Raichur | ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಆಗ್ರಹ
ಜೆಸ್ಕಾಂ ಅಧಿಕಾರಿಗಳ ಕಾಲಿಗೆ ಬಿದ್ದು ರೈತರಿಂದ ಮನವಿ
ರಾಯಚೂರು: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ಕಾಲಿಗೆ ಬಿದ್ದು 12 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಮನವಿ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.
ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದ ರೈತರು, ಪದೇಪದೇ ವಿದ್ಯುತ್ ಕಡಿತದಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದ 110 ಕೆವಿ ಉಪಕೇಂದ್ರದ ಬಳಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಧರಣಿ ನಡೆಸಿ, ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 12 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಯಚೂರಿನಲ್ಲಿಯೇ ಆರ್‌ಟಿಪಿಎಸ್ ಮೂಲಕ ವಿದ್ಯುತ್ ಉತ್ಪಾದಿಸಿ ರಾಜ್ಯದ ಹಲವು ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದ್ದರೂ, ಸ್ಥಳೀಯ ರೈತರಿಗೆ ಸಮರ್ಪಕ ವಿದ್ಯುತ್ ಸಿಗದಿರುವುದು ವಿಪರ್ಯಾಸವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ರೈತರಿಗೆ 12 ಗಂಟೆ ಹಾಗೂ ಗೃಹಬಳಕೆದಾರರಿಗೆ 24x7 ವಿದ್ಯುತ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ವಾಸ್ತವದಲ್ಲಿ ದಿನಕ್ಕೆ ಎರಡು–ಮೂರು ಗಂಟೆಯೂ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಗಾಳಿ, ಮಳೆ ಬಂದಾಗ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದ್ದು, ಕೆಲವೊಮ್ಮೆ ದಿನಗಟ್ಟಲೆ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ರೈತರು ಆರೋಪಿಸಿದರು.
ಬರದಿಂದ ಈಗಾಗಲೇ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಕೊರತೆಯಿಂದ ಉಳಿದಿರುವ ಬೆಳೆಗಳನ್ನೂ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕನಿಷ್ಠ 12 ಗಂಟೆ ನಿರಂತರ ವಿದ್ಯುತ್ ನೀಡಿದರೆ ಮಾತ್ರ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ರೈತರು ಹೇಳಿದರು.
ಪ್ರತಿಭಟನೆ ಬಳಿಕ ರೈತರು ಎಇಇ ಹಾಗೂ ಇಇ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಅಧ್ಯಕ್ಷ ಈರಣ್ಣ ಮಾತನಾಡಿ, ರೈತರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಹಾಗೂ ಜೆಸ್ಕಾಂ ಪಾಲಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆಯಾಗದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.
ಜಿಲ್ಲಾ ಅಧ್ಯಕ್ಷ ವಸಂತ್ ರೆಡ್ಡಿ ಮಾತನಾಡಿ, ವಿದ್ಯುತ್ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಕೆಇಬಿ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಉಮೇಶ್ ಗೌಡ, ರಜನಿಕಾಂತ್ ರೆಡ್ಡಿ, ಮಲ್ಲೇಶ್, ಕೃಷ್ಣ ನಾಯಕ್, ಈರಣ್ಣ, ಜೆಸಿಬಿ ಮಲ್ಲಪ್ಪ, ಜಿಂದಪ್ಪ ಬಳೆಗಾರ, ರಘುಪತಿ ರೆಡ್ಡಿ, ಪ್ರಕಾಶ್, ಹುಸೇನಪ್ಪ ಗೌಡ, ಉಮೇಶ್, ಕಳವಲದೊಡ್ಡಿ ಬಿ. ಅನಿಲ್ ಕುಮಾರ್, ಕೆ. ಅಂಜನೇಯ, ಶರಣಪ್ಪ ಗೌಡ್ರು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.