್ಡಾಯ ಎನ್ನುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಸಿದ್ದು-ಡಿ.ಕೆ. ನಿಗೂಢ!

ಒಂದೆಡೆ ರಾಹುಲ್ ಗಾಂಧಿ ನಡೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ನಿಗೂಢ. ಇನ್ನೊಂದೆಡೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡೆ ಸಚಿವಾಕಾಂಕ್ಷಿಗಳಿಗೆ ನಿಗೂಢ. ಸಚಿವಾಕಾಂಕ್ಷಿಗಳ ಪೈಕಿ ಹಲವರು ಮತ್ತೆ ಮತ್ತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ನಮ್ಮನ್ನು ಮಂತ್ರಿ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರು ‘ಹ್ಞೂಂ’ ಅಂತಲೂ ಹೇಳುತ್ತಿಲ್ಲ, ‘ಊಹ್ಞೂಂ’ ಅಂತಲೂ ಹೇಳುತ್ತಿಲ್ಲ. ಅಥವಾ ಯಾರಿಗೆ ಮಂತ್ರಿ ಮಾಡುತ್ತಾರೋ ಅವರಿಗೆ ಮಾತ್ರ ‘ಹ್ಞೂಂ’ ಎನ್ನುತ್ತಿರಬಹುದು.

ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಚಿವಾಕಾಂಕ್ಷಿಗಳಿಗೆ ಮಾತ್ರವಲ್ಲ, ಮಾಧ್ಯಮದವರ ಜೊತೆ ಕೂಡ ಬಾಯಿ ಬಿಡುತ್ತಿಲ್ಲ. ಆದರೆ ಏನು ಮಾಡುವುದು? ಪತ್ರಕರ್ತರಿಗೆ ಕಿವಿ ಮುಚ್ಚಿಕೊಂಡಿದ್ದರೂ ಕೆಲ ವಿಚಾರಗಳು ಕೇಳಿಸುತ್ತವೆ. ಕಣ್ಣು ಮುಚ್ಚಿಕೊಂಡಿದ್ದರೂ ಕೆಲವು ಸಂಗತಿಗಳು ಕಾಣಿಸುತ್ತವೆ. ಎದುರಿಗಿದ್ದವರು ಬಾಯಿ ಮುಚ್ಚಿಕೊಂಡಿದ್ದರೂ ಕೆಲವು ವಿಷಯಗಳು ಅರ್ಥವಾಗುತ್ತವೆ. ಆದರೆ ಎಲ್ಲವನ್ನು ಹೇಳಲು, ಬರೆಯಲು ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಬಹುತೇಕರು ಸಿನಿಕರಾಗುತ್ತಾರೆ ಎನ್ನುವುದು ಬೇರೆ ಮಾತು.

ದೂರು ಹೇಳಬೇಡಿ

ರಾಜಕಾರಣದಲ್ಲಿ ಕಿವಿ ಕಚ್ಚುವುದು ಜಾಸ್ತಿ. ಕಾಂಗ್ರೆಸ್‌ನಲ್ಲಿ ಇನ್ನೂ ಜಾಸ್ತಿ. ಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ತಿಂಗಳು ಕಳೆಯುವಷ್ಟರಲ್ಲೇ ವರ್ಷಕ್ಕಾಗುವಷ್ಟು ಸುಳ್ಳು ಹೇಳಲು ನಾಯಕರು ಮುಂದೆ ಬಂದಿದ್ದಾರೆ. ಮೊದಲ ಒಂದಷ್ಟು ದಿನ ‘ಏನೋ ಹೇಳುತ್ತಿದ್ದಾರೆ’ ಎಂದು ಕೇಳಿಸಿಕೊಂಡ ಹರಿಪ್ರಸಾದ್ ನಂತರ ‘ದೂರು ಹೇಳಲು ಬರಬೇಡಿ. ಎಲ್ಲರೂ ಜೊತೆಯಾಗಿ ಕೆಲಸ ಮಾಡುವ ಮಾತನಾಡಿ’ ಎನ್ನತೊಡಗಿದ್ದಾರಂತೆ.

‘ನೀವೇಕೆ ಮಂತ್ರಿ ಮಂಡಲದಲ್ಲಿ ನಿಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸಲು ಪ್ರಯತ್ನಿಸುತ್ತಿಲ್ಲ? ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ನಿಮ್ಮ ಅಭ್ಯರ್ಥಿಯನ್ನು ಏಕೆ ಶಿಫಾರಸು ಮಾಡುತ್ತಿಲ್ಲ?’ ಎನ್ನುವ ಪ್ರಶ್ನೆಗಳಿಗೆ ‘ಸರಕಾರ ಅವರದು (ಡಿ.ಕೆ. ಶಿವಕುಮಾರ್) ಪಕ್ಷ ನಮ್ಮದು’ ಎನ್ನುವ ಉತ್ತರ ನೀಡುತ್ತಿದ್ದಾರಂತೆ. ಇದರ ಹಿಂದೆ ಮಂತ್ರಿ ಮಂಡಲ ಹಾಗೂ ನಾಮ ನಿರ್ದೇಶನವನ್ನು ಅವರಿಗಿಷ್ಟ ಬಂದಂತೆ ಮಾಡಿ.ಕೆ.ೂಳ್ಳಲಿ, ನಿಗಮ ಮಂಡಳಿಗಳಿಗೆ ಕಾರ್ಯಕರ್ತರಿಗೆ ಅವಕಾಶ ಕೊಡಿಸುವುದರಲ್ಲಿ, ಪಕ್ಷದ ಪದಾಧಿಕಾರಿಗಳನ್ನಾಗಿ ನಿಷ್ಠಾವಂತರನ್ನು ತಂದು ಕೂರಿಸುವ ವಿಷಯದಲ್ಲಿ ಯಾರೂ ಮೂಗುತೂರಿಸಬಾರದು. ತಾವು ಸೂಚಿಸಿದಂತೆಯೇ ಆಗಬೇಕು ಎನ್ನುವ ಲೆಕ್ಕಾಚಾರವಿದೆಯಂತೆ.

ಮಂತ್ರಿ ಮಾಡಬೇಡಿ

ಎಲ್ಲರೂ ತಮ್ಮನ್ನು ಮಂತ್ರಿ ಮಾಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಆದರೆ ಮಾಜಿ ಸಚಿವ ಬಿ. ನಾಗೇಂದ್ರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಮಂತ್ರಿ ಮಾಡುವುದಿದ್ದರೆ ನನ್ನನ್ನು ಮಾತ್ರ ಮಾಡಿ, ಇಲ್ಲದಿದ್ದರೆ ಎರಡೂ ಜಿಲ್ಲೆಗಳ ಪೈಕಿ ಬೇರೆ ಯಾರನ್ನೂ ಮಾಡಬೇಡಿ ಎಂದು ಒತ್ತಡ ಹೇರುತ್ತಿದ್ದಾರಂತೆ. ವಾಲ್ಮೀಕಿ ನಿಗಮದ ಹಗರಣದ ಕಾರಣಕ್ಕೆ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಪಕ್ಷಕ್ಕೆ ಅವರ ‘ಕೊಡುಗೆ’ ಜಾಸ್ತಿ ಇರುವುದರಿಂದ ಮಂತ್ರಿ ಮಾಡಬೇಕೆನ್ನುವ ಒತ್ತಡವಿದೆ. ತನಿಖೆ ಎದುರಿಸುತ್ತಿರುವುದರಿಂದ ಬೇಡ ಎನ್ನುವ ಆಲೋಚನೆಯೂ ಇದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಬೇರೆ ಯಾರಿಗಾದರೂ ಅವಕಾಶ ಕೊಡೋಣ ಎಂದರೆ ಅದಕ್ಕೆ ನಾಗೇಂದ್ರ ವಿರೋಧಿಸುತ್ತಿದ್ದಾರೆ. ಈಗಾಗಲೇ ಹೇಳಿದಂತೆ ‘ಕೊಡುಗೆಯ ಕಾರಣಕ್ಕೆ’ ನಾಗೇಂದ್ರ ಅವರನ್ನು ನಗಣ್ಯ ಮಾಡಲಾಗುತ್ತಿಲ್ಲ. ಇಷ್ಟಕ್ಕೂ ಮೀರಿ ಏನಾಗುತ್ತೋ ಅದು ಗೊತ್ತಿಲ್ಲ.

ದಾವಣಗೆರೆ ದಂಗಲ್‌ಗೆ ಇನ್ನೆರಡು ಬಲಿ!

ದಾವಣಗೆರೆ ಉಪ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾದ ಕಂಪನ ಇನ್ನೂ ನಿಂತಿಲ್ಲ. ಸಂಪುಟ ವಿಸ್ತರಣೆ ವೇಳೆ ಇನ್ನೆರಡು ವಿಕೆಟ್ ಗಳು ಪತನವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಹಿಂದೆ ಕೋಳಿ, ಕುರಿಗಳನ್ನು ಬಲಿ ಪಡೆಯಲಾಗಿತ್ತು. ಈಗ ಹುಲಿ-ಸಿಂಹ (ಅವರು ಆ ರೀತಿ ಭಾವಿಸಿದ್ದಾರೆ)ಗಳ ತಲೆ ಉರುಳುವ ಸಂಭವ ಇದೆ. ಘರ್ಜನೆಯ ಮೂಲಕ ನಿಶ್ಯಬ್ದವನ್ನು ಹಾಳು ಮಾಡಿದ, ಶಾಂತಿಯನ್ನು ಕದಡಿದ ಹುಲಿ-ಸಿಂಹಗಳನ್ನು ಮುಗಿಸಿ

ಬಿಡಬೇಕೆಂಬ ಆಲೋಚನೆಯೇನೋ ಇದೆ, ಆದರೆ ರಾಜಕೀಯದಲ್ಲಿ

ಕಡೆಗಳಿಗೆಯ ‘ಕಸರತ್ತು’ಗಳು ಜಾಸ್ತಿ ಫಲ ಕೊಡುತ್ತವೆ. ಹಾಗಾಗಿ ಅಪಾಯಕಾರಿ ಜೀವಿಗಳು ಬದುಕುಳಿಯಲೂಬಹುದು. ಈ ವಿಷಯದಲ್ಲಿ ಏನು

ಮಾಡಬೇಕು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿರುವ ಇನ್ನೊಂದು ಗೊಂದಲ.

ಅಂದಹಾಗೆ ಇದೇ ದಾವಣಗೆರೆ ವಿಷಯ ಮುಸ್ಲಿಮರು ಕಾಂಗ್ರೆಸ್ ಬಗ್ಗೆ ಮುನಿಯಲು ಕಾರಣವಾಗಿತ್ತು. ಅದರಿಂದಾಗಿ ಈ ಬಾರಿ ನಾಲ್ಕು ಜನ ಮುಸ್ಲಿಮರಿಗೆ ಮಂತ್ರಿ ಸ್ಥಾನ ಕೊಡಬೇಕು ಎನ್ನುವ ಚಿಂತನೆ ಕೂಡ ಇದೆಯಂತೆ.

ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಐವರು ಮುಸ್ಲಿಮ್ ಸಚಿವರಿದ್ದರು. ಈಗ ಎಸ್.ಎಂ. ಕೃಷ್ಣ ಶಿಷ್ಯನೇ ಮುಖ್ಯಮಂತ್ರಿಯಾಗಿರುವುದರಿಂದ ಗುರುವಿನ ಹಾದಿಯಲ್ಲಿ ನಡೆಯಲಡ್ಡಿಯಿಲ್ಲ. ಸ್ವತಃ ಅವರು ಹಾಗೂ ಹೈಕಮಾಂಡ್ ಮನಸ್ಸು ಮಾಡಬೇಕಷ್ಟೆ.

ಆಫ್ ದಿ ರೆಕಾರ್ಡ್!

ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಹೈಕಮಾಂಡ್ ನಾಯಕರ ಭೇಟಿಗೆ ದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯ ಸಚಿವಾಕಾಂಕ್ಷಿಗಳಿಂದ ತಪ್ಪಿಸಿಕೊಳ್ಳಬೇಕೆಂದು ಕರ್ನಾಟಕ ಭವನದ ಬದಲು ಹೋಟೆಲ್ ನಲ್ಲಿ ಉಳಿದಿಕೊಂಡಿದ್ದರು. ಆದರೆ ಪಂಚೆ ತೊಡುವ ಸಿದ್ದರಾಮಯ್ಯಗೆ ಪಂಚತಾರಾ ಹೋಟೆಲ್ ನಲ್ಲಿ ನಿದ್ದೆ ಬಂದಿಲ್ಲ. ಮಧ್ಯ ರಾತ್ರಿಯೇ ಕರ್ನಾಟಕ ಭವನಕ್ಕೆ ಸ್ಥಳಾಂತರಗೊಂಡಿದ್ದಾರೆ.

ನಿನ್ನೆ ಮೊನ್ನೆ ಶಾಸಕರಾದವರು ಕೂಡ ಸ್ಟಾರ್ ಹೋಟೆಲ್ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ಮತ್ತಿತರ ಬೆಳವಣಿಗೆ ಇದ್ದರೆ ಮಾತ್ರ ಕರ್ನಾಟಕ ಭವನದ ಕಡೆ ತಲೆ ಹಾಕುತ್ತಾರೆ. ಆದರೆ ಸಿದ್ದರಾಮಯ್ಯ ಮಾತ್ರ ಕರ್ನಾಟಕ ಭವನದ ಖಾಯಂ ನಿವಾಸಿ.

ಹೊಸದಾಗಿ ನಿರ್ಮಾಣವಾಗಿರುವ ಕರ್ನಾಟಕ ಭವನ ಕೂಡ ಪಂಚತಾರಾ ಹೋಟೆಲ್ ರೀತಿನೇ ಇದೆ. ಅಲ್ಲಿ ಮುಖ್ಯಮಂತ್ರಿಗೆಂದೇ ಭವ್ಯವಾದ ಸೂಟ್ ರೂಮ್ ಇದೆ. ಸಿದ್ದರಾಮಯ್ಯ ಸಿಎಂ ಆದಾಗಲೂ ಅಲ್ಲಿಗೆ ಹೋಗಿರಲಿಲ್ಲ. ಅದು ಖಾಲಿ ಇದ್ದದ್ದನ್ನು ಕಂಡು ಡಿ.ಕೆ. ಶಿವಕುಮಾರ್ ‘ನಾನು ಬಳಸಲಾ?’ ಎಂದು ಕೇಳಿದ್ದಕ್ಕೆ ‘ಓಕೆ’ ಎಂದು ಆಗಲೇ ಸಿಎಂ ಸೂಟ್ ಬಿಟ್ಟುಕೊಟ್ಟಿದ್ದರು. ಅದೇನೋ, ಅವರಿಗೆ ಹಳೆಯ ಕಟ್ಟಡವೇ ಖುಷಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News