ರಾಯಚೂರಿನಲ್ಲಿ ಸೆ.16ರಿಂದ ಸಿಪಿಐ(ಎಂಎಲ್) ರೆಡ್ ಸ್ಟಾರ್ 13ನೇ ರಾಷ್ಟ್ರೀಯ ಮಹಾಧಿವೇಶನ
ರಾಯಚೂರು : ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ–ಲೆನಿನ್‌ವಾದಿ) ರೆಡ್ ಸ್ಟಾರ್‌ನ 13ನೇ ರಾಷ್ಟ್ರೀಯ ಮಹಾಧಿವೇಶನ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ, ಅದೂ ರಾಯಚೂರಿನಲ್ಲಿ ನಡೆಯಲಿದ್ದು, ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ, ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕೈಜೋಡಿಸಬೇಕು ಎಂದು ಮಹಾಧಿವೇಶನದ ಸ್ವಾಗತ ಸಮಿತಿ ಮನವಿ ಮಾಡಿದೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಸೆ.16ರಿಂದ 20ರವರೆಗೆ ನಡೆಯಲಿರುವ ಮಹಾಧಿವೇಶನವು ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆಗೆ ವೇದಿಕೆಯಾಗಲಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ರಾಷ್ಟ್ರೀಯ ಮಹಾಧಿವೇಶನ ನಡೆಯುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸ್ವಾಗತ ಸಮಿತಿಯ ಮುಖ್ಯ ಸಂಯೋಜಕ ಆರ್. ಮಾನಸಯ್ಯ ಮಾತನಾಡಿ, ಪ್ರಸ್ತುತ ದೇಶದಲ್ಲಿ ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಹಿಂದುತ್ವ ರಾಜಕೀಯದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಂವಿಧಾನಿಕ ಮೌಲ್ಯಗಳ ರಕ್ಷಣೆಗೆ ಈ ಮಹಾಧಿವೇಶನ ಮಹತ್ವದ್ದಾಗಿದೆ ಎಂದು ಹೇಳಿದರು.
ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ 62 ಕಮ್ಯುನಿಸ್ಟ್ ಪಕ್ಷಗಳ ಮುಖಂಡರನ್ನು ಅಧಿವೇಶನಕ್ಕೆ ಆಹ್ವಾನಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಶ್ರೀಲಂಕಾ, ನೇಪಾಳ, ಮಯನ್ಮಾರ್ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ದೇಶದ ರೈತ, ಕಾರ್ಮಿಕ, ದಲಿತ, ಮಹಿಳೆ, ಆದಿವಾಸಿ, ವಿದ್ಯಾರ್ಥಿ, ಯುವಜನ ಹಾಗೂ ಪರಿಸರ ಚಳುವಳಿಗಳ ಪ್ರಮುಖರನ್ನು ಆಹ್ವಾನಿಸಲಾಗುತ್ತಿದ್ದು, ಪ್ರಕಾಶ ಅಂಬೇಡ್ಕರ್ ಹಾಗೂ ಚಂದ್ರಶೇಖರ ಆಜಾದ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಸೆ.16ರಂದು ಉದ್ಘಾಟನಾ ಸಮಾರಂಭ, 18 ಮತ್ತು 19ರಂದು ಬಹಿರಂಗ ಸಭೆಗಳು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದ್ದು, 17ರಿಂದ 20ರವರೆಗೆ ಪ್ರತಿನಿಧಿಗಳ ಅಧಿವೇಶನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಅಧಿವೇಶನದಲ್ಲಿ “ಸಾಮ್ರಾಜ್ಯಶಾಹಿ ಯುದ್ಧ” ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ, “ಆರ್‌ಎಸ್‌ಎಸ್ ಫ್ಯಾಸಿಸಂ ಸೋಲಿಸುವ ಸವಾಲು” ಹಾಗೂ “ಜಾತಿ ನಿರ್ಮೂಲನ ಹೋರಾಟ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಗಳು ನಡೆಯಲಿವೆ. ದೇಶ–ವಿದೇಶಗಳ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಕಲ್ಯಾಣ ಕರ್ನಾಟಕದ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ತತ್ವಪದ, ರಿವಾಯತ್ ಪದ, ಹಂತಿಪದ, ಚೌಡಿಕಿ ಮೇಳ, ಹೆಜ್ಜೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ.
ಮಹಾಧಿವೇಶನದ ಸಿದ್ಧತೆಗಾಗಿ ಹಣಕಾಸು, ಆಹಾರ, ವಾಸ್ತವ್ಯ, ಸಾರಿಗೆ, ಮಹಿಳೆ, ಸಾಂಸ್ಕೃತಿಕ ಹಾಗೂ ತಾಂತ್ರಿಕ ಸೇರಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಸ್ವಾಗತ ಸಮಿತಿ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ರವೀಂದ್ರನಾಥ ಪಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಾಬು ಬಂಡಾರಿಗಲ್, ವಾಸ್ತವ್ಯ ಸಮಿತಿ ಅಧ್ಯಕ್ಷ ಜೆ.ಬಿ. ರಾಜು, ಆಹಾರ ಸಮಿತಿ ಅಧ್ಯಕ್ಷ ಬಿ. ಬಸವರಾಜ, ಹಣಕಾಸು ಸಮಿತಿ ಅಧ್ಯಕ್ಷ ತಿಪ್ಪರಾಜ ಗೆಜ್ಜಲಗಟ್ಟ, ಸದನ ತಾಂತ್ರಿಕ ಸಮಿತಿ ಅಧ್ಯಕ್ಷ ಎಂ. ನಿರಂಜನ್ ಕುಮಾರ್, ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ್, ತಾಲೂಕು ಕಾರ್ಯದರ್ಶಿಗಳಾದ ಮಣಿ, ಎಲ್ಲಪ್ಪ ಉಟ್ಕಾನೂರು, ಮಾಬುಸಾಬ್ ಬೆಳ್ಳಟ್ಟಿ ಹಾಗೂ ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.