ಬಸ್ ಕೊರತೆಯಿಂದ ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ; ರಾಯಚೂರಿನಲ್ಲಿ ಸಾರಿಗೆ ವ್ಯವಸ್ಥೆ ವಿರುದ್ಧ ಆಕ್ರೋಶ
ಡಿ.ರಾಂಪೂರ ಸೇರಿದಂತೆ ಐದು ಗ್ರಾಮಗಳ ವಿದ್ಯಾರ್ಥಿಗಳ ಪರದಾಟ; ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ
ರಾಯಚೂರು: ತಾಲೂಕಿನ ಡಿ.ರಾಂಪೂರ, ಕೊರ್ತಕುಂದಾ, ಯರಗುಂಟಾ, ಸಗಮಕುಂಟಾ ಹಾಗೂ ಗಂಜಳ್ಳಿ ಗ್ರಾಮಗಳ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಲಭ್ಯವಾಗದ ಕಾರಣ ಶಾಲೆ ಮತ್ತು ಕಾಲೇಜಿಗೆ ತೆರಳಲು ತೀವ್ರ ತೊಂದರೆ ಎದುರಾಗುತ್ತಿದೆ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಶುಕ್ರವಾರ ರಾಯಚೂರಿನಿಂದ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿ.ರಾಂಪೂರ ಮಾರ್ಗದ ಬಸ್ ಸಿಗದ ಹಿನ್ನೆಲೆಯಲ್ಲಿ ಅವರು ಕೊರ್ವಿಹಾಳ ಬಸ್‌ನಲ್ಲಿ ಯರಗುಂಟಾವರೆಗೆ ಬಂದು, ಅಲ್ಲಿಂದ ಸುಮಾರು 7 ಕಿ.ಮೀ. ದೂರವನ್ನು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸಿ ಗ್ರಾಮ ತಲುಪಿದ್ದಾರೆ. ಈ ಅಪಾಯಕಾರಿ ಪ್ರಯಾಣದ ವೇಳೆ ಯಾವುದೇ ಅನಾಹುತ ಸಂಭವಿಸಿದ್ದರೆ ದೊಡ್ಡ ದುರಂತವೇ ಆಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ಹೊಸದಲ್ಲ. ಬಸ್ ವಿಳಂಬ, ಬಸ್ ರದ್ದತಿ ಹಾಗೂ ಸಮರ್ಪಕ ಸೇವೆಯ ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿಪೊ ವ್ಯವಸ್ಥಾಪಕರು ಹಾಗೂ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರಾದ ದತ್ತು, ರಮೇಶ್ ಹಾಗೂ ವಿದ್ಯಾರ್ಥಿಗಳಾದ ಪ್ರಜ್ಞಾ ಮತ್ತು ವರುಣ ಆರೋಪಿಸಿದ್ದಾರೆ.
ಯರಗುಂಟಾದಿಂದ ಡಿ.ರಾಂಪೂರಕ್ಕೆ ವಿದ್ಯಾರ್ಥಿಗಳು ಟ್ರ್ಯಾಕ್ಟರ್‌ನಲ್ಲಿ ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಡಿ.ರಾಂಪೂರ ನಿವಾಸಿ ರಂಗನಾಥ ಪೊಲೀಸ್ ಪಾಟೀಲ ಸರ್ಕಾರ ಮತ್ತು ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮ್ಯಾಗ್ನೆಟ್ ಶಾಲೆಗಳ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡುವುದಾಗಿ ಹೇಳುತ್ತಿರುವಾಗ, ಗ್ರಾಮೀಣ ವಿದ್ಯಾರ್ಥಿಗಳು ಬಸ್ ಸಿಗದೆ ಟ್ರ್ಯಾಕ್ಟರ್‌ನಲ್ಲಿ ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿ. ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಅನೇಕ ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ದೂರಿದರು.
ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಕ್ಷಣದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಮಾರ್ಗಗಳಲ್ಲಿ ಸಮರ್ಪಕ ಬಸ್ ಸೇವೆ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.