ರಾಯಚೂರಿನಲ್ಲಿ 6ನೇ ಕನ್ನಡ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ
ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆ ಪೂರಕ: ಸಚಿವ ಎನ್.ಎಸ್.ಬೋಸರಾಜು
ರಾಯಚೂರು : ಇಡೀ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಪ್ರಯೋಗಗಳು ನಡೆಯುತ್ತಿವೆ. ಕೃಷಿ ಬೆಳವಣಿಗೆಯಲ್ಲಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಅತ್ಯಂತ ಪೂರಕವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸಭಾ ನಾಯಕರಾದ ಎನ್.ಎಸ್. ಬೋಸರಾಜು ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸೆಪ್ಟೆಂಬರ್ 19ರಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ 6ನೇ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಗೆ ವಿಜ್ಞಾನ-ತಂತ್ರಜ್ಞಾನವನ್ನು ತಲುಪಿಸುವಲ್ಲಿ ಅಕಾಡೆಮಿಯು ಮಹತ್ತರ ಕೆಲಸ ಮಾಡುತ್ತಿದೆ. ಕನ್ನಡದಲ್ಲಿ ಸಮ್ಮೇಳನ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಅವರು ಪ್ರಶಂಸಿಸಿದರು. ತುಂಗಭದ್ರಾ ಡ್ಯಾಮ್ನಿಂದ ರಾಯಚೂರು ಜಿಲ್ಲೆಗೆ ಹರಿಯುತ್ತಿರುವ ನೀರಾವರಿ ಪ್ರದೇಶವನ್ನು ವಿಸ್ತರಿಸುವ ಯೋಜನೆಗಳ ಬಗ್ಗೆ ಸಚಿವರು ಉಲ್ಲೇಖಿಸಿದರು.
ಸಂಸದ ಜಿ. ಕುಮಾರ ನಾಯಕ ಮಾತನಾಡಿ, ಕೃಷಿ ವಿಜ್ಞಾನವು ಇಂದಿನ ಅತ್ಯಂತ ಅಗತ್ಯವಾದ ಅಧ್ಯಯನ. ರೈತರ ಬದುಕನ್ನು ಸಶಕ್ತಗೊಳಿಸಲು ವಿಜ್ಞಾನಿಗಳ ಪಾತ್ರ ಮುಖ್ಯ. ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಸಮ್ಮೇಳನ ನಡೆಸಿರುವುದು ವಿಶೇಷ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಜಿ. ಶ್ರೀನಿವಾಸ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕಳೆದ 20 ವರ್ಷಗಳಿಂದ ಜನರಲ್ಲಿ ವಿಜ್ಞಾನಾಭಿರುಚಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಜಿ. ಕುಮಾರ ನಾಯಕ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಾಸಾಬ್ ಎ.ಎಚ್., ವ್ಯವಸ್ಥಾಪನಾ ಮಂಡಳಿ ಸದಸ್ಯರು, ಕುಲಸಚಿವರು, ಮಾಜಿ ಕುಲಪತಿಗಳು, ಖ್ಯಾತ ಲೇಖಕಿ ಡಾ.ವಸುಂಧರಾ ಭೂಪತಿ, ಪ್ರಾಧ್ಯಾಪಕರು ಹಾಗೂ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಕಾಡೆಮಿಯ ಸಿಇಒ ಡಾ.ಆನಂದ ಆರ್. ಸ್ವಾಗತಿಸಿದರು. ನಿರೂಪಣೆ ಡಾ.ಸುಮಾ ಟಿ.ಸಿ. ಹಾಗೂ ಪ್ರಾರ್ಥನೆ ಕುಮಾರಿ ಸಾಕ್ಷರತಾ ನಿರ್ವಹಿಸಿದರು.