ರಾಯಚೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ; ಕೆಲ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು
Update: 2026-06-14 12:52 IST
ರಾಯಚೂರು : ರಾಯಚೂರು ನಗರ ಹಾಗೂ ಗ್ರಾಮೀಣ ಭಾಗದ ಹಲವೆಡೆ ತಡರಾತ್ರಿಯಿಂದ ಬೆಳಗಿನ ಜಾವದವರೆಗೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿತು.
ವಾರವಿಡೀ ಮಳೆಯಿಲ್ಲದೇ ಸುಡು ಬಿಸಿಲು ಜನರನ್ನು ಹೈರಾಣಾಗಿಸಿತ್ತು.
ಬೆಳಗಿನ ಜಾವ ಗಾಳಿ ಮಳೆಗೆ ಎಲ್ ಬಿಎಸ್ ನಗರ, ಆಶ್ರಯ ಕಾಲೊನಿ, ಚಂದ್ರಬಂಡಾ ರಸ್ತೆಯ ಕೆಲವೆಡೆ ಮರಗಳು, ರೆಂಬೆ, ಕೊಂಬೆಗಳು ನೆಲಕ್ಕುರುಳಿದವು. ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.
ರಾಯಚೂರು ನಗರ, ತಾಲೂಕಿನ ಯಾಪಲದಿನ್ನಿ ಪಂಚಾಯತಿಯ ರಾಳದೊಡ್ಡಿ ಗ್ರಾಮದಲ್ಲಿ ಕಚ್ಚಾ ರಸ್ತೆ ಹಾಳಾಗಿದ್ದರಿಂದ ಕೆಸರಿನಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಗ್ರಾಮದ ಹಲವೆಡೆ ಮಳೆ ನೀರು ನಿಂತಿದೆ. ಹದಗೆಟ್ಟ ರಸ್ತೆ ದುರಸ್ತಿಗೆ ಅನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ರಮೇಶ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.