×
Ad

ರಾಯಚೂರು | ತುಂಗಭದ್ರಾ ನದಿತಟದ ಮುಕ್ಕುಂದಾ ಗ್ರಾಮದಲ್ಲಿ ಅದ್ದೂರಿ ಅಂಬಾ ಆರತಿ ಕಾರ್ಯಕ್ರಮ

Update: 2025-09-22 21:54 IST

ರಾಯಚೂರು : ಭಕ್ತಿ ಭಾವದ ಘೋಷಣೆಗಳ ಮಧ್ಯೆ ತುಂಗಭದ್ರಾ ನದಿತಟದ ಮುಕ್ಕುಂದಾ ಗ್ರಾಮದಲ್ಲಿ ಅಂಬಾ ಆರತಿ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ಜರುಗಿತು.

ವಾರಣಾಸಿಯಿಂದ ಬಂದ ಅರ್ಚಕರ ತಂಡವು ಜಿಟಿಜಿಟಿ ಮಳೆಯ ಮಧ್ಯೆ ಆರತಿ ಕಾರ್ಯಕ್ರಮ ಆರಂಭಿಸಿದಾಗ ನೆರೆದಿದ್ದ ಭಕ್ತರಿಂದ ಜಯಕಾರ ಘೋಷಣೆಗಳು ಮೊಳಗಿದವು.

ಸುತ್ತಮುತ್ತಲಿನ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ತುಂಗಭದ್ರೆಗೆ ಮತ್ತು ತಾಯಿ ಅಂಬಾದೇವಿಗೆ ಭಕ್ತಿಭಾವದಿಂದ ನಮನ ಸಲ್ಲಿಸಿದರು.

ಸಿಂಧನೂರ ತಾಲೂಕಾಡಳಿತ ಮತ್ತು ತಾಲೂಕು ದಸರಾ ಉತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಶಾಸಕರಾದ ಹಂಪನಗೌಡ ಬಾದರ್ಲಿ ನೇತೃತ್ವ ವಹಿಸಿದ್ದರು. ತುಂಗಮಾತೆ ಮತ್ತು ಅಂಬಾಮಾತೆಯ ಆಶೀರ್ವಾದವು ಇಡೀ ದೇಶ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಇರಲಿ. ತುಂಗಭದ್ರೆಯು ಸದಾಕಾಲ ಹರಿದು ಈ ಭಾಗವು ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು.

9 ದಿನಗಳ ಕಾಲ ಸಿಂಧನೂರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, ವಿಜಯನಗರದ ಅರಸರು ಮುಕ್ಕುಂದಾದಿಂದಲೇ ದಸರಾ ಆಚರಣೆ ಆರಂಭಿಸಿದ್ದರು. ಇದೇ ಐತಿಹ್ಯದಂತೆ ಈ ಬಾರಿ ಅಂಬಾ ಆರತಿ ಕಾರ್ಯಕ್ರಮ ನಡೆಸಿ ಇತಿಹಾಸದ ಸಂಭ್ರಮ ಮರುಕಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಂ.ಪಿ.ನಾಡಗೌಡ್ರ, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ್‌ ಅರುಣಕುಮಾರ ದೇಸಾಯಿ ಸೇರಿದಂತೆ ಗಣ್ಯರು ಹಾಗೂ ಮುಕ್ಕುಂದಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಮಾರಂಭದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News