ಒಂದು ದಶಕದ ಗುಂಪು ಹಿಂಸಾಚಾರವನ್ನು ದಾಖಲಿಸಿದ ಅಧ್ಯಯನ
ದಶಕವೊಂದರ ಅವಧಿಯಲ್ಲಿ ಸಂಭವಿಸಿದ ಗುಂಪು ಹಿಂಸೆ (mob lynching)ದ ಕುರಿತು ಇದೇ ಮೊದಲ ಬಾರಿಗೆ ಸಮಗ್ರ ವರದಿಯೊಂದು ಪ್ರಕಟಗೊಂಡಿದೆ. ’Mob Lynching in India-A Record 2014-2024’ ಎಂಬ ಶೀರ್ಷಿಕೆಯ ಈ 744 ಪುಟಗಳ ಬೃಹತ್ ವರದಿಯು, ಉಲ್ಲೇಖಿತ ಅವಧಿಯಲ್ಲಿ ನಡೆದ 1,743 ಗುಂಪು ಹಿಂಸಾ ಪ್ರಕರಣಗಳನ್ನು ಅಧ್ಯಯನ ಮಾಡಿ ದಾಖಲಿಸಿದೆ. 21ನೇ ಶತಮಾನದಲ್ಲಿ, ಭಾರತದ ಬಹುತೇಕ ಭಾಗಗಳಲ್ಲಿ ‘ಹೊಸ ಸಾಮಾನ್ಯ ಸಂಗತಿ’ ಎಂಬಂತಾಗಿರುವ ಈ ‘ದೇಶದಲ್ಲೇ ರೂಪುಗೊಂಡ ವಿಶಿಷ್ಟ ಮಾದರಿಯ ಭಯೋತ್ಪಾದನೆ’ಯ ಬಗ್ಗೆ ಮೊದಲ ಬಾರಿಗೆ ವಿವರವಾದ ಅಧ್ಯಯನ ನಡೆಸಲಾಗಿದೆ.
ಮೇ 2014ರಿಂದ ಮೇ 2024ರವರೆಗಿನ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರಕಾರದ ಮೊದಲ ಎರಡು ಅವಧಿಗಳಲ್ಲಿ ನಡೆದ ಗುಂಪು ಹಿಂಸೆ ಪ್ರಕರಣಗಳ ಬಗ್ಗೆ ಈ ಪುಸ್ತಕ ಅಧ್ಯಯನ ನಡೆಸಿದೆ. ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಡಾ. ಝಫರುಲ್ ಇಸ್ಲಾಮ್ ಖಾನ್ ಅವರ ಸಂಪಾದಕತ್ವದಲ್ಲಿ ಈ ವರದಿ ಸಿದ್ಧಗೊಂಡಿದೆ. ಇದಕ್ಕಾಗಿ ಸಂಶೋಧಕರ ತಂಡವೊಂದು ಹಲವು ವರ್ಷಗಳ ಕಾಲ ದತ್ತಾಂಶಗಳನ್ನು ಸಂಗ್ರಹಿಸಿದೆ.
1984ರ ಸಿಖ್ ವಿರೋಧಿ ಗಲಭೆ, 2002ರ ಗುಜರಾತ್ ಗಲಭೆ ಮತ್ತು ಮಾಟಗಾತಿಯರೆಂದು ಆರೋಪಿಸಿ ನಡೆಸಲಾಗಿರುವ ಹತ್ಯೆಗಳಂತಹ ಗುಂಪು ಹಿಂಸೆಗಳು ಭಾರತದಲ್ಲಿ ಹಿಂದೆಯೇ ಇದ್ದರೂ, 2014ರ ನಂತರದ ಹಿಂಸಾಚಾರದ ಸ್ವರೂಪ ಗಣನೀಯವಾಗಿ ಭಿನ್ನವಾಗಿದೆ ಎಂದು ಅಧ್ಯಯನವು ಹೇಳುತ್ತದೆ. ಹಿಂದಿನ ಕೋಮುಗಲಭೆಗಳು ಕೆಲವು ಸಂದರ್ಭಗಳಲ್ಲಿ ಸ್ಫೋಟಗೊಂಡು ಕ್ರಮೇಣ ಮರೆಯಾಗುತ್ತಿದ್ದವು. ಆದರೆ ಗುಂಪು ಹಲ್ಲೆಯು ನಿರಂತರ, ದೈನಂದಿನ ವಿದ್ಯಮಾನವಾಗಿ ರೂಪಾಂತರಗೊಂಡಿದೆ. ಎಷ್ಟರಮಟ್ಟಿಗೆಂದರೆ, ಈಗ ಇದು ಪತ್ರಿಕೆಗಳ ಮುಖಪುಟದಲ್ಲಾಗಲಿ ಅಥವಾ ಒಳಗಿನ ಪುಟಗಳಲ್ಲಾಗಲಿ ಸುದ್ದಿಯಾಗುವುದೇ ಅಪರೂಪವಾಗಿದೆ. ಗುಂಪು ಹಿಂಸೆಯ ಹೆಚ್ಚಿನ ಪ್ರಕರಣಗಳು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರನ್ನು ಗುರಿಯಾಗಿಸಿಕೊಂಡ ದ್ವೇಷ ಅಪರಾಧಗಳಾಗಿವೆ. ಅದೇ ವೇಳೆ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಕಳ್ಳತನ, ಜಾನುವಾರು ಕಳ್ಳತನ, ವಾಮಾಚಾರದ ಆರೋಪಗಳು, ರಸ್ತೆ ಕಲಹಗಳು, ವೈಯಕ್ತಿಕ ದ್ವೇಷ, ಮತಾಂತರ ಮತ್ತು ಅಂತರ್ಜಾತಿ ವಿವಾಹಗಳಂತಹ ಪ್ರಕರಣಗಳಲ್ಲಿ ಶಂಕಿತರೆಂದು ಗುರುತಿಸಿಲ್ಪಟ್ಟವರನ್ನು ಕಾನೂನುಬಾಹಿರವಾಗಿ ಕೊಲ್ಲುವುದು ಒಂದು ಪ್ರವೃತ್ತಿಯಾಗಿ ಬೆಳೆದಿದೆ. ಪೊಲೀಸರ ನಿರಾಸಕ್ತಿ ಮತ್ತು ಕೆಲವು ಪ್ರಕರಣಗಳಲ್ಲಿ ಅವರ ಶಾಮೀಲಾತಿಯೂ ಜನರು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸಿದೆ.
ಗೋಮಾಂಸ ಸೇವನೆ, ಗೋಹತ್ಯೆ ಮತ್ತು ಜಾನುವಾರು ವ್ಯಾಪಾರದ ಆರೋಪಗಳನ್ನು ಮುಂದಿಟ್ಟುಕೊಂಡು ‘ಗೋರಕ್ಷಣೆ’ಯ ಹೆಸರಿನಲ್ಲಿ ಆರಂಭವಾದ ಗುಂಪು ಹಿಂಸಾಚಾರವು ಈಗ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ ಎಂದು ವರದಿ ಹೇಳುತ್ತದೆ. ಅದೇ ವೇಳೆ, ಈ ಅಧ್ಯಯನವು ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಈ ಗೋರಕ್ಷಕರು ಅರೆಪೊಲೀಸ್ ಪಡೆಯಂತೆ ಹೇಗೆ ಬದಲಾದರು, ಯಾವುದೇ ಶಿಕ್ಷೆಯ ಭಯವಿಲ್ಲದೆ ಮುಸ್ಲಿಮರನ್ನು ಹೇಗೆ ಹತ್ಯೆ ಮಾಡಿದರು, ಜಾನುವಾರು ಸಾಗಿಸುವ ಲಾರಿಗಳಿಂದ ಹೇಗೆ ಸುಲಿಗೆ ಮಾಡಿದರು ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸರಕಾರಿ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಜಾನುವಾರುಗಳನ್ನು ಹೇಗೆ ಲೂಟಿ ಮಾಡಿದರು ಎಂಬುದನ್ನು ಈ ಅಧ್ಯಯನವು ದಾಖಲಿಸಿದೆ. ಜಮೀನು ವಿವಾದ, ಹಣಕಾಸು ಕಲಹ, ಅಂತರ್ಜಾತಿ ವಿವಾಹ, ಮಕ್ಕಳ ಕಳ್ಳತನದ ವದಂತಿಗಳು, ದನಗಳ ಕಳವು ಮತ್ತು ದೇವಸ್ಥಾನದ ನಲ್ಲಿಯಿಂದ ನೀರು ಕುಡಿದಂತಹ ಕ್ಷುಲ್ಲಕ ವಿಚಾರಗಳಲ್ಲೂ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡವು ಎಂದು ವರದಿ ಹೇಳಿದೆ.
ಹಾಲಿ ದ್ವೇಷ ಅಪರಾಧಗಳಲ್ಲಿನ ಒಂದು ವಿಶಿಷ್ಟ ಕಾರ್ಯವಿಧಾನವನ್ನು ಅಧ್ಯಯನವು ಎತ್ತಿ ತೋರಿಸುತ್ತದೆ: ಗಡ್ಡ ಅಥವಾ ಮುಸ್ಲಿಮ್ ಸಾಂಪ್ರದಾಯಿಕ ಟೋಪಿಗಳಂತಹ ಎದ್ದುಕಾಣುವ ಧಾರ್ಮಿಕ ಗುರುತುಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಾರ್ವಜನಿಕ ಸ್ಥಳಗಳು, ಬಸ್‌ಗಳು, ರೈಲುಗಳು ಮತ್ತು ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತದೆ. ಸಂತ್ರಸ್ತರನ್ನು ‘ಜೈ ಶ್ರೀರಾಮ್’ನಂತಹ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸಲಾಗುತ್ತದೆ ಹಾಗೂ ಅವರು ನಿರಾಕರಿಸಿದರೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತದೆ. ಈ ಪರಿಸ್ಥಿತಿಯು ಸಾರ್ವಜನಿಕ ಮುಕ್ತ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮುಸ್ಲಿಮ್ ಗುರುತಿನೊಂದಿಗೆ ಪ್ರಯಾಣಿಸುವುದು, ಅದರಲ್ಲೂ ಮುಖ್ಯವಾಗಿ ಬಡವರಿಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಿದೆ ಎಂದು ಪುಸ್ತಕವು ಹೇಳುತ್ತದೆ.
ಗುಂಪು ಹಿಂಸೆಗಳಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಶಿಕ್ಷೆಯಿಂದ ನೀಡಲಾಗುತ್ತಿರುವ ವಿನಾಯಿತಿಯ ಬಗ್ಗೆಯೂ ಈ ಕೃತಿಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಅಪರಾಧಿಗಳು ತಮ್ಮ ಹಿಂಸಾಚಾರದ ಕೃತ್ಯಗಳನ್ನು ವೀಡಿಯೊ ರೆಕಾರ್ಡ್ ಮಾಡಿ ವಾಟ್ಸ್‌ಆ್ಯಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ. ವ್ಯವಸ್ಥೆಯಿಂದ ಅವರಿಗೆ ದೊರೆಯುತ್ತಿರುವ ರಕ್ಷಣೆಯೇ ಈ ದುಸ್ಸಾಹಸಕ್ಕೆ ಕಾರಣ ಎಂದು ಅಧ್ಯಯನವು ಹೇಳುತ್ತದೆ. ಆರೋಪಿಗಳಿಗೆ ಕೆಲವೇ ದಿನಗಳಲ್ಲಿ ಅಥವಾ ವಾರಗಳಲ್ಲಿ ಜಾಮೀನು ಸಿಗುತ್ತದೆ. ಕೆಲವೊಮ್ಮೆ ಸಮುದಾಯಗಳು ಅವರನ್ನು ನಾಯಕರಂತೆ ಸ್ವಾಗತಿಸುತ್ತವೆ. ಕೇಂದ್ರ ಸಚಿವರೊಬ್ಬರೂ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಗುಂಪು ಹಿಂಸಾಚಾರದ ಆರೋಪಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಿ, ಹಾರ ಹಾಕಿ, ಅವರ ಕಾನೂನು ಹೋರಾಟದ ವೆಚ್ಚವನ್ನು ಭರಿಸಿದ ನಿದರ್ಶನಗಳನ್ನು ಪುಸ್ತಕವು ಪಟ್ಟಿ ಮಾಡಿದೆ.
ಸಾಮಾಜಿಕ-ರಾಜಕೀಯ ಬೆಂಬಲ
ಗುಂಪು ಹಿಂಸಾಚಾರವನ್ನು ಸಾಂಪ್ರದಾಯಿಕ ಕೋಮುಗಲಭೆಗಳಿಗೆ ಒಂದು ಆಯಕಟ್ಟಿನ ಪರ್ಯಾಯವಾಗಿ ಅಧ್ಯಯನವು ಗುರುತಿಸುತ್ತದೆ. ಪೂರ್ಣ ಪ್ರಮಾಣದ ಗಲಭೆಗಳಲ್ಲಿ ದುಷ್ಕರ್ಮಿಗಳು ಗಾಯಗೊಳ್ಳುವ ಮತ್ತು ಅವರ ಆಸ್ತಿಪಾಸ್ತಿಗೆ ಹಾನಿಯಾಗುವ ಅಪಾಯವಿರುತ್ತದೆ. ಆದರೆ ಬಡ ಹಾಗೂ ನಿರಾಯುಧ ವ್ಯಕ್ತಿಗಳ ಮೇಲಿನ ಗುಂಪು ಹಲ್ಲೆಯು, ತಮಗೆ ಯಾವುದೇ ಅಪಾಯವಿಲ್ಲದೆ ಸಂತ್ರಸ್ತರನ್ನು ಗುರಿಯಾಗಿಸಲು ಹಿಂಸಾತ್ಮಕ ಗುಂಪುಗಳಿಗೆ ಅವಕಾಶ ನೀಡುತ್ತದೆ. ಭೀತಿಯನ್ನು ಹುಟ್ಟಿಸುವುದು, ಶರಣಾಗುವಂತೆ ಮಾಡುವುದು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಮೂಲೆಗುಂಪು ಮಾಡುವ ಪ್ರಯತ್ನವಾಗಿ ಈ ಕೃತ್ಯಗಳನ್ನು ನಡೆಸಲಾಗುತ್ತಿವೆ ಎಂದು ಅಧ್ಯಯನವು ಹೇಳುತ್ತದೆ.
ಈ ಘಟನೆಗಳನ್ನು ಅಮೆರಿಕದಲ್ಲಿ 19ನೇ ಶತಮಾನದ ಕೊನೆಯಲ್ಲಿ ನಡೆದ ಐತಿಹಾಸಿಕ ಘಟನೆಗಳಿಗೆ ಹೋಲಿಸಬಹುದಾಗಿದೆ. ಅಲ್ಲಿ ಆಫ್ರಿಕನ್-ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದ ಗುಂಪು ಹಿಂಸಾಚಾರದ ವಿರುದ್ಧ ಐಡಾ ಬಿ. ವೆಲ್ಸ್-ಬಾರ್ನೆಟ್ ಚಳವಳಿಯನ್ನೇ ಆರಂಭಿಸಿದ್ದರು.
ಪುಸ್ತಕದಲ್ಲಿ, ಈ ಗುಂಪು ಹಿಂಸಾಚಾರ ಜಾಲಗಳ ಹಿಂದಿರುವ ರಾಜಕೀಯ ಆರ್ಥಿಕತೆಯ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಸಂಘಟಿತ ಹಿಂಸಾತ್ಮಕ ಗುಂಪುಗಳು ಸಮಾಜದ ಕೆಳಸ್ತರದ ನಿರುದ್ಯೋಗಿ ಯುವಕರಿಗೆ ಅನೌಪಚಾರಿಕ ಉದ್ಯೋಗವನ್ನು ಒದಗಿಸುತ್ತವೆ. ಗೋರಕ್ಷಣೆಯ ಸೋಗಿನಲ್ಲಿ, ಉತ್ತರ ಭಾರತದಾದ್ಯಂತ ಈ ಸಶಸ್ತ್ರ ಗುಂಪುಗಳು ಅಪಾರ ಮೌಲ್ಯದ ಜಾನುವಾರು ಮತ್ತು ಆಸ್ತಿಗಳನ್ನು ಲೂಟಿ ಮಾಡಿವೆ. ಈ ಕಾನೂನುಬಾಹಿರ ಗುಂಪುಗಳು ಜಾನುವಾರು ಸಾಗಿಸುವ ಟ್ರಕ್‌ಗಳಿಂದ ಭಾರೀ ಪ್ರಮಾಣದಲ್ಲಿ ಶುಲ್ಕವನ್ನೂ ವಸೂಲಿ ಮಾಡುತ್ತವೆ.
ಇದಲ್ಲದೆ, ಈ ಸಂಘಟಿತ ಗುಂಪುಗಳು ವ್ಯಾಪಕ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ರಾಜಕೀಯ ವಿರೋಧಿಗಳನ್ನು ಬೆದರಿಸಲು ಮತ್ತು ಮತಬ್ಯಾಂಕ್‌ಗಳನ್ನು ಗಟ್ಟಿಗೊಳಿಸಲು ಚುನಾವಣೆಗಳ ಮುನ್ನ ಮತ್ತು ಚುನಾವಣಾ ಸಮಯದಲ್ಲಿ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಇದರ ಪರಿಣಾಮವಾಗಿ, ಸಂಘ-ಪರಿವಾರ ಪ್ರೇರಿತ ಹಿಂಸಾಚಾರವು ಐತಿಹಾಸಿಕವಾಗಿ ವಿರಳವಾಗಿದ್ದ ಪಶ್ಚಿಮ ಬಂಗಾಳ, ಗೋವಾ ಮತ್ತು ಈಶಾನ್ಯ ರಾಜ್ಯಗಳಿಗೂ ಹರಡಿದೆ ಎಂದು ವರದಿ ಹೇಳುತ್ತದೆ.
ಸಾರ್ವಜನಿಕರ ನಿರ್ಲಕ್ಷ್ಯ ಮತ್ತು ಮಾಧ್ಯಮಗಳ ತಪ್ಪು ವರದಿಗಾರಿಕೆಯನ್ನು ಅಧ್ಯಯನವು ಟೀಕಿಸುತ್ತದೆ. ಟಿ.ವಿ. ಚಾನೆಲ್‌ಗಳು ಮತ್ತು ಆನ್‌ಲೈನ್ ಮಾಧ್ಯಮಗಳು ಹಿಂದುತ್ವದ ಐಟಿ ಸೆಲ್‌ಗಳಿಂದ ಪ್ರಭಾವಿತಗೊಂಡು ಮಾಧ್ಯಮ ಹಿಂಸಾಚಾರಿಗಳಂತೆ ವರ್ತಿಸುತ್ತಿವೆ ಎಂದು ಹೇಳಲಾಗಿದೆ. ಕ್ರಿಶ್ಚಿಯನ್ನರು, ದಲಿತರು ಮತ್ತು ಮುಸ್ಲಿಮರು ಈ ಗುಂಪು ಹಿಂಸಾಚಾರಗಳ ಪ್ರಮುಖ ಗುರಿಯಾಗಿದ್ದರೂ, ಆ ಸಮುದಾಯಗಳ ಪ್ರತಿಕ್ರಿಯೆಗಳಲ್ಲಿ ವ್ಯತ್ಯಾಸವಿರುವುದನ್ನು ಅಧ್ಯಯನವು ಗಮನಿಸಿದೆ. ದಲಿತ ಸಂಘಟನೆಗಳು ಸಾರ್ವಜನಿಕ ಪ್ರತಿಭಟನೆಗಳನ್ನು ಸಂಘಟಿಸುವ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದರೆ, ಕ್ರಿಶ್ಚಿಯನ್ನರು ನಿಯಮಿತವಾಗಿ ವರದಿಗಳನ್ನು ಪ್ರಕಟಿಸುತ್ತಾರೆ. ಆದರೆ ಮುಸ್ಲಿಮರು ವ್ಯವಸ್ಥಿತ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಯಾವುದೇ ನ್ಯಾಯಾಂಗ ಪ್ರಕ್ರಿಯೆಯಿಲ್ಲದೆ, ಮುಸ್ಲಿಮರ ಮನೆ, ಮಸೀದಿ, ಮದ್ರಸ ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ಸರಕಾರಿ ಶಿಕ್ಷೆಯ ಬೆದರಿಕೆ ನೆತ್ತಿಯ ಮೇಲೆ ಯಾವತ್ತೂ ತೂಗುತ್ತಿರುತ್ತದೆ ಎಂದು ವರದಿ ಹೇಳುತ್ತದೆ.
ಆತಂಕಕಾರಿ ಸಾಮಾಜಿಕ ಮನಸ್ಥಿತಿ
ಈ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿ ರುವ ರಾಜಕೀಯ ವಾತಾವರಣವನ್ನು ವಿವರಿಸಲು, ಹೆಸರಾಂತ ಪತ್ರಕರ್ತೆ ತವ್ಲೀನ್ ಸಿಂಗ್ ಮತ್ತು ಹಿರಿಯ ಆರೆಸ್ಸೆಸ್ ಪದಾಧಿಕಾರಿಯೊಬ್ಬರ ನಡುವೆ ನಡೆದ ಸಂಭಾಷಣೆಯನ್ನು ಅಧ್ಯಯನವು ಉಲ್ಲೇಖಿಸುತ್ತದೆ. ನಿರಾಯುಧ ವ್ಯಕ್ತಿಗಳ ಮೇಲೆ ಗುಂಪುಗಳು ಹಲ್ಲೆ ನಡೆಸುವುದನ್ನು ಶೌರ್ಯದ ಸಂಕೇತವೆಂದು ಏಕೆ ಆಚರಿಸಲಾಗುತ್ತದೆ ಎಂದು ಕೇಳಿದಾಗ, ‘‘ಕನಿಷ್ಠ ಪಕ್ಷ ಹೇಗೆ ತಿರುಗಿಬೀಳಬೇಕೆನ್ನುವುದನ್ನು ಹಿಂದೂಗಳು ಕಲಿತಿದ್ದಾರೆ’’ ಎಂಬುದಾಗಿ ಆ ಪದಾಧಿಕಾರಿ ಉತ್ತರಿಸಿದ್ದರು.
ಸೀಮಿತ ವ್ಯಾಪ್ತಿಯ ಅಧ್ಯಯನ
ಈ ಕೃತಿಯಲ್ಲಿ ಪ್ರಸ್ತುತಪಡಿಸಲಾಗಿರುವ ಶೋಧನೆಗಳು 2014-2024ರ ಅವಧಿಯ ಎಲ್ಲಾ ಹಿಂಸಾಚಾರಗಳ ಸಂಪೂರ್ಣ ವಿಶ್ಲೇಷಣೆಯಲ್ಲ, ಬದಲಿಗೆ ಇತಿಮಿತಿಗಳಿಂದ ಕೂಡಿದ ಶೋಧನೆಗಳಾಗಿವೆ ಎಂದು ಅಧ್ಯಯನವು ಸ್ಪಷ್ಟಪಡಿಸುತ್ತದೆ. ಈ ಸಂಶೋಧನಾ ವರದಿಯು, ಪ್ರಮುಖವಾಗಿ ದಿಲ್ಲಿ ಪತ್ರಿಕೆಗಳು, ಕೆಲವು ಸುದ್ದಿ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ದಾಖಲೆಗಳನ್ನು ಆಧರಿಸಿದೆ.
ಸ್ಥಳೀಯ ಪೊಲೀಸ್ ಠಾಣೆಗಳ ದಾಖಲೆಗಳು ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಸಂಪನ್ಮೂಲಗಳ ಕೊರತೆ ಇದ್ದುದರಿಂದ, ವಾಸ್ತವಿಕವಾಗಿ ಸಂಭವಿಸಿರುವ ಘಟನೆಗಳ ಸಂಖ್ಯೆಯು ವರದಿಯಾದ ಅಂಕಿಅಂಶಗಳಿಗಿಂತ ಗಣನೀಯವಾಗಿ ಹೆಚ್ಚಿರುವ ಸಾಧ್ಯತೆಯಿದೆ ಎಂದು ಅಧ್ಯಯನವು ಸ್ಪಷ್ಟಪಡಿಸುತ್ತದೆ.
ಸರಕಾರಿ ಪ್ರಾಯೋಜಿತ ಎನ್‌ಕೌಂಟರ್ ಹತ್ಯೆಗಳು ಮತ್ತು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ ಸಾವುಗಳನ್ನು ಈ ಅಧ್ಯಯನದ ವ್ಯಾಪ್ತಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ. ಅವುಗಳನ್ನು ಪ್ರತ್ಯೇಕ ವರ್ಗಕ್ಕೆ ಸೇರಿದ ನ್ಯಾಯಾಂಗಬಾಹಿರ ಹಿಂಸಾಚಾರವೆಂದು ಪರಿಗಣಿಸಲಾಗಿದೆ ಹಾಗೂ ಅವುಗಳ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತದೆ.
ಶಾಸಕಾಂಗ, ಸಾಂಸ್ಥಿಕ ಸುಧಾರಣೆಗಳಿಗೆ ಕರೆ
ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನು ವ್ಯವಸ್ಥೆಯನ್ನು ಅಧ್ಯಯನವು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಪೊಲೀಸರ ವ್ಯಾಪಕ ಶಾಮೀಲಾತಿಯಿಂದಾಗಿ ಸಾಮಾನ್ಯ ಕ್ರಿಮಿನಲ್ ಪ್ರಕ್ರಿಯೆಗಳು ಗುಂಪು ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಹೇಳುತ್ತದೆ. ಬಿಜೆಪಿಯೇತರ ಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಗೋಹತ್ಯೆ ನಡೆಸಿದ್ದಾರೆ ಎನ್ನಲಾದವರನ್ನು ಮೊದಲು ಗುಂಪು ಆಕ್ರಮಣಕಾರರು ಮನಸೋಇಚ್ಛೆ ಥಳಿಸುತ್ತಾರೆ ಹಾಗೂ ಬಳಿಕ ರಾಜ್ಯ ಸರಕಾರಗಳು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮತ್ತು ಯುಎಪಿಎ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿವೆ ಎನ್ನುವುದನ್ನು ವರದಿ ಉಲ್ಲೇಖಿಸಿದೆ.
ಈ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ, ಹಿರಿಯ ಪತ್ರಕರ್ತ ಜಿ. ಸಂಪತ್ ಪ್ರತಿಪಾದಿಸಿರುವ ಪರಿಹಾರವನ್ನು ಅಧ್ಯಯನವು ಉಲ್ಲೇಖಿಸುತ್ತದೆ. ಪ್ರತಿಯೊಂದು ದ್ವೇಷಾಪರಾಧಕ್ಕೂ ನಿರ್ದಿಷ್ಟ ನಮೂನೆಯ ಪರಿಹಾರ ಬೇಕು ಎಂಬುದಾಗಿ ಅವರು ಪ್ರತಿಪಾದಿಸುತ್ತಾರೆ.
2011ರ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಯುಪಿಎ ಸರಕಾರವು ತಡೆಹಿಡಿದಿದೆ. ಅದಕ್ಕೆ ಮರುಜೀವ ನೀಡಿ ಜಾರಿಗೆ ತರಬೇಕು ಹಾಗೂ ಈ ಅಪರಾಧವನ್ನು ನಿಯಂತ್ರಿಸಲು ನಿಷ್ಪರಿಣಾಮಕಾರಿ ನ್ಯಾಯಾಂಗ ಪ್ರಯತ್ನಗಳ ಬದಲಿಗೆ ಕಠಿಣ ಗುಂಪು ಹಿಂಸೆ ವಿರೋಧಿ ಕಾನೂನುಗಳನ್ನು ತರಬೇಕೆಂದು ಪುಸ್ತಕವು ಕರೆ ನೀಡುತ್ತದೆ.
(ಲೇಖಕರು ಪತ್ರಕರ್ತರು)