×
Ad

ರಾಯಚೂರಿನಲ್ಲಿ ʼಭಾರತ ವನʼ ಯೋಜನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

Update: 2026-06-04 23:04 IST

ರಾಯಚೂರು: ಜೂನ್ 05ರ ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ʼಏಕ್ ಪೇಡ್ ಮಾ ಕೆ ನಾಮ್ʼ (ತಾಯಿಯ ಹೆಸರಿನಲ್ಲಿ ಒಂದು ಮರ) ಕಾರ್ಯಕ್ರಮದಡಿ ಭಾರತ ವನ ಯೋಜನೆಗೆ ಕೇಂದ್ರ‌ ಸಚಿವೆ ನಿರ್ಮಲಾ‌ ಸೀತಾರಾಮ್‌ ಅವರು ನಗರದ ಯಕ್ಲಾಸಪೂರು ಬಳಿಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

ಜಿಲ್ಲಾಡಳಿತ, ಎಸ್‌ಪಿಎಮ್‌ಸಿಐಎಲ್ ಸಂಸ್ಥೆಯ ಸಾಮಾಜಿಕ ಕಳಕಳಿಯ (ಸಿಎಸ್‌ಆರ್) ಸಹಯೋಗದೊಂದಿಗೆ ಆಯೋಜಿಸಿದ ಈ‌ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ವಿದ್ಯಾರ್ಥಿಗಳೊಂದಿಗೆ ಗಿಡಮರಗಳ ನೆಡುವುದರ ಮಹತ್ವ ಕುರಿತು ಸಂವಾದ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಮಾತನಾಡಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಮಹತ್ವಾಕಾಂಕ್ಷೆ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯನ್ನು ಹಣಕಾಸು ಸಚಿವರು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯು ಮಹತ್ವಾಕಾಂಕ್ಷೆ ಜಿಲ್ಲೆಯ ಪಟ್ಟಿಯಿಂದ ಆದಷ್ಟು ಬೇಗನೆ ಹೊರ ಬರಲಿದೆ ಎಂದರು.

ಭಾರತ ವನ ಯೋಜನೆಯಡಿ ಒಟ್ಟು 60,000 ಸ್ಥಳೀಯ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 10,000 ಸಸಿಗಳು ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಘಟಕ ಪ್ರದೇಶದಲ್ಲಿ 50,000 ಸಸಿಗಳನ್ನು ನೆಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪರಿಸರ ಸಮತೋಲನವನ್ನು ಕಾಪಾಡಲು ಒಟ್ಟು ಭೌಗೋಳಿಕ ವಿಸ್ತೀರ್ಣದ ಕನಿಷ್ಠ 30 ಶೇಕಡಾ ಭಾಗ ಅರಣ್ಯಾವರಣ ಹೊಂದಿರಬೇಕೆಂಬ ರಾಷ್ಟ್ರೀಯ ಗುರಿ ಇದ್ದರೂ, ರಾಯಚೂರು ಜಿಲ್ಲೆಯ ಅರಣ್ಯಾವರಣವು 2 ಶೇಕಡಾಕ್ಕಿಂತಲೂ ಕಡಿಮೆ ಇದೆ. ಇದರ ಪರಿಣಾಮವಾಗಿ ಭೂಮಿಯ ಉಷ್ಣತೆ ಹೆಚ್ಚಳ, ಮಣ್ಣಿನ ಫಲವತ್ತತೆ ಕುಸಿತ, ಭೂಗರ್ಭ ಜಲಮಟ್ಟ ಇಳಿಕೆ, ಜೀವ ವೈವಿಧ್ಯತೆಯ ನಷ್ಟ ಹಾಗೂ ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ವನ ಯೋಜನೆ ರಾಯಚೂರು ಜಿಲ್ಲೆಯ ಪರಿಸರ ಭವಿಷ್ಯಕ್ಕೆ ಹೊಸ ಆಶಾಕಿರಣವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರೀನ್ ಹೀರೊ ಆಫ್ ಇಂಡಿಯಾ ಎಂದೇ ಕರೆಯಲ್ಪಡುವ ಡಾ. ರಾಧಾಕೃಷ್ಣನ್ ನಾಯರ್. ಹಣಕಾಸು ಸಚಿವಾಲಯದ ಕಾರ್ಯದರ್ಶಿ ಸಂಜಯ್ ಲೋಹಿಯಾ, ಆಪ್ತ ಕಾರ್ಯದರ್ಶಿ ಅನಿರುದ್ಧ ಶ್ರವಣ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶಾಜಿ ಕೃಷ್ಣನ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹೊಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ. ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

×
Ad

ಸಿಂಧನೂರು ವಿಶೇಷ ಭೂಸ್ವಾಧೀನ ಅಧಿಕಾರಿ ಶೃತಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News