ಗಿಗ್-ಗತಿ ಎಂಬ ದುರ್ಗತಿ
ಗಡ್ಕರಿಯವರು ನೀಡಿರುವ ‘ಬೈಕ್ ಟ್ಯಾಕ್ಸಿ’ ಪರವಾದ ಹೇಳಿಕೆ ಕೂಡ, ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಭಾರತ ಸರಕಾರವು ಅನುಸರಿಸುತ್ತಿರುವ ಗೊಂದಲಮಯ ನೀತಿಗಳದ್ದೇ ಮುಂದುವರಿಕೆಯಾಗಿದ್ದು, ಜನ ಏನೋ ಒಂದು ಕೆಲಸ ಮಾಡಿಕೊಂಡಿದ್ದರೆ ಸಾಕು ಎಂಬ ಮನೋಭಾವ, ಈ ರೀತಿಯ ಹೇಳಿಕೆಗಳ ಹಿಂದೆ ಎದ್ದು ಕಾಣಿಸುತ್ತದೆ.
ಭಾರತ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಪ್ರಧಾನಿ ಹುದ್ದೆಗೆ ಸಾಫ್ಟ್ ಪರ್ಯಾಯ ಎಂದೇ ಬಿಂಬಿತರಾಗುವ ಅವರ ಹೇಳಿಕೆಯೊಂದು ಕಳೆದವಾರ ಸುದ್ದಿ ಮಾಡಿತಾದರೂ, ಸದ್ದು ಮಾಡಲಿಲ್ಲ ಎಂಬುದು ಸ್ವಲ್ಪ ಅಚ್ಚರಿಯ ಸಂಗತಿ.
ಮಹಾರಾಷ್ಟ್ರದಲ್ಲಿ ಸುರಕ್ಷಾ ಯೋಜನೆಯ ಪೈಲಟ್ ಕಾರ್ಯಕ್ರಮವನ್ನು ಆರಂಭಿಸಿ (ಸೆ. 2) ಮಾತನಾಡುತ್ತಿದ್ದ ಅವರು, ಖಾಸಗಿ ದ್ವಿಚಕ್ರ ವಾಹನಗಳ ಮಾಲಕರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ, ಅವರಿಗೆ ತಮ್ಮ ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳನ್ನು ಪ್ರಯಾಣಿಕರ ಸಾಗಾಟಕ್ಕೆ ಬಾಡಿಗೆಗೆ ಓಡಿಸಲು ಮುಕ್ತ ಅನುಮತಿ ನೀಡಬೇಕು. ಇದರಿಂದ ಎಂಟು ಕೋಟಿ ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಹೇಳಿದ್ದರು. ಭಾರತ ಸರಕಾರ ಈಗಾಗಲೇ ಇದಕ್ಕೆ ಅವಕಾಶ ತೆರೆದಿದೆ. ಆದರೆ, ಸಾರಿಗೆಯು ಸಂವಿಧಾನದ ರಾಜ್ಯಪಟ್ಟಿಯ ವಿಷಯವಾಗಿದ್ದು, ಕೆಲವು ರಾಜ್ಯಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ. ರಾಜ್ಯಸರಕಾರಗಳು ಈ ಸಡಿಲು ತೋರಿಸಿದರೆ, ಹಲವಾರು ಕುಟುಂಬಗಳ ಹೊಟ್ಟೆಪಾಡಿಗೆ ಆದಾಯ ಮೂಲ ಒದಗಿಸಿದಂತಾಗುತ್ತದೆ ಎಂಬುದು ಗಡ್ಕರಿ ಅವರ ವಾದವಾಗಿತ್ತು.
ದೇಶದ ಅಂದಾಜು 140 ಕೋಟಿ ಜನರಿಗೆ ಉದ್ಯೋಗ ಒದಗಿಸುವುದು ಸುಲಭದ ಕೆಲಸವೇನಲ್ಲ. ಆದರೆ ಹಾಲಿ ಭಾರತ ಸರಕಾರವು ತನ್ನ ನೀತಿಗಳಲ್ಲಿ ಗೊಂದಲ ತೋರಿಸುತ್ತಾ, ನಿರುದ್ಯೋಗದ ಪ್ರಶ್ನೆ ಎದುರಾದಾಗಲೆಲ್ಲ ನೀಡುತ್ತಿರುವ ಉತ್ತರಗಳು ಸರಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಸರಕಾರದ ನೀತಿಗಳಲ್ಲಿರುವ ಮೂಲ ಗೊಂದಲ ಏನೆಂದರೆ, ಒಂದು ಕಡೆ ದೇಶದ ಶೇ. 46 ಜನರು ತಮ್ಮ ಜೀವನೋಪಾಯಕ್ಕೆ ಕೃಷಿ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ ಎನ್ನುತ್ತಲೇ, ಇನ್ನೊಂದೆಡೆ ಕೃಷಿ, ಮೀನುಗಾರಿಕೆಯಂತಹ ಸಾಂಪ್ರದಾಯಿಕ ಕಸುಬುಗಳನ್ನೆಲ್ಲ ಕಾರ್ಪೊರೇಟೀಕರಣಗೊಳಿಸಿ, ಆನಿಗಳ ಕೈಗೆ ಒಪ್ಪಿಸಲಾಗುತ್ತಿದೆ. ಕೃಷಿ ಆದಾಯ ದುಪ್ಪಟ್ಟು ಮಾಡಲು ಅಲ್ಲಿರುವ ಸಣ್ಣ ಭೂಹಿಡುವಳಿದಾರರನ್ನು, ಕೃಷಿ ಕೂಲಿ ಕಾರ್ಮಿಕರನ್ನು, ಸಾಂಪ್ರದಾಯಿಕ ಸಣ್ಣ ಮೀನುಗಾರರನ್ನು ಅವರ ವೃತ್ತಿಯಿಂದ ಪ್ರತ್ಯೇಕಿಸಿ, ಅವರಿಗೆ ಹೊಸ ಕೌಶಲಗಳನ್ನು ಕಲಿಸಿ, ಅವರಿಗೆ ಪರ್ಯಾಯ ಜೀವನೋಪಾಯಗಳನ್ನು ರೂಪಿಸಬೇಕೆಂಬುದು ಹೇಳಲಾಗುತ್ತಿದೆ.
ಹೋಗಲಿ, ಈ ರೈತರು-ಮೀನುಗಾರರಿಗೆ ಹಾಗೂ ದೇಶದ ಡೆಮೊಗ್ರಾಫಿಕ್ ಡಿವಿಡೆಂಡ್ ಎಂದು ಗುರುತಿಸಲಾಗಿರುವ ಎಳೆಯರಿಗೆ ಸರಕಾರ ಕಲಿಸ ಬಯಸಿರುವ ಹೊಸ ಕೌಶಲಗಳೇನು? ಎಂದು ಕೇಳಿದರೆ ಸರಕಾರ ನೀಡುತ್ತಿರುವ ಉತ್ತರಗಳು ಜನ ಹೌಹಾರುವಂತಿವೆ!
ಪ್ರಧಾನಮಂತ್ರಿಯವರು 2018ರಲ್ಲಿ ಸಂಸತ್ತಿನಲ್ಲಿ ನೀಡಿದ ಭಾಷಣವೊಂದರಲ್ಲಿ, 2017-18ರ ನಡುವೆ ದೇಶದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಎಂಬ ಲೆಕ್ಕಾಚಾರ ನೀಡಿ, ಅದರ ಸಮರ್ಥನೆಗಾಗಿ ದೇಶದಲ್ಲಿ ಆ ವರ್ಷ 7.60 ಲಕ್ಷ ವಾಣಿಜ್ಯ ವಾಹನಗಳನ್ನು ಜನ ಖರೀದಿಸಿದ್ದಾರೆ, ಅವುಗಳ ಪೈಕಿ ಶೇ. 25ರಷ್ಟು ಹಳೆಯ ವಾಹನಗಳಿಗೆ ರಿಪ್ಲೇಸ್‌ಮೆಂಟ್ ಎಂದಿಟ್ಟುಕೊಂಡರೂ, ಉಳಿದ ವಾಹನಗಳಿಗೆ ತಲಾ ಇಬ್ಬರಂತೆ 11.40 ಲಕ್ಷ ಉದ್ಯೋಗಗಳು ಸೃಷ್ಟಿ ಆಗಿವೆ ಎಂದು ಹೇಳಿದ್ದರು! (ಮೂಲ: 21, ಜುಲೈ 2018ರ ಪತ್ರಿಕಾ ವರದಿ)
2018ರಲ್ಲೇ ಸಂದರ್ಶನವೊಂದರಲ್ಲಿ ಅವರು, ಬೀದಿ ಬದಿಯಲ್ಲಿ ಪಕೋಡಾ ಮಾರಿ, ದಿನಕ್ಕೆ 200 ರೂ. ಗಳಿಸುವುದನ್ನೂ ಕೂಡ ಉದ್ಯೋಗ ಎಂದೇ ಪರಿಗಣಿಸಬೇಕು ಎಂಬರ್ಥ ಬರುವ ಹೇಳಿಕೆ ನೀಡಿದ್ದರು. ಈ ಹೇಳಿಕೆಗಾಗಿ ಅವರು ಈವತ್ತಿಗೂ ಟ್ರೋಲ್ ಆಗುತ್ತಿದ್ದಾರೆ.
2025ರಲ್ಲಿ, ಬಿಹಾರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಯುವಕರು ಈಗೀಗ ರೀಲ್ಸ್ ಮಾಡಿ, ಇಂಟರ್ನೆಟ್ ಮೂಲಕ ಅದರಿಂದ ಹಣಗಳಿಸುತ್ತಿದ್ದಾರೆ ಎಂದು ಹೇಳಿದ್ದರು. ನಿರುದ್ಯೋಗದ ಸಮಸ್ಯೆಯ ನಡುವೆ ಪ್ರಧಾನಿಯವರ ಈ ಹೇಳಿಕೆ ಕೂಡ ಸಾಕಷ್ಟು ಟ್ರೋಲ್ ಆಗಿತ್ತು.
ಈಗ ಗಡ್ಕರಿಯವರು ನೀಡಿರುವ ‘ಬೈಕ್ ಟ್ಯಾಕ್ಸಿ’ ಪರವಾದ ಹೇಳಿಕೆ ಕೂಡ, ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಭಾರತ ಸರಕಾರವು ಅನುಸರಿಸುತ್ತಿರುವ ಗೊಂದಲಮಯ ನೀತಿಗಳದ್ದೇ ಮುಂದುವರಿಕೆಯಾಗಿದ್ದು, ಜನ ಏನೋ ಒಂದು ಕೆಲಸ ಮಾಡಿಕೊಂಡಿದ್ದರೆ ಸಾಕು ಎಂಬ ಮನೋಭಾವ, ಈ ರೀತಿಯ ಹೇಳಿಕೆಗಳ ಹಿಂದೆ ಎದ್ದು ಕಾಣಿಸುತ್ತದೆ.
ಭಾರತದ ಅತಿದೊಡ್ಡ ಸಂಪತ್ತೆಂದರೆ, ದುಡಿಯುವ ಪ್ರಾಯವರ್ಗದಲ್ಲಿ ಬರುವ ಇಲ್ಲಿನ ಯುವಜನರು ಎಂದು ಮತ್ತೆ ಮತ್ತೆ ಹೇಳಿಕೊಳ್ಳುವ ಸರಕಾರ, ಈ ‘ಡೆಮೊಗ್ರಾಫಿಕ್ ಡಿವಿಡೆಂಡನ್ನು’ ಅದರ ಪೂರ್ಣ ಸಾಮರ್ಥ್ಯದೊಂದಿಗೆ ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಮೇಲಿನ ಎಲ್ಲ ನಿದರ್ಶನಗಳೂ ಸಾಬೀತು ಮಾಡುತ್ತಿವೆ. ಒಂದು ಕೋನದಿಂದ ನೋಡಿದರೆ, ಇದು ದೇಶದ ಯುವಶಕ್ತಿಯ ಅಪಮಾನ ಕೂಡ ಹೌದು. ಈ ದೇಶದ ಜನರ ಸಾಮರ್ಥ್ಯವು ಕೇವಲ ಗಿಗ್ ಕೆಲಸಗಳಿಗೆ ಸೀಮಿತ ಎಂಬ ಅಲ್ಪತೃಪ್ತಿ ಅಥವಾ ಎಳೆಯರ ಅಸಮಾಧಾನದ ಬಿಸಿಯನ್ನು ತಕ್ಷಣಕ್ಕೆ ತಪ್ಪಿಸಿಕೊಳ್ಳುವ ತಾತ್ಕಾಲಿಕ ಪರಿಹಾರದಂತೆ ಈ ನಿರ್ಧಾರಗಳೆಲ್ಲ ಕಾಣಿಸುತ್ತಿವೆ.
ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ನೋಡಿದರೆ, ದೇಶದಲ್ಲಿಂದು ದುಡಿಯುವ ಪ್ರಾಯವರ್ಗದಲ್ಲಿ (19-59) ಅಂದಾಜು 98 ಕೋಟಿ ಜನ ಇದ್ದಾರೆ. ಅವರಲ್ಲಿ ಅಂದಾಜು ಶೇ. 5.5 ಮಂದಿ ಸರಕಾರಿ ಲೆಕ್ಕಾಚಾರದ ಪ್ರಕಾರ ನಿರುದ್ಯೋಗಿಗಳು. ಈ ನಿರುದ್ಯೋಗಿಗಳ ಪೈಕಿ ಶೇ. 60 ಮಂದಿ 19-29 ಪ್ರಾಯವರ್ಗದವರು. ಇನ್ನು ನೀತಿ ಆಯೋಗದ ಅಂದಾಜುಗಳ ಪ್ರಕಾರ ದೇಶದಲ್ಲಿಂದು 8.7 ಕೋಟಿ ಮಂದಿ NEET (Not in Education, Employment or Training) ಸ್ಥಿತಿಯಲ್ಲಿದ್ದಾರಂತೆ. ಅಸಂಘಟಿತ ವಲಯಗಳನ್ನೂ ಪರಿಗಣಿಸಿದರೆ, ಈ ಎಲ್ಲ ಲೆಕ್ಕಾಚಾರಗಳು ಯಾವುವೂ ಸುಸೂತ್ರ ಎನ್ನುವಂತಿಲ್ಲ.
ಇದಕ್ಕೆಲ್ಲ ಸುಲಭ ಪರಿಹಾರ ಎಂದರೆ ಗಿಗ್ ಕೆಲಸಗಳು ಎಂದು ಸರಕಾರ ಅಂದುಕೊಂಡಿರುವಂತಿದೆ. ಹಾಲಿ ದೇಶದಲ್ಲಿ 1.2 ಕೋಟಿ ಗಿಗ್ ಕೆಲಸಗಾರರಿದ್ದು, 2029-30ರ ಹೊತ್ತಿಗೆ ಅವರ ಸಂಖ್ಯೆ 2.35 ಕೋಟಿಗೆ ಏರಬಹುದು ಎಂಬುದು ನೀತಿ ಆಯೋಗದ ಲೆಕ್ಕಾಚಾರ.
ಈ ಎಲ್ಲ ಬೆಳವಣಿಗೆಗಳ ನಡುವೆ ಒಂದು ವಿಷಯವನ್ನು ದೇಶ ಮರೆತೇ ಬಿಟ್ಟಂತಿದೆ. ಈ ನಿರುದ್ಯೋಗಿಗಳನ್ನು ಉದ್ಯೋಗಯೋಗ್ಯರನ್ನಾಗಿಸುವ ನಿಟ್ಟಿನಲ್ಲಿ ಸ್ಕಿಲ್ ಇಂಡಿಯಾ ಮಿಷನ್‌ಗೆ 48,000 ಕೋಟಿ ರೂ.ಗಳನ್ನು ಸರಕಾರ ತೆಗೆದಿರಿಸಿದ್ದು, ಹಂತಹಂತವಾಗಿ ವೆಚ್ಚ ಮಾಡುತ್ತಿದೆ. ಈ ಯೋಜನೆಯ ಫ್ಲಾಗ್‌ಷಿಪ್ - ಪ್ರಧಾನಮಂತ್ರಿ ಕೌಶಲ್ ವಿಕಾಸ ಯೋಜನೆ (PMKVY) ಥಂಡಾ ಹೊಡೆದಂತಿದೆ. 2ನೇ ಹಂತದಲ್ಲಿ 1.1 ಕೋಟಿ ಮಂದಿ ಈ ಯೋಜನೆಯಡಿ ಕೌಶಲ ಗಳಿಸಿಕೊಂಡಿದ್ದರೆ, ಹಂತ 3ಕ್ಕೆ ಬರುವಾಗ ಅದು 7.37 ಲಕ್ಷಕ್ಕೂ, ಹಾಲಿ ಹಂತ 4ಕ್ಕೆ ಬರುವಾಗ 5.43 ಲಕ್ಷಕ್ಕೂ ಇಳಿದಿದೆ. ಅಂದರೆ ಈ ಯೋಜನೆಯಡಿ ಕೌಶಲ ಕಲಿತವರ ಪ್ರಮಾಣದಲ್ಲಿ ಶೇ. 93 ಇಳಿಕೆ! (ಆಧಾರ: ಇಲಾಖೆಯ ವಾರ್ಷಿಕ ವರದಿ) ಈ ಹಾದಿಯಲ್ಲಿ ಉದ್ಯೋಗಗಳು ಸಿಗದಿರುವುದೂ ಅವು ಜನರನ್ನು ಆಕರ್ಷಿಸದಿರುವುದಕ್ಕೆ ಕಾರಣ ಇರಬಹುದು. ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ (DDU-GKY), ದೀನ್‌ದಯಾಳ್ ಅಂತ್ಯೋದಯ ಯೋಜನೆ (DAY-NRLM, DAY-NULM), ಜನ ಶಿಕ್ಷಣ ಸಂಸ್ಥಾನ್ (JSS), ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಪ್ರಮೋಷನ್ ಸ್ಕೀಮ್ (NAPS), ಕ್ರಾಫ್ಟ್ಸ್‌ಮನ್ ಟ್ರೇನಿಂಗ್‌ಸ್ಕೀಮ್ (CTS)ಗಳ ಕತೆಯೂ ಇದಕ್ಕಿಂತ ತೀರಾ ಭಿನ್ನವಿಲ್ಲ.
ಆದರೆ, ಸರಕಾರ ಸಂಸತ್ತಿನಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಡೇಟಾಬೇಸ್ ಅಂದಾಜು ವಿವರಗಳನ್ನು ಆಧರಿಸಿ, ದೇಶದಲ್ಲಿ 2014-15ರಲ್ಲಿ 47.15 ಕೋಟಿ ಇದ್ದ ಉದ್ಯೋಗಾವಕಾಶಗಳು 2023-24ರ ಹೊತ್ತಿಗೆ 64.33 ಕೋಟಿಗೆ ಏರಿದೆ. ಇದು ಶೇ. 36.44 ಹೆಚ್ಚಳ ಎಂದು ಬೆನ್ನು ತಟ್ಟಿಕೊಂಡಿದೆ ಅಲ್ಲದೆ 99,446 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಲು ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿವ್ (ELI) ನೀಡುವ ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನಾ (PMVBRY) ಸ್ಥಾಪಿಸಲಾಗಿದೆ. ಅದರಡಿ, 13.18 ಲಕ್ಷ ಮೊದಲ ಬಾರಿಯ ಉದ್ಯೋಗಿಗಳಿಗೆ 744.7 ಕೋಟಿ ರೂ. ಹಾಗೂ ಅವರನ್ನು ನೇಮಿಸಿಕೊಳ್ಳುವ 83,535 ಸಂಸ್ಥೆಗಳಿಗೆ 2,068.84 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡಿದೆ. (ಲೋಕಸಭೆ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 1270; 27, ಜುಲೈ 2026).
ಸರಕಾರ ನಿಜಕ್ಕೂ ಎಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಾಮಾಣಿಕ ಕ್ರಮಗಳನ್ನು ಕೈಗೊಂಡಿದ್ದರೆ, ತಿಂಗಳ ಹಿಂದೆ ಕಾಕ್ರೋಚ್ ಗದ್ದಲ ದೇಶದಾದ್ಯಂತ ಈ ಪ್ರಮಾಣದಲ್ಲಿ ಸದ್ದು ಮಾಡುತ್ತಿತ್ತೇ? ಅಥವಾ ಪ್ರಧಾನಮಂತ್ರಿಯವರು ಸ್ವತಃ ವಿವಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನಕ್ಕೆ ಹೊರಡುವ, ತನ್ನ ಸಚಿವಸಂಪುಟಕ್ಕೂ ವಿದ್ಯಾರ್ಥಿಗಳೊಡನೆ ಕಡ್ಡಾಯ ಸಂವಹನ ನಡೆಸುವಂತೆ ಹೇಳುವ ಪ್ರಮೇಯ ಬರುತ್ತಿತ್ತೇ? ಅಥವಾ ಸಾರಿಗೆ ಸಚಿವ ಗಡ್ಕರಿಯವರು ‘ಬೈಕ್ ಟ್ಯಾಕ್ಸಿ’ಗಳಿಗೆ ಅವಕಾಶ ಮಾಡಿಕೊಟ್ಟರೆ 8.5 ಕೋಟಿ ಜನರಿಗೆ ಹೊಟ್ಟೆಪಾಡಿನ ಅವಕಾಶ ಸಿಗಲಿದೆ ಎಂದು ಅಲವತ್ತುಕೊಳ್ಳಬೇಕಾಗುತ್ತಿತ್ತೇ?
ಅಂಕಿಸಂಖ್ಯೆಗಳ ಮೂಲಕ ಸರಕಾರ ಏನೇ ಸಮರ್ಥಿಸಿಕೊಂಡರೂ, ದೇಶದ ಯುವಜನರಿಗೆ ಶಿಕ್ಷಣದ ಗುಣಮಟ್ಟ, ಕೌಶಲದ ಗುಣಮಟ್ಟ ಹೆಚ್ಚಿಸದೆ, ಅವರ ಎಂಪ್ಲಾಯೆಬಿಲಿಟಿಯ ಕಡೆ ಗಮನ ನೀಡದೆ, ಕೇವಲ ಗಿಗ್‌ವರ್ಕ್ ಮಾಡಿಕೊಂಡು ಬದುಕಿ ಎಂದು ಹೇಳಿದುದರ ಫಲಿತಾಂಶ ಇಂದು ಕಾಣಿಸುತ್ತಿದೆ. ತಳಪಾಯ ಇಲ್ಲದೆ ಮಹಾಸೌಧಗಳನ್ನು ಗಾಳಿಯಲ್ಲೇ ಕಟ್ಟುವ ಚಾಳಿಯ ಮುಂದುವರಿಕೆಗೆ ಮತ್ತೊಂದು ಉದಾಹರಣೆ ಇದು.
(ಅಂಕಣಕಾರರು ಹಿರಿಯ ಪತ್ರಕರ್ತರು ಮತ್ತು ಚಿಂತಕರು)