ಹಟ್ಟಿಗೆ ರಾಷ್ಟ್ರೀಯ ಹೆದ್ದಾರಿಗಳಿಂದ ನೇರ ಸಂಪರ್ಕ ರಸ್ತೆ ನಿರ್ಮಿಸಲು ಸಂಸದ ಕುಮಾರ ನಾಯಕ್ ಮನವಿ

Update: 2026-08-13 12:04 IST

ಹಟ್ಟಿ: ಹಟ್ಟಿ ಚಿನ್ನದ ಗಣಿಗೆ ಬೀದರ್–ಶ್ರೀರಂಗಪಟ್ಟಣ (150ಎ) ಹಾಗೂ ಬೆಳಗಾವಿ–ರಾಯಚೂರು (748ಎ) ರಾಷ್ಟ್ರೀಯ ಹೆದ್ದಾರಿಗಳಿಂದ ನೇರ ಹಾಗೂ ಉತ್ತಮ ಸಂಪರ್ಕ ರಸ್ತೆ ನಿರ್ಮಿಸುವಂತೆ ರಾಯಚೂರು ಸಂಸದ ಜಿ. ಕುಮಾರ ನಾಯಕ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ. ಉಮಾಶಂಕರ ಅವರಿಗೆ ಮನವಿ ಮಾಡಿದ್ದಾರೆ.

ಹಟ್ಟಿ ಪಟ್ಟಣ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಸುರೇಶಗೌಡ ಗುರಿಕಾರ, ಲಾಲ್ ಪೀರ್ ಸೇರಿದಂತೆ ಹಟ್ಟಿ ನಿವಾಸಿಗಳು ಕಳೆದ ಜುಲೈನಲ್ಲಿ ಸಂಸದರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಂಸದರು, ಆ.9ರಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ. ಉಮಾಶಂಕರ ಅವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದರು.

ಹಟ್ಟಿ ಚಿನ್ನದ ಗಣಿ ರಾಯಚೂರು ಜಿಲ್ಲೆಯ ಪ್ರಮುಖ ಕೈಗಾರಿಕಾ ಸಂಸ್ಥೆಯಾಗಿದ್ದು, ಇಲ್ಲಿ ಚಿನ್ನದ ಉತ್ಪಾದನೆ ನಡೆಯುತ್ತಿದೆ. ಚಿನ್ನದ ಅದಿರು ಹಾಗೂ ಇತರ ಸಾಮಗ್ರಿಗಳ ಸಾಗಣೆಗೆ ಉತ್ತಮ ರಸ್ತೆ ಸಂಪರ್ಕದ ಅಗತ್ಯವಿದೆ. ಹೀಗಾಗಿ 150ಎ ಹಾಗೂ 748ಎ ರಾಷ್ಟ್ರೀಯ ಹೆದ್ದಾರಿಗಳಿಂದ ಹಟ್ಟಿಗೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆ ನಿರ್ಮಾಣದ ಸಾಧ್ಯತೆ ಕುರಿತು ಸ್ಥಳ ಪರಿಶೀಲನೆ ನಡೆಸಿ ಅಧ್ಯಯನ ಕೈಗೊಳ್ಳಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

ರಸ್ತೆ ನಿರ್ಮಾಣ ಸಾಧ್ಯವೆಂದು ಕಂಡುಬಂದಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ. ಕುಮಾರ ನಾಯಕ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News