×
Ad

Raichur | ಬೈಕ್ ಕಳ್ಳತನ ಪ್ರಕರಣ: 17.30 ಲಕ್ಷ ರೂ. ಮೌಲ್ಯದ 18 ಬೈಕ್ ವಶ

ಮಾನ್ವಿ ಮೂಲದ ಇಬ್ಬರು ಆರೋಪಿಗಳ ಬಂಧನ

Update: 2026-07-14 17:46 IST

ರಾಯಚೂರು : ಬೈಕ್ ಕಳ್ಳತನ ಪ್ರಕರಣದ ಬೆನ್ನಟ್ಟಿದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 17.30 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕುಕನೂರು ಗ್ರಾಮದ ಮಹೇಂದ್ರ ಎಂಬುವರು ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನಗರದ ಸ್ಟೇಷನ್ ರಸ್ತೆಯ ಮ್ಯಾಕ್ಸ್ ಶೋರೂಮ್ ಎದುರು ಕಳವಾಗಿರುವ ಕುರಿತು ಜು.13ರಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಉಮೇಶ್ ಕಾಂಬ್ಳೆ ನೇತೃತ್ವದ ತಂಡ ತನಿಖೆ ನಡೆಸಿ, ಮಾನ್ವಿ ತಾಲೂಕಿನ ಆಕಾಶ ಹಾಗೂ ಇಮ್ರಾನ್ ಎಂಬ ಇಬ್ಬರನ್ನು ಬಂಧಿಸಿದೆ.

ವಿಚಾರಣೆ ವೇಳೆ ಆರೋಪಿಗಳು ವಿವಿಧ ಪ್ರದೇಶಗಳಲ್ಲಿ ಬೈಕ್ ಕಳವು ಮಾಡಿ, ಅವುಗಳ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಆರೋಪಿಗಳಿಂದ ರಾಯಲ್ ಎನ್‌ಫೀಲ್ಡ್, ಹೋಂಡಾ ಸಿಬಿ ಶೈನ್, ಬಜಾಜ್ ಪಲ್ಸರ್, ಹೀರೋ ಸ್ಪ್ಲೆಂಡರ್ ಪ್ಲಸ್, ಹೋಂಡಾ ಯುನಿಕಾರ್ನ್, ಹೋಂಡಾ ಡ್ರೀಮ್ ಯುಗಾ ಹಾಗೂ ಹೀರೋ ಎಚ್‌ಎಫ್ ಡಿಲಕ್ಸ್ ಸೇರಿದಂತೆ ಒಟ್ಟು 18 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಸಿಪಿಐ ಉಮೇಶ್ ಕಾಂಬ್ಳೆ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಟಿ.ಡಿ., ಪಿಎಸ್ಐ ಲಕ್ಷ್ಮೀದೇವಿ ಹಾಗೂ ಎಸ್‌ಐ ಶ್ರೀನಿವಾಸ ಜಿ. ಅವರ ತಂಡ ಯಶಸ್ವಿಯಾಗಿ ನಡೆಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಾಂತವೀರ ಅವರು ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News