ಅಕ್ರಮ ಹಣ ವರ್ಗಾವಣೆ ಕಾಯ್ದೆ: ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳು ಬುಡಮೇಲು

ಪಿಎಂಎಲ್‌ಎ ಒಂದು ದಾರಿ ತಪ್ಪಿದ ಕಾನೂನು. ಈ ಕಾನೂನಿನಡಿ ಆರೋಪಿಯನ್ನು ದೋಷಮುಕ್ತಗೊಳ್ಳುವವರೆಗೆ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಆತ ದೋಷಿಯಲ್ಲ ಎಂದು ನ್ಯಾಯಾಧೀಶರಿಗೆ ಖಾತ್ರಿಯಾದ ಬಳಿಕವಷ್ಟೇ ಜಾಮೀನು ನೀಡುವುದರಿಂದ ಆರೋಪಿ ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ನಿತೇಶ್ ತಾರಾಚಂದ್ ಶಾ v/s ಭಾರತ ಸರಕಾರ ಪ್ರಕರಣದಲ್ಲಿ ಈ ಕಾಯ್ದೆ ವಿಧಿ 14 ಮತ್ತು 21ನ್ನು ಉಲ್ಲಂಘಿಸುವುದರಿಂದ, ಅಸಾಂವಿಧಾನಿಕ ಎಂದು ಹೇಳಿತ್ತು. ಆದರೆ, ಸಂಸತ್ತು ಕೆಲವು ತಿದ್ದುಪಡಿಗಳೊಂದಿಗೆ ಕಾಯ್ದೆಯನ್ನು ಉಳಿಸಿಕೊಂಡಿತು.

Update: 2024-05-24 04:25 GMT
Editor : Thouheed | Byline : ಋತ

ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‌ಎ)ಅಡಿ ವಿಚಾರಣೆ ಹಂತದಲ್ಲಿ ಬಂಧನ ಕೂಡದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. ವಿಶೇಷ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಬಳಿಕ ಕಾಯ್ದೆಯ ವಿಭಾಗ 19ರಡಿ ಆಪಾದಿತನನ್ನು ಬಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭುಯಾನ್ ಅವರ ಪೀಠ ಮೇ 16ರಂದು ಹೇಳಿತು. ನ್ಯಾಯಾಲಯದ ಆದೇಶದನ್ವಯ

ಈ.ಡಿ. ಆರೋಪಿಯನ್ನು ಕಸ್ಟಡಿಗೆ ಪಡೆಯಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯ ಅರ್ಜಿಯನ್ನು ಪರಿಶೀಲಿಸಿ ಕಸ್ಟಡಿಗೆ ಕಾರಣಗಳನ್ನು ದಾಖಲಿಸಿಕೊಂಡು, ಆದೇಶ ಹೊರಡಿಸುತ್ತದೆ. ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಖಾತ್ರಿಯಾಗಬೇಕು.

► ಆರೋಪಿ ಸಮನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿ ದ್ದರೆ, ಅವರನ್ನು ಕಸ್ಟಡಿಯಲ್ಲಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

► ಆರೋಪಿ ಸಮನ್ಸ್ ಅನ್ವಯ ಹಾಜರಾಗಿದ್ದರೆ, ಅವರಿಗೆ ಪಿಎಂಎಲ್‌ಎಯ ಸೆಕ್ಷನ್ 45ರ ಅವಳಿ ಶರತ್ತು ಅನ್ವಯವಾಗುವುದಿಲ್ಲ: ಅವೆಂದರೆ, ಕಾಯ್ದೆಯಡಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಬೇಕು. ಆರೋಪಿ ನಿರಪರಾಧಿ ಎನ್ನಿಸಿದರೆ ಮತ್ತು ಅಪರಾಧಿಯನ್ನು ಬಿಡುಗಡೆ ಮಾಡಿದಲ್ಲಿ ಆತನಿಂದ ಅಪರಾಧ ಪುನರಾವರ್ತನೆ ಆಗುವುದಿಲ್ಲ ಎಂದು ಮನದಟ್ಟಾದರೆ ಮಾತ್ರ ಜಾಮೀನು ನೀಡಬಹುದು.

ಈ ತೀರ್ಪು ಆಡಳಿತ ನಡೆಸುವವರ ಮರ್ಜಿ ಮೇರೆಗೆ ಜಾರಿ ನಿರ್ದೇಶನಾಲಯ ನಡೆಸುವ ಬೇಕಾಬಿಟ್ಟಿ ಬಂಧನ-ಆಸ್ತಿ ಜಪ್ತಿಗೆ ತಡೆಯೊಡ್ಡಬಹುದು ಎಂಬ ಆಶಾವಾದ ಮೂಡಿಸಿದೆ.

ಪಿಎಂಎಲ್‌ಎ ಮೂಲ ಆಶಯ:

ಇಂಟರ್‌ಪೋಲ್ ಪ್ರಕಾರ, ಅಕ್ರಮ ಹಣ ಎಂದರೆ ಆಸ್ತಿಯ ಮೂಲವನ್ನು ಮುಚ್ಚಿಟ್ಟು ಅಥವಾ ಮರೆಮಾಚಿ, ಕಾನೂನುಬದ್ಧಗೊಳಿಸುವಿಕೆ. ಅಂತರ್‌ರಾಷ್ಟ್ರೀಯ ಮಾದಕ ವಸ್ತು ಮಾರಾಟದಿಂದ ಬಂದ ಕಪ್ಪು ಹಣದಿಂದ ಕೆಲವು ದೇಶಗಳ ಆರ್ಥಿಕತೆ, ಏಕತೆ-ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿತ್ತು. 1988ರಲ್ಲಿ ವಿಯೆನ್ನಾದಲ್ಲಿ ವಿಶ್ವ ಸಂಸ್ಥೆ ಅಮಲು ಪದಾರ್ಥಗಳು, ಅಫೀಮು ಮತ್ತಿತರ ವಸ್ತುಗಳು ಹಾಗೂ ಮನೋವಿಕಾರ ಔಷಧಗಳ ಅಕ್ರಮ ಸಾಗಣೆ ಸಮಾವೇಶವನ್ನು ಹಮ್ಮಿಕೊಂಡು, ಎಲ್ಲ ದೇಶಗಳೂ ಮತ್ತಕಾರಕಗಳಿಗೆ ಸಂಬಂಧಿಸಿದ ಅಪರಾಧ-ಅಕ್ರಮ ಚಟುವಟಿಕೆ ತಡೆಗೆ ಕ್ರಮ ಕೈಗೊಳ್ಳಲು ಸೂಚಿಸಿತು. ಆನಂತರ ಏಳು ದೇಶಗಳು ಪ್ಯಾರಿಸ್‌ನಲ್ಲಿ ಸಭೆ ಸೇರಿ(ಜುಲೈ 1989) ಹಣಕಾಸು ಕ್ರಿಯೆ ಕಾರ್ಯಪಡೆ(ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್, ಎಫ್‌ಎಟಿಎಫ್) ರಚಿಸಿದವು. 1990ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯವೊಂದನ್ನು ಅಂಗೀಕರಿಸಿ, ಎಲ್ಲ ಸದಸ್ಯ ರಾಷ್ಟ್ರಗಳು ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಕ್ರಮ ಹಣದ ತಡೆಗೆ ಪರಿಣಾಮಕಾರಿ ಶಾಸನವೊಂದನ್ನು ರಚಿಸಬೇಕೆಂದು ಕೇಳಿತು. ಜೂನ್ 10,1998ರಲ್ಲಿ ವಿಶ್ವ ಸಂಸ್ಥೆ ಇನ್ನೊಂದು ಸಮಾವೇಶ ನಡೆಸಿತು.

ಕಾಯ್ದೆಯ ಮುಖ್ಯ ಉದ್ದೇಶ-ಮಾದಕವಸ್ತುಗಳ ಅಕ್ರಮ ಹಣದ ತಡೆ/ನಿಯಂತ್ರಣ. ವಿಯೆನ್ನಾ(1988) ಮತ್ತು ಪಾಮೆರೋ(2000)ದ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದ್ದರಿಂದ ಮತ್ತು ಎಫ್‌ಎಟಿಎಫ್ ನೀಡಿದ 40 ಶಿಫಾರಸುಗಳಿಗೆ ಅನುಗುಣವಾಗಿ, ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗಿದೆ. ಪಿಎಂಎಲ್‌ಎ ನಿಯಂತ್ರಣ, ತಡೆ ಹಾಗೂ ಶಿಕ್ಷೆಯನ್ನು ಒಳಗೊಂಡ ವಿಶಿಷ್ಟ ಕಾಯ್ದೆ. ಭಾರತ 2002ರಲ್ಲಿ ಪಿಎಂಎಲ್‌ಎ ಅಂಗೀಕರಿಸಿತು ಮತ್ತು ಕಾಯ್ದೆ ಜುಲೈ 1,2005ರಲ್ಲಿ ಜಾರಿಗೊಂಡಿತು. ಹಣಕಾಸು ಅಪರಾಧ ಮತ್ತು ಸಂಬಂಧಿಸಿದ ಚಟುವಟಿಕೆಗಳನ್ನು ನಿಗ್ರಹಿಸಲು ದೇಶ ತೆಗೆದುಕೊಂಡ ಗಮನಾರ್ಹ ಕಾಯ್ದೆ ಎನ್ನಲಾಗಿತ್ತು. ದೇಶದ ಭೌಗೋಳಿಕ ಸ್ಥಾನದಿಂದಾಗಿ ಮಾದಕ ದ್ರವ್ಯಗಳ ಹರಿವಿನ ತಡೆಗೆ ಇಂಥದ್ದೊಂದು ಕಾಯ್ದೆ ಅಗತ್ಯವಿತ್ತು. ಕಾಯ್ದೆಗೆ 2009, 2013 ಮತ್ತು 2019ರಲ್ಲಿ ತಿದ್ದುಪಡಿ ತರಲಾಯಿತು. ಆರ್ಥಿಕ ಕ್ರಿಯಾ ಕಾರ್ಯಪಡೆ ಎತ್ತಿದ ಆಕ್ಷೇಪಗಳು ಮತ್ತು ಮುಖ್ಯವಾಗಿ, ನ್ಯಾಯಾಲಯಗಳ ಆದೇಶಗಳನ್ನು ತಲೆಕೆಳಗು ಮಾಡಲು ಈ ತಿದ್ದುಪಡಿಗಳು ಬಂದವು. ಸ್ಥಾಯಿ ಸಮಿತಿಗಳ ಶಿಫಾರಸುಗಳನ್ನು ಆಧರಿಸಿ, ಎಲ್ಲ ಪಕ್ಷಗಳೂ ಇಂತಹ ಸುಧಾರಣೆಗಳನ್ನು ತಂದಿವೆ. ಈ ತಿದ್ದುಪಡಿಗಳನ್ನು ಆರ್ಥಿಕ ಮಸೂದೆ/ಹಣಕಾಸು ಮಸೂದೆ ರೂಪದಲ್ಲಿ ತರಲಾಗಿದೆ; ಸಂಸತ್ತಿನಲ್ಲಿ ಮಂಡಿಸದೆ, ಯಾವುದೇ ಚರ್ಚೆ ನಡೆಸದೆ ಜಾರಿಗೊಳಿಸಲಾಗಿದೆ. ಪಿಎಂಎಲ್‌ಎ ಹಣಕಾಸು ಮಸೂದೆಗಳ ಅಡಿ ಬರುತ್ತದೆಯೇ ಎಂಬ ಪ್ರಶ್ನೆ ಸುಪ್ರೀಂ ಕೋರ್ಟಿನಲ್ಲಿದೆ.

2002ರ ಕಾಯ್ದೆಯು ಐಪಿಸಿ ಮತ್ತು 1985ರ ಎನ್‌ಡಿಪಿಎಸ್ ಕಾಯ್ದೆಯ ಕೆಲವು ಅಪರಾಧಗಳನ್ನು ಒಳಗೊಂಡಿತ್ತು. ತಿದ್ದುಪಡಿಗಳು ಪಿಎಂಎಲ್‌ಎ ಗುಣಲಕ್ಷಣಗಳನ್ನು ಗಮನಾರ್ಹವಾಗಿ ಬದಲಿಸಿದವು. ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಮೀರಿ, ಕಠಿಣ ಕಾನೂನಾಗಿ ಬದಲಾಯಿಸಿತು. ಹಾಲಿ ಕಾನೂನು ಅಕ್ರಮ ಹಣದ ಸಂಗ್ರಹ, ಮುಚ್ಚಿಟ್ಟುಕೊಳ್ಳುವುದು, ಹೊಂದಿರುವುದು, ಬಳಕೆ, ಗಳಿಕೆ ಇಲ್ಲವೇ ಸಕ್ರಮಗೊಳಿಸುವುದು ಹಾಗೂ ನೇರ/ ಅಪರೋಕ್ಷವಾಗಿ ಇಂಥ ಕೃತ್ಯದಲ್ಲಿ ಪಾಲ್ಗೊಳ್ಳುವುದನ್ನು ಅಪರಾಧ ಎನ್ನುತ್ತದೆ. ಔಪಚಾರಿಕ ಆರ್ಥಿಕತೆಗೆ ಅದನ್ನು ಏಕತ್ರಗೊಳಿಸುವಿಕೆಗೆ ಸೀಮಿತವಾಗಿಲ್ಲ. ಮತ್ತಕಾರಕಗಳು, ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ(ಎಸ್‌ಎನ್‌ಡಿಟಿ)ಯಡಿಯ ಅಪರಾಧಗಳಲ್ಲದೆ, ಭ್ರಷ್ಟಾಚಾರ ತಡೆ ಕಾಯ್ದೆಯನ್ನೂ ಸೇರ್ಪಡೆಗೊಳಿಸಲಾಗಿದೆ. ಇದರಿಂದ ಕಾಯ್ದೆಯ ಸ್ವರೂಪ ಬದಲಾಯಿತು. ಅದರ ಪರಿಶಿಷ್ಟದಲ್ಲಿ ಹೆಚ್ಚು ಸಂಖ್ಯೆಯ ಅಪರಾಧಗಳು ಸೇರ್ಪಡೆಯಾದವು. ಇವಕ್ಕೂ ಮಾದಕ ವಸ್ತು ಮಾರಾಟದ ಅಕ್ರಮ ಹಣಕ್ಕೂ ಯಾವುದೇ ಸಂಬಂಧ ಇರಲಿಲ್ಲ.

ಜಾರಿ ನಿರ್ದೇಶನಾಲಯಕ್ಕೆ ಪರಿಶಿಷ್ಟ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಅಪರಾಧ ಚಟುವಟಿಕೆಯ ಆಸ್ತಿಯನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿದೆ. ಈ.ಡಿ. ಅಧಿಕಾರಿ ಶೋಧನೆ, ವಶಪಡಿಸಿಕೊಳ್ಳುವಿಕೆ, ಸಮನ್ಸ್ ನೀಡುವಿಕೆ ಮತ್ತು ಬಂಧನದ ಅಧಿಕಾರ ಹೊಂದಿರುತ್ತಾರೆ.

ಪಿಎಂಎಲ್‌ಎಯನ್ನು ವಿಧಿ 253ರಡಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಿಂದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳು ಬುಡಮೇಲಾಗಿವೆ. ಸೂಕ್ಷ್ಮವಾಗಿ ನೋಡಿದರೆ, ಕಾಯ್ದೆಯ ಅಸಮರ್ಪಕತೆ ಮತ್ತು ಲೋಪಗಳು ಕಣ್ಣಿಗೆ ರಾಚುತ್ತವೆ. ಈ ಕಾಯ್ದೆಯ ಹಲವು ನಿಯಮಗಳ ಸಂವಿಧಾನಬದ್ಧತೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಜಾಮೀನು ನೀಡಿಕೆಗೆ ಹೇರಿರುವ ಶರತ್ತುಗಳು ಬಹಳ ಕಠಿಣವೆಂದು ಹಾಗೂ ಈ.ಡಿ.ಗೆ ಆಸ್ತಿಯನ್ನು ಶೋಧಿಸುವ-ಜಪ್ತಿ ಮಾಡಿಕೊಳ್ಳಲು ನೀಡಿರುವ ಅಧಿಕಾರ ವ್ಯಾಪ್ತಿ ವಿಸ್ತೃತವಾಗಿದೆ ಮತ್ತು ದುರುಪಯೋಗಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.

ಜುಲೈ 27, 2022ರಲ್ಲಿ ವಿಜಯ್ ಮದನ್‌ಲಾಲ್ ಚೌಧರಿ v/s ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ‘ಅಂತರ್‌ರಾಷ್ಟ್ರೀಯ ಒಪ್ಪಂದಗಳಡಿ ಅಕ್ರಮ ಹಣ ಅಪರಾಧದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಮೂಲಭೂತ ಹಕ್ಕುಗಳಿಗಿಂತ ಅದೇ ಮುಖ್ಯ’ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. ನ್ಯಾಯಾಲಯ ಪಿಎಂಎಲ್‌ಎ ನಿಯಮಗಳಿಗೆ ವಿಸ್ತೃತ ಅರ್ಥ ಕೊಡುವ ಮೂಲಕ ಶಾಸನದ ವ್ಯಾಪ್ತಿಯನ್ನು ವಿಸ್ತರಿಸಿದೆ, ಆರೋಪಿಗಳ ಹಕ್ಕುಗಳನ್ನು ನಿರ್ಬಂಧಿಸಿದೆ ಹಾಗೂ ಕಾನೂನು ಇನ್ನಷ್ಟು ಕಠಿಣಗೊಳಿಸಿದೆ. ಈ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ. ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಇಸಿಐಆರ್(ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸುತ್ತದೆ. ಇಸಿಐಆರ್ ಪ್ರತಿಯನ್ನು ಆರೋಪಿಗೆ ನೀಡುವುದು ಕಡ್ಡಾಯವಲ್ಲ. ನಿಯಮ 19ರ ಅಡಿ ವ್ಯಕ್ತಿಯನ್ನು ಬಂಧಿಸುವಾಗ ಬಂಧನಕ್ಕೆ ಆಧಾರವೇನು ಎಂಬುದನ್ನು ಕೊಡಬೇಕು: ಆದರೆ, ಇಸಿಐಆರ್‌ನಲ್ಲಿ ಏನಿದೆ ಎಂಬುದನ್ನು ತಿಳಿಸಬೇಕಾದ ಅಗತ್ಯವಿಲ್ಲ. ಇಸಿಐಆರ್‌ನಲ್ಲಿ ಆತನ ಮೇಲಿನ ಆರೋಪಗಳ ಮಾಹಿತಿ ಇರುತ್ತದೆ. ವ್ಯಕ್ತಿಯೊಬ್ಬನಿಗೆ ಅವನ ಮೇಲಿನ ಆರೋಪಗಳೇನು ಎಂಬುದನ್ನು ತಿಳಿಸಬೇಕಾದ್ದು ಜಾಗತಿಕವಾಗಿ ಗುರುತಿಸಲ್ಪಟ್ಟ ಹಕ್ಕುಗಳು ಮತ್ತು ಸಂವಿಧಾನದ ವಿಧಿ 21 ನೀಡಿದ ಖಾತ್ರಿಪಡಿಸಲ್ಪಟ್ಟ ಬದುಕಿನ-ಸ್ವಾತಂತ್ರ್ಯದ ಹಕ್ಕಿನ ಭಾಗ.

ಪಿಎಂಎಲ್‌ಎ ವಿಧಿ 50ರಡಿ ಅಧಿಕಾರಿಗಳು ಯಾವುದೇ ವ್ಯಕ್ತಿಗೆ ಸಮನ್ಸ್ ನೀಡಬಹುದು; ಆತ ತನಿಖೆ-ವಿಚಾರಣೆ ವೇಳೆ ಸಾಕ್ಷ್ಯ ಒದಗಿಸಬೇಕು ಅಥವಾ ದಾಖಲೆಗಳನ್ನು ಪೂರೈಸಬೇಕಾಗುತ್ತದೆ. ಇದು ಸಂವಿಧಾನದ ವಿಧಿ 20(3) ಕೊಡಮಾಡಿದ ಸ್ವಯಂ ಆರೋಪ ಹೊರಿಸುವಿಕೆ ಹಕ್ಕಿನ ಉಲ್ಲಂಘನೆ. ಪಿಎಂಎಲ್‌ಎ ವಿಧಿ 45, ಅಪರಾಧ ಸಾಬೀತಾಗುವವರೆಗೆ ನಿರಪರಾಧಿ ಎಂಬ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ವ್ಯಕ್ತಿ ತಾನು ನಿರಪರಾಧಿ ಎಂದು ಸಾಬೀತುಪಡಿಸಬೇಕಾಗುತ್ತದೆ. ನ್ಯಾಯಾಲಯಕ್ಕೆ ಆರೋಪಿ ನಿರಪರಾಧಿ ಎಂದು ಅನ್ನಿಸದೆ ಇದ್ದಲ್ಲಿ, ವಿಭಾಗ 45ರಡಿ ಜಾಮೀನು ನಿರಾಕರಿಸಬಹುದು. ದೋಷಾರೋಪ ಪಟ್ಟಿ ಸಲ್ಲಿಸುವ ಮೊದಲೇ ಇಂತಹ ನಿರ್ಧಾರಕ್ಕೆ ಬರಲು ಗಟ್ಟಿ ಗುಂಡಿಗೆಯ ನ್ಯಾಯಾಧೀಶರಿಗೆ ಮಾತ್ರ ಸಾಧ್ಯ. ಜಾಮೀನು ನೀಡಿಕೆ ಮತ್ತು ಆಸ್ತಿಯ ಜಪ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸುವಾಗ, ನ್ಯಾಯಾಲಯದ ನಿರ್ಧಾರವನ್ನು ಈ ಸನ್ನಿವೇಶದಲ್ಲಿ ನೋಡಬೇಕಾಗುತ್ತದೆ.

ಈ ಕಾಯ್ದೆಯಡಿ ಬಂಧಿತರಾದ ರಾಜಕಾರಣಿಗಳಲ್ಲಿ ವಿರೋಧ ಪಕ್ಷದವರೇ ಇರುವುದು ಆಶ್ಚರ್ಯವೇನಲ್ಲ- ಸಚಿವ ಡಿ.ಕೆ. ಶಿವಕುಮಾರ್, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್, ದಿಲ್ಲಿ ಸಚಿವರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಆಪ್ ಸಂಸದ ಸಂಜಯ್ ಸಿಂಗ್(ಬಿಡುಗಡೆಯಾಗಿದ್ದಾರೆ), ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ (ಜಾಮೀನು ಸಿಕ್ಕಿದೆ), ಶಿವಸೇನೆ ಮುಖಂಡ ಅನಿಲ್ ಪರಬ್, ಎನ್‌ಸಿಪಿ ಮುಖಂಡ ನವಾಬ್ ಮಲಿಕ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್......ಪಟ್ಟಿ ಮುಂದುವರಿಯುತ್ತದೆ. ಎನ್‌ಡಿಎ ಮುಖಂಡರು ಒಬ್ಬರೂ ಇಲ್ಲ ಎನ್ನುವುದು ನಿಮಗೆ ಆಶ್ಚರ್ಯ ಹುಟ್ಟಿಸಬಾರದು!

ಪಿಎಂಎಲ್‌ಎ ಬಳಸಲು ಬೇಕಾದ ಏಕೈಕ ಪೂರ್ವಾಗತ್ಯ ಎಂದರೆ ಕಾಯ್ದೆಯಡಿ ಪಟ್ಟಿ ಮಾಡಿದ ಅಪರಾಧವನ್ನು ಮಾಡಲಾಗಿದೆ ಎಂಬ ಆರೋಪ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೆ ಅಥವಾ ವಿಚಾರಣೆ/ತನಿಖೆ ನಡೆಯಬೇಕಿದ್ದರೆ, ಪಿಎಂಎಲ್‌ಎ ಅಡಿ ವಿಚಾರಣೆ ಆರಂಭಿಸಬಹುದು. ಇದಕ್ಕೆ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸದೆ ಇರುವುದರಿಂದ, ಬೇಕಾಬಿಟ್ಟಿ ಬಳಕೆಯಾಗುತ್ತಿದೆ. ಕಾಯ್ದೆಗೆ ಸಣ್ಣ ಮತ್ತು ಗಂಭೀರವಲ್ಲದ ಅಪರಾಧ(ಕಾಪಿರೈಟ್-ಟ್ರೇಡ್‌ಮಾರ್ಕ್ ಉಲ್ಲಂಘನೆ)ಗಳನ್ನು ಸೇರ್ಪಡೆಗೊಳಿಸಿದ್ದು, ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಜಾರಿ ನಿರ್ದೇಶನಾಲಯ ಈ ಕಾಯ್ದೆಯಡಿ ಸಂಬಂಧಿಸಿದ ರಾಜ್ಯದ ಅನುಮತಿ ಇಲ್ಲದೆ, ತನಿಖೆ ನಡೆಸಬಹುದು. ಬೇರೆ ಕೇಂದ್ರೀಯ ತನಿಖಾ ಸಂಸ್ಥೆಗಳು ರಾಜ್ಯ ಸರಕಾರದ ಅನುಮತಿ ಪಡೆಯಬೇಕಾಗುತ್ತದೆ. 2019ರ ಬಳಿಕ ಕಾಯ್ದೆಗೆ ತಂದ ತಿದ್ದುಪಡಿಗಳಿಂದ, ಅಕ್ರಮ ಹಣ ಮತ್ತು ಪರಿಶಿಷ್ಟ ಅಪರಾಧಗಳ ನಡುವಿನ ಗೆರೆ ಅಳಿಸಿಹೋಗಿದೆ. ಜನಪ್ರತಿನಿಧಿಗಳ ಭ್ರಷ್ಟಾಚಾರವನ್ನು ತಡೆಯಲು ರೂಪಿಸಿದ ಭ್ರಷ್ಟಾಚಾರ ತಡೆ ಕಾಯ್ದೆ 1988ಯನ್ನೂ ಪಿಎಂಎಲ್‌ಎಗೆ ಸೇರಿಸಲಾಗಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿದ ರಾಜ್ಯದ ಅನುಮತಿ ಅಗತ್ಯವಿಲ್ಲದ್ದರಿಂದ, ಈ ಕಾಯ್ದೆ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ: ಸಂವಿಧಾನದ ಮೂಲಭೂತ ಚೌಕಟ್ಟಿಗೆ ಧಕ್ಕೆಯುಂಟಾಗಿದೆ.

ಜನವರಿ 31, 2023ರೊಳಗಿನ ಪಿಎಂಎಲ್‌ಎ ಪ್ರಕರಣಗಳು(2014-2024):

ದಾಖಲಾದ ಇಸಿಐಆರ್‌ಗಳು-5,906, ಶೋಧನೆ ನಡೆದ ಇಸಿಐಆರ್‌ಗಳು-531, ಇಸಿಐಆರ್‌ನಲ್ಲಿ ನೀಡಲಾದ ಶೋಧನಾ ವಾರಂಟ್‌ಗಳು- 4,954, ಹಾಲಿ/ಮಾಜಿ ಸಂಸದರು-ಶಾಸಕರ ಮೇಲೆ ದಾಖಲಾದ ಇಸಿಐಆರ್‌ಗಳು-176(ಶೇ.2.98), ಬಂಧಿತರು 1,142, ಪ್ರಾಸಿಕ್ಯೂಷನ್ ದೂರು ದಾಖಲು 25, ಶಿಕ್ಷೆ ನೀಡಿದ ಪ್ರಕರಣಗಳು 24, ಶಿಕ್ಷೆಗೊಳಗಾದ ಆರೋಪಿಗಳು 45, ಬಿಡುಗಡೆಯಾದವರು ಒಬ್ಬರು. ಯುಪಿಎ ಅವಧಿಯಲ್ಲಿ 1,797 ಪ್ರಕರಣ ದಾಖಲಾಗಿತ್ತು. ಕಾಯ್ದೆಯ ವಿಭಾಗ 8(5)ರ ಅಡಿ ವಶಪಡಿಸಿಕೊಂಡ ಮೊತ್ತ 36.23 ಕೋಟಿ ರೂ., ವಿಭಾಗ 8(7)ರ ಅಡಿ ವಶಪಡಿಸಿಕೊಂಡ ಮೊತ್ತ 15,587.44 ಕೋಟಿ ರೂ. ಹಾಗೂ 1,21,618 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. (ಮೂಲ-ಪಿಟಿಐ ಮತ್ತು ಜಾರಿ ನಿರ್ದೇಶನಾಲಯದ ಇಸಿಐಆರ್ ಎನ್ಫೋರ್ಸ್‌ಮೆಂಟ್ ಇನ್ಫರ್‌ರ್ಮೇಶನ್ ವರದಿ).

ಪಿಎಂಎಲ್‌ಎ ಒಂದು ದಾರಿ ತಪ್ಪಿದ ಕಾನೂನು. ಈ ಕಾನೂನಿನಡಿ ಆರೋಪಿಯನ್ನು ದೋಷಮುಕ್ತಗೊಳ್ಳುವವರೆಗೆ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಆತ ದೋಷಿಯಲ್ಲ ಎಂದು ನ್ಯಾಯಾಧೀಶರಿಗೆ ಖಾತ್ರಿಯಾದ ಬಳಿಕವಷ್ಟೇ ಜಾಮೀನು ನೀಡುವುದರಿಂದ ಆರೋಪಿ ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತದೆ. ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ನಿತೇಶ್ ತಾರಾಚಂದ್ ಶಾ v/s ಭಾರತ ಸರಕಾರ ಪ್ರಕರಣದಲ್ಲಿ ಈ ಕಾಯ್ದೆ ವಿಧಿ 14 ಮತ್ತು 21ನ್ನು ಉಲ್ಲಂಘಿಸುವುದರಿಂದ, ಅಸಾಂವಿಧಾನಿಕ ಎಂದು ಹೇಳಿತ್ತು. ಆದರೆ, ಸಂಸತ್ತು ಕೆಲವು ತಿದ್ದುಪಡಿಗಳೊಂದಿಗೆ ಕಾಯ್ದೆಯನ್ನು ಉಳಿಸಿಕೊಂಡಿತು. 2022ರಲ್ಲಿ ನ್ಯಾ.ಕೆ.ಎಂ. ಖನ್ವಿಲ್ಕರ್ ನೇತೃತ್ವದ ಮೂವರು ನ್ಯಾಯಮಮೂರ್ತಿಗಳ ಪೀಠವು ವಿಜಯ್ ಮದನ್ ಲಾಲ್ ಚೌಧರಿ v/s ಭಾರತ ಸರಕಾರ ಪ್ರಕರಣದಲ್ಲಿ ಕಾಯ್ದೆಯ ವಿಭಾಗ 45ನ್ನು ಎತ್ತಿ ಹಿಡಿಯಿತು. ಅದು ತಾರ್ಕಿಕವಾಗಿದೆ ಮತ್ತು ಕಾಯ್ದೆಯ ಉದ್ದೇಶ ಹಾಗೂ ಗುರಿಗೆ ಪೂರಕವಾಗಿದೆ ಎಂದು ಹೇಳಿತು.

ಜಾಮೀನು ಕುರಿತ ನ್ಯಾಯಾಂಗದ ದೃಷ್ಟಿಕೋನವನ್ನು ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ಅವರು ‘ಗುಡಿಗಂಟಿ ನರಸಿಂಹಲು ಹಾಗೂ ಇತರರು v/s ಆಂಧ್ರ ಹೈಕೋರ್ಟ್’ ಪ್ರಕರಣದಲ್ಲಿ ‘‘ಜಾಮೀನು ನಿರಾಕರಣೆಯು ಸಂವಿಧಾನದ ವಿಧಿ 21ರಡಿ ಕೊಡಮಾಡಿದ ಹಕ್ಕಿನ ಉಲ್ಲಂಘನೆ. ಇದರಿಂದ ಆಗುವ ವೈಯಕ್ತಿಕ ಸ್ವಾತಂತ್ರ್ಯದ ನಷ್ಟವು ಅತ್ಯಂತ ಬೆಲೆ ಬಾಳುವಂಥದ್ದು. ಇದರಿಂದ ನಾಗರಿಕರ ಅಸಾಮಾನ್ಯ ಅಧಿಕಾರ ನಿರಾಕರಿಸಲ್ಪಡುತ್ತದೆ; ವೈಯಕ್ತಿಕ ಮತ್ತು ಸಾಮುದಾಯಿಕ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತದೆ’’ ಎಂದು ಹೇಳಿದ್ದರು.

ಪಿಎಂಎಲ್‌ಎ ಉದ್ದೇಶ ಉತ್ತಮವಾಗಿತ್ತು. ಆದರೆ, ವೈಯಕ್ತಿಕ ಸ್ವಾತಂತ್ರ್ಯದ ಪರಿಗಣನೆ ಇಲ್ಲದೆ ಇರುವುದರಿಂದ, ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತಿದೆ. ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News