ಕಾಶ್ಮೀರದಲ್ಲಿ ಹಿಂದೂ ನೌಕರರನ್ನು ಹೊರಹಾಕಿದರೆ ದೇಶದಲ್ಲಿ ಬೆಂಕಿ ಹಚ್ಚುತ್ತೇವೆ : ಪ್ರಮೋದ್ ಮುತಾಲಿಕ್
ರಾಯಚೂರು : ʼಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆಯೊಂದು, ಕಾಶ್ಮೀರದಲ್ಲಿ ಪಂಡಿತ್ ಸರಕಾರಿ ನೌಕರರನ್ನು ಗುರಿಯಾಗಿಸಿ ನೌಕರರು ಅಲ್ಲಿಂದ ರಾಜೀನಾಮೆ ನೀಡಬೇಕು ಎಂದು ಬೆದರಿಕೆ ಹಾಕುತ್ತಿದೆ. ಒಬ್ಬೇ ಒಬ್ಬ ನೌಕರರನ್ನು ಹೊರಹಾಕಿದರೆ ದೇಶದಲ್ಲಿ ಬೆಂಕಿ ಹಚ್ಚುತ್ತೇವೆ ಹಾಗೂ ಕೇಂದ್ರ ಸರಕಾರದ ವಿರುದ್ಧ ಹೋರಾಡುತ್ತೇವೆʼ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ʼಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮೌನ ಮುರಿಯಬೇಕು. ಕೇವಲ 370 ವಿಶೇಷ ಸ್ಥಾನಮಾನ ಹಿಂಪಡೆದರೆ ಸಾಲದು, ಹಿಂದೂಗಳ ರಕ್ಷಣೆ ಮಾಡಬೇಕು. ಒಬ್ಬನೇ ಒಬ್ಬ ಹಿಂದೂವನ್ನು ನೌಕರಿಯಿಂದ ಹೊರಹಾಕಿದರೆ ದೇಶದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತೇವೆʼ ಎಂದು ಹೇಳಿದರು.
ಈಚನಾಳ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಕಠಿಣ ಶಿಕ್ಷೆಯಾಗಲಿ:
ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದ ಹೋಟೆಲ್ ನಲ್ಲಿ ನಡೆದ ಅಸ್ಪೃಶ್ಯತೆ ಅಚರಣೆ ಕುರಿತು ಪ್ರತಿಕ್ರಿಯಿಸಿ, ಅಸ್ಪೃಶ್ಯತೆ ಸಮಾಜದಲ್ಲಿ ಇನ್ನೂ ಜೀವಂತವಿದ್ದು ತಲೆತಗ್ಗಿಸುವಂತದ್ದು, ಸಾರ್ವಜನಿಕ ಸ್ಥಳ, ಹೋಟೆಲ್, ಬಾವಿ, ಕೆರೆ, ಕ್ಷೌರಿಕ ಅಂಗಡಿ ಸೇರಿದಂತೆ ನಾನಾ ಕಡೆ ಇನ್ನೂ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿರುವುದು ಖಂಡನಿಯ. ಭಾರತದ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ನೀಡಿದ್ದಾರೆ. ಈ ಘಟನೆ ಬಳಿಕ ಪಿಡಿಓ, ತಹಸೀಲ್ದಾರ್, ಜಿಲ್ಲಾಧಿಕಾರಿ ಅವರು ಪ್ರತಿ ಹಳ್ಳಿಗೆ ಹೋಗಿ ಅಸ್ಪೃಶ್ಯತೆ ನಿರ್ಮೂಲನೆ ಸಂಬಂಧ ಕಾನೂನು ಅರಿವು ಮೂಡಿಸಬೇಕು. ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದರು.