ಅಕ್ಷರಗಳಲ್ಲೇ ಅಡಗಿರುವ ಮಾತುಗಳು

Update: 2026-07-26 10:49 IST

ಕರ್ನಾಟಕದ ಮೈಸೂರು-ಕೋಲಾರ ಭಾಗದಲ್ಲಿ ಹುಟ್ಟಿ ಬೆಳೆದವರಿಗೆ, ಸಾಹಿತ್ಯ-ಅಕಾಡಮಿಕ್ ಕ್ಷೇತ್ರದಿಂದ ಹೊರತಾಗಿದ್ದರೆ, ಎರಡು ಕೊರತೆಗಳಿರುತ್ತವೆ. ಮೊದಲನೆಯದು ಉತ್ತರ ಕರ್ನಾಟಕದ ಸಮಕಾಲೀನ ಚರಿತ್ರೆಯ ಪರಿಚಯ ಇರುವುದೇ ಇಲ್ಲ ಅಥವಾ ಕಡಿಮೆ ಇರುತ್ತದೆ. ಇನ್ನು ಕರಾವಳಿ/ದಕ್ಷಿಣ ಕನ್ನಡದ ಸಾಂಸ್ಕೃತಿಕ ಜಗತ್ತಿನ ಪರಿಚಯ ಬಹುಮಟ್ಟಿಗೆ ಇರುವುದಿಲ್ಲ. ಇವೆರಡೂ ಕೊರತೆಗಳನ್ನು ನೀಗಿಸಿಕೊಳ್ಳಲು ನನಗೆ ನೆರವಾಗಿದ್ದು ಸಾಹಿತ್ಯಾಧ್ಯಯನ ಮತ್ತು ಸಾಮಾಜಿಕ ಚಟುವಟಿಕೆ. ಇಷ್ಟಾದರೂ ಡಾ. ಸುಂದರ ಕೇನಾಜೆ ಅವರ ‘ಮಾತಿಲ್ಲದ ಮಾತು’ ಶೀರ್ಷಿಕೆಯ ಅಂಕಣ ಬರಹಗಳ ಸಂಕಲನದ ಪುಟ ತಿರುವುತ್ತಿದ್ದಾಗ, ನನ್ನ ಅರಿವು ಎಷ್ಟು ಹಿಂದುಳಿದಿದೆ ಎನಿಸಿದ್ದು ಸತ್ಯ. ವಿಜಯವಾಣಿ ಪತ್ರಿಕೆಯ ‘ನಿಲುಮೆ’ ಅಂಕಣದ 51 ಲೇಖನಗಳನ್ನು ಡಾ. ಕೇನಾಜೆ ಬಹಳ ಸುಂದರವಾಗಿ ಓದುಗರ ಮುಂದಿಟ್ಟಿದ್ದಾರೆ.

ಮೊದಲ 14 ಬರಹಗಳನ್ನು ಓದಿದಾಗ ಬಹುಶಃ ಈ ಲೇಖಕರು ಕರಾವಳಿಯನ್ನು ದಾಟಿರಲಾರರು ಎಂದು ಭಾಸವಾಗಿದ್ದು ನಿಜ. ಆದರೆ ಇಡೀ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನ್ನಿಸಿದ್ದು, ಡಾ. ಕೇನಾಜೆ ಸ್ಪರ್ಶಿಸದ ವಿಷಯವೇ ಇಲ್ಲ ಎಂದು. ಈ ಮೊದಲ 14 ಲೇಖನಗಳನ್ನು ಓದುತ್ತಾ ಹೋದರೆ, ಬೌದ್ಧಿಕವಾಗಿ ಈವರೆಗೂ ಕಂಡಿರದ ಒಂದು ವಿಸ್ಮಯದ ಜಗತ್ತಿನೊಳಗೆ ಪ್ರವೇಶಿಸಿದಂತೆ ಭಾಸವಾಗುತ್ತದೆ. ಪಾಡ್ದನ, ಶಕ್ತಿ ಆರಾಧನೆಯ ಸಾಂಸ್ಕೃತಿಕ ರೂಪಗಳು, ಅವಳಿ ವೀರರ ಪರಂಪರೆ, ಪಾಟ್ಟು ಕಥೆಗಳು, ಕೆಡ್ಡಸ ಇನ್ನೂ ಹಲವು ಸಾಂಸ್ಕೃತಿಕ-ಜನಪದೀಯ- ಪಾರಂಪರಿಕ ಆಚರಣೆಗಳ ಒಳಸುಳಿಗಳನ್ನು ಡಾ. ಕೇನಾಜೆ ಮನಮುಟ್ಟುವಂತೆ ಪರಿಚಯಿಸುತ್ತಾ ಹೋಗುತ್ತಾರೆ.

ಅಧ್ಯಾಯ 9 ‘ಮನ ತುಂಬಿದರೂ...’ ಬರಹದಲ್ಲಿ ಲೇಖಕರೇ ಹೇಳುವ ಹಾಗೆ ಈ ಎಲ್ಲ ವಿಚಾರಗಳನ್ನೂ ಶೋಧಿಸುತ್ತಾ ಹೋದರೆ ಬೃಹತ್ ಗ್ರಂಥಗಳನ್ನೇ ರಚಿಸಬಹುದು. ಈ ಮಾತನ್ನು ಡಾ. ಕೇನಾಜೆ ಉತ್ತರ ಕನ್ನಡ, ತುಳುನಾಡಿನ ಪುರಾತನ ಮನೆಗಳನ್ನು ಕುರಿತು ಹೇಳಿದ್ದರೂ, ವಾಸ್ತವದಲ್ಲಿ ಲೇಖಕರು ಪರಿಚಯಿಸಿರುವ ಸಾಂಸ್ಕೃತಿಕ ಆಚರಣೆಗಳು ಓದುಗರನ್ನು ಒಮ್ಮೆ ಬೆರಗುಗೊಳಿಸಿದರೆ ಮತ್ತೊಮ್ಮೆ ಇನ್ನೂ ತಿಳಿದುಕೊಳ್ಳಬೇಕೆಂಬ ಹಂಬಲಕ್ಕೆ ದೂಡುತ್ತದೆ. ತಳಮಟ್ಟದ ಸಮಾಜದಲ್ಲಿ ರೂಢಿಗತವಾಗಿ ಪರಂಪರಾನುಗತವಾಗಿ ನಡೆದುಬಂದಿರುವ ಈ ಆಚರಣೆಗಳ ಹಿಂದೆ, ಜನರ ನಂಬಿಕೆ, ವಿಶ್ವಾಸ ಮತ್ತು ಇನ್ನೂ ಆಳಕ್ಕೆ ಹೋದರೆ ನಿಸರ್ಗ-ಮಾನವನ ಸಂಬಂಧಗಳ ಒಳತಂತುಗಳಿರುವುದನ್ನು ಗುರುತಿಸಬಹುದು.

ಇಂತಹ ಹಲವು ಆಚರಣೆಗಳನ್ನು ಪರಿಚಯಿಸುವ ಡಾ. ಕೇನಾಜೆ, ದೇಹ-ಮನಸ್ಸಿಗೆ ವಿಶ್ರಾಂತಿ ನೀಡುವ ‘ನಿದ್ದೆ’ಯನ್ನೂ ವಿಡಂಬನಾತ್ಮಕವಾಗಿ ಸಾಹಿತ್ಯಕ ಲೋಕದ ನಡುವೆ ಸಂಚರಿಸಿ ಓದುಗರ ಮುಂದಿಡುತ್ತಾರೆ. ಈ ಶೈಲಿಯೇ ಅಪ್ಯಾಯಮಾನವಾಗುತ್ತದೆ. ಕೆಲವು ಸಾಹಿತಿಗಳ ಸ್ವಾರಸ್ಯಕರ ಪ್ರಸಂಗಗಳೂ ‘ಹೀಗೆ...ನಿದ್ದೆ ಎಂಬ...’ ಲೇಖನಕ್ಕೆ ಮೆರುಗು ನೀಡುತ್ತವೆ. 12ನೇ ಶತಮಾನದ ಬುದ್ಧ, ಬಸವಣ್ಣನಿಂದ ಸಮಕಾಲೀನ ಸುಬ್ರಾಯ ಚೊಕ್ಕಾಡಿ, ಕಾರಂತರವರೆಗೂ ಪರಿಚಯಿಸುವ ಲೇಖನಗಳು, ಪದಮಿತಿಯ ಕಾರಣದಿಂದ ಚಿಕ್ಕದಾದರೂ, ಈ ಸಾಧಕರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವಂತಿದೆ. ಸುಬ್ರಾಯ ಚೊಕ್ಕಾಡಿ ಅವರನ್ನು ಕುರಿತ ಲೇಖನದಲ್ಲಿ ಡಾ. ಕೇನಾಜೆ ಪ್ರಶಸ್ತಿಗಳನ್ನು ‘ಕೇಳಿ ಪಡೆಯುವ ನೈತಿಕ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ (ಪುಟ 67) ಎಂದು ಹೇಳಿರುವುದು ವರ್ತಮಾನದ ಸಂದರ್ಭದಲ್ಲಿ, ಕಟುವಾದರೂ ಸಕಾಲಿಕ ಎನಿಸುತ್ತದೆ. ‘ಪ್ರಶಸ್ತಿಗಳೆಂಬ ಪ್ರಾರಬ್ಧವೂ...’ ಇದೇ ಅಭಿಪ್ರಾಯದ ವಿಸ್ತರಣೆ. ಇದು ಲೇಖಕರ ನಿಸ್ಪಹ ನೇರನುಡಿಗೆ ಕನ್ನಡಿ ಹಿಡಿಯುವ ಅಭಿವ್ಯಕ್ತಿ.

ಕನ್ನಡ ಸಾಹಿತ್ಯಿಕ ಲೋಕದ ಪರಿಚಯವನ್ನು ಡಾ. ಕೇನಾಜೆ ಅವರು ಮುದ್ದಣ್ಣನಿಂದ ನಿರಂಜನರವರೆಗೂ ವಿಸ್ತರಿಸುತ್ತಾರೆ. ಈ ಎರಡೂ ಲೇಖನಗಳು ಸಂಕ್ಷಿಪ್ತವಾಗಿಯಾದರೂ, ಯುವ ಓದುಗರಿಗೆ ಒಂದು ಹೈಪರ್ ಲಿಂಕ್ ನೀಡುವಷ್ಟು ಮಾಹಿತಿಗಳನ್ನು ಒಳಗೊಂಡಿದೆ. ಭಾಷಾ ಬೆಳವಣಿಗೆಯಲ್ಲಿ ಕರ್ನಾಟಕದಲ್ಲೇ ಇಂದಿಗೂ ಬಹುಸಂಖ್ಯೆಯ ಜನರ ನಡುವೆ ಪ್ರಚಲಿತವಾಗಿರುವ ಭಾಷೆಗಳು ಹೇಗೆ ನಿರ್ಲಕ್ಷಿಸಲ್ಪಟ್ಟಿವೆ ಎನ್ನುವುದನ್ನು ಡಾ. ಕೇನಾಜೆ ಅವರು ತಮ್ಮ ಲೇಖನಗಳಲ್ಲಿ ಸ್ಪಷ್ಟವಾಗಿ ತೆರೆದಿಡುತ್ತಾರೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ವಿಫಲ ಪ್ರಯತ್ನಗಳು, ಕರ್ನಾಟಕದ ಸರಕಾರಗಳು ಮತ್ತು ಭಾಷಾ ಸಂಘಟನೆಗಳ ಹಿಂಜರಿಕೆ ಅಥವಾ ವೈಫಲ್ಯವನ್ನೂ ತೋರಿಸುತ್ತದೆ.

ಕರ್ನಾಟಕ ಎಂದರೆ ಕನ್ನಡ ಎಂಬ ಸಮಕಾಲೀನ ವ್ಯಾಖ್ಯಾನದಲ್ಲೇ ಈ ದೋಷ ಅಡಗಿದೆ. ಹಾಗಾಗಿ ಪ್ರಾದೇಶಿಕವಾಗಿ ಶತಮಾನಗಳ ಇತಿಹಾಸ ಇರುವ ಭಾಷೆಗಳೂ, ಆಡು ನುಡಿಗಳೂ ಸಹ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಇವೆ. ಇವುಗಳಲ್ಲಿ ಗಡಿನಾಡ ಕನ್ನಡವೂ ಒಂದು. ಕೋಲಾರದಲ್ಲಿ ಹುಟ್ಟಿ ಬೆಳೆದವನಾಗಿ, ವೈಯಕ್ತಿಕವಾಗಿ ಇದನ್ನು ಗುರುತಿಸುವುದು ನನಗೆ ಸುಲಭವಾಗುತ್ತದೆ. ಬಳ್ಳಾರಿ, ಬೆಳಗಾವಿಯಿಂದ ಕೋಲಾರದವರೆಗೂ ವಿಸ್ತರಿಸುವ ಈ ಭಾಷಾ ವೈವಿಧ್ಯವನ್ನು ಸಮಗ್ರವಾಗಿ ಮರು ವಿಶ್ಲೇಷಣೆಗೊಳಪಡಿಸಿ ಭಾಷಾ ಬಾಂಧವ್ಯದ ಹೊಸ ಆಯಾಮಗಳನ್ನು ತೆರೆಯುವ ಅವಶ್ಯಕತೆಯನ್ನು ಈ ಕೆಲವು ಲೇಖನಗಳು ಒತ್ತಿ ಹೇಳುತ್ತವೆ.

ಡಾ. ಕೇನಾಜೆ ಅವರ ಅಕ್ಷರ ಪಯಣ ಯುವ ತಲೆಮಾರಿನ ಮಕ್ಕಳಿಗೂ ವಿಸ್ತರಿಸುತ್ತದೆ. ‘ಕಲಿಕೆಯ ಹಾದಿಯಲ್ಲಿ...’ ಲೇಖನದಲ್ಲಿ ಡಾ. ಕೇನಾಜೆ ಮಕ್ಕಳಿಗೆ ಸ್ಪರ್ಧೆ ಮತ್ತು ಪರೀಕ್ಷೆಯ ಮೂಲ ಉದ್ದೇಶ, ಆಶಯಗಳನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸುತ್ತಾರೆ. ಸ್ಪರ್ಧಾತ್ಮಕ ಜಗತ್ತು ಮಾರುಕಟ್ಟೆಮಯವಾಗಿರುವ ವರ್ತಮಾನದ ಸಮಾಜದಲ್ಲಿ ಮಕ್ಕಳಿಗೆ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂತಹ ಚಿಕಿತ್ಸಕ ಬರಹಗಳು ನೆರವಾಗುತ್ತವೆ. ಬಿ.ವಿ. ಸೂರ್ಯನಾರಾಯಣ ಎಂಬವರ ಪ್ರತಿಕ್ರಿಯೆ (ಪುಟ 124) ಇದನ್ನೇ ಸೂಚಿಸುತ್ತದೆ. ಶೈಕ್ಷಣಿಕ ವಲಯದಲ್ಲಿ ಕಲಿಕೆಯ ಮಹತ್ವ ಮತ್ತು ಅದರ ಗುಣಾತ್ಮಕತೆಯನ್ನು ‘ಕಲಿಯುವ ಸದುದ್ದೇಶ...’’ ಲೇಖನದಲ್ಲಿ ಮನದಟ್ಟಾಗುವಂತೆ ವಿಶ್ಲೇಷಿಸಲಾಗಿದೆ.

ಒಟ್ಟಾರೆಯಾಗಿ ನೋಡಿದಾಗ ಡಾ. ಸುಂದರ ಕೇನಾಜೆ ಅವರ ‘ಮಾತಿಲ್ಲದ ಮಾತು’ ಬಹಳವೇ ಮಾತನಾಡುತ್ತದೆ, ಅಕ್ಷರಗಳ ಮುಖಾಂತರ. ಬರಹದ ಶೈಲಿ ಆಪ್ತವೆನಿಸುವಂತಿರುವುದರಿಂದ, ಓದುಗರಿಗೆ ಹೊಸತೆನಿಸುವ ವಿಚಾರಗಳೂ ಸುಲಭಗ್ರಾಹ್ಯವಾಗುವಂತಿದೆ. ಇದು ಇಡೀ ಪುಸ್ತಕದ ಮೆರುಗು. ಹಲವು ಆಯಾಮಗಳಿಂದ ಸಂಗ್ರಹಯೋಗ್ಯ ಎನಿಸುವ ‘ಮಾತಿಲ್ಲದ ಮಾತು’ ಹೆಚ್ಚೆಚ್ಚು ಜನರಿಗೆ ತಲುಪುವಂತಾಗಲಿ. ಡಾ. ಕೇನಾಜೆ ಅವರಿಗೆ ಅಭಿನಂದನೆಗಳು.

ಕೃತಿಯ ಮುಖಬೆಲೆ: 220 ರೂ.

ಪ್ರಕಾಶಕರು: ಮಡಿಲು ಪ್ರಕಾಶನ, ನಂ.77,2ನೇ ಮೈನ್ ಐಶ್ವರ್ಯ ನಗರ, ಕುವೆಂಪು ನಗರ ‘ಎನ್’ ಬ್ಲಾಕ್, ಮೈಸೂರು-570023

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ. ದಿವಾಕರ

contributor

Similar News