ಹಟ್ಟಿ: ಸಿಐಟಿಯು ನೇತೃತ್ವದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘವು ಹಮ್ಮಿಕೊಂಡಿರುವ ಸರತಿ ಉಪವಾಸ ಸತ್ಯಾಗ್ರಹದ ಮೂರನೇ ದಿನದ ಹೋರಾಟಕ್ಕೆ ಡಿವೈಎಫ್‌ಐ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಹಟ್ಟಿ ಕ್ಯಾಂಪ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಡಿವೈಎಫ್‌ಐ ಮುಖಂಡರು, ಅನುಕಂಪದ ಆಧಾರದ ನೇಮಕಾತಿಯಲ್ಲಿ ಮೃತ ಕಾರ್ಮಿಕರ ಮಕ್ಕಳ ವಿದ್ಯಾರ್ಹತೆಯನ್ನು ಪರಿಗಣಿಸಿ, ಅದಕ್ಕೆ ತಕ್ಕ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.

ಗಣಿ ಹೊರತುಪಡಿಸಿ ಅಪಘಾತಕ್ಕೊಳಗಾದ ಕಾರ್ಮಿಕರಿಗೆ ಕಂಪನಿಯೇ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಅಗತ್ಯವಿದ್ದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರೆಫರ್ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಇರುವ ಎರಡು ಬಾರಿ ರೆಫರ್ ಪದ್ಧತಿಯನ್ನು ರದ್ದುಪಡಿಸಿ ಜೀವಿತಾವಧಿ ರೆಫರ್ ಸೌಲಭ್ಯ ಕಲ್ಪಿಸಬೇಕು. ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಕಾರ್ಮಿಕರಿಗೆ ರೋಸ್ಟರ್ ಪದ್ಧತಿಯಂತೆ ವಿದ್ಯಾರ್ಹತೆಗೆ ಅನುಗುಣವಾಗಿ ಮುಂಬಡ್ತಿ ನೀಡಬೇಕು. 44 ತಿಂಗಳ ಹಿಂಬಾಕಿ ವೇತನ ಪಾವತಿ ಸೇರಿದಂತೆ ಕಾರ್ಮಿಕರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.29ರಂದು ಹಮ್ಮಿಕೊಂಡಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಬಂದ್‌ಗೆ ಡಿವೈಎಫ್‌ಐ ಹಟ್ಟಿ ಹೋಬಳಿ ಘಟಕ ಸಂಪೂರ್ಣ ಬೆಂಬಲ ನೀಡುವುದಾಗಿ ಮುಖಂಡರು ಘೋಷಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ರಿಯಾಜ್ ಖುರೇಷಿ, ಇಮ್ರಾನ್, ಫಯಾಜ್, ಕಾಸಿನಾಥ್, ಸಲ್ಮಾನ್, ವಸೀಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor