ಭರವಸೆ ಮೂಡಿಸುತ್ತಿರುವ ಹರಿಪ್ರಸಾದ್
ಕಾಂಗ್ರೆಸ್ ಎಂಬುದು ಮಹಾ ಸಮುದ್ರವಿದ್ದಂತೆ. ಅದರಲ್ಲಿ ಎಲ್ಲ ರೀತಿ, ವಿಭಿನ್ನ ವಿಚಾರ ಧಾರೆಗಳ ಜನರು ಮುಖ್ಯವಾಗಿ ನಾಯಕರು ಮತ್ತು ಕಾರ್ಯಕರ್ತರಿದ್ದಾರೆ. ಡಿ.ಕೆ.ಶಿವಕುಮಾರ್, ಆರ್.ವಿ. ದೇಶ್‌ಪಾಂಡೆ ಅಂಥವರಿರುವಂತೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅಂಥವರೂ ಇದ್ದಾರೆ. ಇಂಥ ಪ್ರಜಾಪ್ರಭುತ್ವವಾದಿ ವ್ಯಕ್ತಿ , ಶಕ್ತಿಗಳನ್ನು ಬೆಂಬಲಿಸಿ ಫ್ಯಾಶಿಸ್ಟ್ ವಿರೋಧಿ ರಂಗವನ್ನು ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಸಿದ್ದರಾಮಯ್ಯನವರು ಮುಖ್ಯ ಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟು ಕೊಟ್ಟ ನಂತರ ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿದವು. ಆಡಳಿತ ಪಕ್ಷದ ಅಂಗಳದಲ್ಲಿ ಹಲವಾರು ಹೆಸರುಗಳು ಹರಿದಾಡಿದವು.ಮಾಧ್ಯಮಗಳು ಕೆಲವು ಹೆಸರುಗಳನ್ನು ತೇಲಿ ಬಿಟ್ಟವು.ಆದರೆ ಇವೆಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದ ಕಾಂಗ್ರೆಸ್ ಹೈ ಕಮಾಂಡ್ ತುಂಬಾ ಅನಿರೀಕ್ಷಿತವಾದ ಹಾಗೂ ಎಲ್ಲರೂ ಹುಬ್ಬೇರಿಸುವಂಥ ಅತ್ಯಂತ ಸೂಕ್ತವಾದ ತೀರ್ಮಾನವನ್ನು ಪ್ರಕಟಿಸಿತು. ಬಿ.ಕೆ.ಹರಿಪ್ರಸಾದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಅತ್ಯಂತ ಸಮರ್ಥ, ಸೈದ್ಧಾಂತಿಕ ಬದ್ಧತೆ ಗೆ ಹೆಸರಾದ ವ್ಯಕ್ತಿ ಆಡಳಿತ ಪಕ್ಷದ ಚುಕ್ಕಾಣಿ ಹಿಡಿದರು.
ಸಂಘ ಪರಿವಾರದ ಕೋಮುವಾದದ ವಿರುದ್ಧ ಅತ್ಯಂತ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತ ಬಂದ ಹರಿಪ್ರಸಾದ್ ರಾಷ್ಟ್ರ ಮಟ್ಟದಲ್ಲಿ ಪಕ್ಷ ವಹಿಸಿಕೊಟ್ಟ ಹಲವಾರು ಹೊಣೆಗಾರಿಕೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದವರು. ಪಕ್ಷದ ವೀಕ್ಷಕರಾಗಿ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿದವರು.ಕೋಮುವಾದ ವಿರೋಧಿ ಸೈದ್ಧಾಂತಿಕ ನಿಲುವಿನಲ್ಲಿ ಎಂದೂ ರಾಜಿಯನ್ನು ಮಾಡಿಕೊಳ್ಳದವರು. ಕಾಂಗ್ರೆಸ್ ನಲ್ಲಿ ಇಂಥವರ ಸಂಖ್ಯೆ ಬೆರಳೆಣಿಕೆಯಷ್ಟು. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಮತೀಯವಾದಿಗಳ ವಿರುದ್ಧ ಇಂಥ ಸಂಘರ್ಷವನ್ನು ನಡೆಸುತ್ತ ಬಂದಿದ್ದರು. ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್‌ಗೆ ಬಹುದೊಡ್ಡ ಸವಾಲನ್ನೇ ಹಾಕಿದ್ದಾರೆ.
ಎಪ್ಪತ್ತು, ಎಂಭತ್ತರ ದಶಕದಲ್ಲಿ ಹರಿಪ್ರಸಾದ್ ಬೆಂಗಳೂರಿನಲ್ಲಿ ವಿದ್ಯಾರ್ಥಿ ನಾಯಕರಾಗಿದ್ದರು. ಇವರ ಕ್ರಿಯಾಶೀಲತೆಯನ್ನು ಗುರುತಿಸಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ರಾಜ್ಯಸಭೆಯ ಸದಸ್ಯರಾಗುವ ಅವಕಾಶವನ್ನು ಒದಗಿಸಿತು. ಹರಿಪ್ರಸಾದ್ ದಿಲ್ಲಿಗೆ ಹೋದ ನಂತರ ತುಂಬಾ ಬದಲಾದರು. ವ್ಯರ್ಥ ಕಾಲ ಹರಣ ಮಾಡದೇ ಸಂಸತ್ ಭವನದ ಅಮೂಲ್ಯ ಗ್ರಂಥಾಲಯದಲ್ಲಿ ದಿನವಿಡೀ, ವಾರವಿಡೀ ಕುಳಿತು ರಾಜಕೀಯ ಸಿದ್ಧಾಂತಗಳ ಬಗ್ಗೆ ಸಂಸದೀಯ ವಿಷಯಗಳ ಕುರಿತು ಗಂಭೀರ ಅಧ್ಯಯನವನ್ನು ಮಾಡಿದರು. ಹರಿಪ್ರಸಾದ್ ಅವರಲ್ಲಾದ ಈ ಬದಲಾವಣೆಯ ಕುರಿತು ಪಿ.ಲಂಕೇಶ್ ಅವರು ಕೂಡ ತುಂಬಾ ಅಚ್ಚರಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
ಕರ್ನಾಟಕದ ಕಾಂಗ್ರೆಸ್‌ಗೆ ಇಂಥವರೊಬ್ಬರ ಅಗತ್ಯವಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇನೋ ಕೋಮುವಾದಿ ಮತ್ತು ಮನುವಾದಿ ಶಕ್ತಿಗಳ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಕಟುವಾಗಿ ಮಾತನಾಡುತ್ತಿದ್ದರು. ಆದರೆ ವಿಷಾದದ ಸಂಗತಿ ಅಂದರೆ ಸದನದಲ್ಲಿ ಬಿಜೆಪಿ ಸದಸ್ಯರನ್ನು ಎದುರು ಹಾಕಿಕೊಂಡು ಸಿದ್ದರಾಮಯ್ಯನವರು ಧ್ವನಿಯೆತ್ತಿ ಮಾತಾಡುವಾಗ ಅವರ ಪಕ್ಷದ ಸದಸ್ಯರೇ ಅವರ ಬೆಂಬಲಕ್ಕೆ ಬರುತ್ತಿರಲಿಲ್ಲ. ಈಗ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಕೋಮುವಾದದ ವಿರುದ್ಧ ಮಾತಾಡುತ್ತಾರೆ. ಹೇಳಿಕೆ ನೀಡುತ್ತಾರೆ. ಅವರನ್ನು ಬೆಂಬಲಿಸಿ ಯಾವ ಕಾಂಗ್ರೆಸ್ ನಾಯಕನೂ ಹೇಳಿಕೆಯನ್ನು ಕೊಡುತ್ತಿಲ್ಲ.___ __ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸನ್ನು ಸೇರಿದ ಅನೇಕ ರಾಜಕಾರಣಿಗಳು ಅಪ್ಪಿತಪ್ಪಿಯೂ ಕೋಮುವಾದದ ಬಗ್ಗೆ ಮಾತಾಡುವುದಿಲ್ಲ.ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ನಂತರವಂತೂ ಕಾಂಗ್ರೆಸಿನ ಅನೇಕ ಮಂತ್ರಿಗಳು, ಶಾಸಕರು ಹಗಲು ಕಾಂಗ್ರೆಸ್ ರಾತ್ರಿ ಬಿಜೆಪಿ ಅಥವಾ ಆರೆಸ್ಸೆಸ್ ಆಗಿರುತ್ತಿದ್ದರು. ಹಲವಾರು ಕಡೆ ಸಂಘ ಪರಿವಾರದ ಅಂಗ ಸಂಘಟನೆಗಳ ಪದಾಧಿಕಾರಿಗಳಾಗಿರುತ್ತಿದ್ದರು. ಗುಟ್ಟಾಗಿ ಅವರಿಗೆ ಹಣಕಾಸಿನ ನೆರವನ್ನೂ ನೀಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಇಂಥವರಿಗೆ ಮೊದಲ ಬಾರಿ ಎಚ್ಚರಿಕೆ ನೀಡಿದ್ದರು.ಆದರೂ ಪ್ರಯೋಜನವಾಗಿರಲಿಲ್ಲ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಘ ಪರಿವಾರದ ಬಗ್ಗೆ ಕೊಂಚ ಮೃದು ಧೋರಣೆಯನ್ನು ತಾಳಿದ್ದರು. ಆವಾಗ ಚಿಕ್ಕ ಮಗಳೂರಿನ ಬಾಬಾ ಬುಡಾನಗಿರಿ ವಿವಾದವನ್ನು ಕೋಮುವಾದಿಗಳು ಹುಟ್ಟು ಹಾಕಿದಾಗ ಅದನ್ನು ಸರಿಯಾಗಿ ಮತ್ತು ತಾತ್ವಿಕವಾಗಿ ನಿಭಾಯಿಸಲಿಲ್ಲ. ಆಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಡಿ.ಬಿ.ಚಂದ್ರೇಗೌಡರು ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಬೇಕಾಗಿದ್ದ ಕಾಂಗ್ರೆಸ್ ನ ಇಂಥ ಧೋರಣೆಯಿಂದಾಗಿ ಆರೆಸ್ಸೆಸ್ ಕರ್ನಾಟಕದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿತು. ರಾಜ್ಯದಲ್ಲಿ ಸರಕಾರ ರಚನೆ ಮಾಡುವಷ್ಟು ಸ್ಥಾನಗಳನ್ನು ಎಂದೂ ಗೆಲ್ಲದಿದ್ದರೂ ಆಪರೇಷನ್ ಕಮಲದಂಥ ಅನೈತಿಕ ಕಸರತ್ತುಗಳ ಮೂಲಕ ಅಧಿಕಾರಕ್ಕೆ ಬಂತು. ಗಣಿ ಲೂಟಿಕೋರರು, ರಿಯಲ್ ಎಸ್ಟೇಟ್ ಖದೀಮರು ಕರ್ನಾಟಕವನ್ನು ಕೊಳ್ಳೆ ಹೊಡೆದರು.
ಇಂಥ ಕಾಂಗ್ರೆಸ್‌ಗೆ ಅಧ್ಯಕ್ಷರಾಗಿ ಈಗ ಹರಿಪ್ರಸಾದ್ ಬಂದಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಕೋಮುವಾದಿಗಳ ವಿರುದ್ಧ ಸಮರವನ್ನು ಸಾರಿದ್ದಾರೆ.ಇತ್ತೀಚೆಗೆ ಹುಬ್ಬಳ್ಳಿಗೆ ಬಂದಿದ್ದ ಅವರು ಆರೆಸ್ಸೆಸ್ ಪರವಾದ ಒಲವನ್ನು ಹೊಂದಿರುವ ಮಂತ್ರಿಗಳು ಮತ್ತು ಶಾಸಕರನ್ನು ಉಚ್ಚಾಟನೆ ಮಾಡುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗವಾಗಿ ಎಚ್ಚರಿಕೆಯನ್ನು ನೀಡಿದರು. ಇದು ಅವರು ಸಹಜವಾಗಿ ಆಡಿದ ಮಾತಲ್ಲ.ಸಾಮಾನ್ಯವಾಗಿ ಶಾಸಕಾಂಗ ಕಾಂಗ್ರೆಸ್ ಪಕ್ಷದ ಬಗ್ಗೆ ಪಕ್ಷದ ಅಧ್ಯಕ್ಷರಾದವರು ಮಾತಾಡುವುದು ತುಂಬಾ ಕಡಿಮೆ. ಅವರಿಗೆ ಇದರ ಬಗ್ಗೆ ಸಾಕಷ್ಟು ಮಾಹಿತಿ ಇದ್ದಂತೆ ಕಾಣುತ್ತದೆ. ಪಕ್ಷವನ್ನು ರಿಪೇರಿ ಮಾಡುವ ನಿರ್ಧಾರವನ್ನು ಅವರು ಮಾಡಿದಂತೆ ಕಾಣುತ್ತದೆ. ಯಾರೇ ಒಪ್ಪಲಿ, ಬಿಡಲಿ ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಅತ್ಯಂತ ದೊಡ್ಡ ಜಾತ್ಯತೀತ
(ಮತ ನಿರಪೇಕ್ಷ) ಪಕ್ಷವೆಂದರೆ ಕಾಂಗ್ರೆಸೊಂದೇ.ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಭಾರತದ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುವ ಸನ್ನಿವೇಶ ನಿರ್ಮಾಣವಾದಾಗ ಕಾಂಗ್ರೆಸನ್ನು ಕಡೆಗಣಿಸಲಾಗುವುದಿಲ್ಲ. ಫ್ಯಾಶಿಸ್ಟ್
ಶಕ್ತಿಗಳ ವಿರುದ್ಧ ರಾಜಿ ರಹಿತ ಹೋರಾಟದ ವಿಷಯದಲ್ಲಿ ಎಡಪಂಥೀಯ ಪಕ್ಷಗಳು ಮುಂಚೂಣಿಯಲ್ಲಿರುವುದು ನಿಜ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವುಗಳು ಮೊದಲಿನ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ.ಇದಕ್ಕೆ ಹಲವಾರು ಕಾರಣಗಳಿರಬಹುದು, ಅದರ ಬಗ್ಗೆ ಚರ್ಚೆ ಈಗ ಅಪ್ರಸ್ತುತ. ಇನು,್ನ ಉಳಿದ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಹೊಡೆತಕ್ಕೆ ತತ್ತರಿಸಿ ಹೋಗಿವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವಸೇನೆ ಮೊದಲಾದ ಪ್ರಾದೇಶಿಕ ಪಕ್ಷಗಳನ್ನು ಇಬ್ಭ್ಬಾಗ ಮಾಡುವಲ್ಲಿ ಮೋದಿ, ಅಮಿತ್‌ಶಾ ಜೋಡಿ ಯಶಸ್ವಿಯಾಗಿದೆ. ಇಂಥ ಪರಿಸ್ಥಿತಿಯಲ್ಲೂ ಜನತಂತ್ರಕ್ಕೆ ಮತ್ತು ಮತ ನಿರಪೇಕ್ಷತೆಗೆ ಒಂದಿಷ್ಟು ಬದ್ಧತೆಯನ್ನು ಉಳಿಸಿಕೊಂಡ ಪಕ್ಷ ಕಾಂಗ್ರೆಸೊಂದೇ. ಅದು ಯಾವುದೇ ರಾಜ್ಯ, ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶ ವ್ಯಾಪಿಯಾಗಿ ಅದಕ್ಕೆ ಬೇರುಗಳಿವೆ ಮತ್ತು ಕೇವಲ ಯಾವುದೋ ಒಂದು ಜಾತಿ, ಮತಗಳಿಗೆ ಸೀಮಿತವಾಗಿ ಉಳಿದಿಲ್ಲ. ಹಿಂದೂ,ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಲಿಂಗಾಯತ ಹೀಗೆ ಎಲ್ಲ ಸಮುದಾಯಗಳ ಜನ ಅದರಲ್ಲಿ ಇದ್ದಾರೆ. ಕಾಂಗ್ರೆಸ್ ಮತ್ತು ಎಡ, ಪ್ರಜಾಪ್ರಭುತ್ವವಾದಿ ಪಕ್ಷಗಳ ಮೈತ್ರಿಯೊಂದೇ ಸದ್ಯದ ಪರಿಸ್ಥಿತಿಯಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಎದುರಿಸಲು ಸಾಧ್ಯ.
ಕಾಂಗ್ರೆಸ್‌ನಲ್ಲಿ ಹಲವಾರು ಲೋಪದೋಷಗಳಿವೆ.ಅದರ ಪ್ರತಿಗಾಮಿ ಆರ್ಥಿಕ ನೀತಿಯನ್ನು ಒಪ್ಪಲು ಆಗುವುದಿಲ್ಲ. ಆದರೆ ಮನುವಾದಿ ಹಿಂದೂ ರಾಷ್ಟ್ರ ವನ್ನು ನಿರ್ಮಿಸಲು ಹೊರಟ, ಆ ನಿಟ್ಟಿನಲ್ಲಿ ಯಶಸ್ಸಿನತ್ತ ಸಾಗಿರುವ ಆರೆಸ್ಸೆಸ್ ಬಿಜೆಪಿಗಳನ್ನು ಹಿಮ್ಮೆಟ್ಟಿಸುವುದು ಸುಲಭವಲ್ಲ. ಆ ಫ್ಯಾಶಿಸ್ಟ್
ಸಂಘಟನೆ ಈಗ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಉಳಿದಿಲ್ಲ, ಸರಕಾರ ಅವರ ಕೈಯಲ್ಲಿ ಇರುವುದು ಮಾತ್ರವಲ್ಲ, ಆಡಳಿತಾಂಗ, ಶೈಕ್ಷಣಿಕ, ಪೊಲೀಸ್ ಇಲಾಖೆ, ಚುನಾವಣಾ ಆಯೋಗ, ನ್ಯಾಯಾಂಗ , ಸೇನೆ, ಧಾರ್ಮಿಕ ಹೀಗೆ ಎಲ್ಲ ಕಡೆ ಆರೆಸ್ಸೆಸ್ ಸ್ವಯಂ ಸೇವಕರು ತುಂಬಿ ತುಳುಕುತ್ತಿದ್ದಾರೆ.ದೇಶದ ಬಹುಸಂಖ್ಯಾತ ಯುವಕರನ್ನು (20 ರಿಂದ 35 ವಯಸ್ಸಿನವರು) ಮುಸ್ಲಿಮ್ ವಿರೋಧಿಗಳನ್ನಾಗಿ ಮಾರ್ಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಕಾಂಗ್ರೆಸನ್ನು ಅದರ ಎಲ್ಲ ಲೋಪಗಳೊಂದಿಗೆ ಜೊತೆಗೆ ಸೇರಿಸಿಕೊಳ್ಳಬೇಕಾಗಿದೆ.
ಕಾಂಗ್ರೆಸ್ ಎಂಬುದು ಮಹಾ ಸಮುದ್ರವಿದ್ದಂತೆ. ಅದರಲ್ಲಿ ಎಲ್ಲ ರೀತಿಯ ,ವಿಭಿನ್ನ ವಿಚಾರ ಧಾರೆಗಳ ಜನರು ಮುಖ್ಯವಾಗಿ ನಾಯಕರು ಮತ್ತು ಕಾರ್ಯಕರ್ತರಿದ್ದಾರೆ. ಡಿ.ಕೆ.ಶಿವಕುಮಾರ್, ಆರ್.ವಿ. ದೇಶ್‌ಪಾಂಡೆ ಅಂಥವರಿರುವಂತೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅಂಥವರೂ ಇದ್ದಾರೆ. ಇಂಥ ಪ್ರಜಾಪ್ರಭುತ್ವ ವಾದಿ ವ್ಯಕ್ತಿ , ಶಕ್ತಿಗಳನ್ನು ಬೆಂಬಲಿಸಿ ಫ್ಯಾಶಿಸ್ಟ್
ವಿರೋಧಿ ರಂಗವನ್ನು ನಿರ್ಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಕಳೆದ ಶತಮಾನದ 30,40ರ ದಶಕದಲ್ಲಿ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸ್ಸೋಲಿನಿಯಂಥ ಫ್ಯಾಶಿಸ್ಟ್ ಸರ್ವಾಧಿಕಾರಿಗಳು ಜಗತ್ತನ್ನೇ ನಾಶ ಮಾಡಲು ಹೊರಟಾಗ ಬಲ್ಗೇರಿಯಾದ ಕಮ್ಯುನಿಸ್ಟ್ ನಾಯಕ ಡಿಮಿತ್ರೋವ್ ಫ್ಯಾಶಿಸ್ಟ್ ವಿರೋಧಿ ಹೋರಾಟ ಹೇಗಿರಬೇಕು ಮತ್ತು ಅದಕ್ಕಾಗಿ ರೂಪುಗೊಳ್ಳಬೇಕಾದ ಸಂಯುಕ್ತ ರಂಗದ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಒಂದು ವೈಜ್ಞಾನಿಕವಾದ ,
ಸ್ಪಷ್ಟವಾದ ದಾರಿಯನ್ನು ತೋರಿಸಿದ್ದಾರೆ. ಅದು ಈಗಲೂ ಪ್ರಸ್ತುತ ವಾಗಿದೆ.ಭಾರತದ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಅದೇ ದಾರಿಯಲ್ಲಿ ಸಾಗಿದೆ. ಉಳಿದ ಕಮ್ಯುನಿಸ್ಟ್ ಪಕ್ಷಗಳು ಕೂಡ ಫ್ಯಾಶಿಸಮ್ ಮೊದಲ ಶತ್ರು ಎಂದು ಒಪ್ಪಿಕೊಂಡಿವೆ.ಇಂದಿನ ಕ್ಲಿಷ್ಟಕರ ಸಂದರ್ಭದಲ್ಲಿ ಅದೊಂದೇ ಉಳಿದ ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕತ್ವ ಹರಿಪ್ರಸಾದ್ ಅಂಥವರ ಕೈಗೆ ಬಂದಿದೆ. ರಾಹುಲ್ ಗಾಂಧಿಯವರು ಕೂಡ ಅತ್ಯಂತ ಸ್ಪಷ್ಟವಾದ ಫ್ಯಾಶಿಸ್ಟ್ ವಿರೋಧಿ ನಿಲುವನ್ನು ಹೊಂದಿದ್ದಾರೆ. ಈಗ ನಮ್ಮ ಗುರಿ ಬಹುತ್ವ ಭಾರತವನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಾಗಿದೆ. ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಿದ ನಂತರ ಸಮಾನತೆಯ ವ್ಯವಸ್ಥೆಗಾಗಿನ ನಮ್ಮ ಹೋರಾಟ ಮುಂದುವರಿಯುತ್ತಿದೆ.ಇದೊಂದು ಸುದೀರ್ಘವಾದ ಸಂಘರ್ಷ. ಅವಸರ ಮಾಡುವ ಕಾಲಘಟ್ಟ ಇದಲ್ಲ. ಕರ್ನಾಟಕದಂಥ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಹರಿಪ್ರಸಾದ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಸರಕಾರ ಸುಗಮವಾಗಿ ಸಾಗಲು ಸಮನ್ವಯ ಸಮಿತಿಯೊಂದನ್ನು ರಚಿಸಿ ಅದರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.
ಫ್ಯಾಶಿಸ್ಟ್ ವಿರೋಧಿ ಹೋರಾಟ ಮತ್ತು ಕಾರ್ಯಕ್ರಮ ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.