×
Ad

ರಾಯಚೂರು | ಬೆಳೆ ಹಾನಿ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್‌ ಪಾಟೀಲ್‌ ವಿರುದ್ಧ ರೈತ ಸಂಘಟನೆಯಿಂದ ಪ್ರತಿಭಟನೆ

Update: 2025-09-18 16:57 IST

ರಾಯಚೂರು: ಸತತ ಮಳೆಯಿಂದ ಹತ್ತಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳಿಗೆ ನಷ್ಟ ಉಂಟಾಗಿದ್ದು, ರೈತರ ಸಮಸ್ಯೆಗಳನ್ನು ಆಲಿಸಲು ವಿಫಲವಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಮುಖಂಡರು ಗುರುವಾರ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಶೇ.50ರಷ್ಟು ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಬೆಳೆಗಳು ಹಾನಿಗೊಳಗಾಗಿವೆ. ಹತ್ತಿಗೆ 10,000 ರೂ., ಮೆಣಸಿನಕಾಯಿಗೆ 15,000 ರೂ. ಬೆಂಬಲ ಬೆಲೆ ನಿಗದಿ ಮಾಡಿ, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತರು ಆಗ್ರಹಿಸಿದರು. ಜೊತೆಗೆ ಜೋಳ ಮತ್ತು ಭತ್ತಕ್ಕೆ ತಲಾ 3,500 ರೂ. ದರ ನಿಗದಿ ಮಾಡುವಂತೆ ಒತ್ತಾಯಿಸಿದರು.

ತುಂಗಭದ್ರ ಎಡದಂಡೆ ನಾಲೆಯ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಕೂಡಿಸಿ ಬೇಸಿಗೆ ಬೆಳೆಗಳಿಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅಕ್ರಮ ನೀರಾವರಿ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಾರಾಯಣಪುರ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ತನಿಖೆ ನಡೆಸಿ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ನಾಲೆಯ ಎರಡೂ ಬದಿಯ ರಸ್ತೆಗಳು ಹಾಳಾಗಿದ್ದು, ರೈತರಿಗೆ ತೊಂದರೆ ಉಂಟಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಬೇಡಿಕೆ ಇಟ್ಟರು. ಫಸಲ್ ಬೀಮಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ರೈತರಿಗೆ ಮೋಸವಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ರೈತರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಸ್ಪಂದಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ನಗರ ಮತ್ತು ಗ್ರಾಮೀಣ ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಕೂಡಲೇ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸೂಗೂರಯ್ಯ ಆರ್.ಎಸ್.ಮಠ, ವೆಂಕಪ್ಪ, ಪ್ರಭಾಕರ್ ಪಾಟೀಲ್, ಬಸವರಾಜ ಮಾಲಿಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News