ಶಾಸಕ ಸಿದ್ದು ಪಾಟೀಲ್ ಜನತೆಗೆ ನೀಡಿರುವ ಒಂದು ಅಶ್ವಾಸನೆಯೂ ಈಡೇರಿಲ್ಲ: ರಾಜಶೇಖರ್ ಪಾಟೀಲ್ ಆರೋಪ
ಹುಮ್ನಾಬಾದ್: ಪೋಲ್ಯೂಷನ್ ಮುಕ್ತ ಹುಮ್ನಾಬಾದ್ ನಿರ್ಮಾಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶುಗರ್ ಫ್ಯಾಕ್ಟರಿ ತರುತ್ತೇನೆ ಎಂದು ಹೇಳಿದ್ದ ಶಾಸಕ ಸಿದ್ದು ಪಾಟೀಲ್ ಅವರು, ತಾವು ನೀಡಿದ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರೆಯೇ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಜನರಿಗೆ ದೊಡ್ಡ ಮಟ್ಟದ ಆಶ್ವಾಸನೆಗಳನ್ನು ನೀಡಿದ್ದರು. ಆದರೆ, ಅದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕಾರ್ಯಗತಗೊಂಡಿಲ್ಲ. ಅವರು, ನೀಡಿರುವ ಭರವಸೆಗಳೆಲ್ಲ ಕೇವಲ ಹುಸಿ ಭರವಸೆಗಳು ಎಂದು ಆರೋಪಿಸಿದರು.
ಕ್ಷೇತ್ರವನ್ನು ಮಾಲಿನ್ಯ ಮುಕ್ತಗೊಳಿಸುವುದು, ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ (ಶುಗರ್ ಫ್ಯಾಕ್ಟರಿ) ತರುವುದಾಗಿ ಹೇಳಿದ್ದ ಮಾತುಗಳು ಗಾಳಿಯಲ್ಲಿ ತೂರಿಹೋಗಿವೆ ಎಂದು ಅವರು ಗುಡುಗಿದರು.
ಶಾಸಕರು ನೀಡಿದ್ದ ಭರವಸೆಗಳಲ್ಲಿ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಈ ಸತ್ಯವನ್ನು ಕ್ಷೇತ್ರದ ಜನತೆ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿರುವುದನ್ನು ಜನರು ಅರಿತುಕೊಂಡಿದ್ದಾರೆ ಎಂದರು.