ಅಶ್ವಿನಿ, ಭೂಮಾನಂದ ಕುಟುಂಬಸ್ಥರಿಗೆ ಸಚಿವ ಡಾ. ಅಜಯ್ ಸಿಂಗ್ ಸಾಂತ್ವನ
"ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು"
ರಾಯಚೂರು: ಜಿಲ್ಲೆಯಲ್ಲಿ ನಡೆದಿರುವ ಅಶ್ವಿನಿ ಹಾಗೂ ಭೂಮಾನಂದ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮೃತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಕುಟುಂಬದ ಸದಸ್ಯರ ಅಳಲು ಹಾಗೂ ನೋವನ್ನು ಆಲಿಸಿದ ಅವರು, ಪ್ರಕರಣದ ತನಿಖೆಯ ಪ್ರಗತಿ, ಕುಟುಂಬಕ್ಕೆ ದೊರೆಯಬೇಕಾದ ಪರಿಹಾರ, ಭದ್ರತೆ ಹಾಗೂ ಅಗತ್ಯ ಸರ್ಕಾರಿ ನೆರವಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
“ಹೊಕ್ರಾಣಿ ಗ್ರಾಮದ ಅಶ್ವಿನಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತನಿಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕುಟುಂಬಸ್ಥರು ಆತಂಕಪಡುವ ಅಗತ್ಯವಿಲ್ಲ. ಅಶ್ವಿನಿ ಕುಟುಂಬದೊಂದಿಗೆ ಸರ್ಕಾರ ಸದಾ ನಿಲ್ಲಲಿದೆ ಹಾಗೂ ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ” ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಸಚಿವರು ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ನೀಡಿ, ದುಃಖದಲ್ಲಿದ್ದ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಕುಟುಂಬಕ್ಕೆ ಅಗತ್ಯ ಭದ್ರತೆ ಹಾಗೂ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಧರಣಿ ಸ್ಥಳಕ್ಕೆ ಭೇಟಿ; ಹೋರಾಟಗಾರರ ಅಹವಾಲು ಆಲಿಕೆ
ಅಶ್ವಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸೇರಿದಂತೆ ಭೂಮಾನಂದ ಮತ್ತು ರಾಣಮ್ಮ ಅವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ವಿವಿಧ ಸಂಘಟನೆಗಳ ಒಕ್ಕೂಟ ರಾಯಚೂರಿನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೂ ಸಚಿವ ಡಾ. ಅಜಯ್ ಧರ್ಮಸಿಂಗ್ ಭೇಟಿ ನೀಡಿದರು.
ಧರಣಿ ನಿರತರೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಸಚಿವರು, ಅವರ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಆಲಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ, ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ, ಭದ್ರತೆ ಮತ್ತು ಅಗತ್ಯ ನೆರವು ಒದಗಿಸುವಂತೆ ಹೋರಾಟಗಾರರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದರು.
“ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂಬ ಹೋರಾಟಗಾರರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೊಂದ ಕುಟುಂಬಗಳ ನೋವಿಗೆ ಸರ್ಕಾರ ಸ್ಪಂದಿಸಲಿದೆ. ಪ್ರಕರಣಗಳ ತನಿಖೆ ನ್ಯಾಯಸಮ್ಮತವಾಗಿ ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ಸಚಿವರ ಭರವಸೆಯನ್ನು ಸ್ವೀಕರಿಸಿದ ಸಂಘಟನೆಗಳ ಮುಖಂಡರು ಅನಿರ್ದಿಷ್ಟಾವಧಿ ಧರಣಿಯನ್ನು ಅಂತ್ಯಗೊಳಿಸಿದರು.
ಭೂಮಾನಂದ ಕುಟುಂಬಕ್ಕೂ ಸಚಿವರ ಸಾಂತ್ವನ
ಇತ್ತೀಚೆಗೆ ಸುಂಕೇಶ್ವರಹಾಳ ಗ್ರಾಮದ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೇವದುರ್ಗ ತಾಲ್ಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಹದ್ದಿನಾಳ ಅವರ ನಿವಾಸಕ್ಕೆ ಸೋಮವಾರ ಸಚಿವ ಡಾ. ಅಜಯ್ ಧರ್ಮಸಿಂಗ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಜಿಲ್ಲೆಯಲ್ಲಿ ನಡೆದಿರುವ ಈ ಅಹಿತಕರ ಘಟನೆ ಹಾಗೂ ಕೃತ್ಯವನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸುದೀರ್ಘವಾಗಿ ಚರ್ಚಿಸಲಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಉಪಸ್ಥಿತರಿದ್ದು, ಘಟನೆಯ ಕುರಿತು ಅಗತ್ಯ ಮಾಹಿತಿ ಪಡೆಯಲಾಗಿದೆ” ಎಂದರು.
ಎಂಟು ಮಂದಿ ಬಂಧನ
ಘಟನೆ ನಡೆದ ತಕ್ಷಣವೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
“ಘಟನೆಯ ಹಿಂದೆ ಯಾರಿದ್ದಾರೆ, ಪ್ರಚೋದನೆ ನೀಡಿದವರು ಯಾರು ಹಾಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರ ಕೈವಾಡವಿದೆ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಲಾಗುವುದು. ತನಿಖೆಯ ಬಳಿಕ ಎಲ್ಲಾ ಸತ್ಯಗಳು ಬೆಳಕಿಗೆ ಬರಲಿವೆ. ನಮ್ಮ ಸರ್ಕಾರ ಸಂತ್ರಸ್ತರು ಹಾಗೂ ಸಾರ್ವಜನಿಕರೊಂದಿಗೆ ಇದೆ. ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.
ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ ಮಾತನಾಡಿ, “ಸಂತ್ರಸ್ತರ ತಾಯಿ ಹಾಗೂ ನಮ್ಮ ತಾಯಂದಿರು ಒಂದೇ ಊರಿನ ತವರು ಮನೆಯವರಾಗಿದ್ದು, ಈ ಕುಟುಂಬದೊಂದಿಗೆ ನಮಗೆ ಹತ್ತಿರದ ಒಡನಾಟವಿದೆ. ಕುಟುಂಬದ ಈ ಅಪಾರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದರು.
“ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲೇಬೇಕು” ಎಂದು ಅವರು ಹೇಳಿದರು.
ಬೇರೆಡೆ ಇಂತಹ ಘಟನೆಗಳು ನಡೆದಾಗ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ನೀಡುವಂತೆ, ತಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿ ಸಮುದಾಯದ ಯುವಕರ ಕುಟುಂಬಗಳಿಗೂ ಹಾಗೂ ಭೂಮಾನಂದ ಅವರ ಕುಟುಂಬಕ್ಕೂ ಸೂಕ್ತ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
₹8.25 ಲಕ್ಷ ಪರಿಹಾರ; ಮೊದಲ ಕಂತು ಜಮೆ
ದೇವದುರ್ಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಮಾತನಾಡಿ, ಸಂತ್ರಸ್ತ ಭೂಮಾನಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಒಟ್ಟು ₹8.25 ಲಕ್ಷ ಪರಿಹಾರಧನ ನಿಗದಿಪಡಿಸಲಾಗಿದೆ. ಅದರ ಮೊದಲ ಕಂತಿನ ₹4,12,500 ಮೊತ್ತವನ್ನು ಕುಟುಂಬದ ಬ್ಯಾಂಕ್ ಖಾತೆಗೆ ಈಗಾಗಲೇ ಜಮೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾದ ತಕ್ಷಣ ಬಾಕಿ ಇರುವ ₹4,12,500 ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಅಧಿಕಾರಿಗಳು ಸಂತ್ರಸ್ತ ಕುಟುಂಬದ ಮನೆಗೆ ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೇಷನ್ ಸೇರಿದಂತೆ ಅಗತ್ಯ ನೆರವನ್ನು ಒದಗಿಸಲಾಗಿದೆ ಎಂದು ಹೇಳಿದರು.
ರಾಣೆಮ್ಮ ಪ್ರಕರಣಕ್ಕೂ ಸೂಕ್ತ ತನಿಖೆಗೆ ಮನವಿ
ಇದೇ ಸಂದರ್ಭದಲ್ಲಿ ಲಿಂಗಸುಗೂರು ತಾಲ್ಲೂಕಿನ ರಾಣೆಮ್ಮ ಅವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆಯೂ ದಲಿತ ಸಂಘಟನೆಗಳ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು. ರಾಣೆಮ್ಮ ಹಾಗೂ ಭೂಮಾನಂದ ಪ್ರಕರಣಗಳಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ, ಭದ್ರತೆ ಹಾಗೂ ಅಗತ್ಯ ಸರ್ಕಾರಿ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು, ಪ್ರಕರಣಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಕಷ್ಟದಲ್ಲಿರುವ ಕುಟುಂಬಗಳ ಮನೆ ಬಾಗಿಲಿಗೆ ತೆರಳಿ ಸಾಂತ್ವನ ಹೇಳುವುದರ ಜೊತೆಗೆ, ಹೋರಾಟಗಾರರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರ ಅಹವಾಲುಗಳನ್ನು ನೇರವಾಗಿ ಆಲಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿರುವ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಂತ್ರಸ್ತ ಕುಟುಂಬಗಳಿಗೆ ನ್ಯಾಯ, ಭದ್ರತೆ ಹಾಗೂ ಅಗತ್ಯ ಸರ್ಕಾರಿ ನೆರವು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂಬ ಸಂದೇಶವನ್ನು ಸಚಿವರು ತಮ್ಮ ಭೇಟಿಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್ ಅಶೋಕ್ ಚವಾಣ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರಾದ ಕೆ. ಶಾಂತಪ್ಪ, ಜಯಣ್ಣ, ಶ್ರೀದೇವಿ ನಾಯಕ, ಬಿ.ಕೆ. ಅಮರೇಶಪ್ಪ, ಬಾಲಸ್ವಾಮಿ ಕೊಡ್ಲಿ, ಬಸವಂತಪ್ಪ, ಜಯವಂತರಾವ್ ಪಾತಂಗೆ, ಅಬ್ದುಲ್ ಗಫೂರ್ ಸಾಹೇಬ್, ಅಮರೇಗೌಡ ಹಂಚಿನಾಳ, ಜಿ. ಸುಮೂರ್ತಿ, ರುದ್ರಪ್ಪ ಅಂಗಡಿ, ತಿಪ್ಪಣ್ಣ, ನಾಗಲಿಂಗ ಸ್ವಾಮಿ, ಪ್ರಭುರಾಜ ಕೊಡ್ಲಿ, ಚಂದ್ರಶೇಖರ್ ಕುರ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.