ಲಿಂಗಸುಗೂರು | ಅಂಗನವಾಡಿ ನೌಕರರ ಬೇಡಿಕೆ ಈಡೇರಿಸಲು ಜು.10ರಂದು ಕಪ್ಪು ದಿನಾಚರಣೆ
ಲಿಂಗಸುಗೂರು: ಅಂಗನವಾಡಿ ಹಾಗೂ ವಿವಿಧ ಯೋಜನೆಗಳ (ಸ್ಕೀಮ್) ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸಿ ಜುಲೈ 10ರಂದು ರಾಜ್ಯಾದ್ಯಂತ ಕಪ್ಪು ದಿನಾಚರಣೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ತಿಳಿಸಿವೆ.
ಸಂಘದ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸದೆ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಿಂದ 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಯಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವ ಕ್ರಮವು ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಿಸದಿರುವುದು, ಪ್ಯಾಕೆಟ್ ಆಹಾರ ವಿತರಣೆಗೆ ಒತ್ತು ನೀಡುವುದು, ಎಫ್‌ಆರ್‌ಎಸ್, ಇ-ಕೆವೈಸಿ ಹಾಗೂ ಪೋಷಣ್ ಟ್ರ್ಯಾಕರ್ ಮೂಲಕ ಅನಗತ್ಯ ಒತ್ತಡ ಹೇರುವುದು ಮತ್ತು ಬಿಎಲ್‌ಒ ಸೇರಿದಂತೆ ಇಲಾಖೇತರ ಕೆಲಸಗಳನ್ನು ನೀಡುತ್ತಿರುವುದರಿಂದ ನೌಕರರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ದೂರಿದರು.
ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 75 ಸಾವಿರ ರೂ. ಹಾಗೂ ಸಹಾಯಕಿಯರಿಗೆ 10 ಸಾವಿರ ರೂ. ಗೌರವಧನ ಜಾರಿಗೊಳಿಸಬೇಕು. ನೌಕರರನ್ನು ಖಾಯಂಗೊಳಿಸಿ ಕನಿಷ್ಠ ವೇತನ, ಪಿಂಚಣಿ, ಗ್ರಾಚ್ಯುಟಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರ, ಅಗತ್ಯ ಮೂಲಸೌಕರ್ಯ, ಡಿಜಿಟಲ್ ಸಾಧನಗಳು ಹಾಗೂ ಮೊಬೈಲ್-ಡೇಟಾ ವೆಚ್ಚ ಮರುಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.