Raichur | ಪೊಲೀಸ್ ನೇಮಕಾತಿ ಒಳಮೀಸಲಾತಿಯಲ್ಲಿ ಲಂಬಾಣಿ ಸಮುದಾಯಕ್ಕೆ ಅನ್ಯಾಯ: ಬಂಜಾರ ಸೇವಾ ಸಂಘ ಆರೋಪ
ರಾಯಚೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿರುವ ಪೊಲೀಸ್ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಯಲ್ಲಿ ಲಂಬಾಣಿ–ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಪರಿಶಿಷ್ಟ ಜಾತಿಗಳ ಬಹುಕಾಲದ ಬೇಡಿಕೆಯಾಗಿದ್ದ ಒಳಮೀಸಲಾತಿ ಜಾರಿಯಾಗಿರುವುದು ಸ್ವಾಗತಾರ್ಹವಾದರೂ, ಪ್ರಸ್ತುತ ಪೊಲೀಸ್ ನೇಮಕಾತಿ ಅಧಿಸೂಚನೆಯಲ್ಲಿ ತಾಂತ್ರಿಕ ಲೋಪಗಳು ಕಂಡುಬಂದಿದ್ದು, ಲಂಬಾಣಿ ಸಮುದಾಯಕ್ಕೆ ನ್ಯಾಯಯುತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಯನ್ನು ಪ್ರವರ್ಗ-ಎ, ಪ್ರವರ್ಗ-ಬಿ ಹಾಗೂ ಪ್ರವರ್ಗ-ಸಿ ಎಂದು ವರ್ಗೀಕರಿಸಿ ಶೇ.15ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದರೆ ಪ್ರವರ್ಗ-ಸಿ ವರ್ಗಕ್ಕೆ ಕೇವಲ 54 ಹುದ್ದೆಗಳನ್ನು ಮಾತ್ರ ಮೀಸಲಿರಿಸಲಾಗಿದ್ದು, ಎಸ್‌ಸಿ ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಹೊಂದಿರುವ ಲಂಬಾಣಿ (ಬಂಜಾರ), ಭೋವಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಹುದ್ದೆಗಳ ಹಂಚಿಕೆ ಕುರಿತು ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ಉದ್ಯೋಗದ ನಿರೀಕ್ಷೆಯಲ್ಲಿದ್ದ ನೂರಾರು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಪ್ರವರ್ಗ-ಸಿ ಅಡಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಮೀಸಲಾದ ಹುದ್ದೆಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಹೆಚ್ಚುವರಿಯಾಗಿ ಹಂಚಿಕೆಯಾಗಿರುವ ಆರು ಹುದ್ದೆಗಳನ್ನು ಲಂಬಾಣಿ–ಬಂಜಾರ ಸಮುದಾಯಕ್ಕೆ ಮರುಹಂಚಿಕೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಸಂವಿಧಾನದ ಆಶಯದಂತೆ ಪ್ರತಿಯೊಂದು ಸಮುದಾಯಕ್ಕೂ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದೊರೆಯಬೇಕು. ಆದ್ದರಿಂದ ಪೊಲೀಸ್ ನೇಮಕಾತಿ ಅಧಿಸೂಚನೆಯನ್ನು ಮರುಪರಿಶೀಲಿಸಿ, ಒಳಮೀಸಲಾತಿಯಲ್ಲಿ ಲಂಬಾಣಿ–ಬಂಜಾರ ಸಮುದಾಯಕ್ಕೆ ಸೂಕ್ತ ಪ್ರಮಾಣದ ಹುದ್ದೆಗಳನ್ನು ಮರುಹಂಚಿಕೆ ಮಾಡಿ, ನೇಮಕಾತಿ ಪ್ರಕ್ರಿಯೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ತರಬೇಕು ಎಂದು ಸರ್ಕಾರವನ್ನು ಮನವಿ ಮೂಲಕ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಪವಾರ್ ಗಣಪತಿ ತಾಂಡ, ಗೌರವಾಧ್ಯಕ್ಷರಾದ ನಾಗರೆಡ್ಡಿ ನಾರಾಯಣಪ್ಪ ನಾಯ್ಕ್, ರಾಯಚೂರು ತಾಲೂಕು ಅಧ್ಯಕ್ಷ ಲಚ್ಚಪ್ಪ ನಾಯ್ಕ್ ಪವಾರ್,
ಉಪಾಧ್ಯಕ್ಷ ವೆಂಕಟೇಶ ಪವಾರ್, ಅರಕೇರ ತಾಲೂಕು ಅಧ್ಯಕ್ಷ ಮೋನಪ್ಪ, ಗೌರವಾಧ್ಯಕ್ಷ ಜೇಮ್ಲ ನಾಯ್ಕ್, ತಾಲೂಕು ಸಿರವಾರ ತಾಲೂಕು ಅಧ್ಯಕ್ಷ ಶಿವಪ್ಪ, ಮುಖಂಡರಾದ ಪರಮೇಶ್ ರಾಠೋಡ್ ಇಚಾನಾಳ, ರಾಮು ನಾಯ್ಕ್ ಪವಾರ್ ಸೇರಿದಂತೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.