Raichur | ಮಂಗಳವಾರಪೇಟೆಯಲ್ಲಿ ಮಳೆ ನೀರು ನುಗ್ಗಿ ಅವಾಂತರ : ರಾಜಕಾಲುವೆ ಸ್ವಚ್ಛಗೊಳಿಸಲು ಆಗ್ರಹ
ರಾಯಚೂರು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ತಗ್ಗು ಪ್ರದೇಶವಾದ ವಾರ್ಡ್ ನಂ.14ರ ಮಂಗಳವಾರಪೇಟೆ ಬಡಾವಣೆಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ ಘಟನೆ ಬುಧವಾರ ನಡೆದಿದೆ.
ಮಂಗಳವಾರಪೇಟೆಯಲ್ಲಿ ಚರಂಡಿಗಳು ತುಂಬಿ ಹರಿದ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಧವಸ-ಧಾನ್ಯ ಸೇರಿದಂತೆ ಮನೆ ಬಳಕೆಯ ವಸ್ತುಗಳು ಹಾಳಾಗಿವೆ. ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳಾದ ರಮೇಶ ಮತ್ತು ಹನುಮೇಶ ಮಾತನಾಡಿ, ಮಳೆ ಬಂದಾಗಲೆಲ್ಲ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಚರಂಡಿಯ ನೀರು ಸರಾಗವಾಗಿ ಹರಿಯದೇ ಮನೆಗಳ ಮುಂದೆ ನಿಂತುಕೊಳ್ಳುತ್ತಿದೆ. ಸ್ವಚ್ಛತೆ ಮತ್ತು ನೈರ್ಮಲ್ಯದ ಸಮಸ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ದೂರಿದರು.
ಸ್ಥಳೀಯರ ಮನವಿಯ ಮೇರೆಗೆ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ರಾಜಕಾಲುವೆಯಲ್ಲಿ ಕಸ ಹಾಗೂ ಹೂಳು ತುಂಬಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗುತ್ತಿದೆ. ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಈ ವೇಳೆ ಮಾತನಾಡಿದ ರಾಮನಗೌಡ ಏಗನೂರು, ನಗರದ ರಾಜಕಾಲುವೆ ಹಾಗೂ ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸ್ಥಳೀಯ ಶಾಸಕ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿದ್ದರೂ ಮೂಲಸೌಕರ್ಯ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಹೇಳಿದರು.
ಮಳೆ ಅನಾಹುತದ ಸಂದರ್ಭದಲ್ಲಿ ರಾಜಕಾಲುವೆ ಸಮಸ್ಯೆ ಪರಿಹರಿಸುವ ಭರವಸೆ ನೀಡಲಾಗಿದ್ದರೂ ಇದುವರೆಗೆ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ನಗರದ ಅಭಿವೃದ್ಧಿಯ ಬಗ್ಗೆ ಪ್ರಚಾರ ನಡೆಯುತ್ತಿದ್ದರೂ, ವಾಸ್ತವದಲ್ಲಿ ಹಲವು ಬಡಾವಣೆಗಳ ಜನರು ರಾಜಕಾಲುವೆ ಮತ್ತು ಚರಂಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಟೀಕಿಸಿದರು.
ಮಂಗಳವಾರಪೇಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳ ರಾಜಕಾಲುವೆ ಹಾಗೂ ಚರಂಡಿ ಸಮಸ್ಯೆಗಳಿಗೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಜನರನ್ನು ಸಂಘಟಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.